ಡಾ. ದೊಡ್ಡ ರಂಗೇಗೌಡ

Home/Birthday/ಡಾ. ದೊಡ್ಡ ರಂಗೇಗೌಡ
Loading Events
This event has passed.

..೧೯೪೬ ಸಾಹಿತ್ಯ, ಚಲನಚಿತ್ರ, ಜಾನಪದ, ಸುಗಮ ಸಂಗೀತ ಹೀಗೆ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ಕವಿ ದೊಡ್ಡರಂಗೇಗೌಡರು ಹುಟ್ಟಿದ್ದು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕುರುಬರ ಹಳ್ಳಿಯಲ್ಲಿ ಫೆಬ್ರವರಿ ೭ರ ೧೯೪೬ರಲ್ಲಿ. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಕೆ. ರಂಗೇಗೌಡರು, ತಾಯಿ ಅಕ್ಕಮ್ಮ. ಪ್ರಾರಂಭಿಕ ಶಿಕ್ಷಣ ಕುರುಬರಹಳ್ಳಿ, ಬಡವನ ಹಳ್ಳಿ, ಮಧುಗಿರಿ, ತುಮಕೂರುಗಳಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. ಆನರ್ಸ ಪದವಿ (೧೯೭೦), ಮತ್ತು ೧೯೭೨ರಲ್ಲಿ ಎಂ.ಎ. ಪದವಿ. “ಕನ್ನಡ ನವೋದಯ ಕಾವ್ಯ: ಒಂದು ಪುನರ್ ಮೌಲ್ಯ ಮಾಪನ” ಎಂಬ ಮಹಾಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ. ಬೋಧಕ ವೃತ್ತಿಗೆ ಸೇರಿದ್ದು ೧೯೭೨ರಲ್ಲಿ ಬೆಂಗಳೂರಿನ ಎಸ್.ಎಲ್‌.ಎನ್‌ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಧ್ಯಾಪಕರಾಗಿ, ೧೯೮೦ರಿಂದ ಪ್ರವಾಚಕರಾಗಿ, ೧೯೮೫ ರಿಂದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ೧೯೯೦ರಿಂದ ಪ್ರಾಧ್ಯಾಪಕರಾಗಿ ೨೦೦೨ರಲ್ಲಿ ನಿವೃತ್ತಿ. ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಕಥೆ, ಕವನಗಳನ್ನು ರಚಿಸುತ್ತಾ ಬಂದಿರುವ ದೊಡ್ಡರಂಗೇಗೌಡರು ಕಾವ್ಯ, ಪ್ರವಾಸಕಥನ, ವಿಮರ್ಶಾಕೃತಿಗಳು, ಭಾವಗೀತೆಗಳ ಕೃತಿಗಳನ್ನು ಪ್ರಕಟಿಸಿರುವುದರ ಜೊತೆಗೆ ಸುಮಾರು ೫೦೦ಕ್ಕೂ ಹೆಚ್ಚು ಚಲನ ಚಿತ್ರಗೀತೆಗಳನ್ನು ಬರೆದಿದ್ದಾರೆ. ಜಗಲಿ ಹತ್ತಿ ಇಳಿದು, ಕಣ್ಣು ನಾಲಗೆ ಕಡಲು, ನಾಡಾಡಿ, ಮೌನಸ್ಪಂದನ, ಮೊದಲಾದ ೧೫ ಕಾವ್ಯ ಕೃತಿಗಳು; ಹಿಮಶ್ವೇತಾ, ಮಯೂರ ದರ್ಶನ, ಚಂದ್ರಗಿರಿ ದರ್ಶನ, ಸಾಧನ ಸಿರಿ ಮೊದಲಾದ ರೂಪಕಗಳು; ಅನನ್ಯನಾಡು , ಪಿರಮಿಡ್ಡುಗಳ ಪರಿಸರದಲ್ಲಿ ಮುಂತಾದ ಪ್ರವಾಸ ಕಥನಗಳು; ಸಿದ್ಧೇಶ್ವರ ಸ್ತುತಿ, ಭಕ್ತಿ ಕುಸುಮಾಂಜಲಿ ಮೊದಲಾದ ೪ ಭಕ್ತಿಗೀತೆಯ ಕೃತಿಗಳು; ಪ್ರೀತಿ ಪ್ರಗಾಥ, ಹಳ್ಳಿ ಹುಡುಗಿ ಹಾಡು-ಪಾಡು ಮೊದಲಾದ ಪ್ರಗಾಥಗಳು; ವರ್ತಮಾನದ ವ್ಯಂಗ್ಯದಲ್ಲಿ, ವಿಚಾರವಾಹಿನಿ, ವಿಶ್ವಮುಖಿ ಮೊದಲಾದ ಗದ್ಯ ಕೃತಿಗಳು; ಮುಕ್ತಕಗಳೂ ಸೇರಿ ಒಟ್ಟು ೮೦ ಕ್ಕೂ ಹೆಚ್ಚು ಕೃತಿ ಪ್ರಕಟಿತ. ೧೯೭೭ರಿಂದಲೂ ಚಲನ ಚಿತ್ರಗಳಿಗೆ ಗೀತೆ ರಚಿಸುತ್ತಾ ಬಂದಿರುವ ದೊಡ್ಡ ರಂಗೇಗೌಡರು ೫೦೦ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ರಚಿಸಿದ್ದಾರೆ. ಹತ್ತು ಚಿತ್ರಗಳಿಗೆ ಸಂಭಾಷಣೆ, ೧೦೦ಕ್ಕೂ ಹೆಚ್ಚು ದೂರದರ್ಶನ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ. ಸುಮಾರು ೭೦ಕ್ಕೂ ಹೆಚ್ಚು ಧ್ವನಿ ಸುರುಳಿಗಳು ಹೊರ ಬಂದಿವೆ. ಚಿತ್ರಗೀತೆ ರಚಿಸಿರುವ ಪ್ರಖ್ಯಾತ ಚಲನಚಿತ್ರಗಳೆಂದರೆ ಪಡುವಾರಹಳ್ಳಿ ಪಾಂಡವರು, ಪರಸಂಗದ ಗೆಂಡೆತಿಮ್ಮ, ಬಂಗಾರದ ಜಿಂಕೆ, ಅಶ್ವಮೇಧ, ಜನುಮದ ಜೋಡಿ ಮುಂತಾದವುಗಳು. ಇವರ ಸಾಹಿತ್ಯ ಸೇವೆಗಾಗಿ ‘ಕಣ್ಣು ನಾಲಗೆ ಕಡಲು’ ಕೃತಿಗೆ ೧೯೭೨ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಪ್ರೀತಿ ಪ್ರಗಾಥ’ ಕೃತಿಗೆ ೧೯೯೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಾಕರವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ ದೊರೆತಿದೆ. ಚಲನಚಿತ್ರ ಕ್ಷೇತ್ರದಲ್ಲಿ ‘ಆಲೆಮನೆ’ ಚಿತ್ರದ ಭಾವೈಕ್ಯತೆ ಗೀತೆಗಾಗಿ, ‘ಗಣೇಶನ ಮದುವೆ’ ಚಿತ್ರದ ಕಾವ್ಯಾತ್ಮಕ ಗೀತೆಗಾಗಿ, ‘ಜನುಮದ ಜೋಡಿ’ ಜಾನಪದೀಯ ಗೀತೆಗಾಗಿ-ಹೀಗೆ ಹಲವಾರು ಬಾರಿ ವಿಶೇಷ ಗೀತೆ ಪ್ರಶಸ್ತಿ, ವರ್ಷದ ಶ್ರೇಷ್ಠ ಗೀತೆ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ರಾಷ್ಟ್ರೀಯ ಪುರಸ್ಕಾರಗಳಾದ ಹೂ ಈಸ್‌ ಹೂ ನಲ್ಲಿ ದಾಖಲೆ, ಏಷಿಯಾ-ಫೆಸಿಫಿಕ್‌ ನಲ್ಲಿ ಸಾಧನೆಗಳ ಉಲ್ಲೇಖ, ಹಿಂದಿ ಭಾಷಾಂತರ ‘ಗೀತ ವೈಭವ್‌’ನಲ್ಲಿ ೪೭ ಕವಿತೆಗಳ ಸೇರ್ಪಡೆ, ದೆಹಲಿಯ ಸರ್ವಭಾಷಾ ಕವಿ ಗೋಷ್ಠಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಕವನವಾಚನ. ಅಮೆರಿಕದ ಬಯೊಗ್ರಾಫಿಕಲ್‌ ಸೆಂಟರ್ ನ ಮೋಸ್ಟ್‌ ಅಡ್ಮೈರ್ಡ್‌ ಮೆನ್‌ ಅಂಡ್‌ ವುಮೆನ್‌ ಆಫ್‌ ದಿ ಇಯರ್ ನಲ್ಲಿ ವಿಶ್ವ ಪ್ರತಿಭಾವಂತರ ಪಟ್ಟಿಯಲ್ಲಿ ಉಲ್ಲೇಖ, ಅಮೆರಿಕದ ನಾರ್ಥ್ ಕೆರೊಲಿನಾ ಎ.ಬಿ.ಐ ಸಂಸ್ಥೆಯಿಂದ ಕವಿಯ ಜೀವನ ವಿವರಗಳ ದಾಖಲೆಗೆ ವಿಶ್ವಮಾನ್ಯತೆ, ಇಂಗ್ಲೆಂಡ್‌ನ ಮೆನ್‌ ಇನ್‌ ಅಚೀವ್‌ಮೆಂಟ್‌ ಸಂಪುಟದಲ್ಲಿ ಸಾಧನೆಗಳಿಗೆ ದೊರೆತ ವಿಶ್ವಮಾನ್ಯತೆ, ಎ.ಬಿ.ಐ. ಸಂಸ್ಥೆ ಯಿಂದ ಭಾರತೀಯ ಸಲಹೆಗಾರರಾಗಿ ನೇಮಕ, ಮಿಷಿಗನ್‌ ರಾಜ್ಯದಿಂದ ರೆಕಗ್ನಿಷನ್‌ ಅವಾರ್ಡ್‌, ಓರ್ಲಾಂಡೋದ ವಿಶ್ವಸಮ್ಮೇಳನದಲ್ಲಿ ಉಪನ್ಯಾಸ ಮುಂತಾದ ಅಂತಾರಾಷ್ಟ್ರೀಯ ಗೌರವಗಳಲ್ಲದೆ ಇದೀಗಲೂ ಹಲವಾರು ಸಂಘ ಸಂಸ್ಥೆಗಳ ಗೌರವ ಸದಸ್ಯರಾಗಿ, ಚಲನಚಿತ್ರ ಗುಣಮಟ್ಟದ ಚಿತ್ರಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿ, ಎನ್‌.ಇ.ಟಿ ಗೌರ್ನಿಂಗ್‌ ಸದಸ್ಯರಾಗಿ, ಹಲವಾರು ಸಾಹಿತ್ಯ ಸಂಚಿಕೆಗಳ ಸಂಪಾದಕರಾಗಿ, ರಾಜ್ಯ ವಿಧಾನ ಪರಿಷತ್ತಿನ ನಾಮಕರಣ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಅರ್ಪಿಸಿರುವ ಗೌರವ ಗ್ರಂಥಗಳು – ಸೃಜನ ಸಂಪನ್ನ, ಸಮಾಜ ಮುಖಿ, ಸಾಹಿತ್ಯ ಸಂಪದ, ಸಾಹಿತ್ಯ ವಿಮರ್ಶೆ, ಜಾನಪದ ಜಂಗಮ, ಒಲುಮೆಸಿರಿ, ಸಾಹಿತ್ಯ ಸಂಭ್ರಮ, ದೇಸಿ ದನಿ ಮತ್ತು ಸಾಹಿತ್ಯ ಸಿರಿ ಮುಂತಾದವುಗಳು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top