ಡಾ. ದೇವೇಂದ್ರಕುಮಾರ ಹಕಾರಿ

Home/Birthday/ಡಾ. ದೇವೇಂದ್ರಕುಮಾರ ಹಕಾರಿ
Loading Events
This event has passed.

೧೪-೪-೧೯೩೧ ೭-೪-೨೦೦೭ ಜೀವನಚರಿತ್ರೆ, ವಿಮರ್ಶೆ, ಕಾವ್ಯ, ಕಾದಂಬರಿ ಹೀಗೆ ಎಲ್ಲ ಪ್ರಕಾರದಲ್ಲಿಯೂ ಹೆಸರು ಗಳಿಸಿರುವ ಹಕಾರಿಯವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ. ತಂದೆ ಸಿದ್ದಪ್ಪ, ತಾಯಿ ಮಲ್ಲವ್ವ. ಪ್ರಾಥಮಿಕ ಶಿಕ್ಷಣ ಪಡೆದುದು ಹುಟ್ಟಿದೂರಿನಲ್ಲಿ. ಕಲೆ, ಸಂಸ್ಕೃತಿ, ನಾಟಕ, ವಿಜ್ಞಾನ ಎಲ್ಲದರಲ್ಲಿಯೂ ಕಲಿತು ಏಳನೆಯ ವರ್ಗಕ್ಕೆ ಸೇರಿದ್ದು  ಗುಲಬರ್ಗಾದ ಉಸ್ಮಾನಿಯಾ ಹೈಸ್ಕೂಲು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಬಿ.ಎ. ಮತ್ತು ಎಂ.ಎ. ಪದವಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಜಾನಪದ ಕಥನ ಗೀತೆಗಳಲ್ಲಿ ದುಃಖಾಂತ ನಿರೂಪಣೆ’ ಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ ಪದವಿ. ವೃತ್ತಿ ಜೀವನ ಆರಂಭಿಸಿದ್ದು  ಕಲಬುರ್ಗಿಯ  ಶರಣ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ. ಮುಂದೆ ಧಾರವಾಡದ ಕರ್ನಾಟಕ ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿ ೧೯೯೧ರಲ್ಲಿ ನಿವೃತ್ತಿ. ಸಾಹಿತ್ಯದ ಎಲ್ಲ  ಪ್ರಕಾರಗಳಲ್ಲಿಯೂ ಕೃತಿರಚನೆ. ಕಾದಂಬರಿ-ಕೂಗುತಿವೆ ಕಲ್ಲು, ಚೆಲ್ವ ಕೋಗಿಲೆ. ಕಾವ್ಯ-ಚಿನ್ಮಯ, ಆಚೆ ಈಚೆ, ಬಿಡುಗಡೆ, ನನ್ನ ಸುತ್ತು, ಆಯ್ದ ಕವನಗಳು. ವಿಮರ್ಶೆ-ಸಾಹಿತ್ಯ ಸಮ್ಮುಖ, ಕನ್ನಡ ಕಾವ್ಯಗಳಲ್ಲಿ ಕಿರಾತಾರ್ಜುನ ಪ್ರಸಂಗ, ಶಿವನ ಡಂಗುರ. ಕಥಾಸಂಕಲನ-ಚಾಟಿ, ಒರೆಗಲ್ಲು. ಗೀತನಾಟಕ-ಅಮೃತಮತಿ, ಶಾಕುಂತಲಾ, ಕ್ಷಿತಿಜದಾಚೆ, ಗೀತಶಿವ ಕಥಾ. ಜೀವನ ಚರಿತ್ರೆ-ಸಿರಿಸಿಂಗಿ ಲಿಂಗರಾಜರು, ಮೈಲಾರ ಬಸವಲಿಂಗ ಶರಣರು, ಆಲೂರು ವೆಂಕಟರಾಯರು. ದಿ. ಚಂದ್ರಶೇಖರ ಪಾಟೀಲ, ನಾಗಚಂದ್ರ, ಮಾದಾರ ಚೆನ್ನಯ್ಯ, ಮೋಳಿಗಿ ಮಾರಯ್ಯ, ನೇಮಿಚಂದ್ರ, ಎಸ್.ಎಸ್. ಭೂಸ ನೂರಮಠ, ಫ.ಗು. ಹಳಕಟ್ಟಿ, ವಿಜ್ಞಾನಿ ಎಂ.ಎಸ್.ಬಿರಾದಾರ. ಜಾನಪದ-ಜಾನಪದೀಯ, ಗರತಿಯ ಹಾಡುಗಳಲ್ಲಿ ಕೌಟುಂಬಿಕ ಜೀವನ, ಜಾನಪದ ಮೂಲತತ್ತ್ವಗಳು, ಜಾನಪದ ಸಮ್ಮುಖ, ಜಾನಪದ ಭಂಡಾರ, ಹಂತಿ ಹಾಡುಗಳು, ಡೊಂಬರ ಸಂಸ್ಕೃತಿ. ಸಂಪಾದನೆ-ಬಸವರಾಜ ದೇವರ ರಗಳೆ, ಕಾಯಕದ ಐದು ರಗಳೆಗಳು, ನಾಟಕ ತ್ರಿದಲ, ಸಣ್ಣ ಕಥೆಗಳು, ವಿಜಯ ಕಲ್ಯಾಣನಗರಿ. ಅನುವಾದ-ಉರ್ದು ಸಾಹಿತ್ಯ ಚರಿತ್ರೆ. ಇವರ ಕುರಿತು ಬರೆದ ಕೃತಿಗಳು-ದೇವೇಂದ್ರಕುಮಾರ ಹಕಾರಿ ಬದುಕು-ಬರೆಹ, ದೇವೇಂದ್ರಕುಮಾರ ಹಕಾರಿ ಮುಂತಾದವು. ಸಂದ ಪ್ರಶಸ್ತಿಗಳು-ಮೈಸೂರು ಸರ್ಕಾರದ ಬಹುಮಾನ, ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸ್ವಾತಂತ್ರ್ಯಯೋಧ ಸನ್ಮಾನ, ಕಾವ್ಯಾನಂದ ಪ್ರಶಸ್ತಿ, ದ. ಭಾರತ ಹಿಂದಿ ಪ್ರಚಾರ ಸಭಾ ಪ್ರಶಸ್ತಿ ಮುಂತಾದವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಹ.ರಾ. ಪುರೋಹಿತ – ೧೯೦೦ ಬಿ.ಕೆ. ಗುರುರಾಜರಾವ್ – ೧೯೩೨ ವಿಜಯ ಸಾಸನೂರ – ೧೯೪೮-೧.೩.೨೦೦೧ ಮಲ್ಲಿಕಾರ್ಜುನ ಹುಲಗಬಾಳಿ – ೧೯೫೨

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top