ಡಾ. ಜೋತ್ಸ್ನಾ ಕಾಮತ

Home/Birthday/ಡಾ. ಜೋತ್ಸ್ನಾ ಕಾಮತ
Loading Events
This event has passed.

೨೪..೧೯೩೭ ಆಕಾಶವಾಣಿಯಲ್ಲಿ ದಕ್ಷ ಅಧಿಕಾರಿ ಎಂದು ಹೆಸರುಗಳಿಸಿದ್ದ ಜೋತ್ಸ್ನಾಕಾಮತರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ. ೧೯೩೭ ರ ಜನವರಿ ೨೪ ರಂದು. ತಂದೆ ಗಣೇಶರಾವ್‌, ತಾಯಿ ಶಾರದಾಬಾಯಿ. ತಂದೆಯು ಪೋಸ್ಟ್‌ ಮಾಸ್ಟರ್ ಹುದ್ದೆಯಲ್ಲಿದ್ದುದರಿಂದ ವರ್ಗಾವಣೆಗೊಂಡಲ್ಲೆಲ್ಲಾ ಇವರ ವಿದ್ಯಾಭ್ಯಾಸ. ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಯ ನಾನಾ ಹಳ್ಳಿಗಳಲ್ಲಿ. ಕಾಲೇಜು ಶಿಕ್ಷಣ ಪಡೆದದ್ದು ಕುಮಟಾದ ಕೆನರಾ ಕಾಲೇಜಿನಲ್ಲಿ. ೧೯೫೭ ರಲ್ಲಿ ಬಿ.ಎ. ಪದವಿ, ಪದವಿಯ ನಂತರ ಓದಿದ್ದು ಒಂದು ವರ್ಷದ ಡಿಪ್ಲೊಮ ಕೋರ್ಸ್ ‘ಡಿಪ್ಲೋಮ ಇನ್‌ ಎಜುಕೇಷನ್‌. ಬೋಧಕಿಯಾಗಿ ಸೇರಿದ್ದು ಧಾರವಾಡದ ವನಿತಾ ಹೈಸ್ಕೂಲಿನಲ್ಲಿ ಅಧ್ಯಾಪಕಿಯಾಗಿ. ನಂತರ ಕರ್ನಾಟಕ ವಿಶ್ವವಿದ್ಯಾಲಯಲದಲ್ಲಿ ಪಡೆದ ಎಂ.ಎ. ಪದವಿ. ಇತಿಹಾಸದ ವಿದ್ಯಾರ್ಥಿನಿಯಾಗಿದ್ದ ಜೋತ್ಸ್ನಾರವರು ಖ್ಯಾತ ಸಂಶೋಧಕರಾದ ಡಾ.ಬಿ.ಎ. ಸಾಲತೊರೆ, ಡಾ.ಪಿ.ಬಿ. ದೇಸಾಯಿ, ಡಾ.ಜಿ.ಎಸ್‌. ದೀಕ್ಷಿತ್‌ ಇವರುಗಳ ಪ್ರಭಾವಕ್ಕೊಳಗಾಗಿ ಸಂಶೋಧನ ಸಹಾಯಕಿಯಾಗಿ ಎರಡು ವರ್ಷ ಕಾರ್ಯ ನಿರ್ವಹಿಸಿದರು. ಬಾಲ್ಯದಿಂದಲೇ ಬೆಳೆದ ಸಾಹಿತ್ಯಾಸಕ್ತಿ. ಇದಕ್ಕೆ ಪ್ರೇರಣೆ ಇವರ ತಂದೆಯವರು ಸಂಗ್ರಹಿಸಿದ್ದ ಇಂಗ್ಲಿಷ್‌ – ಕನ್ನಡ ಪುಸ್ತಕಗಳು. ಕನ್ನಡ, ಕೊಂಕಣಿ, ಇಂಗ್ಲಿಷ್‌, ಹಿಂದಿ, ಮರಾಠಿ, ಬಂಗಾಲಿ ಭಾಷೆಗಳ ಪರಿಚಯವಿದ್ದುದರಿಂದ ನಾನಾ ವಿಷಯಗಳ ಮೇಲೆ ಬರೆದ ನೂರಾರು ಲೇಖನಗಳು. ಯು.ಪಿ.ಎಸ್‌ ಪರೀಕ್ಷೆಗೆ ಕುಳಿತು ಉತ್ತೀರ್ಣರಾದ ಜೋತ್ಸ್ನಾರವರು ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಸೇರ್ಪಡೆಯಾದರು. ಕಲ್ಕತ್ತಾ, ಜೈಪುರ, ಮುಂಬೈ, ಧಾರವಾಡ, ಮೈಸೂರು, ಬೆಂಗಳೂರು ಹೀಗೆ ನಾನಾ ಕಡೆ ನಾನಾ ಹುದ್ದೆಗಳನ್ನು ನಿರ್ವಹಿಸಿದರು. ಕೊನೆಗೆ ಬೆಂಗಳೂರಿನ ಆಕಾಶವಾಣಿ ಕೇಂದ್ರದ ನಿರ್ದೇಶಕಿಯಾಗಿ ಸೇವೆಸಲ್ಲಿಸಿ ನಿವೃತ್ತರಾದರು. ೧೯೬೬ ರಲ್ಲಿ ಡಾ. ಕೃಷ್ಣಾನಂದ ಕಾಮತರನ್ನು ಮದುವೆಯಾದರು. ಕೃಷ್ಣಾನಂದ ಕಾಮತರು ಜೀವವಿಜ್ಞಾನಿ, ವಿಶೇಷವಾಗಿ ಕೀಟ ತಜ್ಞರು. ಜೊತೆಗೆ ಸಾಹಿತ್ಯ ಲೋಕದಲ್ಲೂ ಪರಿಚಿತ ಹೆಸರೆ. ಪ್ರವಾಸ ಕಥನ, ವಿಜ್ಞಾನ ಸಂಬಂಧಿ ಕೃತಿಗಳು, ಪರಿಸರ ಮತ್ತು ಕಲೆ ಬಗ್ಗೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೋತ್ಸ್ನಾ ಕಾಮತರು ಒಂದು ಮಗುವಿನ ತಾಯಿಯಾದ ನಂತರ ಡಾ.ಜಿ.ಎಸ್‌. ದೀಕ್ಷಿತರ ಮಾರ್ಗದರ್ಶನದಲ್ಲಿ ‘ಸೋಷಿಯಲ್‌ ಲೈಫ್‌ ಇನ್‌ ಮಿಡಿಪಲ್‌ ಕರ್ನಾಟಕ’ ಎಂಬ ಪ್ರೌಢ ಪ್ರಬಂಧವನ್ನು ಬರೆದು ಪಿ.ಎಚ್.ಡಿ ಪದವಿ (೧೯೭೨) ಪಡೆದ ವಿಶಿಷ್ಟ ಸಾಧಕರು. ಆಕಾಶವಾಣಿ ಕೇಂದ್ರಗಳಲ್ಲೇ ತಮ್ಮ ಬದುಕಿನ ಬಹುಪಾಲು ಕಳೆದಿರುವ ಜೋತ್ಸ್ನಾರವರದ್ದು ಕ್ರಿಯಾಶೀಲ ಬದುಕು. ಆಕಾಶವಾಣಿಗಾಗಿ ಹಲವಾರು ಹೊಸಹೊಸ ಕಾರ್ಯಕ್ರಮಗಳನ್ನೂ ರೂಪಿಸಿದರು. ಆಕಾಶವಾಣಿಗಾಗಿ ಹೇಗೆ ಬರೆಯಬೇಕೆಂಬುದನ್ನು ಲೇಖಕರಿಗೆ ತಿಳಿಸಲೋಸುಗ ಕಮ್ಮಟವೊಂದನ್ನು ಏರ್ಪಡಿಸಿ, ಅನೇಕ ಹಿರಿಯರ ಮಾರ್ಗದಶ್ನದಲ್ಲಿ ಕಮ್ಮಟ ನಡೆಸಿ, ಅದರ ಫಲಶ್ರುತಿಯಾಗಿ ಪ್ರೊ. ಎಚ್ಚೆಸ್ಕೆಯವರ ಸಂಪಾದಕತ್ವದಲ್ಲಿ ಹೊರತಂದ ಪುಸ್ತಕ ‘ಬಾನುಲಿ ಬರವಣಿಗೆ’. ಬಾನುಲಿ ಬರಹಗಾರರಿಗೆ ಇದೊಂದು ಉತ್ತಮ ಕೈಪಿಡಿಯಾಗಿದೆ. ಇದೇ ರೀತಿ ಮೈಸೂರು ಆಕಾಶವಾಣಿಯಲ್ಲಿದ್ದಾಗ ಪ್ರಸಾರ ಮಾಡಿದ ‘ಗಾಂಧಿ ಒಂದು ಪುನರ್ದಶನ’ ಮತ್ತು ‘ಹಿರಿಯರ ಯುಗಾದಿ ಮೇಳ’ ಎಂಬ ಎರಡು ಪುಸ್ತಕಗಳನ್ನು ಪ್ರಕಟಿಸಿ ಬಾನುಲಿ ಸಾಹಿತ್ಯವು ಓದುಗರಿಗೆ ದೊರೆಯುವಂತೆ ಮಾಡಿದರು. ಓದು-ಬರವಣಿಗೆ ಚಿಕ್ಕಂದಿನಿಂದಲೇ ರೂಢಿಗತವಾಗಿದ್ದರಿಂದ ಆಗಾಗ್ಗೆ ಇವರು ಬರೆದ ಪ್ರಬಂಧಗಳು ‘ಸಂಸಾರದಲ್ಲಿ ಸ್ವಾರಸ್ಯ’ ಎಂಬ ಪುಸ್ತಕದಲ್ಲಿ, ಹಾಸ್ಯಲೇಖನಗಳು ‘ಹೀಗಿದ್ದೇವೆ ನಾವು’ ಎಂಬ ಸಂಕಲನಗಳಲ್ಲೂ ಪ್ರಕಟಗೊಂಡಿವೆ. ಇವರ ಮತ್ತೊಂದು ಪ್ರಮುಖ ಕೃತಿ ‘ಕರ್ನಾಟಕ ಶಿಕ್ಷಣ ಪರಂಪರೆ’ ಶಿಕ್ಷಣ ಕುರಿತು ಬರೆದ ಗ್ರಂಥವನ್ನು ಉತ್ತಮ ಸಂಶೋಧನ ಗ್ರಂಥವೆಂದು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡಮಿಯು ಬಹುಮಾನ ನೀಡಿ ಗೌರವಿಸಿದೆ. ‘ಮಹಿಳೆ ಅಂದು-ಇಂದು’ ಇವರು ಇನ್ನೊಂದು ಪ್ರಮುಖ ಕೃತಿ ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿದ ಕರ್ನಾಟಕ ಸರಕಾರವು ೧೯೯೧ರಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top