Loading Events

« All Events

ಡಾ. ಪ್ರಭಾಕರ ಶಿಶಿಲ

December 21

೨೧.೧೨.೧೯೫೩ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಪ್ರಭಾಕರ ಶಿಶಿಲರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕೂತುಕುಂಜದಲ್ಲಿ ೧೯೫೩ರ ಡಿಸೆಂಬರ್ ೨೧ ರಂದು. ತಂದೆ ಕೆ.ಕೆ. ಕುರುಪ್, ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಶಿಶಿಲ, ಕುಂಟಲ ಪಲ್ಕೆ, ಕೊಕ್ಕಡ ಮತ್ತು ಅರಸಿನ ಮಕ್ಕಿ ಮುಂತಾದೆಡೆಗಳಲ್ಲಿ. ಬಿ.ಎ. ಪದವಿ ಪಡೆದದ್ದು ಉಜಿರೆಯ ಎಸ್.ಡಿ.ಎಂ.ಕಾಲೇಜಿನಿಂದ. ಮೈಸೂರು ವಿವಿ.ದಿಂದ ಎಂ.ಎ. ಪದವಿ, ನಾಲ್ಕು ಬಂಗಾರದ ಪದಕಗಳೊಡನೆ. ಗುಲಬರ್ಗ ವಿಶ್ವವಿದ್ಯಾಲಯಕ್ಕೆ ‘ಫಿಶರೀಸ್ ಕೋ ಆಪರೇಟಿವ್ ಇನ್ ಇಂಡಿಯಾ ವಿತ್ ಪರ್ಟಿಕ್ಯುಲರ್ ರೆಫರೆನ್ಸ್ ಟು ಕರ್ನಾಟಕ’ ಪ್ರಬಂಧ ಮಂಡಿಸಿ ಪಡೆದ ಪಿ.ಎಚ್.ಡಿ. ಪದವಿ. ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ್ದು ಹಾಸನದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ. ಅರ್ಧಶಾಸ್ತ್ರದ ವಿಷಯದಲ್ಲಿ ಕನ್ನಡ ಮಾಧ್ಯಮದಲ್ಲಿ ಪಿ.ಯು.ತರಗತಿಗಳಿಗೆ ಬೋಧಿಸ ಹೊರಟಾಗ ಪಠ್ಯ ಪುಸ್ತಕಗಳಿಗಿರು ಕೊರತೆಯನ್ನು ಮನಗಂಡು ೧೯೭೯ ರಲ್ಲಿ ಪ್ರಕಟಿಸಿದ ಮೊದಲ ಕೃತಿ ‘ಅರ್ಥಶಾಸ್ತ್ರ’ ನಂತರ ಪಿ.ಯು. ತರಗತಿಗಳಿಗಾಗಿ ಕನ್ನಡದಲ್ಲಿ ೭ ಅರ್ಥಶಾಸ್ತ್ರ ಕೃತಿಗಳು. ಬಿ.ಎ. ಪದವಿ ತರಗತಿಗಳಿಗಾಗ ಕನ್ನಡದಲ್ಲಿ ೧೭ ಅರ್ಥಶಾಸ್ತ್ರ ಸಂಬಂಧಿ ಕೃತಿಗಳು; ಬಿ.ಕಾಂ ಮತ್ತು ಬಿ.ಬಿ.ಎಂ. ತರಗತಿಗಳಿಗಾಗಿ ೧೧ ಅರ್ಥಶಾಸ್ತ್ರ ಗ್ರಂಥಗಳು; ಎಂ.ಕಾಂ. ಮತ್ತು ಎಂ.ಬಿ.ಎ. ತರಗತಿಗಳಿಗಾಗಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ೪ ಕೃತಿಗಳು; ಎಂ.ಎ. ಮತ್ತು ಸ್ಪರ್ಧಾತ್ಮ ಪರೀಕ್ಷೆಗಳಿಗಾಗಿ ೧೪ ಕನ್ನಡ ಕೃತಿಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಬವಣೆಯನ್ನು ನೀಗಿಸಿದ್ದಾರೆ. ಇವುಗಳ ಜೊತೆಗೆ ಸಾಹಿತ್ಯ ಕೃತಿಗಳಾದ ಗಗ್ಗದ, ಬಾರಣೆ, ಬೆಟ್ಟದಾ ಮೇಲೊಂದು, ಕಪಿಲಳ್ಳಿಯ ಕಥೆಗಳು, ಗುಜರಿ ಅದ್ದಿಲಿಚ್ಚನ ಜಿಹಾದಿಯ, ಕೊಡಗಿನ ಐತಿಹ್ಯ ಕಥೆಗಳು ಮುಂತಾದ ಕಥಾ ಸಂಕಲನಗಳು; ಮಾನಿಷಾದ, ರಾವುಕೊರಂಗು, ದ್ವಾಸುಪರ್ಣಾ, ಬಂಡಾಯದ ಕಥೆಗಳು, ಸುವರ್ಣ ಕಥಾ ಸಂಪುಟ ಮುಂತಾದ ಕಥಾ ಸಂಪುಟಗಳು; ಪುಂಸ್ತ್ರಿ, ಇರುವುದೆಲ್ಲದ ಬಿಟ್ಟು, ನದಿ ಎರಡರ ನಡುವೆ, ಮತ್ಸ್ಯಗಂಧಿ, ಮೂಡಣ ಕೆಂಪು ಕರಣ, ಕಾದಂಬರಿ ಸಂಚಯ ಮೊದಲಾದ ಕಾದಂಬರಿಗಳು; ದೇಶಯಾವುದಾದರೇನು? ಸಂಸ್ಕೃತಿಯ ಶೋಧದಲ್ಲಿ, ಜಲಲ ಜಲಲ ಜಲಧಾರೆ, ನೆಪೋಲಿಯನ್ನನ ನಾಡಿನಲ್ಲಿ, ನಿಸರ್ಗ ನಿನಾದ ಮೊದಲಾದ ಪ್ರವಾಸ ಕಥನಗಳು; ಶಿಕಾರಿಯ ಸೀಳುನೋಟ, ಸದ್ದಡಗಿದ ಶಿಕಾರಿ ಕೋವಿ ಮೊದಲಾದ ಶಿಕಾರಿ ಸಾಹಿತ್ಯ ಕೃತಿಗಳು; ಬಣ್ಣ, ಅಮರ ಕ್ರಾಂತಿವೀರರು, ಯಕ್ಷೋಪಾಸನೆ, ಯಕ್ಷಗಾನ ಕಲಾವಲೋಕನ ಮೊದಲಾದ ಯಕ್ಷಗಾನ ಸಂಬಂಧಿ ಕೃತಿಗಳು; ೩ ಅನುಭವ ಕಥನಗಳು; ೮ ಸಂಪಾದಿತ ಕೃತಿಗಳು, ಪಠ್ಯ ಪುಸ್ತಕಗಳೂ ಸೇರಿ ೧೦೦ ಕ್ಕೂ ಹೆಚ್ಚು ಕೃತಿ ಪ್ರಕಟಿತ. ಸಾಂಸ್ಕೃತಿಕ ಕ್ಷೇತ್ರದ ಯಕ್ಷಗಾನ ಕಲೆಯಲ್ಲಿ ವಿದ್ವಾಂಸರೆನಿಸಿ ಭಾಗವತ, ಮೃದಂಗ ವಾದನ ಮತ್ತು ಪಾತ್ರಧಾರಿಯಾಗಿ ಕಥಾ ಪ್ರಸಂಗವನ್ನು ನಿರ್ವಹಿಸುವುದರಲ್ಲಿಯೂ ಪ್ರಾವೀಣ್ಯತಿ ತೋರಿದ್ದಾರೆ. ಯಕ್ಷಗಾನವನ್ನು ಜನಪದ ಕಾರ್ಯಕ್ರಮವನ್ನಾಗಿಸಲು ಸ್ವಂತಿಕಾ ಸಾಹಿತ್ಯ ಬಳಗ, ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ, ಅಭಿನಯ ನಾಟಕ ಸಂಸ್ಥೆ, ಭುವನೇಶ್ವರಿ ಯಕ್ಷಗಾನ ಮಂಡಲಿ ಮುಂತಾದವುಗಳ ಸ್ಥಾಪಕ ಸದಸ್ಯರಾಗಿ ದುಡಿಯುವುದರ ಜೊತೆಗೆ ಅರ್ಜುನ, ಹನುಮಂತ, ಶೂರ್ಪನಖಿ, ತಾಟಕಿ, ಭದ್ರಸೇನ, ದಕ್ಷ, ವೀರಭದ್ರ, ಭೀಮ, ವಿಶ್ವಾಮಿತ್ರ ಮುಂತಾದ ಪಾತ್ರಗಳಿಗಾಗಿ ಹಚ್ಚಿದ ಬಣ್ಣ. ಮಂಗಳೂರು ವಿ.ವಿ.ದ ಪ್ರಾಧ್ಯಾಪಕರ ಒಕ್ಕೂಟ, ಅರ್ಥಶಾಸ್ತ್ರ ಒಕ್ಕೂಟ, ಕರ್ನಾಟಕ ರಾಜ್ಯ ಅರ್ಥಶಾಸ್ತ್ರದ ಒಕ್ಕೂಟ, ಅಖಿಲ ಭಾರತ ಅರ್ಥಶಾಸ್ತ್ರದ ಒಕ್ಕೂಟ ಮುಂತಾದವುಗಳ ರಾಜ್ಯ, ರಾಷ್ಟ್ರಮಟ್ಟದ ಸಮಾವೇಶಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ರೋಟರಿ ಕ್ಲಬ್ ಮೂಲಕ ಹಲವಾರು ಜನಹಿತ ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ. ವಿದ್ಯಾರ್ಥಿ ಮಾರ್ಗದರ್ಶಕ, ಸಾಂಸ್ಕೃತಿಕ ರಾಯಭಾರಿ, ಸಾಹಿತ್ಯ ರೂವಾರಿಯಾದ ಇವರಿಗೆ ಹಲವಾರು ಸಂಘ ಸಂಸ್ಥೆಗಳಿಂದ ಗೌರವ, ಪುರಸ್ಕಾರಗಳು ದೊರೆತಿವೆ. ಭಾರತೀಯ ಜೇಸೀನ್ ಸಂಸ್ಥೆಯಿಂದ, ಪ್ರತಿಭಾವಂತ ಯುವ ಸಾಧಕ ರಾಷ್ಟ್ರಪ್ರಶಸ್ತಿ, ತುಮಕೂರಿನ ವಿದ್ಯಾವಾಹಿನಿ ಸಂಸ್ಥೆಯಿಂದ ಉತ್ತಮ ಶಿಕ್ಷಕ, ಕಾಲೇಜಿನ ಶತಮಾನೋತ್ಸವ ಸಂದರ್ಭದಲ್ಲಿ ಅತ್ಯುತ್ತಮ ಶಿಕ್ಷಕ – ಹೀಗೆ ಹಲವಾರು ಗೌರವ ಪ್ರಶಸ್ತಿಗಳು ದೊರೆತಿವೆ. ಸದ್ಯ ಸುಳ್ಯದ ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕರು.

Details

Date:
December 21
Event Category: