೨೨-೬-೧೯೩೬ ತತ್ತ್ವಶಾಸ್ತ್ರ ವಿದ್ವಾಂಸ, ಸಂಗೀತಾಸಕ್ತ, ಸಾಹಿತಿ ಗೋವಿಂದರಾವ್ರವರು ಹುಟ್ಟಿದ್ದು ಗದಗದಲ್ಲಿ. ತಂದೆ ವಕೀಲರಾಗಿದ್ದ ಅನಂತರಾವ್ ಜಾಲಿಹಾಳ. ತಾಯಿ ರಾಧಾಭಾಯಿ. ಪ್ರಾಥಮಿಕ ವಿದ್ಯಾಭ್ಯಾಸ ಗದಗ. ಕಾಲೇಜಿಗೆ ಸೇರಿದ್ದು ಮುಂಬೈ ವಿಶ್ವವಿದ್ಯಾಲಯ-ಎಂ.ಎ. ಪದವಿ. ಮೈಸೂರು ವಿಶ್ವವಿದ್ಯಾಲಯದಲ್ಲಿ “THE ETHICAL CONTRIBUTION’S OF THE LATE PROF HIRIYANNA” ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಮುಂಬೈ ಜೆ.ಜೆ. ಸೋಮಾಯ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಕಾಮರ್ಸ್, ನಂತರ ದ. ಕನ್ನಡ ಜಿಲ್ಲೆಯ ಮೂಲ್ಕಿಯ ವಿಜಯಾ ಕಾಲೇಜ್, ಶೃಂಗೇರಿಯ ಜೆ.ಸಿ.ಬಿ.ಎಂ. ಕಾಲೇಜು, ಮೈಸೂರಿನ ಮಹಾರಾಜಾ ಕಾಲೇಜು, ಮದರಾಸಿನ ವೈಷ್ಣವ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದಲ್ಲಿ ರೀಡರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೯೬ರಲ್ಲಿ ನಿವೃತ್ತಿ. ಬಾಲ್ಯದಿಂದಲೂ ತತ್ತ್ವಶಾಸ್ತ್ರ, ಸಂಗೀತ, ಸಾಹಿತ್ಯಗಳತ್ತ ಒಲವು. ಧಾರವಾಡದಲ್ಲಿ ನಡೆದ ಮನ್ವಂತರ ಸಾಹಿತ್ಯಗೋಷ್ಠಿಯಲ್ಲಿ ‘ಹಳದಿಮೀನು’ ಕಾದಂಬರಿ ಕುರಿತು ಮಂಡಿಸಿದ ವಿಮರ್ಶೆಯಿಂದ ವಿಮರ್ಶಾಕ್ಷೇತ್ರ ಪ್ರವೇಶ. ಅಡಿಗರ ‘ಸಾಕ್ಷಿ’ ಪತ್ರಿಕೆಯಲ್ಲಿ ವಿಮರ್ಶಾ ಲೇಖನಗಳು ಪ್ರಕಟಿತ. ಪ್ರಕಟಿತ ಗ್ರಂಥಗಳು : ಕಾವ್ಯ-ಗದ್ಯದಿಂದ ಪದ್ಯಕ್ಕೆ, ವಿಜಯಪಥ, ಅಂಚೆದಾರಿಯಲ್ಲಿ. ವಿಮರ್ಶೆ-ವಂಶವೃಕ್ಷ ಮತ್ತು ಸಂಸ್ಕಾರ ಒಂದು ತುಲನಾತ್ಮಕ ವಿಮರ್ಶೆ, ಕಾವ್ಯಮಂಥನ ಮುಂತಾದುವು. ಕರ್ನಾಟಕ ಸಂಗೀತಗಾರರಾದ ಪುರಂದರದಾಸರು, ವಾಗ್ಗೇಯಕಾರ ವಾಸುದೇವಾಚಾರ್, ಬಿಡಾರಂ ಕೃಷ್ಣಪ್ಪ, ಎಂ.ಎಸ್. ಮುಂತಾದವರ, ಹಿಂದೂಸ್ಥಾನಿ ಸಂಗೀತಗಾರರಾದ ಖಾನ್ ಸಾಹೇಬ್ ಅಬ್ದುಲ್ ಕರೀಂಖಾನ್, ಭೀಮಸೇನ ಜೋಶಿ, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು ಮುಂತಾದವರ ಬಗ್ಗೆ ಬರೆದ ಸಂಗೀತದಲ್ಲಿನ ಕಾವ್ಯ ವಿಶ್ಲೇಷಣೆಯ ‘ಸಂಗೀತ ಕವಿತಾಕುಸುಮಮಾಲ’ ಲೇಖನಮಾಲೆ, ‘ಗೋವಾ ದರ್ಪಣ’ ಎಂಬ ಪತ್ರಿಕೆಯಲ್ಲಿ ಒಂದುವರೆ ವರ್ಷ ಪ್ರಕಟಿತ. ಇದೊಂದು ಸಂಗೀತ, ಕಾವ್ಯ ವಿಶ್ಲೇಷಣೆ. ಪಾಶ್ಚಾತ್ಯ ತತ್ತ್ವಶಾಸ್ತ್ರ ಬೋಧಕರಾಗಿ ಫ್ಲಾರಿಡಾದ ಪೆನ್ಸ್ಕೋಲಾ ಕಾಲೇಜಿನಿಂದ ಪ್ರಶಸ್ತಿ ಪಡೆದ ಪ್ರಮುಖರಲ್ಲೊಬ್ಬರು. THE TRADITIONAL HINDU SOCIAL PHILOSOPHY AND ITS RELEVANCE TO THE MODERN HINDU SOCIETY ವಿಷಯದ ಬಗ್ಗೆ ಯೂನಿವರ್ಸಿಟಿ ಗ್ರ್ಯಾಂಟ್ ಕಮೀಷನ್ನಿನಿಂದ ಸಂಶೋಧನಾ ನಿರತರು. ಇದೇ ದಿನ ಹುಟ್ಟಿದ ಸಾಹಿತಿಗಳು : ಕೆ.ಆರ್. ಸಂಧ್ಯಾರೆಡ್ಡಿ – ೧೯೫೩ ಗಂಗಾಧರ ಮೊದಲಿಯಾರ್ – ೧೯೫೪

