ಡಾ. ನಾ. ದಾಮೋದರ ಶೆಟ್ಟಿ

Home/Birthday/ಡಾ. ನಾ. ದಾಮೋದರ ಶೆಟ್ಟಿ
Loading Events

..೧೯೫೧ ನಟ, ನಾಟಕಕಾರ, ಸಾಹಿತಿ ನಾ.ದಾಮೋದರ ಶೆಟ್ಟಿಯವರು ಹುಟ್ಟಿದ್ದು ೧೯೫೧ ರ ಆಗಸ್ಟ್‌ ೨ ರಂದು ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ನಾಯ್ಕಾಪಿನಲ್ಲಿ. ತಂದೆ ಕುಂಞಕಣ್ಣ ಚೆಟ್ಟಿಯಾರ್, ತಾಯಿ ಕುಂಞಮ್ಮರ ಅಕೇರಿಯ. ಪ್ರಾರಂಭಿಕ ಶಿಕ್ಷಣ ಕುಂಬಳೆಯಲ್ಲಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಡಾ. ಶ್ರೀನಿವಾಸ ಹಾವನೂರರ ಮಾರ್ಗದರ್ಶನದಲ್ಲಿ ‘ಮುದ್ದಣನ ಶಬ್ದ ಪ್ರತಿಭೆ’ ಮಹಾ ಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಬೋಧಕವೃತ್ತಿ, ಕೊಡಗಿನ ನೆಲಜಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಕಾಲ. ನಂತರ ೧೯೭೫ ರಲ್ಲಿ ಮಂಗಳೂರಿನ ಸಂತ ಅಲೋಷಿಯಸ್‌ ಕಾಲೇಜಿನಲ್ಲಿ ಕನ್ನಡವಿಭಾಗದ ಪ್ರಾಧ್ಯಾಪಕರಾಗಿ ೩೬ ವರ್ಷಗಳ ದೀರ್ಘಸೇವೆಯ ನಂತರ ೨೦೧೧ ರಲ್ಲಿ ನಿವೃತ್ತಿ. ಕೇರಳ ಸಾಂಸ್ಕೃತಿಕ ಕಲೆಗಳ ತವರು. ಎಳೆಯ ವಯಸ್ಸಿನಿಂದಲೇ ನಾಟಕ, ಯಕ್ಷಗಾನಗಳತ್ತ ಬೆಳೆದ ಒಲವು. ಕೇರಳದ ತ್ರಿಶೂರಿನ ಸ್ಕೂಲ್‌ ಆಫ್‌ ಡ್ರಾಮದಲ್ಲಿ ತರಬೇತಿ ಪಡೆದ ನಂತರ ಸಮುದಾಯ ನಾಟಕ ಸಂಸ್ಥೆಯಲ್ಲಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ಭಾಗಿ. ಸಮಾನ ಮನಸ್ಕರೊಡನೆ ಸೇರಿ ಕಟ್ಟಿದ ನಾಟಕ ತಂದ ‘ಭೂಮಿಕ’, ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ ಹಲವಾರು ನಾಟಕಗಳನ್ನೂ ರಂಗದ ಮೇಲೆ ತಂದು ಪ್ರದರ್ಶಿಸಿದರು. ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜು ಬೋಧನಾ ವಿಭಾಗಕ್ಕೆ ಸೇರಿದ ನಂತರ ಮಂಗಳೂರಿನ ಕನ್ನಡ ಸಂಘ, ಭಾವಗಂಗೋತ್ರಿ, ಮಂಗಳಾ ಫಿಲಂ ಸೊಸೈಟಿ, ದರ್ಶನ್‌ ಫಿಲಂ ಸೊಸೈಟಿ, ಅಭಿವ್ಯಕ್ತ ಮುಂತಾದ ಸಂಘ ಸಂಸ್ಥೆಗಳ ಸಕ್ರಿಯಕಾರ್ಯಕರ್ತರು. ಸಾಂಸ್ಕೃತಿಕ ರಂಗದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಗೆಳೆಯರೊಡನೆ ಸೇರಿ ಪ್ರಾರಂಭಿಸಿದ ಸಂಸ್ಥೆ ‘ದಾಸಜನ’. ದಶಕಗಳ ಕಾಲ ಸಂಸ್ಥೆಯ ಮುಂಚೂಣಿಯ ನೇತಾರರು. ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದು ಪ್ರಜಾವಾಣಿ ಪತ್ರಿಕೆಗಾಗಿ ಬರೆದ ವಿಶಿಷ್ಟ ಅಂಕಣ ‘ತೆಂಕಣದ ಸುಳಿಗಾಳಿ’ (೧೯೯೫-೨೦೦೦) ಕರ್ನಾಟಕ ನಾಟಕ ಅಕಾಡಮಿ, ಕರ್ನಾಟಕ ಗೆಜೆಟಿಯರ್, ಕರ್ನಾಟಕ ನಾಟಕ ರಂಗಾಯಣ, ಕರ್ನಾಟಕ ಸರಕಾರದ ವಿವಿಧ ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಸದಸ್ಯರಾಗಿ ಅಧ್ಯಕ್ಷರಾಗಿ ನಿರ್ವಹಿಸಿದ ಕಾರ್ಯಗಳು. ಸಾಂಸ್ಕೃತಿಕ ಸಂಘಟನೆಗಳ, ಕಾರ್ಯಕ್ರಮಗಳಿಗೆ ನೆರವು ನೀಡಲು ನಮ್ಮ ನಾಡು, ಜಾಗರೂಕ, ಜನದನಿ, ಮನತೆರೆ, ನಾದಭಾವ ಮುಂತಾದವುಗಳಿಗಾಗಿ ಬರೆದು ಸಿದ್ಧಪಡಿಸಿದ ಹಾಡುಗಳ ಸಿಡಿ ರೂಪದಲ್ಲಿ ಬಿಡುಗಡೆ. ತೆಂಕುತಿಟ್ಟು ಯಕ್ಷಗಾನ ಕಲೆಯನ್ನೂ ಆಳವಾಗಿ ಅಭ್ಯಸಿಸಿ ಯಕ್ಷಗಾನ ತಂಢವನ್ನು ೧೯೮೮ ರಲ್ಲಿ ಇಂಗ್ಲೆಂಡಿಗೆ ಕರೆದೊಯ್ದು ವಿವಿಧ ಸ್ಥಳಗಳಲ್ಲಿ ನೀಡಿದ ಪ್ರದರ್ಶನಗಳು. ಮತ್ತೊಮ್ಮೆ ಇಂಗ್ಲೆಂಡ್‌ ಪ್ರವಾಸ ಕೈಗೊಂಡು ಯಕ್ಷಗಾನದ ಜೊತೆ ಭರತನಾಟ್ಯ ತಂಡವನ್ನೂ ಕೊಂಡೊಯ್ದು ಹೆಗ್ಗಳಿಕೆ (೧೯೯೨). ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕೃತಿ ರಚಿಸಿರುವ ನಾದಾರವರ ಒಡೆದ ಮುತ್ತುಗಳು, ನಮ್ಮನಾಡು, ಇಂಗ್ಲೆಂಡ್‌ ಕವನಗಳು, ಹಾಡುಮನವೆ ಹಾಡು, ತಟ್ಟೆಯೊಳಗಿನ ಜೀವ – ಕವನ ಸಂಕಲನಗಳು; ಸುಳಿಯೊಳಗೆ, ಪರಿಧಿ – ಕಾದಂಬರಿಗಳು; ಪೇಜಾವರ ಸದಾಶಿವರಾಯರು, ಕೆ.ಎನ್.ಟೇಲರ್, ಮುದ್ದಣ: ಬದುಕ-ಬರೆಹ, ನಾರಾಯಣ ಗುರು, ಕೆ.ವಿ. ಸುಬ್ಬಣ್ಣ – ವ್ಯಕ್ತಿಚಿತ್ರಗಳು; ಭತ್ತದ ಕಾಳುಗಳು, ಕರಿಯದೇವರ ಹುಡುಕಿ, ಸಾಕ್ಷಾತ್ಕಾರ,ಭರತವಾಕ್ಯ, ಅಶ್ವತ್ಥಾಮ, ಬಾಲ್ಯದ ನೆನಪುಗಳು, ದೇವರ  ವಿಕರಾಳಗಳು, ಕೊಚ್ಚರೇತ್ತಿ, ಮಹಾಕವಿ ಜಿ. ಶಂಕರ ಕುರುಪ್‌, ಮೂರುಹೆಜ್ಜೆ ಮೂರುಲೋಕ -ಅನುವಾದಿತ ಕೃತಿಗಳು; ಅರ್ಪಣೆ – ನಾಟಕ; ರಂಗಶೋಧನ, ತೆಂಕಣದ ಸುಳಿಗಾಳಿ, ನಾಟಕದ ಅಮೃತ ವಿಮರ್ಶೆಯ ಗರುಡ – ಇತರ ಕೃತಿಗಳು ನವಭಾರತದಲ್ಲಿ ಶಿಂಗಣ್ಣ, ಸಿರಿನಿವಾಸ, ಅಪ್ರಮೇಯ, ಸಂಕಥನ, ಪೊಲಿ, ಸ್ವಾತಂತ್ರ್ಯದ ಸುವರ್ಣ ಹೆಜ್ಜೆ, ಸಾನಿಧ್ಯ, ಅದ್ಭುತ ರಾಮಾಯಣಮ್‌, ಹೊಂಬಿದಿರು – ಸ್ವತಂತ್ರ ಹಾಗೂ ಇತರರೊಡನೆ ಸೇರಿ ಸಂಪಾದಿತ ಕೃತಿಗಳು ಪ್ರಕಟವಾಗಿವೆ. ‘ದೇವರ ವಿಕರಾಳ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ ಭಾರತೀಯ ಭಾಷಾ ಸಂಸ್ಥೆಯ ಭಾಷಾಭಾರತಿ ಸಮ್ಮಾನ್‌, ಕರ್ನಾಟಕ ನಾಟಕ ಅಕಾಡಮಿಯ ಗೌರವ ಪ್ರಶಸ್ತಿ, ದುಬೈನ ಧ್ವನಿಪ್ರತಿಷ್ಠಾನ ‘ಶ್ರೀರಂಗರಂಗ’ಪ್ರಶಸ್ತಿ, ರಂಗೋತ್ರಿಯ ‘ಬುದ್ಧ ಪ್ರಶಸ್ತಿ’, ಬೆಂಗಳೂರಿನ ನಾಡಚೇತನ ಪ್ರಶಸ್ತಿ, ಉಡುಪಿಯ ಬೆಳ್ಳೆ ಉಪಾಧ್ಯಾಯ ಪ್ರಶಸ್ತಿ ಮುಂತಾದ ಹಲವಾರು ಗೌರವ ಪ್ರಶಸ್ತಿಗಳು ದೊರೆತಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top