ಡಾ. ಗುಂಡ್ಮಿ ಚಂದ್ರಶೇಖರ ಐತಾಳ

Home/Birthday/ಡಾ. ಗುಂಡ್ಮಿ ಚಂದ್ರಶೇಖರ ಐತಾಳ
Loading Events
This event has passed.

೨೦..೧೯೩೬ ೧೯೯೦ ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ, ಖಂಡಿತವಾದಿ, ಪ್ರತಿಭಾನ್ವಿತ ಕವಿ ಚಂದ್ರಶೇಖರ ಐತಾಳರು ಹುಟ್ಟಿದ್ದು ಇಂದಿನ ಉಡುಪಿ ಜಿಲ್ಲೆಯ ಉಡುಪಿ ತಾಲ್ಲೂಕಿನ ಗುಂಡ್ಮಿಯಲ್ಲಿ ೧೯೩೬ರ ಜನವರಿ ೨೦ರಂದು. ತಂದೆ ರಾಮಚಂದ್ರ ಐತಾಳರು ಎಂದೂ ಅನೃತವ ನುಡಿಯದವರು, ಅದಕ್ಕೆ ಅವರ ಪತ್ನಿಯ ಹೆಸರು ಸತ್ಯಮ್ಮನೆಂದೆ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವೀಧರರಾದ ಗುಂಡ್ಮಿಯವರು ಡಿ.ವಿ.ಜಿ.ಯವರ ಸಾಹಿತ್ಯ ಕುರಿತು ಬರೆದ ಪ್ರೌಢಪ್ರಬಂಧಕ್ಕೆ ಡಾಕ್ಟರೇಟ್‌ ಗಳಿಸಿದರು. ಬೋಧಕರಾಗಿ ವೃತ್ತಿ ಆರಂಭಿಸಿದ್ದು ಮಂಗಳೂರು ವಿಶ್ವವಿದ್ಯಾಲಯದಲ್ಲಿ (ಅಂದು ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿದ್ದ ಮಂಗಳ ಗಂಗೋತ್ರಿ). ಎಳೆಯ ವಯಸ್ಸಿನಿಂದಲೇ ಸಾಹಿತ್ಯದ ಬಗ್ಗೆ ಬೆಳೆದ ಒಲವು. ಪತ್ರಿಕೆಗಳಿಗೆ ಬರೆದ ಕಿರು ಪದ್ಯಗಳು. ಇವು ಪ್ರೌಢಬರೆಹಗಳಿಗೆ ತಳ ಹದಿಯಾಯಿತು. ತಮ್ಮ ಹುಟ್ಟೂರಿನ ಸುತ್ತಮುತ್ತ ಹಲವಾರು ಹಳ್ಳಿಗಳನ್ನು ಸುತ್ತಿ ಜನಪದ ಹಾಡುಗಳ ಅಧ್ಯಯನ ಕೈಗೊಂಡು  ಸಂಗ್ರಹಿಸಿದ ಹಲವಾರು ಹಾಡುಗಳು. ಅವುಗಳನ್ನು ‘ಕೈಲಿಯ ಕರೆದ ನೊರೆ ಹಾಲು’, ಮತ್ತು ‘ಮದ್ದುಂಟೆ ಜನನ ಮರಣಕ್ಕೆ’ ಎಂಬ ಕೃತಿಗಳಲ್ಲಿ ಸಂಪಾದಿಸಿ ಪ್ರಕಟಿಸಿದರು. ಮದ್ದುಂಟೆ ಜನನ ಮರಣಕ್ಕೆ’ ೪೦೦ ಪುಟಗಳ ಈ ಕೃತಿಯು ಗುಂಡ್ಮಿಯವರಿಗೆ ಜನಪ್ರಿಯತೆಯನ್ನು ತಂದುಕೊಟ್ಟ ಕೃತಿ. ನಿದ್ದೆಗೆ ಮದ್ದುಂಟೆ ಬುದ್ಧಿಗೆ ಕೇಡುಂಟೆ ಬಲ್ಲವರಿಗೆ ಭಯವುಂಟೆ ಎಂಬುದು ಅವರೇ ಸಂಪಾದಿಸಿರುವ ‘ಮದ್ದುಂಟೆ….’ ಕೃತಿಯ ತ್ರಿಪದಿಗಳಲ್ಲೊಂದು. ತಮ್ಮ ಪ್ರತಿಭೆ-ವಿದ್ವತ್ತುಗಳ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದು, ಸರಿಯಾದ ಮನ್ನಣೆ ದೊರೆಯದಿದ್ದಾಗ ಈ ಮೇಲಿನ ತ್ರಿಪದಿಯನ್ನು ಆಗಾಗ್ಗೆ ಉಲ್ಲೇಖಿಸುತ್ತಿದ್ದರು. ಸಹಜ ಸ್ಫೂರ್ತಿಯಿಂದ ಪದ್ಯ ರಚಿಸತೊಡಗಿದ್ದ ಗುಂಡ್ಮಿಯವರಿಗೆ ತಾವೊಬ್ಬ ಪ್ರಬುದ್ಧ ಕವಿ ಎಂಬುದನ್ನು ನಿರೂಪಿಸುವಂತಹ ಕವಿತೆಗಳನ್ನು ಬರೆದುದಷ್ಟೇ ಅಲ್ಲದೆ ಬೊಬ್ಬೆ ಹಾಕಿದರೆ ಕಬ್ಬವಾದೀತೆ? ಕೇಳುಗರು ಅಬ್ಬಾ ಎಂದು ಹುಬ್ಬು ಹಾರಿಸಬೇಕು! ಎಂದು ಹೇಳುತ್ತಿದ್ದ ಗುಂಡ್ಮಿಯವರ ‘ಮಾತೃ ಸಂಹಿತೆ’ ಒಂದು ಉತ್ತಮ ಕವಿತೆಗಳ ಸಂಕಲನ. ತಾಯಿಯನ್ನು ಕುರಿತು ಬರೆದ ವಚನಗಳಲ್ಲಿ ಮಾತೃವಾತ್ಸಲ್ಯ, ಹೃದಯ ಕಲಕುವ ನವುದಾದ ಭಾವನೆಗಳು ಮನೋಜ್ಞವಾಗಿ ಮೂಡಿಬಂದಿವೆ. ಅಮೆರಿಕದ ವರ್ಲ್ಡ್ ಯೂನಿವರ್ಸಿಟಿ ಇದನ್ನು ಪುರಸ್ಕರಿಸಿ ಡಾಕ್ಟರ್ ಆಫ್‌ ಲಿಟರೇಚರ್ ಪದವಿ ನೀಡಿದೆ. ‘ಹಿಮ್‌ ಟು ಮದರ್’ ಎಂಬ ಹೆಸರಿನಿಂದ ಇಂಗ್ಲಿಷಗೂ ಅನುವಾದಗೊಂಡಿದೆ. ಐವತ್ತು ನಾಲ್ಕು ವರ್ಷಗಳ ಅತಿ ಕಡಿಮೆ ಜೀವಿತಾವಧಿಯಲ್ಲಿ ರಚಿಸಿದ ಕೃತಿಗಳ ಸಂಖ್ಯೆ ಕಡಿಮೆ ಎನಿಸಿದರೂ ಮೌಲ್ಯಯುತವಾದವುಗಳು. ಗುಂಡುಸೂಜಿ, ಮಾತೃಸಂಹಿತೆ, ಬೆಳಗಾಯಿತು, ಹೂವಿನ ಕೋಲು, ಪಟಾಚಾರ, ಸ್ತ್ರೀ ಮತ್ತು ಇತರ ಕವನಗಳು, ಸೀಯಾಳ, ಸಾವಿರಾರು ಗುಂಡುಸೂಜಿ, ಬ್ರಾಹ್ಮಣ ಬಂಡಾಯ ಮೊದಲಾದ ೯ ಕವನ ಸಂಕಲನಗಳು- ‘ಸೌಂದರ್ಯದ ಸಾನಿಧ್ಯದಲ್ಲಿ’ ಎಂಬ ಒಂದು ಇತಿಹಾಸ ಕೃತಿ- ‘ಚೆಲುವು ಚೆಲ್ಲಿದಲ್ಲಿ’ ಎಂಬ ಒಂದು ಪ್ರವಾಸಕಥನ- ಕೈಲಿಯ ಕರೆದ ನೊರೆಹಾಲು, ಮದ್ದುಂಟೆ ಜನನ ಮರಣಕ್ಕೆ, ಚಿನ್ನದ ಕದರ‍್ಹಾಂಗೆ ಸಲಹಿನಿ, ಮೊದಲಾದ ೩ ಜನಪದ ಗೀತೆಗಳ ಸಂಗ್ರಹಗಳು- ರುದ್ರಭಟ್ಟ, ಸಾಂತ್ಯಾರು ವೆಂಕಟರಾಜ, ವ್ಯಾಸರಾಯರು, ಕನಕದಾಸರು, ಸನ್ಮಾರ್ಗಸಾಧಕ ಮೊದಲಾದ ೫ ವ್ಯಕ್ತಿ ಚಿತ್ರ ಕೃತಿಗಳು- ಸಮಾರಾಧನೆ, ಬೆಳಕಿನ ಬೀಜ, ಪಂಪನ ಪೆಂಪು ಮೊದಲಾದ ೩ ವಿಮರ್ಶಾ ಕೃತಿಗಳು ಮತ್ತು ದುರ್ಗಸಿಂಹನ ಪಂಚತಂತ್ರ ಎಂಬ ಒಂದು ಅನುವಾದಿತ ಕೃತಿಯೂ ಸೇರಿ ಒಟ್ಟು ೨೩ ಕೃತಿಗಳು ಪ್ರಕಟಿತ. ಇವರ ‘ಪಟಾಚಾರ’ ಕೃತಿಗೆ ಬಿ.ಎಂ.ಶ್ರೀ. ಸುವರ್ಣ ಪದಕ, ‘ಸೌಂದರ್ಯದ ಸಾನಿಧ್ಯದಲ್ಲಿ’ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ, ‘ಕೈಲಿಯ ಕರೆದ ನೊರೆಹಾಲು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಮದ್ದುಂಟೆ ಜನನ ಮರಣಕ್ಕೆ’ ಕೃತಿಗೆ ಮೈಸೂರು ವಿಶ್ವವಿದ್ಯಾಲಯದ ಸುವಣಮಹೋತ್ಸವ ಪ್ರಶಸ್ತಿ, ‘ಸೀಯಾಳ’ ಕೃತಿಗೆ ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ ಮುಂತಾದವುಗಳು ಗುಂಡ್ಮಿಯವರ ಕಾವ್ಯಕಿರೀಟಕ್ಕೆ ಸಿಕ್ಕಿಸಿದ ಪ್ರಶಸ್ತಿ ಗರಿಗಳು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top