ಡಾ. ಬಿ.ವಿ. ವೈಕುಂಠರಾಜು

Home/Birthday/ಡಾ. ಬಿ.ವಿ. ವೈಕುಂಠರಾಜು
Loading Events

೧೫..೧೯೩೭ ೩೦..೨೦೦೯ ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ – ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ತಮ್ಮದೇ ಆದ ಸಿದ್ಧಾಂತದ ಕಟ್ಟುಪಾಡಿಗೆ ಒಳಗಾಗಿ ನೇರಮಾತಿನ, ಯಾರ ಹಂಗಿಗೂ ಒಳಗಾಗದ, ದಿಟ್ಟ ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದ ವೈಕುಂಠರಾಜುರವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ, ಚಿತ್ರದುರ್ಗ ತಾಲ್ಲೂಕಿನ ಗುಡ್ಡದ ರಂಗವ್ವನ ಹಳ್ಳಿಯಲ್ಲಿ ೧೯೩೭ ರ ಮೇ ೧೫ ರಂದು. ತಂದೆ ವೆಂಕಟರಮಣಪ್ಪ, ತಾಯಿ ಚೌಡಮ್ಮ. ಹುಟ್ಟಿದೂರಿನಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ. ಜಗಳೂರಿನಲ್ಲಿ ಮಾಧ್ಯಮಿಕ ಶಾಲೆ, (ಜಗಳೂರಿನಲ್ಲಿ ಇವರ ತಾಯಿ ಶಿಕ್ಷಕಿಯಾಗಿದ್ದರು), ಹೈಸ್ಕೂಲಿಗೆ ಸೇರಿದ್ದು ಚಿತ್ರದುರ್ಗದ ಮುನಿಸಿಪಲ್‌ ಹೈಸ್ಕೂಲು. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಓದುವ ಹುಚ್ಚು. ಗುಡ್ಡದ ರಂಗವ್ವನಹಳ್ಳಿ ಶಾಲೆಗೆ ಬರುತ್ತಿದ್ದ ಚೆನ್ನಪ್ಪ ಎಂಬ ಮಾಸ್ತರು ಚಿತ್ರದುರ್ಗದಿಂದ ತರುತ್ತಿದ್ದ ವಿಶ್ವಕರ್ನಾಟಕ ಪತ್ರಿಕೆಯನ್ನು ಇವರಿಗೆ ಕೊಟ್ಟು ‘ನಿನಗೆ ಪಾಠ ಹೇಳೋ ಅವಶ್ಯಕತೆಯಿಲ್ಲ ಪೇಪರ್ ಓದು’ ಎಂದು ಕೊಡುತ್ತಿದ್ದರಂತೆ. ಜಗಳೂರಿನಲ್ಲಿ ಮಾಧ್ಯಮಿಕ ಶಾಲೆಗೆ ಸೇರಿದಾಗಲೂ ಅಲ್ಲಿ ಸಿಗುತ್ತಿದ್ದ ಚಂದಮಾಮ, ಬಾಲಮಿತ್ರ ಪತ್ರಿಕೆಗಳ ಕಾಯಂ ಓದುಗ. ಚಿತ್ರದುರ್ಗದಲ್ಲಿ ಹೈಸ್ಕೂಲಿಗೆ ಸೇರಿದಾಗ ಅಲ್ಲಿನ ಪುಸ್ತಕ ಭಂಡಾರದಲ್ಲಿದ್ದ ಎಲ್ಲ ಪುಸ್ತಕಗಳನ್ನೂ ಓದಿ ಮುಗಿಸಿದ್ದರು. ಇಂಟರ್ ಮೀಡಿಯೆಟ್‌ ಓದಿದ್ದು ಚಿತ್ರದುರ್ಗದಲ್ಲಿ. ಬಿ.ಎ. ಆನರ್ಸ್ ಹಾಗೂ ಎಂ.ಎ. ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಿಂದ ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಲ್‌ ಪದವಿ. ಉದ್ಯೋಗಕ್ಕಾಗಿ ಸೇರಿದ್ದು ತುಮಕೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಾಪಕರಾಗಿ (೧೯೬೦-೬೧) ಕೆಲಕಾಲ. ಪತ್ರಿಕೋದ್ಯಮವನ್ನೂ ಆಯ್ಕೆಮಾಡಿಕೊಂಡು ಸೇರಿದ್ದು ‘ತಾಯಿನಾಡು’ಪತ್ರಿಕೆ. ನಂತರ ಸೇರಿದ್ದು ಪ್ರಜಾವಾಣಿ ದಿನಪತ್ರಿಕೆಗೆ ೧೯೬೪ ರ ಜೂನ್‌ನಲ್ಲಿ, ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ. ಜಿ.ಎಸ್‌. ಸದಾಶಿವರೊಡಗೂಡಿ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಗೊಂದು ವಿಶೇಷ ಘನತೆಯನ್ನೂ ತಂದುಕೊಟ್ಟರು. ನವ್ಯ ಕಥೆಗಳು, ನವ್ಯ ಕವನಗಳು ಪ್ರಕಟವಾಗಲು ಮುಕ್ತ ಅವಕಾಶವನ್ನು ಕಲ್ಪಿಸಿದರು. ಹೀಗೆ ಸಾಪ್ತಾಹಿಕ ಪುರವಣಿಯಲ್ಲಿ ಒಂದು ಕವನ ಪ್ರಕಟಗೊಂಡರೆ A Poet is born ಎನ್ನುವ ಸ್ಥಿತಿಯನ್ನು ಪ್ರಜಾವಾಣಿ ಪತ್ರಿಕೆಯ ಮುಖಾಂತರ ನಿರ್ಮಿಸಿದರು. ನವೋದಯ ಹಾಗೂ ಪ್ರಗತಿಶೀಲ ಮಾರ್ಗದಲ್ಲಿ ಬರವಣಿಗೆಗಳು ಕೊಂಚ ನಿಸ್ತೇಜಗೊಂಡ ಸಂದರ್ಭದಲ್ಲಿ ಅಡಿಗರು ಪ್ರತಿಮೆಗಳನ್ನು ಉಪಯೋಗಿಸಿ ಸಂಕೀರ್ಣವಾಗಿ ಪದ್ಯ ಬರೆಯತೊಡಗಿದಾಗ ಅಡಿಗರ ‘ಪ್ರಾರ್ಥನೆ’ ಕವನ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಗೊಂಡು ಸಾಹಿತ್ಯಾಸ್ತಕರ ಗಮನಸೆಳೆಯಿತು. ವೈಎನ್‌ಕೆಯವರೂ ಪ್ರಜಾವಾಣಿಯಲ್ಲಿಯೇ ಇದ್ದು ವೈಕುಂಠರಾಜುರವರೊಡನೆ ಮಾತನಾಡುತ್ತಾ ನೀವೇಕೆ ಕಾದಂಬರಿ ಬರೆಯಬಾರದು? ಎಂದದ್ದೇ ತಡೆ ಹಿಡಿದ ಕೆಲಸವನ್ನು ಹಠತೊಟ್ಟು ಸಾಧಿಸುವ ರಾಜುರವರು ಬರೆದ ಮೊದಲ ಕಾದಂಬರಿ ‘ಅಂತ್ಯ’ ಪ್ರಕಟಗೊಂಡು ಸಾಹಿತ್ಯಾಸ್ತಕರ ಗಮನ ಸೆಳೆಯಿತು. ರಾಜುರವರು ವಿಪರೀತ ಹಠದ ಸ್ವಭಾವದವರು. ಏನಾದರು ಬರೆಯಬೇಕೆನಿಸಿದಾಗ ಬರೆದು ಮುಗಿಸುವ ತನಕ ವಿರಮಿಸದ ಜೀವ. ಹಠವೆಂಬುದು ಅವರಿಗೆ ರಕ್ತಗತವಾಗಿ ಬಂದಿದ್ದು ಕೆಲವು ಸಾರೆ ಒಳ್ಳೆಯದು ಆಗಿದೆ, ಕೆಟ್ಟದ್ದೂ ಆಗಿದೆಯಂತೆ (ಬಿ.ವಿ.ವೈ. ಮಾತುಗಳು. ‘ತಹತಹ’ ಆತ್ಮಕತೆಯಿಂದ) ಅಂತ್ಯ ಕಾದಂಬರಿ ಓದಿದ ಶಾಂತಿನಾಥ ದೇಸಾಯಿಯವರು ‘A Novelist is born’ ಎಂದಿದ್ದರಂತೆ. ಓದುಗರಿಂದಲೂ ಒಳ್ಳೆಯ ಅಭಿಪ್ರಾಯ ಬಂದು ಐದು ಮುದ್ರಣಗಳನ್ನು ಕಂಡ ಕಾದಂಬರಿ ಎನಿಸಿತು. ಸಾಪ್ತಾಹಿಕ ಪುರವಣಿಗಾಗಿ ನಾಟಕಗಳನ್ನು ವಿಮರ್ಶೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಜುರವರು ಠೀಕೆ ಮಾಡಿದಾಗ, ಕಲಾಕ್ಷೇತ್ರದಲ್ಲಿ ಪ್ರದರ್ಶನವಾಗುವ ನಾಟಕಗಳನಷ್ಟೇ ವಿಮರ್ಶೆ ಮಾಡುತ್ತಾರೆ, ಠೀಕಿಸುತ್ತಾರೆ. ಬೆಂಗಳೂರಿನ ಹೊರಗೆ ನಾಟಕಗಳೇ ನಡೆಯುವುದಿಲ್ಲವಾ? ಅವರೊಂದು ನಾಟಕ ಬರೆಯಲಿ’ ಎಂದು ಕುಹಕವಾಡಿದಾಗ ಸವಾಲಿನಂತೆ ಸ್ವೀಕರಿಸಿದ ರಾಜುರವರು ಬರೆದ ಮೊದಲ ನಾಟಕ ‘ಸಂದರ್ಭ’ ಇದು ಕನ್ನಡದ ಮೊಟ್ಟಮೊದಲ ರಾಜಕೀಯ ನಾಟಕವೆನಿಸಿದ್ದು, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಶಿಕ್ಷಣಪಡೆದು ಬಂದಿದ್ದ ಅಶೋಕ ಬಾದರದಿನ್ನಿಯವರು ಈ ನಾಟಕವನ್ನು ರಂಗಸಂಪದ ತಂಡಕ್ಕಾಗಿ ನಿರ್ದೇಶಿಸಿದರು. ಈ ನಾಟಕದಲ್ಲಿ ರಾಜುರವರು ಮುಖ್ಯ ಪಾತ್ರವನ್ನು ವಹಿಸಿದ್ದರು. ನಾಟಕ ಅಕಾಡಮಿಯ ಅಧ್ಯಕ್ಷರಾದಾಗ (೧೯೮೭-೮೯) ‘ರಂಗಚೈತ್ರೋತ್ಸವ’ ಎಂಬ ಹೆಸರಿನಿಂದ ೩೦ ದಿನಗಳ ಕಾಲ ನಾಟಕಗಳ ಪ್ರದರ್ಶನವನ್ನೇರ್ಪಡಿಸಿದ್ದು ಇಪ್ಪತ್ತಕ್ಕೂ ಹೆಚ್ಚು ಹೊರಗಿನ ತಂಡಗಳು ಭಾಗವಹಿಸುವಂತೆ ಮಾಡಿದರು. ೧೯೮೩ರ ಮಧ್ಯಭಾಗದಲ್ಲಿ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಿಂದ ಚೀಫ್‌ ಫೀಚರ್ ರೈಟರ್ ಎಂಬ ಹುದ್ದೆಗೆ ವರ್ಗ ಮಾಡಿದಾಗ ಸ್ವತಂತ್ರವಾಗಿ ಒಂದು ಪತ್ರಿಕೆಯನ್ನು ಏಕೆ ಪ್ರಾರಂಭಿಸಬಾರದು ಎಂಬ ಯೋಚನೆ ಮನಸ್ಸಿಗೆ ಬಂದದ್ದೇ ತಡ ಪತ್ರಿಕೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸತೊಡಗಿದರು. ೧೯೮೪ ರ ಜನವರಿ ೨೪ ರಂದು ‘ವಾರ ಪತ್ರಿಕೆ’ ಎಂಬ ಹೆಸರಿನಿಂದ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಮುಂದಾಗಿಯೇ ಏಜೆಂಟರುಗಳು ನೀಡಿದ ಠೇವಣಿ ಹಣವೂ ಒಂದು ಭಾಗದ ಬಂಡವಾಳವಾಗಿ, ಪತ್ರಿಕೆಯು ಜನಪ್ರಿಯ ಪತ್ರಿಕೆಯಾದ ನಂತರ ಸಾಹಿತ್ಯ ಪತ್ರಿಕೆಯೊಂದನ್ನು ಪ್ರಾರಂಭಿಸಬೇಕೆಂಬ ಆಸೆಯಿಂದ ‘ರಾಜುಪತ್ರಿಕೆ’ ಎಂಬ ಮತ್ತೊಂದು ಪತ್ರಿಕೆಯನ್ನೂ ಪ್ರಾರಂಭಿಸಿದರು. ಆದರೆ ಸಾಹಿತ್ಯ ಪತ್ರಿಕೆ ನಿರೀಕ್ಷಿಸಿದ ಫಲಕೊಡದಾದಾಗ ಇದನ್ನೇ ಕ್ರೀಡಾ ಪತ್ರಿಕೆಯಾಗಿ ಮಾರ್ಪಡಿಸಿದರು. ಹೀಗೆ ಕ್ರೀಡಾಪತ್ರಿಕೆಯು ದಕ್ಷಿಣ ಭಾರತದಲ್ಲೇ ಪ್ರಕಟಗೊಂಡ (೩೨ ಪುಟಗಳ) ಮೊಟ್ಟ ಮೊದಲ ಪತ್ರಿಕೆಯಾಗಿತ್ತು. ವಾರಪತ್ರಿಕೆ ಮತ್ತು ರಾಜು ಪತ್ರಿಕೆಗಳಿಗೆ ದೊರೆತ ಉತ್ತೇಜನದಿಂದ ಯಶಸ್ಸಿನ ಅಲೆಯಮೇಲೆ ತೇಲುತ್ತಾ ಹೋದಂತೆ ಸ್ತ್ರೀಯರಿಗಾಗಿ ಒಂದು ಪತ್ರಿಕೆಯನ್ನೇಕೆ ಪ್ರಾರಂಭಿಸಬಾರದೆನಿಸಿದಾಗ ಪ್ರಾರಂಭವಾದದ್ದು ‘ಹರಿಣಿ’ ಎಂಬ ಪತ್ರಿಕೆ. ಆದರೆ ಈ ಪತ್ರಿಕೆ ಆರ್ಥಿಕವಾಗಿ ಯಶಸ್ಸು ಸಾಧಿಸಲಾಗದೆ ನಿಲ್ಲಿಸಬೇಕಾಯಿತು. ಪತ್ರಿಕಾರಂಗದಲ್ಲಿ ಯಶಸ್ಸು ಕಂಡ ರಾಜು ಅವರ ಪುತ್ರ ಸನತ್‌ಕುಮಾರ್ ಕೂಡಾ ಪತ್ರಿಕೆಗಾಗಿ ದುಡಿಯತೊಡಗಿದ್ದರು. ಅಚಾನಕವಾಗಿ ಪ್ರಕಾಶ್‌ ರೋಡ್‌ಲೈನ್ಸ್‌ನ ಪ್ರಕಾಶ್‌ ಮನ್‌ಚಂದ್‌ರವರ ಪರಿಚಯವಾಗಿ ಅವರೆ ಪತ್ರಿಕೆ ಪ್ರಾರಂಭಿಸಲು ಪ್ರೇರೇಪಿಸಿದರು. ಅದರಂತೆ ಮಗ ಸನತ್‌ಕುಮಾರ್ ಮತ್ತು ಪ್ರಕಾಶ್‌ಮನ್‌ಚಂದ್‌ರೊಡನೆ ಪ್ರಾರಂಭಿಸಿದ್ದು ‘ಗೋಧೂಳಿ’ ಎಂಬ ಸಂಜೆಪತ್ರಿಕೆ. ಆದರೆ ಕಾರಣಾಂತರದಿಂದ ಕೆಲದಿನಗಳಲ್ಲೇ ಈ ಪತ್ರಿಕೆ ನಿಲ್ಲಿಸಬೇಕಾಗಿ ಬಂತು. ಯಾವುದೇ ಕೆಲಸವನ್ನು ಹಿಡಿದರೂ ಛಲಬಿಡದೆ ಸಾಧಿಸುವ ಗುಣವಿದ್ದುದರಿಂದಲೇ ಸವಾಲಾಗಿ ಸ್ವೀಕರಿಸಿ ಬರೆದ ಮೊದಲ ಕಾದಂಬರಿ ‘ಅಂತ್ಯ’, ನಾಟಕ ‘ಸಂದರ್ಭ’. ನಂತರ ಬರೆದ ಕಾದಂಬರಿಗಳು ಆಕ್ರಮಣ, ಉದ್ಭವ, ಪರ್ಯಟನ ಮತ್ತು ಬಲಿ. ಉದ್ಭವ ಕಾದಂಬರಿಯು ತೆಲುಗು, ಹಿಂದಿ, ಮಲಯಾಳಂ ಭಾಷೆಗೂ ಅನುವಾದುದಲ್ಲದೆ ನಾಟಕ ರೂಪಕ್ಕೂ ಅಳವಡಿಸಿದವರು ಅದೇ ತಾನೇ ಎನ್‌.ಎಸ್‌.ಡಿ.ಯಿಂದ ಪದವೀಧರರಾಗಿ ಬಂದಿದ್ದ ಶ್ರೀನಿವಾಸ ಪ್ರಭುರವರು. ನಾಟಕ ಪ್ರದರ್ಶನಗಳೂ ನಡೆದವು. ನಂತರ ರಾಜುರವರೇ ಪುನಃ ಹೊಸದಾಗಿ ನಾಟಕಕ್ಕೆ ಅಳವಡಿಸಿ ರಂಗದ ಮೇಲೆ ತಂದರು. ಅದೂ ಯಶಸ್ವಿಯಾಯಿತು. ಹೀಗೆ ಒಂದು ಕಾದಂಬರಿ ಮೂರು ಭಾಷೆಗಳಿಗೆ ಅನುವಾದಗೊಂಡಿದ್ದಲ್ಲದೆ ನಾಟಕಕ್ಕೂ ರೂಪಾಂತರಗೊಂಡು, ೧೯೯೦ರಲ್ಲಿ ಕೋಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ಚಲನಚಿತ್ರವಾಗಿಯೂ ಯಶಸ್ಸು ಪಡೆಯಿತು. ಇದೇ ಸಂದರ್ಭದಲ್ಲಿ ರಚಿಸಿದ ಇತರ ಎರಡು ನಾಟಕಗಳೆಂದರೆ ‘ಸನ್ನಿವೇಶ’ ಮತ್ತು ‘ಕಾನನ್‌ ದೇವಿ’. ವಾರಪತ್ರಿಕೆಯ ಮಧ್ಯದ ಪುಟದಲ್ಲಿ ಬರೆಯುತ್ತಿದ್ದ ಸಂಪಾದಕರ ಡೈರಿಯಲ್ಲಿ ಪ್ರಸ್ತುತ ವಿಷಯಗಳು ವಸ್ತು ನಿಷ್ಠ ವಿಶ್ಲೇಷಣೆಯಿಂದ ಕೂಡಿದ್ದು, ಸಂಪಾದಕರ ಡೈರಿ ಓದಲೆಂದೇ ಪತ್ರಿಕೆಯನ್ನು ಕೊಳ್ಳುವವರೂ ಇದ್ದರೆಂದರೆ ಅವರು ಬರೆಯುತ್ತಿದ್ದ ತಲಸ್ಪರ್ಶಿ ಸಂಪಾದಕೀಯ ಬರವಣಿಗೆಯ ಮೌಲ್ಯ ಅರ್ಥವಾದೀತು. ಈ ಸಂಪಾದಕೀಯ ಲೇಖನಗಳು ಪುಸ್ತಕ ರೂಪದಲ್ಲೂ ಪ್ರಕಟಗೊಂಡಿದ್ದು ೧೯೮೪, ೮೫, ೮೬ ರ ಡೈರಿಗಳು ಪ್ರಕಟಗೊಂಡ ನಂತರ ೧೯೮೭, ೮೮, ೮೯ರ ಸಮಗ್ರ ಡೈರಿಗಳೂ ಪ್ರಕಟಗೊಂಡವು. ಪ್ರಸಕ್ತ ವಿಷಯಗಳನ್ನೇ ತೆಗೆದುಕೊಂಡು ಬರೆದ ಮಿನಿಕತೆಗಳು ‘ಆಧುನಿಕ ನೀತಿಕತೆಗಳು’ ಎಂಬ ಕಾಲಂನಿಂದ ಪತ್ರಿಕೆಯಲ್ಲಿ ಪ್ರಕಟಗೊಂಡ ನಂತರ ‘ಸಂನ್ಯಾಸಿ ಕುಂಕುಮ ಮತ್ತು ಇತರ ನೂರು ಆಧುನಿಕ ನೀತಿಕತೆಗಳು’, ‘ನಿರ್ಲಿಪ್ತ’, ‘ಅದಲು-ಬದಲು’ ಮತ್ತು ‘ವಂಚಕರ ಪ್ರಪಂಚದ ಹನಿಕತೆಗಳು’ ಎಂಬ ಹೆಸರಿನಿಂದ ಪ್ರಕಟಗೊಂಡಿದೆ. ಇವಲ್ಲದೆ ಪ್ರೊ.ಡಿ.ಎಲ್‌. ನರಸಿಂಹಾಚಾರ್, ನಾಟಕರತ್ನ ಗುಬ್ಬಿವೀರಣ್ಣ, ಟಿ.ಎಸ್ಸಾರ್ರವರುಗಳ ಬಗ್ಗೆ ಬರೆದ ಜೀವನ ಚರಿತ್ರೆಗಳು, ಕರ್ನಾಟಕ ನಾಟಕ ಅಕಾಡಮಿಗಾಗಿ ‘ಸಂಸ ನಾಟಕಗಳು’, ಕರ್ನಾಟಕ ಸಾಹಿತ್ಯ ಅಕಾಡಮಿಗಾಗಿ ‘೧೯೭೯ರ ಕತೆಗಳು’, ಮಾಸ್ತಿ ಯವರಿಗಾಗಿ ‘ಹದಿನೈದು ಕತೆಗಳು’ ಮುಂತಾದವುಗಳನ್ನು ಸಂಪಾದಿಸಿದ್ದಾರೆ. ವಿಮರ್ಶಾ ಲೇಖನಗಳ ಸಂಗ್ರಹ ‘ಸಾಹಿತ್ಯ ಸಂವಾದ’. ೫೦ ವರುಷಗಳ ಕನ್ನಡ ಚಿತ್ರರಂಗದ ಇತಿಹಾಸ ಹೇಳುವ ‘ಸಿನಿಮಾತು’. ಸಪ್ತಶೃಂಗ (ವ್ಯಕ್ತಿಚಿತ್ರ), ಸ್ಪಂದನ (ಸಂಕೀರ್ಣಕೃತ) ಸೇರಿ ಒಟ್ಟು ೩೦ ಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ೨೦೦೧ರಲ್ಲಿ ಖಾಯಿಲೆಗೆ ತುತ್ತಾಗಿ ಸುಧಾರಿಸಿಕೊಂಡರೂ ಪುನಃ ೨೦೦೩ರಲ್ಲಿ ಮತ್ತೆ ಅನಾರೋಗ್ಯ ಕಾಡಿದಾಗ ಪತ್ರಿಕೆಯನ್ನೂ ನಿಲ್ಲಿಸಬೇಕಾಯಿತು. ಚೇತರಿಸಿಕೊಂಡ ನಂತರ ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯನಿರ್ವಹಿಸಿದರು. ಒಂದು ಶತಮಾನದ ಕನ್ನಡ ರಂಗಭೂಮಿಯ ಇತಿಹಾಸವನ್ನು ದಾಖಲಿಸಿ ಬರೆದ ‘ಕನ್ನಡ ರಂಗಭೂಮಿ’ ಕೃತಿಗೆ ಮೈಸೂರು ವಿಶ್ವವಿದ್ಯಾಲಯದಿಂದ ದೊರೆತ ಡಿ.ಲಿಟ್‌.ಪದವಿ, ಮಂಗಳೂರಿನ ಸಂದೇಶ ಪ್ರಶಸ್ತಿ, ೧೯೯೭ರಲ್ಲಿ ಪತ್ರಿಕಾ ಅಕಾಡಮಿ ಪ್ರಶಸ್ತಿ, ೨೦೦೧ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೨೦೦೯ರಲ್ಲಿ ಟಿಎಸ್ಸಾರ್ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕೃತರಾದ ವೈಕುಂಠರಾಜುರವರು ಪತ್ರಿಕೋದ್ಯದಿಂದ ದೂರವಾದದ್ದು ೨೦೦೯ ರ ಜನವರಿ ೩೦ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top