೦೩.೦೧.೧೯೧೮ ೧೩.೧೧.೧೯೮೭ ಕಾವ್ಯ, ಜೀವನ ಚರಿತ್ರೆ, ಶಿಶುಸಾಹಿತ್ಯ, ವಿಮರ್ಶೆ, ಸಂಶೋಧನೆ – ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ವರದರಾಜರಾಯರು ಹುಟ್ಟಿದ್ದು ಬೆಂಗಳೂರಿನಲ್ಲಿ. ಹುಟ್ಟಿದ್ದು ಬೆಂಗಳೂರಾದರೂ ಓದಿದ್ದೆಲ್ಲ ಮೈಸೂರಿನಲ್ಲಿ. ಇಂಟರ್ ಮೀಡಿಯೆಟ್ನಲ್ಲಿ ವಿಜ್ಞಾನದ ವಿಷಯದಲ್ಲಿ ಓದಿದರೂ ಕನ್ನಡದಲ್ಲಿ ಗಳಿಸಿದ್ದು ಹೆಚ್ಚು ಅಂಕಗಳು. ಕನ್ನಡದಲ್ಲಿ ಆನರ್ಸ್ ಓದಲು ಪ್ರಯತ್ನಿಸಿದಾಗ ವಿಶ್ವವಿದ್ಯಾಲಯದ ನಿಯಮದ ಪ್ರಕಾರ ವಿಜ್ಞಾನ ವಿಷಯದ ವಿದ್ಯಾರ್ಥಿಗಳು ಕನ್ನಡವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಳ್ಳುವ ಹಾಗಿರಲ್ಲಿಲ್ಲ. ಕನ್ನಡ ಓದಬೇಕೆಂಬ ಆಸೆಯಿಂದ ಪ್ರೊ.ಎಂ.ವಿ. ಸೀತಾರಾಮಯ್ಯ, ಎ.ಆರ್. ಕೃಷ್ಣಶಾಸ್ತ್ರಿ, ಎನ್.ಎಸ್. ಸುಬ್ಬರಾವ್, ಬಿ.ಎಂ.ಶ್ರೀ ಮುಂತಾದವರುಗಳ ಶಿಫಾರಸ್ಸಿನಿಂದ ಮಹಾರಾಜ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ರಾಲೋರವರನ್ನು ಒಪ್ಪಿಸಿ ಆನರ್ಸ್ಗೆ ಸೇರಿದರು. ಬಿ.ಎ.ಆನರ್ಸ್ ನಂತರ ಎಂ.ಎ. ಪದವಿಯನ್ನೂ ಪಡೆದಾಗ ರಾಲೋ ಸಾಹೇಬರೇ ಪ್ರಶಂಸಿಸಿದರಂತೆ. ಉದ್ಯೋಗಕ್ಕಾಗಿ ಸೇರಿದ್ದು ರಾಜ್ಯಸರಕಾರದ ಕನ್ನಡ ಭಾಷಾಂತರ ಕಚೇರಿಯಲ್ಲಿ ಕೆಲಕಾಳ. ನಂತರ ಅಧ್ಯಾಪಕರಾಗಿ ಮೈಸೂರು ವಿ.ವಿ. ಅಲ್ಲಿಂದ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ. ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ‘ಪುರಂದರ ದಾಸರ ಕೀರ್ತನೆಗಳು’ ಕುರಿತು ಬರೆದ ಪ್ರಬಂಧಕ್ಕೆ ಪಡೆದ ಬಹುಮಾನ. ಇದರಿಂದ ಇವರಿಗೆ ಹರಿದಾಸ ಸಾಹಿತ್ಯದತ್ತ ಒಲವು ಪ್ರಾರಂಭವಾಗಿ ಸಂಶೋಧನೆ ನಡೆಸಲು ಪ್ರಚೋದನೆ ನೀಡಿತು. ಪ್ರಬಂಧವು ಪುಸ್ತಕ ರೂಪದಲ್ಲಿಯೂ ಪ್ರಕಟಗೊಂಡಿತು. ‘ಸೀತಾ ಪರಿತ್ಯಾಗ ಸಮಸ್ಯೆಗಳು’ ಈ ಸಂದರ್ಭದಲ್ಲಿ ಪ್ರಕಟಗೊಂಡ ಮತ್ತೊಂದು ಕೃತಿ. ಕರ್ಣನ ಕಥೆಯಾದ ‘ಕಲಿಕರ್ಣ’, ‘ಮಹಾಸತಿ ಕಸ್ತೂರಿ ಬಾ’, ಕುಮಾರ ರಾಮನ ಸಾಂಗತ್ಯ ಆಧರಿಸಿದ ‘ಕುಮ್ಮಟ ಕೇಸರಿ’ ಇವು ಮೂರು ಕೃತಿಗಳು ಪ್ರಕಟಗೊಂಡವು. ‘ಕುಮಾರ ರಾಮನ ಸಾಂಗತ್ಯಗಳು’ ಜಿ. ವರದರಾಜರಾಯರಿಗೆ ಡಾಕ್ಟರೇಟ್ ತಂದು ಕೊಟ್ಟ ಮಹಾ ಪ್ರಬಂಧ. ಹಲವಾರು ಕವನಗಳನ್ನು ಬರೆದ ವರದರಾಜರಾಯರು ಅವುಗಳನ್ನು ‘ತೋರಣ’, ‘ವಿಜಯದಶಮಿ’ ಮತ್ತು ಪರಂಪರೆ ಎಂಬ ಸಂಕಲನಗಳಲ್ಲಿ ಪ್ರಕಟಿಸಿದ್ದಾರೆ. ‘ಓಬವ್ವ’ ಮತ್ತು ‘ಸೆರೆಯಾಳು’ ಅವರು ಬರೆದಿರುವ ಎರಡು ನೀಳ್ಗವಿತೆಗಳು. ಓಬವ್ವ ೩೦೦ ಸಾಲುಗಳ ಮಿತಿಯ ಕಥನ ಕವನ ಪ್ರಸಂಗಕ್ಕೆ ಬಿ.ಎಂ.ಶ್ರೀಯವರ ರಜತ ಮಹೋತ್ಸವ ಚಿನ್ನದ ಪದಕ ದೊರೆತಿದೆ. ಮಕ್ಕಳಿಗಾಗಿ ‘ಬುಡುಬುಡಿಕೆ’, ‘ತೊಟ್ಟಿಲು’, ‘ಕುಮ್ಮಟದುರ್ಗ’ ಮುಂತಾದ ಶಿಶುಸಾಹಿತ್ಯ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಸೆರೆಯಾಳು’ ಎಂಬುದು ಬೈರನ್ ಕವಿಯ ‘ಪ್ರಿಸನರ್ಸ್ ಆಫ್ ಪಿಲಾನ್’ ಎಂಬುದರ ಭಾವಾನುವಾದ ಕೃತಿ ಇವರ ಸಂಶೋಧನ ಲೇಖನಗಳು, ವಿಚಾರ, ವಿಮರ್ಶೆ ಮುಂತಾದ ಲೇಖನಗಳೆಲ್ಲವೂ ‘ಪಡಿನುಡಿ’, ‘ಸಾಹಿತ್ಯ ಸಾನಿಧ್ಯ’, ‘ಹರಿದಾಸ ಹೃದಯ’ ಎಂಬ ಸಂಕಲನಗಳಲ್ಲಿ ಸೇರಿವೆ. ಮಂಗಳೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದನಂತರ ಪುನಃ ಮೈಸೂರಿಗೆ ಬಂದು ತಮ್ಮ ಸಂಶೋಧನೆ, ವಿಮರ್ಶಾ ಸಾಹಿತ್ಯ ಕೃತಿರಚನೆಯಲ್ಲಿ ತೊಡಗಿಕೊಂಡಿದ್ದು ‘ಹರಿದಾಸ ಸಾಹಿತ್ಯ ಸಾರ’, ‘ಪುರಂದರದಾಸರು’ ಮತ್ತು ‘ಹರಿಭಕ್ತಿ ವಾಹಿನಿ’ ಮುಂತಾದ ಮಹತ್ವದ ಕೃತಿಗಳು ಸೇರಿ ಒಟ್ಟು ೨೦ ಕ್ಕೂ ಹೆಚ್ಚು ಕೃತಿ ರಚಿಸಿರುವವರಾದರೂ ವ್ಯಾಕರಣ, ಭಾಷಾವಿಜ್ಞಾನ, ಜಾನಪದ, ಸಂಸ್ಕೃತಿ ಮುಂತಾದ ವಿಷಯಗಳ ಮೇಲೆ ಬರೆದ ಲೇಖನಗಳು ಪುಸ್ತಕ ರೂಪದಲ್ಲಿ ಬರಬೇಕಿದೆ. ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಸಂಶೋಧನೆಯ ದೃಷ್ಟಿಯಿಂದ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗ್ರಹಿಸಿ ಪ್ರಕಟಿಸುತ್ತಿದ್ದ ವರದರಾಜರಾಯರು ತೀರಿಕೊಂಡದ್ದು ೧೯೮೭ ರ ನವಂಬರ್ ೧೩ ರಂದು.

