ಡಾ. ಜಿ.ಎನ್. ಉಪಾಧ್ಯ

Home/Birthday/ಡಾ. ಜಿ.ಎನ್. ಉಪಾಧ್ಯ
Loading Events
This event has passed.

..೧೯೬೭ ಸಾಂಸ್ಕೃತಿಕ ಅಧ್ಯಯನ, ಭಾಷವಿಜ್ಞಾನ, ಪತ್ರಿಕೋದ್ಯಮ ಹೀಗೆ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದು, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ದುಡಿಯುತ್ತಿರುವ ಜಿ.ಎನ್‌. ಉಪಾಧ್ಯರವರು ಹುಟ್ಟಿದ್ದು ಉಡುಪಿ ತಾಲ್ಲೂಕಿನ ಕೋಟಾದಲ್ಲಿ  ಫೆಬ್ರವರಿ ೭ರ ೧೯೬೭ರಲ್ಲಿ. ತಂದೆ ನಾಗೇಂದ್ರ ಉಪಾಧ್ಯ; ತಾಯಿ ಇಂದಿರಾ. ಪ್ರಾರಂಭಿಕ ಶಿಕ್ಷಣ ಆವರ್ಸೆ ಸರಕಾರಿ ಪ್ರಾಥಮಿಕ ಶಾಲೆ, ಕೋಟಾ ವಿವೇಕ ಪ್ರೌಢಶಾಲೆಗಳಲ್ಲಿ. ಹುಬ್ಬಳ್ಳಿಯ ನೆಹರು ಮಹಾವಿದ್ಯಾಲಯದಿಂದ ಪಡೆದ ಬಿ.ಎ. ಪದವಿ. ಮುಂಬೈ ವಿಶ್ವವಿದ್ಯಾಲಯದಿಂದ ಮೊದಲ ರ್ಯಾಂಕ್‌ ಪಡೆದದ್ದು ವರದರಾಜ ಆದ್ಯ ಬಂಗಾರ ಪದಕದೊಡನೆ ಎಂ.ಎ. ಪದವಿ. “ಮಹಾರಾಷ್ಟ್ರದ ಶಾಸನಗಳ ಸಾಂಸ್ಕೃತಿಕ ಅಧ್ಯಯನ ” ಮಹಾಪ್ರಬಂಧ ಮಂಡಿಸಿ ಮುಂಬೈ ವಿ.ವಿ. ದಿಂದ ಪಡೆದ ಪಿಎಚ್‌.ಡಿ. ಪದವಿ. ಉದ್ಯೋಗ ಪ್ರಾರಂಭಿಸಿದ್ದು ಮುಂಬಯಿಯ ‘ಕರ್ನಾಟಕ ಮಲ್ಲ’ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ. ಮುಂಬಯಿಯ ಕನ್ನಡಭವನ ಜ್ಯೂನಿಯರ್ ಕಾಲೇಜ್‌ನಲ್ಲಿ ಅಧ್ಯಾಪಕರಾಗಿ ಕೆಲಕಾಲ. ಇದೀಗ ಮುಂಬಯಿಯ ವಿ.ವಿ.ದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸಲ್ಲಿಸುತ್ತಿರುವ ಸೇವೆ. ಸೊಲ್ಲಾಪುರದ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರದ ಕನ್ನಡ ಶಾಸನಗಳ ವರ್ಣನಾತ್ಮಕ ಸೂಚಿ, ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು, ಮಹಾರಾಷ್ಟ್ರ ಕರ್ನಾಟಕ ಸಾಂಸ್ಕೃತಿಕ ಬಾಂಧವ್ಯ ಮೊದಲಾದ ಸಂಶೋಧನ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಸಂಶೋಧನ ಕಾರ್ಯದಲ್ಲಿ ತಾವಷ್ಟೆ ತೊಡಗಿಸಿಕೊಳ್ಳದೆ, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಮಾರ್ಗದರ್ಶಕರಾಗಿದ್ದು ಇದುವರೆಗೆ ೨೪ ವಿದ್ಯಾರ್ಥಿಗಳು ಎಂ.ಫಿಲ್‌., ಪಿಎಚ್‌.ಡಿ ಪದವಿಗಳನ್ನು ಪಡೆದಿದ್ದರೆ ೧೦ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಇವರ ವಿಸ್ತೃತ ಸಂಶೋಧನೆಯ ಫಲವಾಗಿ ಗೋದಾವರಿವರಂ ಇರ್ದ ಕನ್ನಡ ನಾಡು, ಸಿದ್ಧರಾಮನ ಸೊನ್ನಲಿಗೆ. ಮಹಾರಾಷ್ಟ್ರ ಕರ್ನಾಟಕ ಆದಾನ ಪ್ರದಾನ, ಶರಣ ಕ್ಷೇತ್ರ ಸೊಲ್ಲಾಪುರ, ಮಹಾರಾಷ್ಟ್ರ ಕರ್ನಾಟಕ ಸಾಂಸ್ಕೃತಿಕ ಬಾಂಧವ್ಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ವಿಮರ್ಶಾ ಕೃತಿಗಳು-ವಿಚಾರದ ಬೆಳಕು, ಕರ್ನಾಟಕ ಸಂಸ್ಕೃತಿ ಹೆಜ್ಜೆ ಹಾದಿ, ಕನ್ನಡ ವಾಙ್ಞಯ ವಿಹಾರ, ಜೀವಿ (ಡಾ.ಜಿ.ವಿ. ಕುಲಕರ್ಣಿ) ಸಮಗ್ರ ಸಾಹಿತ್ಯ ದರ್ಶನ, ಮುಂಬೈ ಕನ್ನಡ ವಾಹಿನಿ, ಬೊಗಸೆ ತುಂಬ ಭಕ್ತಿ ಹಿಡಿದು, ಅನುಭಾವ ಸಾಹಿತ್ಯದ ವಿಭಿನ್ನ ನೆಲೆಗಳು ಮುಂತಾದವುಗಳ ಜೊತೆಗೆ ಬಿ.ಎ. ಸನದಿಯವರ ಬದುಕು ಬರೆಹ, ಕನ್ನಡ ಮನಸ್ಸುಗಳೊಂದಿಗೆ, ಸಂಸ್ಕೃತಿ ಶೋಧ ಮತ್ತು ಪ್ರೊ. ಹಂಪನಾ, ಪ್ರೊ. ಶಂಕರ ಮೊಕಾಶಿ ಪುಣೇಕರ, ವ್ಯಾಖ್ಯಾನ ಭಾಸ್ಕರ ಮತ್ತೂರು ಕೃಷ್ಣಮೂರ್ತಿ, ವ್ಯಾಸರಾಯ ಬಲ್ಲಾಳರ ಸಾಹಿತ್ಯ ಸಾಧನೆ, ಮತ್ತು ಜಿ.ಎಂ. ಹೆಗಡೆ ಸಾಹಿತ್ಯ ಸಾಧನೆ ಮುಂತಾದ ವ್ಯಕ್ತಿ ಚಿತ್ರಗಳಲ್ಲದೆ ಮಹಾರಾಷ್ಟ್ರದ ಕನ್ನಡ ಶಾಸನ ಸಂಪುಟ, ಮುಂಬೈ ಲೇಖಕರ ರೋಚಕ ಕಥೆಗಳು, ಅವಲೋಕನ, ಮಹಾರಾಷ್ಟ್ರ ಕನ್ನಡ ವಾಹಿನಿ, ಎಳೆದ ತೇರು, ಪ್ರೊ. ಹಂಪನಾ ರವರ ಚಾರು ವಸಂತ ಅವಲೋಕನ, ಶತದಳ ಪದ್ಮ ಮುಂತಾದವು ಸೇರಿ ಒಟ್ಟು ೩೪ ಕೃತಿಗಳು ಪ್ರಕಟಿತ. ಸರ್ವತೋಮುಖ ಕನ್ನಡದ ಬೆಳವಣಿಗೆಯಲ್ಲಿ ಪುಸ್ತಕಗಳ ಪ್ರಕಟಣೆಯದೇ ಬಹುದೊಡ್ಡ ಪಾತ್ರ. ಇತರರ ಪ್ರಕಾಶನ ದಡಿಯಲ್ಲಿ ತಮ್ಮ ಕೃತಿಗಳು ಪ್ರಕಟವಾಗಿದ್ದರೂ ತಾವೇ ಪ್ರಕಾಶನವನ್ನು ಪ್ರಾರಂಭಿಸಿ ತಮ್ಮ ಕೃತಿ ಪ್ರಕಟಣೆಗಷ್ಟೇ ಸೀಮಿತಗೊಳಿಸಿಕೊಳ್ಳದೆ, ಹೊರನಾಡ ಕನ್ನಡಿಗರನ್ನು ಉತ್ತೇಜಿಸಲು ಇತರರ ಕೃತಿಗಳನ್ನು ಪ್ರಕಟಿಸಿದ್ದೇ ಹೆಚ್ಚು. ಸಂಶೋಧನೆ, ಸಂಶೋಧಕರಿಗೆ ಮಾರ್ಗದರ್ಶನ. ಈ ಗುರುತರ ಜವಾಬ್ದಾರಿಗಳ ನಡುವೆ ಪ್ರಕಾಶನದ ಹೊರೆಯನ್ನೂ ಹೊತ್ತು ತಮ್ಮ ಅಭಿಜಿತ್‌ ಪ್ರಕಾಶನದಡಿ ೫೨ ಕೃತಿಗಳನ್ನು ಹೊರತಂದಿದ್ದಾರೆಂದರೆ ಅಚ್ಚರಿಯ ಸಂಗತಿ. ಮಹಾರಾಷ್ಟ್ರ ಸರಕಾರದ ಶಿಕ್ಷಣ ಇಲಾಖೆ, ರಾಜ್ಯ ಪಠ್ಯ ಪುಸ್ತಕ ಮಂಡಲಿ, ಸರಕಾರದ ಗುಪ್ತಚರ ಇಲಾಖೆ, ಮೊದಲಾದ ಸಂಸ್ಥೆಗಳಲ್ಲಿ ವಿಶೇಷ ತಜ್ಞರಾಗಿ, ಮಾರ್ಗದರ್ಶಕರಾಗಿಯೂ ಸಲ್ಲಿಸುತ್ತಿರುವ ಸೇವೆ. ಇವರ ನಿರಂತರ ಕನ್ನಡ ಕೈಂಕರ್ಯಕ್ಕಾಗಿ ಚಿತ್ರದುರ್ಗದ ಮುರುಘಾ ಮಠದಿಂದ ಶಿಕ್ಷಣ ವಿಭೂಷಣ, ಕನ್ನಡ ಸಾಹಿತ್ಯ ಪರಿಷತ್ತಿನ ಶಾಂತಿಲಾಲ್‌ ಪ್ರಶಸ್ತಿ (ಕೃತಿ-ಸಂಸ್ಕೃತಿ ಶೋಧ ಮತ್ತು ಪ್ರೊ. ಹಂಪನಾ.), ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಬಹುಮಾನ (ಕೃತಿ-ಮಹಾರಾಷ್ಟ್ರ ಕರ್ನಾಟಕದ ಆದಾನ ಪ್ರದಾನ), ಬೆಂಗಳೂರಿನಲ್ಲಿ ನಡೆದ ೭೭ ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಇದೀಗ೨೦೧೨ರ ಜನವರಿ ೭ ರಂದು ಅವರ ವಿಶಿಷ್ಟ ಸೇವೆಗಾಗಿ ಸಾಧನೆಗಾಗಿ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top