ಡಾ. ಬಿ.ಎಸ್. ಗದ್ದಗಿಮಠ

Home/Birthday/ಡಾ. ಬಿ.ಎಸ್. ಗದ್ದಗಿಮಠ
Loading Events
This event has passed.

೦೭.೦೧.೧೯೧೭ ೩೦೧೦.೧೯೬೦ ‘ಜನಪದ ಗೀತೆಗಳು’ ಎಂಬ ಮಹಾಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಜಾನಪದ ಕ್ಷೇತ್ರದಲ್ಲಿ ಪಿಎಚ್‌. ಡಿ. ಪಡೆದವರಲ್ಲಿ ಮೊದಲಿಗರು ಎಂಬ ಪ್ರಶಂಸೆಗೆ ಪಾತ್ರರಾಗಿರುವ ಗದ್ದಗಿಮಠರವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಕೆರೂರಿನಲ್ಲಿ ೭.೧.೧೯೧೭ ರಲ್ಲಿ. ತಂದೆ ಜನಪದ ಗೀತೆಗಳನ್ನು ಹಾಡುವುದರಲ್ಲಿ ಪ್ರಸಿದ್ಧರಾಗಿದ್ದರು. ಹಳ್ಳಿಯಲ್ಲಿ ಯಾವುದೇ ಕಾರ್ಯಕ್ರಮವಿರಲಿ, ನಾಟಕ ಪ್ರದರ್ಶನವಿರಲಿ, ತಂದೆಯವರ ಜನಪದ ಗೀತೆಗಳ ಗಾಯನವಿದ್ದೇ ಇರುತ್ತಿತ್ತು. ಹೀಗೆ ಹಾಡುಗಾರರ ಮಧ್ಯೆ ಬೆಳೆದದ್ದರಿಂದ ಸ್ವಾಭಾವಿಕವಾಗಿ ಜಾನಪದ ಕ್ಷೇತ್ರದತ್ತ ಇವರಿಗೂ ಆಸಕ್ತಿ ಬೆಳೆಯತೊಡಗಿತು. ತಂದೆಯಿಂದ ಬಂದ ಬಳುವಳಿಯಾಗಿ ಸೊಗಸಾಗಿ ಹಾಡುವುದನ್ನೂ ಕಲಿತಿದ್ದರು. ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಸಂಚರಿಸಿ ಜನಪದ ಗೀತೆಗಳನ್ನು ಸಂಶೋಧಿಸಿ, ಸಂಗ್ರಹಿಸಿ, ಪರಿಷ್ಕರಿಸಿ ‘ಜನಪದ ಗೀತೆಗಳು’ ಎಂಬ ಪ್ರೌಢ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ೧೯೫೫ ರಲ್ಲಿ ಡಾಕ್ಟರೇಟ್‌ ಪಡೆದರು. ತಾವು ಸಂಗ್ರಹಿಸಿದ ಜನಪದ ಗೀತೆಗಳನ್ನು ಪ್ರಕಟಿಸಲು ‘ಜನಪದ ಕಾವ್ಯಮಾಲೆ’ ಎಂಬ ಒಂದು ಮಾಲೆಯನ್ನೇ ಪ್ರಾರಂಭಿಸಿ ‘ನಾಲ್ಕು ನಾಡಪದಗಳು’, ‘ಕಂಬಿಯ ಪದಗಳು’, ‘ಜನತಾಗೀತೆಗಳು’, ‘ಲೋಕಗೀತೆಗಳು’, ಕುಮಾರ ರಾಮನ ದುಂದುಮೆ (ಬಾಜನಗಬ್ಬ-ಒಂದು ಬಗೆಯ ಕಾವ್ಯ) ಗಳು ಎಂಬ ಗ್ರಂಥಗಳನ್ನು ಪ್ರಕಟಿಸಿದರು. ‘ಮಲ್ಲಮಲ್ಲಾಣಿ’ ಮತ್ತು ಕುಮಾರ ರಾಮನ ದುಂದುವೆಗಳಲ್ಲಿನ ಮೂಲ ಜಾನಪದ ಆಶಯಕ್ಕೆ ಚ್ಯುತಿ ಬಾರದಂತೆ, ಕಾಲ್ಪನಿಕ ಕಥಾವೃತ್ತದಿಂದ ಬರೆದ ‘ಅರ್ಜುನ ಜೋಗಿಯ ಹಾಡುಗಬ್ಬ’ ಕೃತಿಯು ಓದುಗರ ಗಮನ ಸೆಳೆದ ಕೃತಿ. ಹಿಂದೆಲ್ಲ ಜನಪದ ಗೀತೆಗಳನ್ನು ಜನತಾ ಗೀತೆಗಳು, ಲೋಕ ಗೀತೆಗಳು ಎಂದೆ ಕರೆಯುತ್ತಿದ್ದರು. ಉದ್ಯೋಗಕ್ಕಾಗಿ ಸೇರಿದ್ದು ಬೆಳಗಾಂವಿಯ ಲಿಂಗರಾಜ ಕಾಲೇಜಿನಲ್ಲಿ ವ್ಯಾಯಾಮ ಶಿಕ್ಷಕರಾಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಸೇರಿದರು. ಸೇವಾವಧಿಯಲ್ಲಿರುವಾಗಲೇ ೩೦.೧೦.೧೯೬೦ ರಲ್ಲಿ ಹೃದಯಾಘಾತಕ್ಕೊಳಗಾದರು. ಇವರು ಬರೆದ ಪ್ರೌಢಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯವು ೧೯೬೩ ರಲ್ಲಿ ಪ್ರಕಟಿಸಿತು. ೧೯೬೭ ರಲ್ಲಿ ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಮಂಟಪಕ್ಕೆ ಇವರ ಹೆಸರನ್ನೇ ಇಟ್ಟು ಗೌರವ ತೋರಿಸಿದರು. ಹೀಗೆ ಜಾನಪದ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿ, ಸಂಶೋಧನೆಗಾಗಿ ಬಹುವಾಗಿ ಶ್ರಮಿಸಿದವರಲ್ಲಿ ಪ್ರಮುಖರಾದವರು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top