Loading Events

« All Events

  • This event has passed.

ಡಾ. ಬಿ.ಎಸ್. ಸ್ವಾಮಿ

September 8

೦೮..೧೯೪೨ ಕಥೆ, ಕಾದಂಬರಿ, ಕವನ, ನಾಟಕ, ಪ್ರಬಂಧ-ಹೀಗೆ ವೈವಿಧ್ಯಮಯ ಲೇಖನ ವ್ಯವಸಾಯದಿಂದ ಸಾಹಿತ್ಯ ಲೋಕದಲ್ಲಿ ಪರಿಚಿತರಾಗಿರುವ ಬಿ. ಸಿದ್ಧಲಿಂಗಸ್ವಾಮಿ (ಬಿ.ಎಸ್‌.ಸ್ವಾಮಿ)ಯವರು ಹುಟ್ಟಿದ್ದು ೧೯೪೨ರ ಸೆಪ್ಟಂಬರ್‌ ೮ರಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನ ಹಳ್ಳಿಯಲ್ಲಿ. ತಂದೆ ವಿ. ಬಸವಲಿಂಗಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರು, ತಾಯಿ ಶಿವನಾಗಮ್ಮ. ಪ್ರಾರಂಭಿಕ ಶಿಕ್ಷಣ ಮಧುವನಹಳ್ಳಿ, ಕೊಳ್ಳೇಗಾಲ. ಮೈಸೂರಿನ ಸೇಂಟ್‌ ಫಿಲೋಮಿನ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ. ಮೈಸೂರು, ಚಾಮರಾಜನಗರ ಸುತ್ತಮುತ್ತಲ ಕಡೆಗಳಲ್ಲಿ ಹಬ್ಬಿರುವ ಪವಾಡ ಸದೃಶ ವಿಚಾರಗಳು, ಐತಿಹ್ಯ, ಜನರ ನಂಬಿಕೆ, ಭಕ್ತಿಯ ಪರಾಕಾಷ್ಠೆ ಮುಂತಾದವುಗಳ ರಸವತ್ತಾದ ವಿಶ್ಲೇಷಣೆಯ ಮಲೆಮಹದೇಶ್ವರ: ಒಂದು ಅಧ್ಯಯನ ಎಂಬ ಪ್ರೌಢ ಪ್ರಬಂಧ ರಚಿಸಿ ಮೈಸೂರು ವಿಶ್ವವಿದ್ಯಾಲಯದಿಂದ (೧೯೮೭) ಪಡೆದ ಪಿಎಚ್‌.ಡಿ. ಪದವಿ. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಬೋಧನಾಕ್ಷೇತ್ರ. ಐದು ವರ್ಷಗಳ ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಸಹಾಯಕ ಸಂಪಾದಕರಾಗಿ, ವೃತ್ತಿಯನ್ನು ಪ್ರಾರಂಭಿಸಿ ನಂತರ ಕಾರ್ಯಕ್ರಮ ನಿರ್ವಾಹಕ, ಅಧಿಕಾರಿಯಾಗಿ, ಗುಲ್ಬರ್ಗ, ಬೆಂಗಳೂರು, ಮಂಗಳೂರು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು. ಆಕಾಶವಾಣಿಯಲ್ಲಿ ಪರಿಚಿತ ಧ್ವನಿ, ಧ್ವನಿಏರಿಳಿತ, ಸ್ಪಷ್ಟ ಉಚ್ಚಾರ, ವಿಶಿಷ್ಟಗತ್ತಿನಿಂದ ಕೂಡಿದ ಧ್ವನಿಯಿಂದ ಕಾರ್ಯಕ್ರಮ ರೂಪಿಸುತ್ತಿದ್ದುದರ ಜೊತೆಗೆ ಆಕಾಶವಾಣಿಯಲ್ಲಿ ಭಾಗವಹಿಸಲು ಬರುತ್ತಿದ್ದ ಅಸಂಖ್ಯಾತ ಕಲಾವಿದರಿಗೆ ಸೂಕ್ತ ಮಾರ್ಗದರ್ಶನ ಮಾಡಿ, ಧ್ವನಿಮುದ್ರಣದ ಸಂದರ್ಭದಲ್ಲಿ ಯಾವುದೇ ತಪ್ಪಿಗೆ ಅವಕಾಶವಾಗದಂತೆ, ತಪ್ಪಾದರೆ ಬೇಸರಿಸದೆ ಹಲವಾರು ಬಾರಿ ಧ್ವನಿ ಮುದ್ರಿಸಿಕೊಂಡು ಪ್ರಸಾರ ಮಾಡುತ್ತಿದ್ದ ಕಾರ್ಯವೈಖರಿಯಿಂದ ಎಲ್ಲರಿಂದಲೂ ಪ್ರಶಂಸಿಸಲ್ಪಟ್ಟ ವ್ಯಕ್ತಿತ್ವ. ಬಹುಮುಖ ವ್ಯಕ್ತಿತ್ವದ ಸ್ವಾಮಿಯವರ ಸಾಹಿತ್ಯಕ್ರಿಯೆ ಪ್ರಾರಂಭವಾದುದು ಕವನ ರಚನೆಗಳಿಂದ. ಆಗಾಗ್ಗೆ ಬರೆದ ಕವನಗಳನ್ನೂ ಸಂಕಲಿಸಿ ಪ್ರಕಟಿಸಿದ ಪ್ರಥಮ ಕವನ ಸಂಕಲನ ‘ಅಮೃತ’(೧೯೬೭). ನಂತರ ಮುಂಬೆಳಕು, ಲಾಸ್ಯ-ತಾಂಡವ, ಇಂಚರ, ಕಾವ್ಯಗಂಗಾ, ಹೃದಯ ಹಾಡಿತು ಮುಂತಾದ ಕವನ ಸಂಕಲನಗಳ ಜೊತೆಗೆ ಬರೆದ ಮಹಾಕಾವ್ಯ ‘ಕಲಿಭಾರತ’. ಇದು ಮಹಾ ಭಾರತದ ಕಥೆಯಾಗಿರದೆ ಯುಗಪುರುಷ ಕಲಿಯ ಕತೆ. ಕಲಿಯೇ ಇಲ್ಲಿನ ಮಹಾಕಾವ್ಯ ನಾಯಕ. ಕಾವ್ಯದಷ್ಟೇ ಗದ್ಯ ಸಾಹಿತ್ಯದಲ್ಲಿಯೂ ಕೃಷಿಮಾಡಿರುವ ಸ್ವಾಮಿಯವರು ಕಾದಂಬರಿ, ಜೀವನ ಚರಿತ್ರೆ, ಶರಣ ಸಾಹಿತ್ಯ, ಜೈನ ಸಾಹಿತ್ಯ, ಪ್ರವಾಸ ಸಾಹಿತ್ಯ, ಜಾನಪದ, ಮಕ್ಕಳ ಸಾಹಿತ್ಯದ ಹಲವಾರು ಕೃತಿಗಳನ್ನೂ ರಚಿಸಿದ್ದಾರೆ. ಪ್ರೇಮ ಪರಾಗ, ಪ್ರೇಮಾಂಕುರ, ಅಮರಪ್ರೇಮ, ಮಧುಮತಿ, ರೂಪಸಿ ಮುಂತಾದ ೩೨ ಕಾದಂಬರಿಗಳು; ೧೯೯೮ ರಲ್ಲಿ ಪ್ರಕಟವಾದ ಜೀವನ ಚಿತ್ರಗಳ ಕೃತಿಯಲ್ಲಿ  ೬೫ ಮಹನೀಯರ ಬದುಕು-ಸಾಧನೆಯ ಬಗ್ಗೆ ಬರೆದ ಲೇಖನಗಳು; ಶೈವ. ವೀರಶೈವ ಕವಿಗಳನ್ನು ಕಾದಂಬರಿ ರೂಪದಲ್ಲಿ ಪರಿಚಯಿಸಿರುವ ಷಡಕ್ಷರದೇವ , ಮಲಹಣದೇವ, ಮತ್ತು ಮಹಾಕವಿ ಹರಿಹರ ಕೃತಿಗಳು; ಭಾರತ ಪ್ರವಾಸ ಹಾಗೂ ಅಮೆರಿಕ ಪ್ರವಾಸದ ‘ಅಮರ ನೆನಪು ಅಮೆರಿಕ’ ಪ್ರವಾಸ ಸಾಹಿತ್ಯ ಕೃತಿಗಳಲ್ಲದೆ ನಾಟಕ, ಹಾಸ್ಯ ಸಾಹಿತ್ಯದಲ್ಲೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕಾರಂಜಿ, ಪ್ರಾಸ-ತ್ರಾಸ, ಗುಟುಕು, ಮಿಂಚು, ಹಾಸ್ಯತರಂಗ ಪ್ರಮುಖ ಹಾಸ್ಯ ಕೃತಿಗಳಾದರೆ ಬಾನುಲಿ ನಾಟಕ, ರಂಗನಾಟಕ, ರೇಡಿಯೋ ರೂಪಕಗಳು ಮುಂತಾದ ಹಲವಾರು ಪ್ರಕಾರಗಳಲ್ಲೂ ನಾಟಕಗಳನ್ನೂ ರಚಿಸಿದ್ದಾರೆ. ಮಾದೇಶ್ವರ ಮಾಹತ್ಮ್ಯೆ-ಇದು ಸ್ವಾಮಿಯವರು ಆಳವಾಗಿ ಅಧ್ಯಯನ ಮಾಡಿದ ವಸ್ತುವಾಗಿದ್ದು ತಮ್ಮ ಪ್ರಬಂಧ, ನಾಟಕ, ಲೇಖನಗಳಲ್ಲಿ ಧಾರಾಳವಾಗಿ ಬಳಸಿಕೊಂಡಿದ್ದಾರೆ. ಇದಲ್ಲದೆ ಹಳ್ಳಿಯಾದರೇನು ಶಿವ, ಬಿಟ್ಟಿನೆಂದರೂ ಬಿಡದೀಮಾಯೆ, ನಂದನವನ, ಮೊದಲಾದವುಗಳು ರಂಗದ ಮೇಲೆ ಅಭಿನಯಿಸಲ್ಪಡಬಹುದಾದ ಪೂರ್ಣ ಪ್ರಮಾಣದ ನಾಟಕಗಳು. ಒಂದು ಕಾಲದಲ್ಲಿ ಆಕಾಶವಾಣಿ ಕೇಂದ್ರಗಳಲ್ಲಿ ಕುಟುಂಬ ಕಲ್ಯಾಣ ಯೋಜನ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಪ್ರಸಾರಮಾಡಬೇಕಿದ್ದುದರಿಂದ ಈ ಕಾರ್ಯಕ್ರಮವನ್ನೂ ಜನಪ್ರಿಯಗೊಳಿಸಲು ಪೂರಕ ಸಾಹಿತ್ಯ ಒದಗಿಸಲು ಸ್ವಾಮಿಯವರನ್ನು ಸ್ಕಿಪ್ಟ್‌ ರೈಟರ್ ಎಂದೇ ನೇಮಕ ಮಾಡಿಕೊಂಡಿದ್ದರು. ದೂರದರ್ಶನಗಳು ಇಲ್ಲದಿದ್ದ ವರ್ಷಗಳಲ್ಲಿ ಆಕಾಶವಾಣಿಯ ಒಂದು ಸದೃಢ ಪ್ರಸಾರದ ಮಾಧ್ಯಮವಾಗಿದ್ದು ಹಲವಾರು ಮಂದಿ ರೇಡಿಯೋ ಕಾರ್ಯಕ್ರಮಗಳನ್ನೇ ಅವಲಂಬಿಸಿದ್ದರಿಂದ ಗುಣಮಟ್ಟವನ್ನೂ ಕಾಯ್ದುಕೊಳ್ಳುವುದೂ ಅಷ್ಟೇ ಅಗತ್ಯವಾಗಿತ್ತು. ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣೆಯ ಜವಾಬ್ದಾರಿಗಳು ಸ್ವಾಮಿಯವರ ಪ್ರತಿಭೆಯ ವಿಕಾಸಕ್ಕೆ ಮಹತ್ತರ ದಿಕ್ಸೂಚಿಗಳಾದವು. ವಿವಿಧ ಕಾರ್ಯಕ್ರಮಗಳ ಯೋಜಕರಾಗಿ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದ್ದಾರೆ. ಚಲನಚಿತ್ರ ನಿರ್ಮಾಣ ಮಾಡಬೇಕು, ನಿರ್ದೇಶಿಸಬೇಕು ಎಂದು ಮದರಾಸಿಗೆ ಹೋಗಿ ಅಲ್ಲಿನ ಸಿನಿಮಾರಂಗದ ರಾಜಕಾರಣ ನೋಡಿ ನಿರಾಶರಾಗಿ ಹಿಂದಿರುಗಿದರು. ಆದರೂ ಈ ಸಂದರ್ಭದಲ್ಲಿ ‘ಅಪರಾಜಿತ’ ಚಲನಚಿತ್ರಕ್ಕೆ ಗೀತೆಗಳನ್ನು, ‘ಗಾಜಿನಮನೆ’ ಚಲನಚಿತ್ರಕ್ಕೆ ಸಂಭಾಷಣೆಯನ್ನು, ‘ಮಾದೇಶ್ವರ’ ರೂಪಕ ಚಿತ್ರಕ್ಕೆ ನಿರೂಪಣಾ ಸಾಹಿತ್ಯವನ್ನೂ ಒದಗಿಸಿದ್ದಾರೆ. ಕಥೆ, ಕಾದಂಬರಿ, ಬಾನುಲಿ ನಾಟಕ, ರೂಪಾಂತರ, ವಿಮರ್ಶೆ,  ಪ್ರವಾಸ ಸಾಹಿತ್ಯ, ಗ್ರಂಥ ಸಂಪಾದನೆ , ಜಾನಪದ ಸಾಹಿತ್ಯ , ಮಕ್ಕಳ ಸಾಹಿತ್ಯ-ಹೀಗೆ ಸ್ವಾಮಿಯವರ ಸಾಹಿತ್ಯದ ಹರವು ಬಹುದೊಡ್ಡದೆ. ಅವರ ಆತ್ಮಕತೆ ‘ಬೆಂಕಿಯಲ್ಲಿ ಅರಳಿದ ಹೂವು’ ಕೃತಿಯಲ್ಲಿ ಕಷ್ಟಗಳ ಕುಲುಮೆಯಲ್ಲಿ ಬೆಂದು ನಲುಗಿ ಹೋಗಿದ್ದರೂ ಅವರ ಜೀವನೋತ್ಸಾಹಕ್ಕೆ ಎಂದೂ ಕುಂದು ಬಂದಿಲ್ಲದಿದ್ದುದರಿಂದಲೇ ೨೦೦೬ ರಲ್ಲಿ ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಮಧುವ್ರತ’ ಸ್ವಾಮಿಯವರ ಗುಣಾದರ್ಶಗಳಿಗೆ ಔಚಿತ್ಯ ಪೂರ್ಣ ಕೃತಿಯಾಗಿದೆ. ಸಾಹಿತ್ಯದ ಎಲ್ಲ ಪ್ರಕಾರಗಳೂ ಸೇರಿ ಸುಮಾರು ೨೦೦ ಕ್ಕೂ ಹೆಚ್ಚು ಕೃತಿ ರಚಿಸಿರುವ ಸ್ವಾಮಿಯವರಿಗೆ ಜಾನಪದ ಯಕ್ಷಗಾನ ಅಕಾಡಮಿಯಿಂದ ‘ಜಾನಪದತಜ್ಞ’ ಪ್ರಶಸ್ತಿ, ಕವಿಚಕ್ರೇಶ್ವರ ಕಾದಂಬರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ, ಜೈನ ಸಾಹಿತ್ಯದ ಕೊಡುಗೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಮುದ್ದಣ ರತ್ನಾಕರವರ್ಣಿ ಪ್ರಶಸ್ತಿ ಗೊರೂರು ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳಲ್ಲದೆ ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನಿತರು.

Details

Date:
September 8
Event Category: