ಡಾ. ನಲ್ಲೂರು ಪ್ರಸಾದ್ ಆರ್.ಕೆ.

Home/Birthday/ಡಾ. ನಲ್ಲೂರು ಪ್ರಸಾದ್ ಆರ್.ಕೆ.
Loading Events

೨೬.೧೧.೧೯೪೭ ಜಾನಪದ ತಜ್ಞ, ರಂಗ ಭೂಮಿ ನಟ, ಗಾಯಕ, ಸಾಂಸ್ಕೃತಿಕ ಸಂಘಟಕರಾದ ನಲ್ಲೂರು ಪ್ರಸಾದ್‌ರವರು ಹುಟ್ಟಿದ್ದು ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ತಾಲ್ಲೂಕಿನ ನಲ್ಲೂರಿನಲ್ಲಿ. ೧೯೪೭ ರ ನವಂಬರ್ ೨೫ ರಂದು. ತಂದೆ ಎಸ್.ಕೆ. ಸಂಜೀವಯ್ಯ, ತಾಯಿ ಶಾಂತಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಆನೇಕೆರೆ, ಪ್ರೌಢ ವಿದ್ಯಾಭ್ಯಾಸ ಚನ್ನರಾಯಪಟ್ಟಣದಲ್ಲಿ. ಶ್ರವಣಬೆಳಗೊಳ ಕಾಲೇಜಿನಲ್ಲಿ ಪದವಿ ಪಡೆದ ನಂತರ ಸ್ನಾತಕೋತ್ತರ ಪದವಿ ಪಡೆದದ್ದು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ. ‘ಕರ್ನಾಟಕದ ಒಕ್ಕಲಿಗರಲ್ಲಿ ಗಂಗಡಿಕಾರರು; ಒಂದು ಅಧ್ಯಯನ’ ಮಹಾ ಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ. ೧೯೭೭ರಿಂದ ೨೦೦೫ರ ವರೆಗೆ ಅಧ್ಯಾಪನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ವಿಶ್ವೇಶ್ವರ ಪುರಂ ಕಲೆ ಮತ್ತು ವಾಣಿಜ್ಯ ಕಾಲೇಜು, ವಿಜ್ಞಾನ ಕಾಲೇಜು, ಸಂಜೆ ಕಾಲೇಜಿನಲ್ಲಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಜಾನಪದ ಪ್ರವೇಶ ಮತ್ತು ಪ್ರೌಢ ತರಗತಿಗಳ ಬೋಧಕರಾಗಿ ಸಲ್ಲಿಸಿದ ಸೇವೆ. ಹಳ್ಳಿ ಪರಿಸರದಿಂದ ಹುಟ್ಟಿ ಬಂದಿದ್ದರಿಂದ ಸಹಜವಾಗಿ ಜಾನಪದದಲ್ಲಿ ಆಸಕ್ತಿ ಹುಟ್ಟಿ ಕಾಲೇಜಿನಲ್ಲಿಯೂ ಬೋಧಿಸುವ ಅವಕಾಶ. ಜಾನಪದ ಹಿನ್ನೆಲೆಯ ಹಲವಾರು ರೂಪಕಗಳ ರಚನೆ, ನಾಟಕಗಳ ನಿರ್ದೇಶನ, ನಟ-ಗಾಯಕರಾಗಿಯೂ ಗಳಿಸಿದ ಅಪಾರ ಅನುಭವ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪರಿಷತ್ತಿಗೆ ನೀಡಿದ ಹೊಸ ಆಯಾಮ. ಪ್ರೇರಣಾ ಜಾನಪದ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಚನ್ನರಾಯಪಟ್ಟಣ, ಹೊಯ್ಸಳ ಒಕ್ಕೂಟ ಬೆಂಗಳೂರು, ಜನಪದರು ಸಂಸ್ಥೆ ಬೆಂಗಳೂರು, ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ಬೆಂಗಳೂರು ಮುಂತಾದ ಸಂಘ ಸಂಸ್ಥೆಗಳ ಅಧ್ಯಕ್ಷ ಪದವಿ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ, ಕರ್ನಾಟಕ ಸಾಹಿತ್ಯ ಅಕಾಡಮಿ, ಬೆಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ತು, ಬೆಂಗಳೂರು ದೂರದರ್ಶನದ ಚಲನಚಿತ್ರ ಪರಿಶೀಲನಾ ಸಮಿತಿ ಮುಂತಾದವುಗಳ ಸದಸ್ಯರು. ಹಲವಾರು ಸಾಹಿತ್ಯ ಸಮ್ಮೇಳನಗಳ, ಕವಿಗೋಷ್ಠಿ, ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗಿ. ನೀನೆಂಬ ನಾನು, ದಗ್ಧ, ಸೋನೆ ಮುಗಿಲು, ರೆಕ್ಕೆ ಬಡಿಯುವ ಮುನ್ನ, ನಿವೃತ್ತೋಪನಿಷತ್ತು, ನವಿಲಜಾಗರ ಮುಂತಾದ ಕಾವ್ಯಕೃತಿಗಳು; ನಲ್ಲೂರು ದೊರೆಕಾಳಿ, ಗಂಗಡಿಕಾರ ಒಕ್ಕಲಿಗರು ಮುಂತಾದ ಜಾನಪದ ಕೃತಿಗಳು; ಕರ್ನಾಟಕ ಜಾನಪದ, ಜಾನಪದ ಭಾರತಿ, ಕಮಲಾ ಕೃತಿ ವಿಮರ್ಶೆ, ಹೆಜ್ಜೆ ಗುರುತು, ಇಂದಿನ ಕವಿತೆ ಮುಂತಾದ ಸಂಪಾದಿತ ಕೃತಿಗಳೂ ಸೇರಿ ಹದಿನೈದಕ್ಕೂ ಹೆಚ್ಚು ಕೃತಿ ಪ್ರಕಟಿತ. ಇವರಿಗೆ ೨೦೦೫ ರಲ್ಲಿ ಅರ್ಪಿಸಿದ ಅಭಿನಂದನ ಗ್ರಂಥ ‘ನಲ್ಲೂರು’. ಅರಸಿಬಂದ ಪ್ರಶಸ್ತಿಗಳು ಹಲವಾರು. ಗೌತಮ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜ್ವಾಲನಯ್ಯ ಸಾಹಿತ್ಯ ಪ್ರಶಸ್ತಿ, ಜೀಶಂಪ ಜಾನಪದ ಪ್ರಶಸ್ತಿ, ಗೊಮ್ಮಟ ವಿದ್ಯಾಪೀಠ ಪ್ರಶಸ್ತಿ, ಕನ್ನಡ ಕುಲತಿಲಕ ಪ್ರಶಸ್ತಿ, ಕರುನಾಢ ಸಿರಿ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top