ಡಾ. ಪಿ. ಗುರುರಾಜಭಟ್

Home/Birthday/ಡಾ. ಪಿ. ಗುರುರಾಜಭಟ್
Loading Events
This event has passed.

೧೫-೬-೧೯೨೪ ೨೭-೮-೧೯೭೮ ಸಾಹಿತಿ, ಪ್ರಾಧ್ಯಾಪಕ, ಸಂಶೋಧಕರಾದ ಗುರುರಾಜಭಟ್‌ರವರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಪಾದೂರಿನಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ಪಾದೂರು ಮತ್ತು ಉಡುಪಿಯಲ್ಲಿ. ವಿದ್ಯಾರ್ಜನೆ ಮಾಡುತ್ತಲೇ ಗಳಿಸಿದ ಪದವಿಗಳು. ಕಾರ್ಕಳದ ಅತ್ತೂರು ಪ್ರಾಥಮಿಕ ಶಾಲೆ ಮತ್ತು ಮೂಡಬಿದರೆಯ ಜೈನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭ. ಜೊತೆಯಲ್ಲೇ ೧೯೫೨ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ. ೧೯೫೩ರಲ್ಲಿ ಶೈಕ್ಷಣಿಕ ತರಬೇತಿ, ೧೯೫೬ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. (ಇತಿಹಾಸ) ಪದವಿ. “ತುಳುನಾಡಿನ ರಾಜಕೀಯ ಮತ್ತು ಸಂಸ್ಕೃತಿ ಚರಿತ್ರೆ ಆದಿಕಾಲದಿಂದ ಕ್ರಿ.ಶ. ೬೦೦ರವರೆಗೆ ” ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ. ಪದವಿಯ ನಂತರ ಉದ್ಯೋಗಕ್ಕೆ ಸೇರಿದ್ದು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ. ೧೯೬೭ರಲ್ಲಿ ಕಲ್ಯಾಣಪುರದಲ್ಲಿ ಮಿಲಾಗ್ರೇಸ್ ಕಾಲೇಜು ಪ್ರಾರಂಭಗೊಂಡಾಗ ವಹಿಸಿಕೊಂಡ ಪ್ರಾಂಶುಪಾಲರ ಹುದ್ದೆ. ಸಂಶೋಧನೆ ಮಾಡಲು ೧೯೭೬ರಲ್ಲಿ ಸ್ವಯಂ ನಿವೃತ್ತಿ. ಸಂಶೋಧನೆಗೆ ತೊಡಗಿ ದ.ಕ. ಜಿಲ್ಲೆಯಲ್ಲೇ ಸುಮಾರು ೨೦೦೦ಕ್ಕೂ ಹೆಚ್ಚು ದೇವಸ್ಥಾನಗಳ ಸಂಶೋಧನೆ. ಶಿಲಾಗೋರಿಗಳ, ತಾಮ್ರಶಾಸನಗಳ ಸಂಶೋಧನೆ. ಅಪೂರ್ವ ಶಾಸನಗಳ ಸಂಶೋಧನೆ. ನಾಡಿನ ಪ್ರಸಿದ್ಧ ಪತ್ರಿಕೆಗಳೆಲ್ಲದರಲ್ಲೂ ೭೦೦ಕ್ಕೂ ಮಿಕ್ಕು ಸಂಶೋಧನಾ ಲೇಖನಗಳು ಪ್ರಕಟಿತ. ೧೯೬೩ರಲ್ಲಿ ಪ್ರಕಟವಾದ ಮೊದಲಗ್ರಂಥ “ತುಳುನಾಡು” ಗ್ರಂಥಕ್ಕೆ ದೇವರಾಜ ಬಹದ್ದೂರ್ ಪ್ರಶಸ್ತಿ. ಎರಡನೆಯ ಕೃತಿ “ತುಳುನಾಡಿನ ಸ್ಥಾನಿಕರು” ಉತ್ತಮ ಸಂಶೋಧನಾ ಕೃತಿ ಎಂಬ ಪ್ರಶಂಸೆ. ದ.ಕ. ಜಿಲ್ಲೆಯ ಪ್ರಾಚೀನ ಅವಶೇಷಗಳ ಕ್ರಮಬದ್ಧ ವಿಂಗಡಣೆ ಕುರಿತು ‘ಆನ್ಟಿಕ್ವಿಟೀಸ್ ಆಫ್ ಸೌತ್ ಕೆನರಾ’ (ದಕ್ಷಿಣ ಕನ್ನಡ ಪುರಾತತ್ವ) ಕೃತಿ ೧೯೬೮-೬೯ರಲ್ಲಿ ಪ್ರಕಟಿತ. ಇದು ತುಳು ಐತಿಹಾಸಿಕ, ಸಾಂಸ್ಕೃತಿಕ ಅಧ್ಯಯನದ ಪ್ರಾದೇಶಿಕ ಇತಿಹಾಸಕ್ಕೊಂದು ಅಪೂರ್ವ ಕೊಡುಗೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಗ್ರಂಥ ೫೦೦ಕ್ಕೂ ಮಿಕ್ಕ ಪುಟಗಳಲ್ಲಿ ೧೦೦೦ಕ್ಕೂ ಹೆಚ್ಚು ಛಾಯಾ ಚಿತ್ರಗಳ ವಿಶಿಷ್ಟ ಆಧಾರ ಗ್ರಂಥ. ಹಲವಾರು ಸಂಸ್ಥೆಗಳಲ್ಲಿಯೂ ಜವಾಬ್ದಾರಿಯುತ ಕಾರ‍್ಯಗಳು. ಮಣಿಪಾಲ ಶಿಕ್ಷಣ ಅಕಾಡಮಿಯ ಗೌರವ ಸದಸ್ಯತ್ವ, ಕರ್ನಾಟಕ ಸರಕಾರದ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ಇಲಾಖೆಯ ಸಲಹಾ ಸಮಿತಿ ಸದಸ್ಯತ್ವ, ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದ ಅಭಿವೃದ್ಧಿ ಮಂಡಲಿಯ ಸದಸ್ಯತ್ವ, ಭಾರತೀಯ ಜ್ಞಾನಪೀಠ ನಿಯೋಜಿತ ಸಂಶೋಧಕರಾಗಿ ದಕ್ಷಿಣ ಭಾರತದ ಜೈನ ಸ್ಮಾರಕಗಳ ಅನ್ವೇಷಣೆ ಮತ್ತು ಸಂಶೋಧನೆಯ ಮುಖ್ಯಸ್ಥರಾಗಿ ಕಾರ‍್ಯ ನಿರ್ವಹಣೆ ; ಇವರ ಸಂಶೋಧನೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾಲಯ ನೀಡಿದ್ದು ಸುವರ್ಣ ಮಹೋತ್ಸವ ಪ್ರಶಸ್ತಿ. ಸಂಶೋಧನೆಯಲ್ಲಿ ತೊಡಗಿದ್ದಾಗಲೇ ೨೭ರ ಆಗಸ್ಟ್ ೧೯೭೮ರಲ್ಲಿ ಆಕಸ್ಮಿಕ ಮರಣಕ್ಕೊಳಗಾದರು.   ಇದೇ ದಿನ ಹುಟ್ಟಿದ ಸಾಹಿತಿಗಳು : ಮಲ್ಲಿಕಾ ಕಡಿದಾಳ ಮಂಜಪ್ಪ – ೧೯೨೦ ನಿರಂಜನ – ೧೯೨೪-೧೩.೩.೯೨ ರಸಿಕ ಪುತ್ತಿಗೆ – ೧೯೩೨-೭.೨.೯೩ ಕೆ. ಚಿದಾನಂದ ಗೌಡ – ೧೯೪೨ ಕೆ.ಕೆ. ಹೆಬ್ಬಾರ್ – ೧೯೧೨-೨೯.೩.೯೬

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top