
ಡಾ. ನಾಗರಾಜರಾವ್ ಹವಾಲ್ದಾರ್
July 17, 2024
೧೭.೭.೧೯೫೯ ಕನ್ನಡದ ಖಯಾಲ್ ಗಾಯನದ ಮೂಲಕ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುವ ನಾಗರಾಜರಾವ್ ಹವಾಲ್ದಾರ್‌ರವರು ಹುಟ್ಟಿದ್ದು ಹೊಸಪೇಟೆ. ತಂದೆ ರಾಮರಾವ್ ಹವಾಲ್ದಾರ್, ತಾಯಿ ಅಂಬುಜಾಬಾಯಿ. ಪುರಾತತ್ತ್ವಶಾಸ್ತ್ರದಲ್ಲಿ ಸ್ಷರ್ಣಪದಕದೊಂದಿಗೆ ಎಂ.ಎ. ಪದವಿ. ಶಿಲಾಶಾಸನ ಶಾಸ್ತ್ರದಲ್ಲಿ ಡಿಪ್ಲೋಮ. “ಕರ್ನಾಟಕದಲ್ಲಿ ಸಂಗೀತದ ಐತಿಹಾಸಿಕ ಬೆಳವಣಿಗೆಗೆ ಮೈಸೂರು ಅರಸರ ಕೊಡುಗೆ ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಚಿಕ್ಕಂದಿನಿಂದಲೂ ಸಂಗೀತದಲ್ಲಿ ಬೆಳೆದ ಆಸಕ್ತಿ. ಪಂ. ಮಾಧವಗುಡಿ ಪಂ. ಪಂಚಾಕ್ಷರಿ ಸ್ವಾಮಿ ಮತ್ತೀಗಟ್ಟಿಯವರಲ್ಲಿ ಸಂಗೀತ ಕಲಿಕೆ. ಹಿಂದೂಸ್ತಾನಿ ಸಂಗೀತದಲ್ಲಿ ಸಂಗೀತರತ್ನ ಪದವಿ. ಹಲವಾರು ಅಪರೂಪದ ಅಪ್ರಚಲಿತ ಜೋಡುರಾಗಗಳಲ್ಲಿ ಪಡೆದ ವಿಶೇಷ ತರಬೇತಿ. ಪಂ. ಬಸವರಾಜ ರಾಜಗುರು ಮತ್ತು ಪಂ. ಸಂಗಮೇಶ್ವರ ಗುರವರವರ ಮಾರ್ಗದರ್ಶನ. ರಾಜ್ಯದ ಪ್ರಮುಖ ನಗರಗಳಲ್ಲಿ ನೀಡಿದ ಕಾರ್ಯಕ್ರಮಗಳು. ಕುಂದಗೋಳದ ಸವಾಯಿ ಗಂಧರ್ವ ಪುಣ್ಯತಿಥಿ ಸಂಗೀತೋತ್ಸವ, ಧಾರವಾಡ, ಹುಬ್ಬಳ್ಳಿ ಆರ್ಟ್ಸ್ ಸರ್ಕಲ್ ಆಶ್ರಯದ ಸಂಗೀತ ಕಾರ್ಯಕ್ರಮ, ಗದುಗಿನ ವೀರೇಶ್ವರ ಪುಣ್ಯಾಶ್ರಮ, ಬೆಂಗಳೂರು, ಮೈಸೂರು ದಸರಾ ದರ್ಬಾರ್ ಹಾಲ್, ಹಂಪಿ ಉತ್ಸವ, ಮಂಗಳೂರು, ಕಾರವಾರಗಳಲ್ಲದೆ ಪುಣೆ, ಮುಂಬೈ, ಕೋಲ್ಕತ್ತಾ, ಚೆನ್ನೈ, ದೆಹಲಿಯಲ್ಲೂ ಯಶಸ್ವಿ ಕಾರ್ಯಕ್ರಮಗಳು. ಇಂಗ್ಲೆಂಡ್, ಸಿಂಗಪೂರ ಸೇರಿದಂತೆ ವಿಶ್ವಾದ್ಯಂತ ಆರು ಬಾರಿ ಪ್ರವಾಸ. ವಿಶ್ವಕನ್ನಡ ಸಮ್ಮೇಳನದಲ್ಲಿ (ಅಮೆರಿಕಾ) ಎರಡು ಬಾರಿ ಭಾಗವಹಿಸಿ ಗಳಿಸಿದ ಜನಮನ್ನಣೆ. ಕೃಷ್ಣಾಂಜಲಿ, ದಾಸಾಂಜಲಿ, ಅಕ್ಕಕೇಳವ (ವಚನ) ಮುಲ್ತಾನಿ, ಕೃಷ್ಣ ಇನ್‌ಟ್ರೆಡಿಷ್‌ನಲ್ ಖಯಾಲ್, ಸಿಡಿ ಹಾಗೂ ಕ್ಯಾಸೆಟ್‌ಗಳು, ಕನ್ನಡದ ಖಯಾಲ್ ಗಾಯನದ ಮೊಟ್ಟಮೊದಲ ಪ್ರಯತ್ನವೆಂಬ ಹೆಗ್ಗಳಿಕೆ. ಹಾಯ್ ಬೆಂಗಳೂರು ಪತ್ರಿಕೆಗೆ ಸಂಗೀತ ದಿಗ್ಗಜರೊಡನೆ ಅನುಭವಿಸಿದ ಆತ್ಮೀಯ ರಸನಿಮಿಷಗಳ ಪ್ರಸ್ತುತಿಯ ಅಂಕಣಕಾರರು. ಆರ್ಯಭಟ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು.
* * *