Loading Events

« All Events

  • This event has passed.

ಡಾ.ಜಿ.ಡಿ. ಜೋಶಿ

August 28

೨೮..೧೯೩೩ ಕನ್ನಡ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ರಂಗಗಳಲ್ಲಿ ಹೊರನಾಡಿನಲ್ಲಿ ಗಮನಾರ್ಹ ಸಾಧನೆಮಾಡಿರುವ ಗುರುನಾಥ ಧುಂಡಭಟ್ಟ ಜೋಶಿಯವರು ಹುಟ್ಟಿದ್ದು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿಯಲ್ಲಿ ೧೯೩೩ ರ ಆಗಸ್ಟ್‌ ೨೮ ರಂದು. ತಂದೆ ಧುಂಡಭಟ್ಟ, ತಾಯಿ ರಮಾಬಾಯಿ (ಸುಂದರಾಬಾಯಿ). ಹಿರಿಯ ಸಾಹಿತಿಗಳನ್ನೂ ಮುಂಬಯಿಗೆ ಕರೆಸಿ ಸನ್ಮಾನಿಸಿ, ಮುಂಬಯಿ ಬರಹಗಾರರ ಕೃತಿಗಳನ್ನು ವಿಮರ್ಶಿಸಿ, ವಿಚಾರ ಸಂಕಿರಣ, ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನೇರ್ಪಡಿಸಿ ಮುಂಬಯಿಯಲ್ಲಿ ಸದಾ ಕನ್ನಡದ ಕಲರವ ಕೇಳುವಂತೆ ಮಾಡುತ್ತಿರುವ, ಹಿರಿಕಿರಿಯರೆನ್ನದೆ ಎಲ್ಲರೊಂದಿಗೂ ಹೊಂದಿಕೊಳ್ಳುವ ಸ್ವಭಾವ ಜೋಶಿಯವರದು. ಪ್ರಾರಂಭಿಕ ಶಿಕ್ಷಣ ಬೆಳ್ಳಟ್ಟಿ, ಸೂರಣಗಿ ಮುಂತಾದೆಡೆಗಳಲ್ಲಿ. ಮುಂಬಯಿಯ ರಾಮನಾರಾಯಣ ರೂಯಾ ಕಾಲೇಜಿನಿಂದ ಬಿ.ಎ. ಪದವಿ, ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (೧೯೬೫) ಹಾಗೂ ಸೇಂಟ್‌ ಝೇವಿಯರ್ ಇನ್‌ಸ್ಟಿಟ್ಯೂಟ್‌ ಆಫ್‌ ಎಜುಕೇಷನ್‌ನಿಂದ ಬಿ.ಎಡ್‌. ಪದವಿ. ಡಾ. ಎಂ.ಎಸ್‌. ಸುಂಕಾಪುರ ರವರ ಮಾರ್ಗದರ್ಶನದಲ್ಲಿ “ಹುಯಿಲಗೋಳ ನಾರಾಯಣರಾಯರ ಜೀವನ ಸಾಧನೆ” ಮಹಾ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ (೧೯೯೪). ಪ್ರೌಢಶಾಲಾ ಶಿಕ್ಷಕರಾಗಿ ತಮ್ಮ ಬೋಧನಾ ವೃತ್ತಿಯನ್ನೂ ಪ್ರಾರಂಭಿಸಿದ ಜೋಶಿಯವರು ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ ಪ್ರೌಢಶಾಲೆ, ಯಂಗ್‌ ಮೆನ್ಸ್‌ ಹೈಸ್ಕೂಲು ನಂತರ ರೂಪರೇಲ್‌ ಮತ್ತು ಝನ್‌ಝನ್‌ ವಾಲಾ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ, ಝನ್‌ಝನ್‌ ಕಾಲೇಜಿನ ಪ್ರಾಂಶುಪಾಲರಾಗಿ, ಮುಂಬಯಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಗತಿಗಳ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತಿ. ಮುಂಬಯಿ ವಿ.ವಿ.ದ ಕನ್ನಡ ಅಭ್ಯಾಸ ಮಂಡಳಿ, ಅಕಾಡಮಿಕ್‌ ಕೌನ್ಸಿಲ್‌ ಮತ್ತು ಫ್ಯಾಕಲ್ಟಿ ಆಫ್‌ ಆರ್ಟ್ಸ್, ಮಹಾರಾಷ್ಟ್ರ ರಾಜ್ಯ ಪಠ್ಯಪುಸ್ತಕ ಮತ್ತು ಅಭ್ಯಾಸ ಕ್ರಮ, ಸಂಶೋಧನ ಮಂಡಳಿ, ಮಾಧ್ಯಮಿಕ ಮತ್ತು ಉಚ್ಚ ಮಾಧ್ಯಮಿಕ ಮಂಡಳಿಗಳ ವಿದ್ವತ್‌ ಪರಿಷತ್‌ ಮುಂತಾದವುಗಳ ಅಧ್ಯಕ್ಷರಾಗಿ, ಸದಸ್ಯರಾಗಿ ಕಾರ್ಯ ನಿರ್ವಹಣೆ. ಕಾಲೇಜು ದಿನಗಳಿಂದಲೇ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದ ಜೋಶಿಯವರ ಹರಟೆ, ಕಥೆ,ಲೇಖನಗಳು, ಅನುವಾದಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಮ್ಮ ಅಪಾರ ಜೀವನಾನುಭವದಿಂದ, ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಾ, ಸಮಾಜದ ಓರೆಕೋರೆಗಳನ್ನು ತಮ್ಮ ನವಿರಾದ ಭಾಷೆಯಿಂದ ವಿಡಂಬಿಸುತ್ತಾ ಬರೆಯುವ ಹರಟೆಗಳು ಓದುಗರಿಗೆ ಮುದನೀಡುವ ಬರಹಗಳಾಗಿವೆ. ಹೀಗೆ ಬರೆದ ಹರಟೆಗಳ ಮೊದಲನೆಯ ಸಂಕಲನ ‘ಹತ್ತು ಹರಟೆಗಳು’ (೧೯೭೨), ಮತ್ತು ‘ಹನ್ನೊಂದು ಹರಟೆಗಳು’ (೧೯೭೭) ಸಂಕಲನಗಳನ್ನೂ ಕಿನ್ನಿಗೋಳಿಯ ಯುಗಪುರುಷ ಪ್ರಕಟಣಾಲಯವು ಪ್ರಕಟಿಸಿದೆ. ೧೯೭೯ರಲ್ಲಿ ಡಾ.ಎಂ.ಎಸ್‌ ಸುಂಕಾಪುರ ರವರ ಮುನ್ನುಡಿಯೊಡನೆ ೧೯೭೯ ರಲ್ಲಿ ‘ಹನ್ನೆರಡು ಹರಟೆಗಳು’ ಹುಬ್ಬಳ್ಳಿಯಲ್ಲಿ ಬಿಡುಗಡೆಗೊಂಡಿತು. ೧೯೮೭ ರಲ್ಲಿ ಮುಂಬಯಿಯ ಸಾಹಿತ್ಯ ಸಂಘವು ‘ಸಮಯವಿಲ್ಲ’ ಪ್ರಬಂಧ ಸಂಕಲನವನ್ನೂ ಹೊರತಂದಿತು. ೧೯೮೯ ರಲ್ಲಿ ಪ್ರಕಟವಾದ ‘ಪರೋಕ್ಷ ಸಾಧನಂ’ ಪ್ರಬಂಧ ಸಂಕಲನಕ್ಕೆ ರಾ.ಯ. ಧಾರವಾಡಕರರು ಮುನ್ನುಡಿ ಬರೆದಿದ್ದರು. ಆಯ್ದ ಪ್ರಬಂಧಗಳ ಸಂಕಲನ ಮುಂಬಯಿ ಮಳೆ (೧೯೯೦) ಹದಿನೈದು ಹರಟೆಗಳ ಸಂಕಲನ’ ‘ಮುಂಬಯಿ ಮೋಹ’ (೧೯೯೪), ‘ದ್ವಿತೀಯ ಅಭಿಪ್ರಾಯ’ ಸಂಕಲನ (೨೦೦೩) ಮತ್ತು ಮತ್ತೊಮ್ಮೆ ಆಯ್ದ ಪ್ರಬಂಧಗಳ ಸಂಕಲನ ಮುಂಬಯಿ ಮನೆ (೨೦೦೮) ಪ್ರಕಟವಾಗಿದ್ದು ಸಮಗ್ರ ಪ್ರಬಂಧಗಳು (೨೦೧೦) ಕೂಡಾ ಪ್ರಕಟವಾಗಿದೆ. ಇವರ ಇತರ ಕೃತಿಗಳೆಂದರೆ ಕನ್ನಡ ಕಟ್ಟಿ ಬೆಳೆಸಿದ ಮಹಾ ಪುರುಷರುಗಳಾದ ಜ್ಞಾನಪೀಠ ಪ್ರಶಸ್ತಿ ವಿಜೇತರು,ಕನ್ನಡ ಕಣ್ಮಣಿಗಳು, ಕನ್ನಡ ಕಾರಣ ಪುರುಷರು, ಕನ್ನಡದ ಪೋಷಕರು, ಕನ್ನಡವನ್ನು ಮುನ್ನಡೆಸಿದವರು, ಕನ್ನಡ ಕುಲ ದೀಪಕರು, ಕನ್ನಡ ಕುಲ ರಸಿಕರು, ಕನ್ನಡವನ್ನು ಕಟ್ಟಿದವರು ಮುಂತಾದ ಕೃತಿಗಳು; ಅಜಾತ ಶತ್ರುವಿನ ಆಸ್ಥಾನದಲ್ಲಿ (ಅಂಕಣಬರಹ), ಮಾನವನ ಮುಕ್ತಿಯ ಇತಿಹಾಸ (ಅನುವಾದ) ಮುಂತಾದವುಗಳಲ್ಲದೆ ಯುವಕಭಾರತಿ, ದಿಸ್‌ ಇಯರ್, ದಶಮಾನ ಮುಂತಾದ ೯ ಸಂಪಾದಿತ ಕೃತಿಗಳ ಜೊತೆಗೆ ಆಡಳಿತಾತ್ಮಕ ಕೃತಿಗಳಾದ ಪೌರನೀತಿ, ಭಾರತದ ಆಡಳಿತ, ಪ್ರಾಥಮಿಕ ಪೌರನೀತಿ ಮತ್ತು ಇವರ ಸಹ ಸಂಪಾದಕತ್ವದಲ್ಲಿ ಪ್ರಕಟವಾದ ಹೊಯಿಲಗೋಳ ನಾರಾಯಣರಾಯರ ಸಮಗ್ರ ಸಾಹಿತ್ಯ ಸಂಪುಟ (೧-೩) ಮುಂತಾದ ಕೃತಿಗಳೂ ಸೇರಿ ಸುಮಾರು ೩೦ ಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ಆಯ್ದ ಪ್ರಬಂಧಗಳ ‘ಮುಂಬಯಿಮಳೆ’ ಸಂಕಲನವನ್ನೂ ಗುಲಬರ್ಗ ಮತ್ತು ಶಿವಾಜಿ ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ, ‘ಮುಂಬಯಿಮನೆ’ ಪ್ರಬಂಧ ಸಂಕಲನವನ್ನು ಸ್ವಾಮಿ ರಾಮಾನಂದತೀರ್ಥ ಮರಾಠವಾಡ ವಿಶ್ವವಿದ್ಯಾಲಯವು (ನಾಂದೇಡ್) ಎರಡನೆಯ ವರ್ಷದ ಬಿ.ಎ. ತರಗತಿಗಳಿಗೂ ಪಠ್ಯಪುಸ್ತಕಗಳಾಗಿ ಆಯ್ಕೆಮಾಡಿಕೊಂಡಿವೆ. ಸಾಹಿತ್ಯ ಕಾರ್ಯಕ್ರಮಗಳ ಸಂಘಟನೆಗಾಗಿ ಮಹಾರಾಷ್ಟ್ರ ಘಟಕದ ಕನ್ನಡ ಸಾಹಿತ್ಯ ಪರಿಷತ್ತು, ಮುಂಬಯಿ ಕನ್ನಡ ಸಂಘ, ಹೊರನಾಡ ಕಲಾ ವಿಲಾಸ ಮಕ್ಕಳ ಮನೆ, ಮುಂಬಯಿ ಕರ್ನಾಟಕ ಸಂಘ, ಮುಂಬಯಿ ಕನ್ನಡಿಗರ ಸಾಹಿತ್ಯ ಸಮ್ಮೇಳನಗಳು, ಮುಂಬಯಿ ಕನ್ನಡ ಪ್ರಚಾರ ಸಮಿತಿ, ಆರ್.ಜೆ.ಕಾಲೇಜು ಕನ್ನಡ ಸಂಘ, ಮುಲುಂಡ್‌ ವಿದ್ಯಾ ಪ್ರಚಾರಕ ಸಮಿತಿ ಮುಂತಾದವುಗಳ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಹಲವಾರು ಸಮಿತಿಗಳ ಜವಾಬ್ದಾರಿಯನ್ನೂ ಈಗಲೂ ಹೊತ್ತಿದ್ದಾರೆ. ಹೀಗೆ ಸಾಹಿತ್ಯರಚನೆ, ಪರಿಚಾರಿಕೆ, ಪ್ರಚಾರ, ಸಂಘಟನೆ, ಸಾಹಿತಿಗಳನ್ನು ಪುರಸ್ಕರಿಸುವ ಕೈಂಕರ್ಯ ಮುಂತಾದವುಗಳಲ್ಲಿ ತೊಡಗಿಸಿಕೊಂಡಿರುವ ಜೋಶಿಯವರಿಗೆ ಹೊರನಾಡ ಕನ್ನಡದ ಕಟ್ಟಾಳು ಪ್ರಶಸ್ತಿ, ರಾಷ್ಟ್ರಮನುಕುಲ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ಇಂದಿರಾಗಾಂಧಿ ಶಿರೋಮಣಿ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ, ಇಂಟರ್ ನ್ಯಾಷನಲ್‌ ಪೆಂಗ್ವಿನ್‌ ಪಬ್ಲಿಷಿಂಗ್‌ ನಿಂದ ರೈಸಿಂಗ್‌ ಪರ್ಸನಾಲಿಟಿ ಆಫ್‌ ಇಂಡಿಯಾ ಅವಾರ್ಡ್ (ಚಿನ್ನದ ಪದಕ) ಮುಂತಾದ ಹಲವಾರು ಸಂಘ ಸಂಸ್ಥೆಗಳಿಂದ ದೊರೆತ ಗೌರವ ಪುರಸ್ಕಾರಗಳು. ೧೯೯೨ ರಲ್ಲಿ ಸಾರ್ವಜನಿಕ ಸನ್ಮಾನ ನಡೆದು ಅರ್ಪಿಸಿದ ಹಮ್ಮಿಣಿಯಿಂದ ‘ಡಾ.ಜಿ.ಡಿ. ಜೋಶಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ‘ಸ್ಥಾಪಿಸಿ ಪ್ರತಿಭಾವಂತರ ಪ್ರಥಮ ಸಾಹಿತ್ಯ ಕೃತಿಗಳನ್ನು ಪ್ರಕಟಿಸುತ್ತಾ ಬಂದಿದ್ದು ಇದುವರೆವಿಗೂ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನೂ ಪ್ರಕಟಿಸಿ ಉದಯೋನ್ಮುಖ ಬರಹಗಾರರ ಬೆನ್ನೆಲುಬಾಗಿ ನಿಂತಿದ್ದಾರೆ. ಜೋಶಿಯವರ ಐವತ್ತರ ಸಂಭ್ರಮಕ್ಕಾಗಿ ಸ್ನೇಹಿತರು ಅಭಿಮಾನಿಗಳು‘ಗುರುಸಂಗತ’ (೧೯೯೨) ಮತ್ತು ಎಪ್ಪತ್ತೈದರ ಸಂಭ್ರಮಕ್ಕಾಗಿ ‘ಸಾರ್ಥಕತೆಯ ಹೆಜ್ಜೆ ಗುರುತುಗಳು’ (೨೦೦೮) ಹಾಗೂ ‘ಗುರುನಾಥ’ (೨೦೧೦) ಎಂಬ ಅಭಿನಂದನ ಗ್ರಂಥಗಳನ್ನರ್ಪಿಸಿರುವುದರ ಜೊತೆಗೆ ‘ಮುಂಬೆಳಕು’ ಮಾಸಪತ್ರಿಕೆಯು ವಿಶೇಷ ಸಂಚಿಕೆಯನ್ನೇ ಪ್ರಕಟಿಸಿ ಪ್ರೀತಿ ತೋರಿಸಿದೆ.

Details

Date:
August 28
Event Category: