೧೦-೬-೧೯೩೭ ಕವಿ, ನಾಟಕಕಾರ, ವಾಗ್ಮಿ, ‘ಜೀವಿ’ ಎಂದೇ ಪ್ರಖ್ಯಾತರಾದ ಗುರುನಾಥ ವಿಠ್ಠಲರಾವ್ ಕುಲಕರ್ಣಿಯವರು ಹುಟ್ಟಿದ್ದು ಬಿಜಾಪುರದ ಡೊಮ್ನಾಳದಲ್ಲಿ. ತಂದೆ ವಿಠ್ಠಲರಾವ್ ರಾಮಚಂದ್ರರಾವ್ ಕುಲಕರ್ಣಿ, ತಾಯಿ ರುಕ್ಮಿಣಿ ಬಾಯಿ. ಪ್ರಾರಂಭಿಕ ಶಿಕ್ಷಣ ಹುಬ್ಬಳ್ಳಿ, ಗದಗದಲ್ಲಿ. ಕಾಲೇಜು ಶಿಕ್ಷಣ ಧಾರವಾಡದಲ್ಲಿ. ಜೆ.ಎಸ್.ಎಸ್. ಕಾಲೇಜಿನಿಂದ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಂಸ್ಕೃತ ಎಂ.ಎ. ಪದವಿ, ಜೆ.ಎಸ್.ಎಸ್. ಲಾ ಕಾಲೇಜಿನಿಂದ ಎಲ್.ಎಲ್.ಬಿ., ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿ. “ವಿ.ಕೃ. ಗೋಕಾಕರ ಮೇಲೆ ಅರವಿಂದರ ಪ್ರಭಾವ” ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಉದ್ಯೋಗಕ್ಕಾಗಿ ಮುಂಬೈಗೆ ಪಯಣ. ನಾಲ್ಕುವರ್ಷ ಮಾತುಂಗಾದ ಖಾಲ್ಸಾ ಕಾಲೇಜು ಮತ್ತು ಪಾರ್ಲೆಯ ಢಾಣೂಕರ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ. ನಂತರ ಅಂಧೇರಿಯ ಎಂ.ವಿ. ಕಾಲೇಜಿನಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ವಿವಿಧ ಹುದ್ದೆಗಳಲ್ಲಿ ದುಡಿದು ನಿವೃತ್ತಿ. ಹಲವಾರು ಸಣ್ಣಕಥೆಗಳ ರಚನೆ-ಧೃತರಾಷ್ಟ್ರ ಸಂತಾನ, ಇವರ ಪ್ರಸಿದ್ಧ ಕಥಾ ಸಂಕಲನ. ಸತ್ಯಕಥೆ ಕಲ್ಪನೆಗಿಂತಲೂ ವಿಚಿತ್ರ ಮತ್ತೊಂದು ಕಥಾಸಂಕಲನ. ಕಾದಂಬರಿ-ವ್ಯಥೆಯಾದಳು ಹುಡುಗಿ. ಇವರಿಗೆ ಮತ್ತಷ್ಟು ಪ್ರಖ್ಯಾತಿಯನ್ನು ತಂದುಕೊಟ್ಟ ಕೃತಿಗಳೆಂದರೆ ಬರೆದ ಎರಡು ರಸ ವಿಮರ್ಶೆಯ ಗ್ರಂಥಗಳು. ಬೇಂದ್ರೆ, ಗೋಕಾಕರ ನಿಕಟ ಸಂಪರ್ಕದಿಂದ ಮೂಡಿ ಬಂದ ‘ನಾ ಕಂಡ ಬೇಂದ್ರೆ’, ‘ನಾ ಕಂಡ ಗೋಕಾಕ್’. ವಿದೇಶ ಪ್ರವಾಸ ಮಾಡಿ ೨೦೦೦ದಲ್ಲಿ ಹ್ಯೂಸ್ಟನ್ನಲ್ಲಿ ನಡೆದ ಪ್ರಥಮ ವಿಶ್ವ ಸಹಸ್ರಮಾನ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ, ಅಮೆರಿಕಾದ ವಾಸ್ತವ್ಯದ ಅನುಭವ ಗ್ರಂಥ ‘ನಾ ಕಂಡ ಅಮೆರಿಕಾ.’ ೨೦೦೨ರ ಡೆಟ್ರಾಯಿಟ್ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಗೊಂಡ ಕೃತಿ. ಅಧ್ಯಾತ್ಮದಲ್ಲೂ ಆಸಕ್ತರು. ಶ್ರೀ ವಾಯುಸ್ತುತಿ, ಶ್ರೀ ನೃಸಿಂಹ ಸ್ತುತಿ ಇಂಗ್ಲಿಷ್ಗೆ ಅನುವಾದ. ಇಪ್ಪತ್ತೈದಕ್ಕೂ ಹೆಚ್ಚು ಕೃತಿ ಪ್ರಕಟಿತ. ಮತ್ತೊಂದು ಆಸಕ್ತ ಕ್ಷೇತ್ರ ಯೋಗ. ಯೋಗದ ಪ್ರಚಾರಕ್ಕಾಗಿ ಕರ್ನಾಟಕ, ಮಹಾರಾಷ್ಟ್ರದ ಉದ್ದಗಲಕ್ಕೂ ಸಂಚಾರ. ಪ್ರಕೃತಿ ಚಿಕಿತ್ಸೆಯಲ್ಲೂ ಪರಿಣತರು. ರಚಿಸಿದ ಕೃತಿ ‘ಔಷಯಿಲ್ಲದೆ ಬದುಕಲು ಕಲಿಯಿರಿ.’ ಜೀವನ ಚರಿತ್ರೆ-ಶಾಂತಾರಾಮ ಪಿಕಳೆ. ಪತ್ರಕರ್ತರಾಗಿಯೂ ಪ್ರಸಿದ್ಧರು. ಸಂಯುಕ್ತ ಕರ್ನಾಟಕಕ್ಕಾಗಿ ‘ಮುಂಬೈ ಕಾಲಂ’, ನಿತ್ಯಾನಂದ ಪತ್ರಿಕೆಯ ಸಂಪಾದಕರಾಗಿ, ಮುಂಬಯಿಯ ಕರ್ನಾಟಕಮಲ್ಲ ಪತ್ರಿಕೆಗಾಗಿ ‘ಜೀವನ ಮತ್ತು ಸಾಹಿತ್ಯ’ ಪ್ರಸ್ತುತ ಅಂಕಣ. ಇದೇ ದಿನ ಹುಟ್ಟಿದ ಸಾಹಿತಿಗಳು : ಎನ್. ಪ್ರಹ್ಲಾದರಾವ್ – ೧೯೨೦-೧೮.೩.೮೦ ವೇಣುಗೋಪಾಲ ಸೊರಬ – ೧೯೩೭-೧೯೯೫ ದೇವನೂರು ಮಹಾದೇವ – ೧೯೪೮ ಎಂ.ಎನ್. ವಾಲಿ – ೧೯೩೫

