ಡಾ. ಬಿ.ಜಿ.ಎಲ್. ಸ್ವಾಮಿ

Home/Birthday/ಡಾ. ಬಿ.ಜಿ.ಎಲ್. ಸ್ವಾಮಿ
Loading Events
This event has passed.

೦೫..೧೯೧೮ ೦೨.೧೧.೧೯೮೦ ಸಸ್ಯಶಾಸ್ತ್ರದ ವಿಶ್ವವಿಖ್ಯಾತ ವಿಜ್ಞಾನಿ, ಶ್ರೇಷ್ಠ ವ್ಯಂಗ್ಯ ಚಿತ್ರಕಾರ, ಸಾಹಿತಿ ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ (ಬಿ.ಜಿ.ಎಲ್‌.ಸ್ವಾಮಿ)ಯವರು ಹುಟ್ಟಿದ್ದು ಬೆಂಗಳೂರು. ತಂದೆ ಡಿ.ವಿ. ಗುಂಡಪ್ಪನವರು, ಕಾವ್ಯಕ್ಷೇತ್ರದ ಮೇರು ಎನಿಸಿದ್ದರೆ, ಮಗ ವಿಜ್ಞಾನ ಕ್ಷೇತ್ರದ ಶಿಖರವನ್ನು ತಲುಪಿದವರು, ತಾಯಿ ಭಾಗೀರತಮ್ಮ. ಪ್ರೌಢಶಾಲೆಗೆ ಸೇರಿದ್ದು ಬಸವನ ಗುಡಿಯ ನ್ಯಾಷನಲ್‌ ಹೈಸ್ಕೂಲು. ಇಂಟರ್ ಮೀಡಿಯೆಟ್‌ ನಂತರ ಸೆಂಟ್ರಲ್‌ ಕಾಲೇಜು. ಮನೆಯಲ್ಲಿ ಸದಾ ಸಾಹಿತ್ಯದ ವಾತಾವರಣದಿಂದ ಸ್ವಾಮಿಯವರ ಮೇಲೆ ಬೀರಿದ ಪ್ರಭಾವ. ಎ.ಆರ್. ಕೃಷ್ಣಶಾಸ್ತ್ರಿಗಳು ನೀರೆರೆದು ಪೋಷಿಸಿದವರು. ಆನರ್ಸ್ ಓದಲು ಸಸ್ಯಶಾಸ್ತ್ರ ಅಥವಾ ಪ್ರಾಣಿಶಾಸ್ತ್ರ ಯಾವುದನ್ನೂ ಆಯ್ಕೆಮಾಡಿಕೊಳ್ಳುವುದು ಎಂಬ ಸಂದಿಗ್ಧಕ್ಕೆ ಬಿದ್ದಾಗ ಎ.ಆರ್.ಕೃ. ರವರೇ ಪಕ್ಷಿಗಳನ್ನೇಕೆ ಕುಯ್ಯುತ್ತೀಯಾ? ಸಸ್ಯಶಾಸ್ತ್ರ ಆರಿಸಿಕೋ ಎಂದರಂತೆ. ಸೆಂಟ್ರಲ್‌ ಕಾಲೇಜಿನಲ್ಲಿ ಸ್ಥಾಪಿತವಾಗಿದ್ದ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದರು. ಎ.ಆರ್.ಕೃ.ಗಳ ಉತ್ತೇಜನದಿಂದಲೇ ಸ್ವಾಮಿಯವರು ವಿಜ್ಞಾನದ ಬಗ್ಗೆ ಲೇಖನಗಳನ್ನು ಬರೆಯಲು ಪ್ರಾರಂಭಿಸಿ ಬರೆದ ಮೊದಲ ಲೇಖನ ‘ಆರ್ಜಿತ ಗುಣಗಳೂ ಆನುವಂಶಿಕತೆಯೂ’ ೧೯೩೯ರಲ್ಲಿ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟವಾಯಿತು. ನಂತರ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ‘ಕನ್ನಡ ನುಡಿ’ ಗಾಗಿಯೂ ಹಲವಾರು ಲೇಖನಗಳನ್ನು ಬರೆದರು. ಇವರು ಪ್ರತಿಯೊಂದನ್ನೂ ವಿಡಂಬನ ದೃಷ್ಟಿಯಿಂದ ನೋಡುತ್ತಿದ್ದು ಸಸ್ಯಶಾಸ್ತ್ರದ ಸಂದರ್ಭವನ್ನೇ ತೆಗೆದುಕೊಂಡು ಕೆಲವು ಅಣಕವಾಡುಗಳನ್ನು ರಚಿಸಿದ್ದು ಇದು ಕೊರವಂಜಿ ಪತ್ರಿಕೆಯ ಡಾ. ಶಿವರಾಂರವರ ಗಮನಕ್ಕೆ ಬಂದು, ಅವರ ಪತ್ರಿಕೆಯಲ್ಲೂ ಪ್ರಕಟವಾಗಿದ್ದಲ್ಲದೆ ಕಾಲೇಜಿನ ವಾರ್ಷಿಕೋತ್ಸವದಲ್ಲೂ ಹಾಡಿ, ಅಭಿನಯಿಸಿ ವಿದ್ಯಾರ್ಥಿಗಳನ್ನು ರಂಜಿಸಿದರು. ಬಿ.ಎಸ್ಸಿ(ಆನರ್ಸ್) ನಂತರ ಸೇರಿದ್ದು ತಾತಾವಿಜ್ಞಾನ ಮಂದಿರ. ನಂತರ ಅರಣ್ಯ ಇಲಾಖೆಯ ಸಂಶೋಧನ ವಿಭಾಗದಲ್ಲಿ ಕೆಲಕಾಲ. ಸಂಜೆ ಸೆಂಟ್ರಲ್‌ ಕಾಲೇಜು ಅಧ್ಯಾಪಕರೊಡನೆ ಸಸ್ಯಶಾಸ್ತ್ರದ ಚರ್ಚೆ. ಮನೆಯನ್ನೇ ಸಂಶೋಧನಾಲಯವನ್ನಾಗಿಸಿ ಹಲವಾರು ಸಂಶೋಧನೆಗಳನ್ನು ನಡೆಸಿ ಬರೆದ ಪ್ರಬಂಧಗಳು ಅಮೆರಿಕ, ಇಂಗ್ಲೆಂಡ್‌ ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ೧೯೪೭ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರೇಟ್‌ ನೀಡಿತು. ಸಸ್ಯಶಾಸ್ತ್ರದ ಹೆಚ್ಚಿನ ಸಂಶೋಧನೆಗೆ (೧೯೪೭) ಆಯ್ದುಕೊಂಡದ್ದು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯ – ಪ್ರೊ. ಇರ್ವಿಂಗ್‌ ಬೈಲಿಯವರಲ್ಲಿ ಶಿಷ್ಯವೃತ್ತಿ, ಇವರು ನಡೆಸಿದ ಸಂಶೋಧನ ಲೇಖನಗಳನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಹೊಗಳಿದರು. ೧೯೫೦ರಲ್ಲಿ ಭಾರತಕ್ಕೆ ಹಿಂದಿರುಗಿದ ನಂತರ ಹಲವಾರು ಕಡೆ ಅವಕಾಶಗಳು ದೊರೆಯ ಬಹುದಾಗಿದ್ದರೂ ಆಯ್ದುಕೊಂಡದ್ದು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಾಪಕವೃತ್ತಿ. ಅಲ್ಲೇ ನಿವೃತ್ತರಾದುದು ೧೯೭೮ರಲ್ಲಿ. ಅಮೆರಿಕದಿಂದ ಹಿಂದಿರುಗಿದ ನಂತರ ಅಮೆರಿಕದ ಅನುಭವಗಳನ್ನು ಹಾಸ್ಯಮಯವಾಗಿ ಚಿತ್ರಿಸಿರುವ ಪುಸ್ತಕವೇ ‘ಅಮೆರಿಕದಲ್ಲಿ ನಾನು’. ಹತ್ತು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ದುಡಿದು ಪ್ರಾಂಶುಪಾಲರಾದರು. ಕಾಲೇಜು ದಿನಗಳಲ್ಲಿ ತಾವು ಕಂಡ ಅನುಭವದ ಚಿತ್ರಣದ ವಿಡಂಬನೆಯ ಕೃತಿಗಳೇ ತಮಿಳು ತಲೆಗಳ ನಡುವೆ, ಪ್ರಾಧ್ಯಾಪಕನ ಪೀಠದಲ್ಲಿ, ಮತ್ತು ಕಾಲೇಜು ರಂಗ. ಇವರ ಶಿಸ್ತಿನ, ಹಾಸ್ಯ ಪ್ರವೃತ್ತಿಯ, ವಿದ್ಯಾರ್ಥಿಗಳನ್ನು ಪ್ರೀತಿಸುವ ಗುಣವನ್ನೂ ಕಂಡು, ಸ್ವಾಮಿಯವರು ಕಾಲೇಜಿನ ಪ್ರಿನ್ಸಿಪಾಲರಾದಾಗ. “ಅಚ್ಚತಮಿಳಿನವನೇ ಪ್ರಿನ್ಸಿಪಾಲರಾಗಬೇಕು, ಆತ ಬ್ರಾಹ್ಮಣ, ಚೆನ್ನಾಗಿ ತಮಿಳು ಮಾತನಾಡುತ್ತಾನೆ. ನಮ್ಮ ಪೂರ್ವಿಕರನ್ನು, ಹಳೆಯ ತಮಿಳು ಸಾಹಿತ್ಯವನ್ನೂ ಲೇವಡಿ ಮಾಡುತ್ತಾನೆ” ಎಂದು ತಮಿಳು ಪ್ರಾಧ್ಯಾಪಕರೊಬ್ಬರು ದೂರಿದರಂತೆ. ಆದರೆ ಯಾರು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಶಿಷ್ಯರಿಗೆ ಸರಿಯಾಗಿ ಮಾರ್ಗದರ್ಶನ ಮಾಡಲು ಪ್ರಿನ್ಸಿಪಾಲರಾದರೆ ಸಮಯ ದೊರೆಯದೆಂದು ಪ್ರಾಧ್ಯಾಪಕರಾಗೇ ಮುಂದುವರೆದರು. ತಂದೆ ಗುಂಡಪ್ಪನವರಿಗೆ ಸಂಗೀತದಲ್ಲಿ ಆಳವಾದ ಜ್ಞಾನವಿದ್ದುದು ಮಗನಿಗೂ ಹರಿದು ಬಂದು ಸಂಗೀತ ಪ್ರೇಮಿಯಾಗಿ, ಕಿರಿಯ ವಯಸ್ಸಿನಲ್ಲಿಯೇ ವೀಣೆ ನುಡಿಸುವುದನ್ನು ಮತ್ತು ಪಿಟೀಲು ನುಡಿಸುವುದನ್ನು ರತ್ನಗಿರಿ ಸುಬ್ಬಾಶಾಸ್ತ್ರಿಗಳು ಮತ್ತು  ನಾರಾಯಣ ಸ್ವಾಮಿ ಭಾಗವತರಿಂದ ಕಲಿತಿದ್ದರು. ಎಳೆವೆಯಿಂದಲೇ ಚಿತ್ರಕಲೆಯಲ್ಲೂ ಆಸಕ್ತಿಯಿದ್ದು, ಕಲಿತು ತಮ್ಮ ಪುಸ್ತಕಗಳಿಗೆ ರೇಖಾಚಿತ್ರಗಳನ್ನು ಬಿಡಿಸಿದ್ದಾರೆ. ಪಂಚಕಳಶಗೋಪುರ, ಅಮೆರಿಕದಲ್ಲಿ ನಾನು, ಪ್ರಾಧ್ಯಾಪಕನ ಪೀಠದಲ್ಲಿ, ಹಸಿರು ಹೊನ್ನು, ಕಾಲೇಜು ತರಂಗ, ತಮಿಳುತಲೆಗಳ ನಡುವೆ ಕೃತಿಗಳಿಗೆ ತಾವೇ ವ್ಯಂಗ್ಯ ಚಿತ್ರಗಳನ್ನು ಬಿಡಿಸಿದ್ದಾರೆ. ಕಡಲಾಚೆಯಿಂದ ಬಂದ ಸಸ್ಯ, ತರಕಾರಿಗಳ ಬಗ್ಗೆ ಬರೆಯುತ್ತಾ ಮೆಣಸಿನಕಾಯಿ, ಮುಸುಕಿನ ಜೋಳ, ಟೊಮ್ಯೊಟೊ, ಕಡಲೆಕಾಯಿ, ಗೋಡಂಬಿ, ಸೀಮೆಬದನೆಕಾಯಿ, ಚಪ್ಪರಬದನೆ ಇವೆಲ್ಲವೂ ಅಮದಾದುವೆಂದು ತಿಳಿಸುತ್ತಾ ರಚಿಸಿದ ಕೃತಿ ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ’. ಇವಲ್ಲದೆ ಇವರು ರಚಿಸಿದ ಇತರ ಕೃತಿಗಳೆಂದರೆ ಫಲಶ್ರುತಿ, ದೌರ್ಗಂಧಿಕಾಪಹರಣ, ಮೀನಾಕ್ಷಿ ಸೌಗಂಧ, ಹೂವಿನಿಂದ ಕಾಯಿಗೆ, ಸಸ್ಯಪುರಾಣ, ಸಂತಾನ ರಹಸ್ಯ, ಬೃಹದಾರಣ್ಯಕ, ಶಾಸನಗಳಲ್ಲಿ ಗಿಡಗಳು, ಸಾಕ್ಷಾತ್ಕಾರದ ದಾರಿಯಲ್ಲಿ ಮುಂತಾದವುಗಳಾದರೆ ಇವರು ಬರೆದದ್ದು ಒಂದು ತಮಿಳುಕೃತಿ ‘ಬೋದೆಯಿನ್‌ ಪಾದೆಯಿಲ್‌’ ಆದರೆ, ತಮಿಳಿನಿಂದ ಅನುವಾದಿಸಿದ್ದು ನಾಲ್ಕು ಕೃತಿಗಳು-ನವತಂತ್ರದ ಕಥೆಗಳು, ನಡೆದಿಹೆ ಬಾಳೌ ಕಾವೇರಿ, ಜ್ಞಾನರಥ ಮತ್ತು ಬೆಳದಿಂಗಳಲ್ಲಿ ಅರಳಿದ ಮೊಲ್ಲೆ ಮತ್ತು ಇತರ ಪ್ರಬಂಧಗಳು. ಇಂಗ್ಲಿಷ್‌ನಲ್ಲಿ ರಚಿಸಿದ ಕೃತಿಗಳು ‘Chidambaram and Nataraja Problems and Rationalization’, Flower to Fruit, Diary of a Botanist ಮೊದಲಾದವು. ಇವರನ್ನು ಕುರಿತು ಬರೆದ ಗ್ರಂಥಗಳಾದ ಸೂ. ಸುಬ್ರಹ್ಮಣ್ಯಂ ಸಂಪಾದಿಸಿರುವ ‘ಸ್ವಾಮಿಯಾನ’, ಬಿ.ಪಿ. ರಾಧಾಕೃಷ್ಣರವರು ಬರೆದಿರುವ ‘ಬಿ.ಜಿ.ಎಲ್‌. ಸ್ವಾಮಿ’ ಮತ್ತು ಡಾ. ಮುಳುಕುಂಟೆ ರಮೇಶ್‌ರವರು ರಚಿಸಿರುವ ಕೃತಿ ‘ಬಿ.ಜಿ.ಎಲ್‌. ಸ್ವಾಮಿ’. ಬಿ.ಜಿ.ಎಲ್‌. ಸ್ವಾಮಿಯವರ ಕೃತಿಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಮುಳುಕುಂಟೆ ರಮೇಶ್‌ರವರು ‘ಆಧುನಿಕ ಗದ್ಯದ ಹಿನ್ನೆಲೆಯಲ್ಲಿ ಡಾ.ಬಿ.ಜಿ.ಎಲ್‌ ಸ್ವಾಮಿ’ ಎಂಬ ಪ್ರೌಢಪ್ರಬಂಧವನ್ನು ರಚಿಸಿ, ೨೦೦೦ದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪಡೆದಿದ್ದಾರೆ. ನಿವೃತ್ತರಾಗಿ ಬೆಂಗಳೂರಿಗೆ ಹಿಂದಿರುಗಿದ ನಂತರ ಕೆಲಕಾಲ ಇಲ್ಲಿದ್ದರು. ಮೈಸೂರು ವಿ.ವಿ.ವು ಸಂದರ್ಶಕ ಪ್ರಾಧ್ಯಾಪಕರಾಗಲು ಆಹ್ವಾನಿಸಿದಾಗ ಒಪ್ಪಿ, ವಾಸ್ತವ್ಯವನ್ನು ಮೈಸೂರಿಗೆ ಬದಲಿಸಿದರು. ಸತತ ಅಭ್ಯಾಸ, ಸಂಶೋಧನೆ, ಅಧ್ಯಾಪನದ ಕೆಲಸಗಳು, ಇವುಗಳ ಒತ್ತಡಕ್ಕೆ ಸಿಕ್ಕಿದ ಅಪೂರ್ವ ಸಾಹಿತಿ, ವಿಶಿಷ್ಟ ಸಂಶೋಧಕರಾದ ಸ್ವಾಮಿಯವರು ಬದುಕಿನಿಂದ ದೂರವಾದದ್ದು ೧೯೮೦ ರ ನವಂಬರ್ ೨ ರಂದು. ಅವರು ಮೈಸೂರಿನಲ್ಲಿ ಕಳೆದ ದಿನಗಳ, ಒಡನಾಟದ ಚಿತ್ರಣವನ್ನು ಬರೆದ ಕೃತಿಯೇ ‘ಮೈಸೂರು ಡೈರಿ’. ಅವರು ಗತಿಸಿದ ೧೪ ವರ್ಷಗಳ ನಂತರ ೧೯೯೪ರಲ್ಲಿ ಪ್ರಕಟವಾಯಿತು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸಸ್ಯ ಸಂಬಂಧಿತ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿರುವ ಸ್ವಾಮಿಯವರು ಲೆನಿನ್‌ಗ್ರಾಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಸ್ಯಶಾಸ್ತ್ರದ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ೧೯೭೫ರಲ್ಲಿ ಆಯ್ಕೆಯಾಗಿದ್ದರು. ೧೯೭೬ರಲ್ಲಿ ಬೀರ್ ಬಲ್‌ ಸಾಹ್ನಿ ಸ್ವರ್ಣಪದಕ, ೧೯೭೮ರಲ್ಲಿ ಹಸಿರು ಹೊನ್ನು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿದೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ತಂದೆ-ಮಕ್ಕಳಲ್ಲಿ ಇವರದೂ ಒಂದು ಜೋಡಿ. ತಂದೆ ಡಿ.ವಿ.ಜಿ.ಯವರಿಗೆ ಸಂದದ್ದು ‘ಶ್ರೀಮದ್ಭಗವದ್ಗೀತಾ ತಾತ್ಪರ್ಯ’ ಕೃತಿಗೆ. ೧೯೭೯-೮೦ರಲ್ಲಿ ಕನ್ನಡ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top