ಡಾ. ತಾಳ್ತಜೆ ವಸಂತಕುಮಾರ್

Home/Birthday/ಡಾ. ತಾಳ್ತಜೆ ವಸಂತಕುಮಾರ್
Loading Events

೨೭.೧೨.೧೯೪೮ ಹಳಗನ್ನಡ ಸಾಹಿತ್ಯ, ಸಂಸ್ಕೃತಿಯ ಅಧ್ಯಯನ, ಕಾವ್ಯ ಮೀಮಾಂಸೆ, ಜಾನಪದ ಮುಂತಾದ ಕ್ಷೇತ್ರಗಳಲ್ಲಿ ಪರಿಣತರಾಗಿರುವ ವಸಂತಕುಮಾರ್ ರವರು ಹುಟ್ಟಿದ್ದು ಕಾಸರಗೋಡಿನ ಬಾಯಾರು ಗ್ರಾಮದ ಕಾಳ್ತಜೆಯಲ್ಲಿ ತಾ. ೨೭.೧೨.೧೯೪೮ ರಲ್ಲಿ. ತಂದೆ ಕೃಷ್ಣಭಟ್ಟ, ತಾಯಿ ಲಕ್ಷ್ಮೀಅಮ್ಮ. ಪ್ರಾರಂಭಿಕ ಶಿಕ್ಷಣ ಬಾಯೂರು ಗ್ರಾಮದ ಮುಳಿಗದ್ದೆ, ಪ್ರೌಢ ಶಾಲಾ ಶಿಕ್ಷಣ ಉಪ್ಪಿನಂಗಡಿಯ ಬೋರ್ಡ್ ಹೈಸ್ಕೂಲು ಮತ್ತು ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ ಪಡೆದ ಬಿ.ಎ. ಪದವಿ.  ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ತರಗತಿಯಲ್ಲಿ ರ್ಯಾಂಕ್ ವಿದ್ಯಾರ್ಥಿಯಾಗಿ ಸುವರ್ಣ ಪದಕ ಪಡೆದವರು. ‘ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ’ ಮಹಾಪ್ರಬಂಧವನ್ನು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಪಡೆದ ಪಿಎಚ್‌.ಡಿ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ. ನಂತರ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಆ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ೨೦೦೮ ರಲ್ಲಿ ನಿವೃತ್ತಿ. ಬಾಲ್ಯದಿಂದಲೂ ಸಾಹಿತ್ಯಾಸಕ್ತಿಯನ್ನು ಬೆಲೆಸಿಕೊಂಡಿದ್ದು ರಚಿಸಿದ್ದು ಹಲವಾರು ಕೃತಿಗಳು. ಹರಿಹರನ ರಗಳೆಗಳು, ಸಿಂಗಾರ, ಆಯ್ದಲೇಖನಗಳು, ಮುತ್ತಿನ ಸತ್ತಿಗೆ, ಹಣತೆಗೆ ಹನಿಎಣ್ಣೆ ಮುಂತಾದ ವಿಮರ್ಶಾ ಕೃತಿಗಳು; ಸಾಧನೆ, ಬೇರು ಬಿಳಲು, ಸೋಪಾನ, ಮೊದಲಾದ ಸಂಪಾದಿತ ಕೃತಿಗಳು; ಮರೀಚಿಕೆ -ಕಾದಂಬರಿ; ಸಾರಸ, ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ, ಸಂಶೋಧನ ರಂಗ, ಬೌದ್ಧಾಯನ ಮೊದಲಾದ ಸಂಶೋಧಿತ ಕೃತಿಗಳು; ರಂ.ಶ್ರೀ. – ಮುಗಳಿ, ವಿ.ಕೃ.ಗೋಕಾಕ್, ಶಿವರಾಮಕಾರಂತ ಮೊದಲಾದವರ ಜೀವನ-ಸಾಧನೆಯ ಕೃತಿಗಳು ಒಳಗೊಂಡಂತೆ ಒಟ್ಟು ೧೬ ಮೌಲಿಕ ಕೃತಿಗಳು ಪ್ರಕಟಿತ. ಅನೇಕ ರಾಷ್ಟ್ರೀ ಮತ್ತು ಪ್ರಾದೇಶಿಕ ವಿಚಾರ ಸಂಕಿರಣಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿ ಮಂಡಿಸಿದ ಪ್ರಬಂಧಗಳು. ೧೯೯೩ರಲ್ಲಿ ಜರ್ಮನಿಯ ಸಾಂಸ್ಕೃತಿಕ ವಿನಿಮಯದಡಿ ಜರ್ಮನಿ ವಿ.ವಿ. ನಿಲಯಗಳಿಗೆ ಭೇಟಿ ನೀಡಿ ಕನ್ನಡ, ಕರ್ನಾಟಕ ವಿಷಯದಲ್ಲಿ ನೀಡಿದ ಅನೇಕ ಉಪನ್ಯಾಸಗಳು. ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ರಾಜ್ಯ ಘಟಕದ ಸ್ಥಾಪನಾಧ್ಯಕ್ಷರಾಗಿ (೧೯೯೨-೯೫) ನಿರ್ವಹಿಸಿದ ಜವಾಬ್ದಾರಿ. ೨೦೧೧ ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ. ’ಮುತ್ತಿನ ಸತ್ತಿಗೆ’ ಕೃತಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಬೌದ್ಧಾಯನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕಾಂತಾವರ ಪ್ರಶಸ್ತಿ, ಗುರುನಾರಾಯಣ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು. ಸಣ್ಣಕಥೆ ಮತ್ತು ವಿಮರ್ಶಾಕ್ಷೇತ್ರದಲ್ಲಿ ಹೆಸರುಗಳಿಸಿದ್ದ. ತಮ್ಮ ಶ್ರೀಮತಿ ದಿ. ಮಣಿಮಾಲಿನಿಯವರ ಹೆಸರಿನಲ್ಲಿ, ಅವರ ನೆನಪಿಗಾಗಿ ‘ವಸುಧಾ ಪ್ರತಿಷ್ಠಾನ’ದ ಮೂಲಕ ಕೈಗೊಳ್ಳುತ್ತಿರುವ ಸಾಹಿತ್ಯಕ, ಸಾಂಸ್ಕೃತಿಕ ಕ್ರೀಯಾಶೀಲ ಕಾರ್ಯಕ್ರಮಗಳು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top