ಡಾ. ಪ್ರಭುಶಂಕರ್

Home/Birthday/ಡಾ. ಪ್ರಭುಶಂಕರ್
Loading Events
This event has passed.

೧೫-೨-೧೯೨೯ ಹುಟ್ಟಿದ್ದು ಚಾಮರಾಜನಗರದಲ್ಲಿ. ತಂದೆ ಕರಿಬಸಪ್ಪ, ತಾಯಿ ರುದ್ರಮ್ಮ. ಅಂದು ಹಳ್ಳಿಯಲ್ಲಿ ಅವಿದ್ಯಾವಂತರೇ ಜಾಸ್ತಿ. ಆದರೂ ತಂದೆ ತಾಯಿಗಳು ಲೋಯರ್ ಸೆಕೆಂಡರಿಯವರೆಗೆ ಓದಿದ್ದುದು ಇವರ ಅದೃಷ್ಟ. ಮಗನಿಗೂ ವಿದ್ಯೆ ಕಲಿಸಿದರು. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಚಾಮರಾಜನಗರ ಮತ್ತು ಯಳಂದೂರು. ಮೈಸೂರು, ಬೆಂಗಳೂರಿನಲ್ಲಿ ಪ್ರೌಢಶಾಲೆ. ರಾಮಕೃಷ್ಣ ಮಿಷನ್ನಿನ ಸಂಪರ್ಕ. ರಾಮಕೃಷ್ಣ ಪರಮಹಂಸ, ವಿವೇಕಾನಂದರ ಜೀವನ-ಸಾಧನೆ-ಬೋಧನೆಗಳಿಂದ ಪ್ರಭಾವಿತರಾದವರು. ಕಾಲೇಜು ಕಲಿತದ್ದು ಬೆಂಗಳೂರು, ಶ್ರೀ ತೀ.ನಂ.ಶ್ರೀ, ರಾಜರತ್ನಂ, ಎಂ.ವಿ.ಸೀ, ಡಿ.ಎಲ್.ಎನ್ ಮುಂತಾದವರಿಂದ ಕನ್ನಡ ಕಲಿಕೆ. ಆರ್. ಗುರುರಾಜರಾವ್, ಎಂ.ರಾಮರಾವ್, ಎಸ್. ಅನಂತನಾರಾಯಣರವರಿಂದ ಇಂಗ್ಲಿಷ್ ಕಲಿಕೆ. ಸಾಹಿತ್ಯ ಪ್ರೇರಣೆ ಪಡೆದದ್ದು ಶ್ರೀ ನಾ.ಕಸ್ತೂರಿಯವರಿಂದ. ರಾಶಿಯವರು ಪ್ರಾರಂಭಿಸಿದ್ದ ‘ಕೊರವಂಜಿ’ ಮಾಸಪತ್ರಿಕೆ ಮತ್ತು ಸುಬೋಧ ರಾಮರಾಯರು ಪ್ರಾರಂಭಿಸಿ, ಜಿ.ಎಸ್. ಕೃಷ್ಣರಾಯರ ಸಂಪಾದಕತ್ವದ ‘ನಗುವನಂದ’ ಪತ್ರಿಕೆಗಳಿಗೆ ಬಿಡಿ ಬರಹಗಳು. ಕುವೆಂಪು, ದೇಜಗೌ, ಕ.ವೆಂ. ರಾಘವಾಚಾರ್ ಮುಂತಾದವರ ಸೆಳೆತದಿಂದ ಮೈಸೂರು ಕಾಲೇಜಿಗೆ ಸೇರ‍್ಪಡೆ. ಓದಿದ್ದು ಬಿ.ಎ. ಆನರ್ಸ್‌. ಎಂ.ಎ. ಪದವಿ ಪ್ರಥಮ ರ‍್ಯಾಂಕ್. ಬೆಂಗಳೂರಿನ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ. ಕೋಲಾರ ಮತ್ತು ಮೈಸೂರು ಕಾಲೇಜಿನಲ್ಲಿ ೧೪ ವರ್ಷ, ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರಾಗಿ ೧೪ ವರ್ಷ ಸೇವೆ. ಕನ್ನಡ ಕೃತಿಗಳ ವಿವರಣಾತ್ಮಕ ಗ್ರಂಥಸೂಚಿ, ಗೃಹಸರಸ್ವತಿ ಗ್ರಂಥಮಾಲೆಯಲ್ಲಿ ಅಮೂಲ್ಯ ಗ್ರಂಥ ಪ್ರಕಟಣೆ. CULTURAL HERITAGE OF INDIAದ ‘ಯುಗಯಾತ್ರಿ ಭಾರತೀಯ ಸಂಸ್ಕೃತಿ’ ಕನ್ನಡಾನುವಾದ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಪ್ರಾರಂಭ-ಪ್ರಥಮ ಪ್ರಾಧ್ಯಾಪಕರು. ಮೈಸೂರು ವಿಶ್ವವಿದ್ಯಾಲಯಕ್ಕೆ ಮರಳಿ, ಅಧ್ಯಯನ ಸಂಸ್ಥೆ ನಿರ್ದೇಶಕತ್ವ. ಪ್ರಾಧ್ಯಾಪಕರಾಗಿ ನಿವೃತ್ತಿ. ಮಂಗಳೂರು ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ. ಕುವೆಂಪುರವರ ವ್ಯಕ್ತಿತ್ವ, ಬೆರಳ್‌ಗೆ ಕೊರಳ್, ಸ್ಮಶಾನ ಕುರುಕ್ಷೇತ್ರ, ಶೂದ್ರತಪಸ್ವಿ ಇಂಗ್ಲಿಷ್‌ಗೆ ಅನುವಾದ. MESSAGE OF UPANISHADSನ್ನು ‘ಉಪನಿಷದ್ ಸಂದೇಶ’ ಎಂದು ಕನ್ನಡಕ್ಕೆ ತಂದಿದ್ದಾರೆ. ಜನಮನ (ವ್ಯಕ್ತಿಚಿತ್ರ) ; ಎತ್ತಿಗೆ ಜ್ವರ ಎಮ್ಮೆಗೆ ಬರೆ’ (ಲಘು ಪ್ರಬಂಧ) ; ಜೀವ ಜೀವದ ನಂಟು (ಕಾದಂಬರಿ) ; ಅಂಗುಲಿಮಾಲ, ಆಮ್ರಪಾಲಿ (ನಾಟಕ) ; ವಿದೇಶ ಪ್ರವಾಸಾನುಭವದ ನಾನು ಮತ್ತು ಶಾಂತಿ (ಪ್ರವಾಸಕಥನ) ಮುಂತಾದವುಗಳ ಪ್ರಕಟಣೆ. ಸಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ವಿಶ್ವಮಾನವ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಲಕ್ಷ್ಮಣ ವಿರೂಪಾಕ್ಷ ಜೋಶಿ – ೧೯೨೩ ಎಸ್.ಸಿ. ಹಿರೇಮಠ – ೧೯೩೨ ಪ್ರೊ. ಲಲಿತಾಂಬ ಚಂದ್ರಶೇಖರ್ – ೧೯೨೯ ಎಚ್. ಗುರುಮೂರ್ತಿ – ೧೯೬೧ ಕುಸುಮಾಕರ ದೇವರಗಣ್ಣೂರ – ೧೯೩೦ ಕೆ. ಪೂರ್ಣಿಮಾ ಭಟ್ – ೧೯೬೩ ಕಬ್ಬಿನಾಲೆ ವಸಂತ ಭರದ್ವಾಜ್ – ೧೯೬೧ ಮಾಸ್ಟರ್ ಹಿರಣಯ್ಯ – ೧೯೩೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top