Loading Events

« All Events

  • This event has passed.

ಡಾ. ಜಯಂತಿ ಮನೋಹರ್

October 2, 2023

೦೨.೧೦.೧೯೫೧ ಯಾವುದೇ ಭಾಷೆಯನ್ನು ಕಲಿಯುವಾಗಲೂ ಲಿಪಿ ಮುಖಾಂತರ ಭಾಷೆಯನ್ನು ಕಲಿಸುವುದು ಸಾಮಾನ್ಯವಾದ ಮಾರ್ಗವಾದರೆ ಇನ್ನೊಂದು ವಿಧಾನ – ಯಾವ ಭಾಷೆ ಕಲಿಯಬೇಕೋ ಆ ಭಾಷೆಯಲ್ಲಿ ಹದಿನೈದು ದಿವಸಗಳವರೆಗೆ ಮಾತನಾಡಲು ಕಲಿಸಿ ನಂತರ ಲಿಪಿಯನ್ನುಪಯೋಗಿಸಿಕೊಂಡು ಭಾಷೆಯನ್ನು ಕಲಿಸತೊಡಗುವುದು. ಇದಕ್ಕೆ ಭಾಷಾ ತಜ್ಞರಾದ ಎರಿಲ್‌ ಡಬ್ಲೂ. ಸ್ಟೆವಿಕ್‌ ಮೆಥೆಡ್‌ (ನೇರವಿಧಾನ). ಈ ವಿಧಾನದಲ್ಲಿ ಭಾಷೆಯನ್ನು ಕಲಿಯುವುದು ಸುಲಭವೆಂದು ಪ್ರತಿಪಾದಿಸಿ ಈಗಾಗಲೇ ದೇಶ – ವಿದೇಶಿಯರಿಗೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನು ಕಲಿಸತೊಡಗಿರುವ ಜಯಂತಿ ಮನೋಹರ್ ರವರು ಹುಟ್ಟಿದ್ದು ೧೯೫೧ ರ ಅಕ್ಟೋಬರ್ ನ ಗಾಂಧಿ ಜಯಂತಿಯಂದು. ನಂಜನಗೂಡಿನಲ್ಲಿ. ತಂದೆ ಎಂ. ನಾಗರಾಜ್‌, ಗಾಂಧೀಜಿಯವರ ಮೌಲ್ಯಗಳಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸೆರೆವಾಸ ಕಂಡವರು. ತಾಯಿ ಆರ್. ಅಮೃತಾಬಾಯಿಯವರು ೫೦ರ ದಶಕದಲ್ಲೆ ಬಿ.ಎ. ಪದವಿ ಪಡೆದಿದ್ದರೂ ಗಾಂಧೀಜಿಯವರ ಕರೆಯಂತೆ ಸುಲಭವಾಗಿ ಸಿಗುತ್ತಿದ್ದ ಸರಕಾರಿ ಕೆಲಸವನ್ನು ತ್ಯಜಿಸಿ ಸಮಾಜ ಕಲ್ಯಾಣ ಸಲಹಾ ಮಂಡಳಿಯಲ್ಲಿ ಮುಖ್ಯ ಆಯೋಜಕಿಯಾಗಿ ಹಲವಾರು ವರ್ಷಗಳು ಹಳ್ಳಿಗಳಲ್ಲಿ ದುಡಿದು ನಂತರ ರಾಮನಗರದ ಸಂಸ್ಕೃತ ವಿದ್ಯಾಪೀಠದಲ್ಲಿ ಮುಖ್ಯ ಉಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರು. ತಂದೆಯ ಸೋದರಮಾವ ಎಚ್‌.ಎಲ್‌.ಎನ್‌. ಸಿಂಹರವರ ಮನೆಯಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಪುರಾಣ – ಪುಣ್ಯ ಕಥೆಗಳು, ಹರಿಕಥಾ ಕಾಲ ಕ್ಷೇಪದಲ್ಲಿ, ಚಿಕ್ಕ ವಯಸ್ಸಿನಲ್ಲಿಯೇ ತಲ್ಲೀನರಾಗಿ ಕುಳಿತು ಕೇಳುತ್ತಿದ್ದುದರಿಂದ ಬೀರಿದ ಪ್ರಭಾವ. ಜೊತೆಗೆ ಅಜ್ಜಿಯರು ಹೇಳುತ್ತಿದ್ದ ಕಥೆಗಳು, ರಾಮನಗರದಲ್ಲಿ ನಡೆಯುತ್ತಿದ್ದ ಸಂಗೀತ, ಹರಿಕಥೆ, ಉತ್ಸವ ಮುಂತಾದ ಸಾಂಸ್ಕೃತಿಕ ವಾತಾವರಣ ಇವು ಮನಸ್ಸಿನ ಮೇಲೆ ಮಾಡಿದ ಅಗಾಧ ಪರಿಣಾಮ. ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಅಂದು ದೊರೆಯುತ್ತಿದ್ದ ಪತ್ತೇದಾರಿ ಪುರುಷೋತ್ತಮ – ರಾಮನಾಥರ ಪತ್ತೇದಾರಿ ಕಾದಂಬರಿಗಳು, ಸಾಮಾಜಿಕ ಕಾದಂಬರಿಗಳನ್ನು ಓದಿ ಮುಗಿಸಿದ್ದಲ್ಲದೆ, ಸ್ನೇಹಿತೆಯರಿಗೆ ರಸವತ್ತಾಗಿ ಕಥೆಗಳನ್ನು ವರ್ಣಿಸತೊಡಗಿದ್ದರಿಂದ ಒಂದು ರೀತಿಯ ಕಥೆ ಹೇಳುವ ಗುಣ ಬೆಳೆಯತೊಡಗಿತು. ಹೀಗೆ ಪ್ರಾರಂಭವಾದ ಓದಿನಿಂದ ರಾಮಕೃಷ್ಣರ ವಚನವೇದ, ವಿವೇಕಾನಂದರ ಗ್ರಂಥಗಳು ಮುಂತಾದ ಗಂಭೀರ ಸಾಹಿತ್ಯದತ್ತ ಹೊರಳಿದ ಮನಸ್ಸು. ಸ್ನಾತಕೋತ್ತರ ಪದವಿ ಪಡೆದನಂತರ ಸೇರಿದ್ದು ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ. ಬ್ಯಾಂಕಿನ ಕನ್ನಡ ಸಂಘವು ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ‘ಕನ್ನಡದಲ್ಲಿ ಬ್ಯಾಂಕಿಂಗ್‌ ಬ್ಯಾಂಕಿಂಗ್‌ನಲ್ಲಿ ಕನ್ನಡ’ ಎಂಬ ಘೋಷ ವಾಕ್ಯದೊಡನೆ ನಡೆಸುತ್ತಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಜಯಂತಿಯವರು ಭಾಗಿಯಾಗಿದ್ದಲ್ಲದೆ ಬ್ಯಾಂಕ್‌ನಿಂದ ಪ್ರಕಟವಾಗುತ್ತಿದ್ದ ‘ಕೊಲೀಗ್‌’ ಎಂಬ ಪತ್ರಿಕೆಗಾಗಿ ಬರೆದ ಹಲವಾರು ಲೇಖನಗಳು. ಬ್ಯಾಂಕ್‌ನಲ್ಲಿದ್ದ ಕೆಲ ಹಿರಿಯ ಕನ್ನಡೇತರ ಅಧಿಕಾರಿಗಳಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಹ್ವಾನದಂತೆ ಹೈದರಾಬಾದಿನ ಪೊಲೀಸ್‌ ಅಕಾಡಮಿಯಲ್ಲಿನ ಅಧಿಕಾರಿಗಳಿಗೆ ಕಲಿಸಿದ ಕನ್ನಡ ಭಾಷೆ. ೧೯೭೦ರ ದಶಕದಲ್ಲಿ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ವಿದೇಶಿಯರಿಗೆ ಕನ್ನಡಭಾಷೆ ಕಲಿಸತೊಡಗಿದ್ದು ಎಸ್‌.ಬಿ.ಎಂ ನಲ್ಲಿ ಉದ್ಯೋಗಿಯಾಗಿ ಭಾಷಾ ವಿಭಾಗದಲ್ಲಿ ಹತ್ತು ವರುಷ ದುಡಿದ ನಂತರ ಭಾಷೆಯನ್ನು ಕಲಿಸಲೆಂದೇ ಸಂಪೂರ್ಣವಾಗಿ ತೊಡಗಿಸಿಕೊಂಡರು. ೧೯೮೭ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ‘ಅನುಭವಾತ್ಮಕ ಕಲಿಕೆ’ ಯ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಜರ್ಮನಿಯ ಹೈಡಲ್‌ ಬರ್ಗ್ ವಿ.ವಿ. ದಲ್ಲಿ ‘ಮಹಾತ್ಮಗಾಂಧಿಯ ಶಿಕ್ಷಣ ಪದ್ಧತಿ’ಯ ಬಗ್ಗೆ ಬರೆದ ಪ್ರಬಂಧದೊಂದಿಗೆ ನಡೆಸಿದ ಕ್ಷಿಪ್ರ ಕನ್ನಡ ಕಲಿಕಾ ತರಗತಿಗಳು. ೧೯೯೪ರಲ್ಲಿ ಆಸ್ಟ್ರೇಲಿಯಾದ ಮೆಲ್ಬೊರನ್‌ ನಲ್ಲಿ ನಡೆದ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಬೈಬಲಿನ ಹಳೆ ಒಡಂಬಡಿಕೆಯ ಒಂದು ಭಾಗದೊಡನೆ ಋಗ್ವೇದ ಸೂತ್ರದೊಂದಿಗೆ ತುಲನಾತ್ಮಕವಾಗಿ ಬರೆದ ಪ್ರಬಂಧ ಮಂಡಿಸಿ ಪಡೆದ ಸನ್ಮಾನ. ಎಪ್ಪತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ರಂಗಭೂಮಿಯ ಚಟುವಟಿಕೆಗಳಿಗೆ ಕಾರಂತ, ಕಾರ್ನಾಡರು ಜೀವತುಂಬಿ ನಾಟಕ ಪ್ರದರ್ಶನಗಳಿಂದ ಆಕರ್ಷಣೆಯ ಕೇಂದ್ರವಾಗಿಸಿದ್ದು, ಇವರೂ ಸಕ್ರಿಯರಾಗಿ ತೊಡಗಿಸಿಕೊಳ್ಳಲು ಅವಕಾಶಗಳು ಒದಗಿಬಂದವು. ಒಂದೆಡೆ ತಂದೆಯ ಸೋದರಮಾವ ಎಚ್‌.ಎಲ್‌.ಎನ್‌. ಸಿಂಹರವರಿಂದ ಮತ್ತೊಂದೆಡೆ ತಾಯಿಯ ಸೋದರಮಾವ ನಾಟಕರಂಗದಲ್ಲಿ ಪ್ರಸಿದ್ದರಾಗಿದ್ದ ಬಿ.ಕೃಷ್ಣ (ತುಪ್ಪ) ಇವರುಗಳಿಂದ ಬಂದ ಬಳುವಳಿ, ಸಾಂಸ್ಕೃತಿಕ ಜಗತ್ತಿನೊಂದಿಗೆ ನಂಟು ಬೆಳೆದಿದ್ದು ವಂಶವಾಹಿನಿ ಗುಣಗಳಿಂದ. ನಾಟಕ ಮತ್ತು ಸಿನಿಮಾ ರಂಗದ ಬಗ್ಗೆ ಬೆಳೆದ ಒಲವು. ಕನ್ನಡ ಎಂ.ಎ. ಗಾಗಿ ಓದುವ ಸಂದರ್ಭದಲ್ಲಿ ಕುವೆಂಪು ರಾಮಾಯಣ ದರ್ಶನಂನಲ್ಲಿ ‘ದಶಾನನ ಸ್ವಪ್ನ ಸಿದ್ಧಿ’ ಅಧ್ಯಾಯ ಓದಿ ಪ್ರಭಾವಿತರಾಗಿ ಬರೆದ ನಾಟಕ ‘ರಾವಣಾಸುರನ ಕಣಸು’. ಸೀತೆಯ ಬಗ್ಗೆ ಇದ್ದ ಕಾಮುಕ ದೃಷ್ಟಿ ಮಾತೃವಾತ್ಸಲ್ಯವಾಗಿ ಪರಿವರ್ತನೆಯಾಗುವ ವಸ್ತುವುಳ್ಳ ನಾಟಕ. ಹಲವಾರು ಬಾರಿ ರಂಗದ ಮೇಲೂ ಪ್ರದರ್ಶನ ಗೊಂಡು ಜನಪ್ರಿಯತೆಯನ್ನು ತಂದು ಕೊಟ್ಟಿದ್ದಲ್ಲದೆ ‘ರಾವಣಾಸುರನ ಕಣಸಿನ ಕಥೆ’ಯಾಗಿ ಕಾದಂಬರಿಯಾಗಿಯೂ ಪ್ರಕಟವಾಗಿದೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ ಸೇರಿದ ಜಯಂತಿಯವರಿಗೆ ಬ್ಯಾಂಕ್‌ ಸಹೋದ್ಯೋಗಿ ಮನೋಹರ್ ರವರೇ ಬಾಳಸಂಗಾತಿಯಾಗಿದ್ದು, ಜೊತೆಯಾಗಿ ರಂಗಭೂಮಿ, ಟಿವಿ ಧಾರವಾಹಿ, ಅಭಿನಯ ಮತ್ತು ಸಂಭಾಷಣೆ ರಚನೆ; ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ವಿಷಯಗಳ ಮೇಲೆ ಸಾಕ್ಷ್ಯ ಚಿತ್ರಗಳ ನಿರ್ಮಾಣ – ಹೀಗೆ ಹಲವಾರು ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಜೋಡಿ. ೧೯೮೦ರಲ್ಲಿ ಬೆಂಗಳೂರಿನಲ್ಲಿ ನಡೆದ ಕಳ್ಳಭಟ್ಟಿ ದುರಂತವು ಬಹುದೊಡ್ಡ ದುರಂತವಾಗಿ ೩೦೦ ಜನರನ್ನು ಬಲಿತೆಗೆದುಕೊಂಡಿದ್ದರ ಸಾಕ್ಷ್ಯಚಿತ್ರ – ಮತ್ತೊಂದು ದುರಂತವೆಂದರೆ ವೀನಸ್‌ ಸರ್ಕಸ್‌ಗೆ ೧೯೮೧ರಲ್ಲಿ ಬೆಂಕಿಬಿದ್ದ ಅವಘಡದಲ್ಲಿ ಸಿಲುಕಿಕೊಂಡ ನೂರಾರು ಶಾಲಾಮಕ್ಕಳ ಹೃದಯ ವಿದ್ರಾವಕ ಘಟನೆ ೧೯೮೨ರಲ್ಲಿ ಕನ್ನಡದ ಆರಾಧ್ಯ ದೈವವೆನಿಸಿದ್ದ ರಾಜಕುಮಾರ್ ರವರ ನೇತೃತ್ವದಲ್ಲಿ ಕನ್ನಡದ ಉಳಿವಿಗಾಗಿ ನಡೆದ ಗೋಕಾಕ್‌ ಚಳುವಳಿಗಳಲ್ಲದೆ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮಹಾಮಜ್ಜನ, ಕರ್ನಾಟಕದ ವಿಶಿಷ್ಟಕಲೆ ಸಾಹಿತ್ಯಾವಧಾನದ ಸಾಕ್ಷ್ಯಚಿತ್ರಗಳಲ್ಲದೆ ಪಿ.ಶೇಷಾದ್ರಿಯವರ ಮೆಗಾ ಧಾರಾವಾಹಿ ‘ಉಯ್ಯಾಲೆ’ಗೆ ಸಂಭಾಷಣೆ, ಜಿ.ವಿ. ಅಯ್ಯರ್‌ರವರು ದೂರದರ್ಶನ ಧಾರಾವಾಹಿ ‘ಕಾದಂಬರಿ’ (ಹಿಂದಿ, ಸಂಸ್ಕೃತ) ಯ ಸಹ ನಿರ್ದೇಶನ, ಸಂಸ್ಕೃತ ಚಿತ್ರ ಸ್ವಪ್ನವಾಸವದತ್ತಂ ಸಹನಿರ್ದೇಶನ ಮುಂತಾದವುಗಳಿಂದ ಗಳಿಸಿದ ಯಶಸ್ಸು. ಭಾರತೀಯ ಚಿಂತನೆಗಳಿರುವ ಅನೇಕ ಗ್ರಂಥಗಳ ಅಧ್ಯಯನದ ಜೊತೆಗೆ ವೇದ ಮಂತ್ರಗಳ ಅಧ್ಯಯನ ನಡೆಸಿ ‘ಋಗ್ವೇದದಲ್ಲಿರುವ ಸಂಕೇತಾಕ್ಷರಗಳು – ಸಿದ್ಧಾಂಜನದ ಹಿನ್ನೆಲೆಯಲ್ಲಿ ಒಂದು ವಿಶೇಷ ಅಧ್ಯಯನ’ ಎಂಬ ಪ್ರೌಢ ಪ್ರಬಂಧ ಮಂಡಿಸಿ ಪಡೆದ ಪಿಎಚ್‌.ಡಿ. ಪದವಿ. ಈ ಸಂದರ್ಭದಲ್ಲಿ ಬರೆದ ಕೃತಿ ‘ಋಗ್ವೇದವನ್ನು ಏಕೆ ಓದಬೇಕು?’ ಎಂಬ ಕೃತಿಯು ೨೦೦೦ದಲ್ಲಿ ಪ್ರಕಟವಾಗಿದೆ. (ಪ್ರೊ. ಕಶ್ಯಪ್‌ರವರ ಪುಸ್ತಕದ ಅನುವಾದ) ನಂತರ ಬರೆದ ಕೃತಿ ‘ಋಗ್ವೇದದ ಅಗ್ನಿ ಮಂತ್ರಗಳು’. ಇವಲ್ಲದೆ ಭಾರತೀಯ ಚಿಂತನೆಗಳಲ್ಲಿ ಮನೋವೈಜ್ಞಾನಿಕ ತತ್ತ್ವಗಳು, ಸೀತಾರಾಮ ಸಮಾಗಮಕ್ಕೆ ರಾವಣನ ದೌತ್ಯ (ಕಾದಂಬರಿ – ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿ) ಹಾಗೂ ಥಾಯ್‌ಲ್ಯಾಂಡ್‌ ಮತ್ತು ಕಾಂಬೋಡಿಯಾಗಳಲ್ಲಿ ಹರಡಿರುವ ಭಾರತೀಯ ಸಂಸ್ಕೃತಿ (ಪ್ರವಾಸಕಥನ – ಕರ್ಮವೀರ ವಾರಪತ್ರಿಕೆಯಲ್ಲಿ ಧಾರಾವಾಹಿ) ಪ್ರಕಟಗೊಂಡಿವೆ. ವಿಶೇಷವಾಗಿ ವೇದಮಂತ್ರಗಳಲ್ಲಿ ಸಂಕೇತದಲ್ಲಿ ಪ್ರಕಟಗೊಂಡಿರುವ ಅಧ್ಯಾತ್ಮಿಕ ಹಾಗೂ ಮನೋವೈಜ್ಞಾನಿಕ ಅಂತರಾರ್ಥದ ಅಧ್ಯಯನ ಹಾಗೂ ವಾಲ್ಮೀಕಿ ರಾಮಾಯಣದೊಂದಿಗೆ ಥಾಯ್‌ಲ್ಯಾಂಡ್‌, ಕಾಂಬೋಡಿಯಾ, ಬಾಲಿ ಮತ್ತು ವಿವಿಧ ಕನ್ನಡ ರಾಮಾಯಣಗಳ ತೌಲನಿಕ ಅಧ್ಯಯನ ಮತ್ತು ಪಂಡಿತ ತ್ರಯಂಬಕ ಮಖಿಯ ‘ಧರ್ಮಕೂತಂ’ ಗ್ರಂಥದ ಇಂಗ್ಲಿಷ್‌ ಅನುವಾದ ಮುಂತಾದವುಗಳಲ್ಲಿ ವಿಶೇಷಾಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತೀಯ ಚಿಂತನೆಯಲ್ಲಿ ಮನೋವೈಜ್ಞಾನಿಕ ತತ್ತ್ವಗಳು ಕೃತಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ವೀ.ನ.ವೀ ಪ್ರಕಾಶನದ ಬಹುಮಾನ ಮತ್ತು ವೇದಾಧ್ಯಯನದ ಸಾಧನೆಗಾಗಿ ಶ್ರೀ ಅರೋಬಿಂದು ಕಪಾಲಿ ಶಾಸ್ತ್ರಿ ವೇದ ಸಂಸ್ಕೃತ ಸಂಸ್ಥೆಯ ಟಿ.ವಿ. ಕಪಾಲಿ ಶಾಸ್ತ್ರಿ ಪುರಸ್ಕಾರ ಮುಂತಾದವುಗಳು ದೊರೆತಿವೆ.

Details

Date:
October 2, 2023
Event Category: