ಡಾ. ಬಿ.ನಂ. ಚಂದ್ರಯ್ಯ

Home/Birthday/ಡಾ. ಬಿ.ನಂ. ಚಂದ್ರಯ್ಯ
Loading Events

೧೩-೯-೧೯೩೬ ಪ್ರಾಧ್ಯಾಪಕ, ಭಾಷಾವಿಜ್ಞಾನಿ, ವಿದ್ವಾಂಸರಾದ ಚಂದ್ರಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಕೆಸ್ತೂರಿನಲ್ಲಿ. ತಂದೆ ನಂಜುಂಡಾರಾಧ್ಯ, ತಾಯಿ ಅಕ್ಕ ಹೊನ್ನಮ್ಮ. ಪ್ರಾರಂಭಿಕ ಶಿಕ್ಷಣ ಬಸಪ್ಪನ ಪಾಳ್ಯ, ಕೊರಟಗೆರೆ ಮತ್ತು ತುಮಕೂರಿನಲ್ಲಿ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಕನ್ನಡ ಮತ್ತು ಎಂ.ಎ. ಪದವಿ. ‘ಹರಿಜನರು ಮಾತನಾಡುವ ಕನ್ನಡ’ (ಮೈಸೂರು ಸುತ್ತಮುತ್ತ) ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಸಂಸ್ಕೃತ ಕೋವಿದ ಮತ್ತು ಹಿಂದಿ ರಾಷ್ಟ್ರಭಾಷಾ ಪ್ರವೀಣ ಪರೀಕ್ಷೆಗಳಲ್ಲೂ ತೇರ್ಗಡೆ. ಉದ್ಯೋಗಕ್ಕಾಗಿ ಸೇರಿದ್ದು ಶ್ರೀ ಜಗದ್ಗುರು ರೇಣುಕಾಚಾರ‍್ಯ ಕಾಲೇಜು, ತಿಪಟೂರಿನ ಕಲ್ಪತರು ಕಾಲೇಜುಗಳಲ್ಲಿ ಕನ್ನಡ-ಹಿಂದಿ ಉಪನ್ಯಾಸಕರಾಗಿ, ೧೯೬೫ರಲ್ಲಿ ಯುವರಾಜ, ಮಹಾರಾಜ ಕಾಲೇಜುಗಳಲ್ಲಿ, ಮಂಡ್ಯ ಸ್ನಾತಕೋತ್ತರ ಕೇಂದ್ರದಲ್ಲಿ ರೀಡರ್ ಆಗಿ, ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಡನೆ ಪ್ರಾರಂಭದಿಂದಲೂ ಒಡನಾಟ. ಮೈಸೂರಿನ ಐಟಿಐ, ಐ.ಎ.ಎಸ್., ಐ.ಪಿ.ಎಸ್. ಅಕಾರಿಗಳಿಗೆ ಮತ್ತು ಹಲವಾರು ಇಲಾಖೆಯವರಿಗೆ ಆಡಳಿತದಲ್ಲಿ ಕನ್ನಡ ಬಳಸುವ ಬಗ್ಗೆ ತರಬೇತಿ. ಜರ್ಮನಿಯ ಸ್ಟುಟ್‌ಗರ್ಟ್‌ನ ಕೊಲ್ನ್ ವಿಶ್ವವಿದ್ಯಾಲಯ, ಅಮೆರಿಕದ ಬಾಸ್ಟನ್ ವಿಶ್ವವಿದ್ಯಾಲಯದ ಸಮ್ಮೇಳನ, ಭೂಪಾಲ್‌ನಲ್ಲಿ ನಡೆದ ಸಮ್ಮೇಳನ ಮುಂತಾದುವುಗಳಲ್ಲಿ ಪ್ರಬಂಧ ಮಂಡನೆ. ರಚಿಸಿದ ಕೃತಿಗಳು ಸುಮಾರು ೬೦ಕ್ಕೂ ಹೆಚ್ಚು. ಕಾದಂಬರಿ-ಚಿತ್ರಲೇಖಾ, ಮಲ್ಲಿಕಾ, ಆಲದ ನೆರಳು. ಕಥಾಸಂಕಲನ-ಬುದ್ಧನ ಜಾತಕ ಕಥೆಗಳು. ನಾಟಕಗಳು-ಸ್ಕಂದ ಗುಪ್ತ, ವಿಕ್ರಮಾದಿತ್ಯ, ರಾಜ್ಯಶ್ರೀ, ಧ್ರುವ ಸ್ವಾಮಿನಿ, ಕಿತ್ತೂರುರಾಣಿ ಚೆನ್ನಮ್ಮ. ಷಟ್ಪದಿಯ ಖಂಡ ಕಾವ್ಯಗಳು-ನೀಲಾಂಬಿಕೆಯ ಸಂದೇಶ, ಅಂಬಲಿಯ ಜಂಗಮ, ಅಕ್ಬರ್ ತಾನ್‌ಸೇನ್, ಯೇಸುವಿನ ಬಿತ್ತು ಬೀಜ, ಶತಮಾನಂ ಭವತಿ (ಷಟ್ಪದಿಯ ವಚನ, ಚುಟುಕ, ಭಾವಗೀತೆಗಳ ಸಮಗ್ರ ಕಾವ್ಯ), ಆಯುಃ ಪರಿಮಿತಿ ಮೊದಲಾದುವು. ಕವನ ಸಂಗ್ರಹ-ಅಲೆ. ಜೀವನ ಚರಿತ್ರೆ-ಚನ್ನಬಸವಾಂಕ, ಮಹಾದೇವಿಯಕ್ಕ, ಯಜಮಾನ ವೀರ ಸಂಗಪ್ಪನವರು, ಡಾ. ಜ.ಚ.ನಿ, ಜಸ್ಟಿಸ್ ಟಿ.ಎನ್. ಮಲ್ಲಪ್ಪನವರು ಮುಂತಾದುವು. ಗೌರವ ಪ್ರಶಸ್ತಿಗಳು-ಡಾ. ಜ.ಚ.ನಿ. ವಿದ್ಯಾಸಂಸ್ಥೆಯಿಂದ ಭಾರತೀಯ ಭಾಷಾ ವಿಜ್ಞಾನಿ ಪ್ರಶಸ್ತಿ, ಅಲಹಾಬಾದ್ ಸಂಸ್ಥೆಯಿಂದ ಸಾಹಿತ್ಯ ಮಹೋಪಾಧ್ಯಾಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ದೇವಾಂಗ ಮಹಾಸಂಸ್ಥಾನ ಮಠದಿಂದ ಕನ್ನಡ ಸಾಹಿತ್ಯರತ್ನ ಪ್ರಶಸ್ತಿ ಮುಂತಾದುವು. ಅರ್ಪಿಸಿದ ಗೌರವಗ್ರಂಥ ‘ಸಮನ್ವಯ’ ಮತ್ತು ‘INDIAN ALTERNATIVES IN LINGUISTICS’ ಎಂಬ ಗ್ರಂಥಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ರೋಹಿತ ದಾಸ ಮಹಾಲೆ – ೧೯೩೪ ಕೆ.ಪಿ. ಪುತ್ತೂರಾಯ – ೧೯೪೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top