ಡಾ. ಟಿ. ಎನ್. ನಾಗರತ್ನ

Home/Birthday/ಡಾ. ಟಿ. ಎನ್. ನಾಗರತ್ನ
Loading Events

೨೯.೦೫.೧೯೪೫ ಕನ್ನಡ ಸಾಹಿತ್ಯದಲ್ಲಿ ಹರಿದಾಸ ಸಾಹಿತ್ಯಕ್ಕೆ ಅದರದ್ದೇ ಆದ ಪರಂಪರೆಯಿದ್ದು ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಹರಿದಾಸರಂತೆ ಹಲವಾರು ಮಂದಿ ಹರಿಭಕ್ತೆಯರೂ ಕೂಡಾ ಕೀರ್ತನೆ, ಹಾಡು, ಸಾಂಗತ್ಯಕೃತಿಗಳನ್ನು ರಚಿಸಿದ್ದಾರೆ. ಆದರೆ ಹರಿದಾಸ ಸಾಹಿತ್ಯದ ಸಂಪಾದನೆ, ಬೆಳವಣಿಗೆ, ಸಂಶೋಧನೆಯಲ್ಲಿ ತೊಡಗಿರುವವರು ವಿರಳವೇ. ಆದರೂ ಹೀಗೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ನಾಗರತ್ನರವರು ಹುಟ್ಟಿದ್ದು ಮಧ್ಯಪ್ರದೇಶದ ಸಿಯೋನಿಯಲ್ಲಿ ೧೯೪೫ರ ಮೇ ೨೯ರಂದು. ತಂದೆ ಟಿ. ನಾಗಶರ್ಮ, ತಾಯಿ ಹೊನ್ನುಡಿಕೆ ರಾಜಲಕ್ಷ್ಮಿ. ಇವರು ಬೆಳೆದದ್ದೆಲ್ಲ ಶಿವಮೊಗ್ಗದಲ್ಲಿ. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಬಿ.ಎ. ಪದವಿಯವರೆವಿಗೂ ಶಿವಮೊಗ್ಗದಲ್ಲಿ. ೧೯೬೫ರಲ್ಲಿ ಪ್ರಥಮದರ್ಜೆ, ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಪಡೆದ ಬಿ.ಎ. ಪದವಿ. ನಂತರ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ. ಇಲ್ಲೂ ಕೂಡ ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಗಳಿಸಿದ ಪದವಿ. ೧೯೭೦ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭ. ಡಾ. ಜಿ. ವರದರಾಜರಾಯರ ಮಾರ್ಗದರ್ಶನದಲ್ಲಿ ‘ಹರಿದಾಸರ ಭಕ್ತಿ ಸ್ವರೂಪ’ ಪ್ರೌಢ ಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎಂಬ ಗೌರವಕ್ಕೂ ಪಾತ್ರರಾಗಿ, ಹರಿದಾಸ ಸಾಹಿತ್ಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ೨೦೦೩ರಲ್ಲಿ ನಿವೃತ್ತಿ. ಹರಿದಾಸ ಸಾಹಿತ್ಯದ ಬೆಳವಣಿಗೆಗೆ ತಮ್ಮನ್ನು ಸಂಪೂರ್ಣ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನಕದಾಸರ ಕೃತಿಗಳ ಸಂಪಾದನ ಕಾರ್ಯದಲ್ಲಿ ನಿರತರು. ಹರಿದಾಸರ ಕೀರ್ತನೆಗಳಲ್ಲಿ, ಹರಿದಾಸ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಲು ಮೂಲ ಪ್ರೇರಣೆ ತಾಯಿಯಿಂದ. ಮನೆಯಲ್ಲಿ ಆಗಾಗ್ಗೆ ತಾಯಿ ಹಾಡುತ್ತಿದ್ದ ದೇವರ ನಾಮಗಳು, ಸಂಗೀತದಲ್ಲಿ ವಿದ್ವತ್ ಪರೀಕ್ಷೆ ಪಾಸುಮಾಡಿದ್ದ ಚಿಕ್ಕಮ್ಮ, ಜೊತೆಗೆ ಅಜ್ಜ ಟಿ. ಶಾಮರಾಯರು ಸಂಗ್ರಹಿಸಿದ್ದ ಸುಬೋಧರಾಮರಾಯರ ದಾಸರ ಕೀರ್ತನೆಯ ಪುಸ್ತಕಗಳನ್ನು ಆಗಾಗ್ಗೆ ಓದುತ್ತಿದ್ದುದು – ಹೀಗೆ ಎಲ್ಲವೂ ಸೇರಿ ಮನೆಯವರ ಪ್ರೋತ್ಸಾಹದಿಂದ ಸಂಗೀತ ಕಲಿತು, ಸೀನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ದಾಸರ ಪದಗಳನ್ನು ಸಂಗೀತ ಕಚೇರಿಯಲ್ಲಿ ಹಾಡುವಲ್ಲಿ ಬೆಳೆದ ಪರಿಪಾಠ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ದೇ. ಜವರೆಗೌಡರ ಅಪೇಕ್ಷೆಯಂತೆ ಅದೇ ತಾನೆ ಪ್ರಾರಂಭವಾಗಿದ್ದ ಹರಿದಾಸರ ಕೀರ್ತನೆಗಳ ಶಾಸ್ತ್ರೀಯ ಸಂಪಾದನೆಯ ಯೋಜನೆಯಲ್ಲಿ ಕಾರ್ಯನಿರತರಾಗಿ ಅಧ್ಯಯನ, ಬೋಧನೆ, ಮಾರ್ಗದರ್ಶನ, ಸಂಪಾದನೆ, ಪ್ರಕಟಣೆ ಹಾಗೂ ಮೇಲ್ವೀಚಾರಣೆ ಮುಂತಾದ ಜವಾಬ್ದಾರಿಯುತ ಕಾರ್ಯಗಳು. ಇದರ ಜೊತೆಗೆ ಜಿ.ಎಸ್.ಎಸ್. ವಿದ್ಯಾಸಂಸ್ಥೆಯ ಕಾಲೇಜಿನಲ್ಲಿ (ಚಾಮರಾಜನಗರ) ಸ್ನಾತಕೋತ್ತರ ಪದವಿ ತರಗತಿಗಳಿಗೆ (ಎಂ.ಎ) ಗೌರವ ಪ್ರಾದ್ಯಾಪಕಿಯಾಗಿ, ಬೆಂಗಳೂರು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯಗಳ ಪಿಎಚ್.ಡಿ. ಪದವಿಗಳಿಗೆ ಪ್ರೌಢಪ್ರಬಂಧಗಳ ಮೌಲ್ಯಮಾಪಕರಾಗಿ, ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಪ್ರಕಟಣೆ ಯೋಜನೆಯ (೫೦ ಸಂಪುಟಗಳ) ಸಂಪಾದಕ ಮಂಡಲಿಯಲ್ಲಿ ಕಾಯನಿರ್ವಾಹಕ ಸಂಪಾದಕರಾಗಿಯೂ ದುಡಿದಿರುವುದಲ್ಲದೆ ಕನಕದಾಸ ಅಧ್ಯಯನ ಕೇಂದ್ರದ ಸದಸ್ಯೆಯಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪುರಂದರ ಪೀಠದ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರು ಸಂಪಾದಿಸಿ ಪ್ರಕಟಿಸಿರುವ ಕೃತಿಗಳೆಂದರೆ ಶ್ರೀ ಗೋಪಾಲದಾಸರ ಕೃತಿಗಳು, ಶ್ರೀ ವಾದಿರಾಜರ ಕೃತಿಗಳು, ಶ್ರೀವಾದಿರಾಜರ ದೀರ್ಘಕೃತಿಗಳು, ಶ್ರೀ ಜಗನ್ನಾಥ ದಾಸರ ಕೃತಿಗಳು, ಶ್ರೀ ವ್ಯಾಸರಾಯರ ಕೃತಿಗಳು, ಹರಪನಹಳ್ಳಿ, ಭೀಮಪ್ಪನವರ ಹಾಡುಗಳು, ಶ್ರೀ ರಾಮದಾಸರ ಕೃತಿಗಳು, ದಾಸ ಸಾಹಿತ್ಯ ವೈಭವ, ದಾಸ ಸಾಹಿತ್ಯದ ಪ್ರಸ್ತುತತೆ, ಹರಿದಾಸ ಸಾಹಿತ್ಯ ಉಗಮ; ವಿಕಾಸ; ಸಾಧನೆ-ಸಿದ್ಧಿ, ಕನ್ನಡ ಕೀರ್ತನೆ: ಸಾಹಿತ್ಯ-ಸಂಗೀತ, ಶ್ರೀ ವಾದಿರಾಜರ ಕೃತಿಗಳು, ಕನಕದಾಸರು, ಕೀರ್ತನಕಾರರು, ಹರಿದಾಸ ವಾಙ್ಮಯ, ಹರಿದಾಸರ ಸೂಕ್ತಿಗಳು, ಹರಿದಾಸ ಸಾಹಿತ್ಯ ದರ್ಪಣ, ಸಿರಿಗಂಗಾಜನಕ ಕೀರ್ತನ ಕುಸುಮಾಂಜಲಿಯಲ್ಲದೆ ಇವರ ಪ್ರೌಢ ಪ್ರಬಂಧ ಹರಿದಾಸರ ಭಕ್ತಿಸ್ವರೂಪವೂ ಸೇರಿ ಮೂವತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ನೂರಾರು ಲೇಖನಗಳ ಪ್ರಕಟಣೆ, ಭಾಷಣಗಳು, ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ, ಉಪನ್ಯಾಸ, ಚರ್ಚೆ, ಗೋಷ್ಠಿಗಳ ಅಧ್ಯಕ್ಷತೆ, ಆಕಾಶವಾಣಿ-ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಹರಿದಾಸ ಸಾಹಿತ್ಯದ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿದ್ದಾರೆ. ಇವರ ಹರಿದಾಸ ಸಾಹತ್ಯದ ಬಹುಮುಖ ಕೊಡುಗೆಗೆ ಶ್ರೀ ವಾದಿರಾಜರ ಕೃತಿಗಳು ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಆಕಾಡಮಿಯ ಉತ್ತಮ ಸಂಪಾದನ ಕೃತಿ ಬಹುಮಾನ (೧೯೮೦), ಹಲವಾರು ವಿಶ್ವವಿದ್ಯಾಲಯಗಳ ಅಧ್ಯಯನ ಪೀಠ, ಧಾರ್ಮಿಕ ಸಂಸ್ಥೆಗಳು, ಹರಿದಾಸ ತತ್ತ್ವಜ್ಞಾನ ಸಮ್ಮೇಳನಗಳು, ಹರಿದಾಸರ ಸಂಸ್ಮರಣೋತ್ಸವಗಳು, ಹರಿದಾಸದ ಶತಮಾನೋತ್ಸವಗಳು ಮುಂತಾದವುಗಳಿಂದ ಸನ್ಮಾನಿತರಾಗಿರುವುರಲ್ಲದೆ ಕರ್ನಾಟಕ ಸರಕಾರದ ೨೦೦೯ನೇ ಸಾಲಿನ ಪ್ರತಿಷ್ಠಿತ ‘ಕನಕಶ್ರೀ ಪ್ರಶಸ್ತಿ’ಯ ಗೌರವಕ್ಕೂ ಪಾತ್ರರಾಗಿದ್ದಾರೆ. ಹರಿದಾಸರ ಕೀರ್ತನೆಗಳ ಸಂಕೀರ್ತನೆಯಿಂದ ಮಾನವನ ಮನಸ್ಸಿನ ಕಲ್ಮಶಗಳನ್ನು ತೊಳೆದ, ಆತ್ಮಾನಂದ ಪಡೆಯುವಂತೆ ಹರಿದಾಸ ಸಾಹಿತ್ಯದ ಪ್ರಸಾರಕ್ಕಾಗಿ ಸುಮಾರು ನಾಲ್ಕ ದಶಕಗಳಿಂದಲೂ ಶ್ರಮಿಸುತ್ತಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top