ಡಾ. ಬಿ.ಸಿ. ರಾಮಚಂದ್ರಶರ್ಮ

Home/Birthday/ಡಾ. ಬಿ.ಸಿ. ರಾಮಚಂದ್ರಶರ್ಮ
Loading Events

೨೮-೧೧-೧೯೨೫ ೧೮-೪-೨೦೦೫ ನವ್ಯ ಸಾಹಿತ್ಯದ ಪ್ರವರ್ತಕರಲ್ಲೊಬ್ಬರಾದ ರಾಮಚಂದ್ರಶರ್ಮರು ಹುಟ್ಟಿದ್ದು ಮುಂಬಯಿಯಲ್ಲಾದರೂ ಶರ್ಮರ ಪೂರ್ವಿಕರು ನಾಗಮಂಗಲ ತಾಲ್ಲೂಕಿನ ಬೋಗಾದಿಯವರು. ತಂದೆ ಚಂದ್ರಶೇಖರ ಶರ್ಮ, ತಾಯಿ ಲಕ್ಷ್ಮಿದೇವಮ್ಮ. ಪ್ರಾರಂಭಿಕ ಶಿಕ್ಷಣ ಮುಂಬಯಿ, ಬೆಂಗಳೂರು ಪ್ರೌಢಶಾಲೆ, ಮೈಸೂರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ವಿಜ್ಞಾನ ಪದವಿ. ಬಿ.ಎಡ್ ಪದವಿ ಪಡೆದದ್ದು ಮೈಸೂರು. “ವಲಸೆ ಹೋದ ಭಾರತದ ಮಕ್ಕಳ ಬುದ್ಧಿಮಾಂದ್ಯ”ದ ಬಗ್ಗೆ ಮಹಾಪ್ರಬಂಧ ಮಂಡಿಸಿ ಲಂಡನ್ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಚಿಕ್ಕಪ್ಪ ಎಂ.ವಿ.ಸೀ.ಯವರ ಶಿಫಾರಸ್ಸಿನ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ. ಕನ್ನಡ-ಇಂಗ್ಲಿಷ್ ನಿಘಂಟು ಕಚೇರಿಯಲ್ಲಿ ಕೆಲಕಾಲ ಕಾರ್ಯ ನಿರ್ವಹಣೆ. ಆಗ ಸಾಹಿತ್ಯ ಪರಿಷತ್ತಿಗೆ ಬಂದು ಹೋಗುತ್ತಿದ್ದ ಸಾಹಿತ್ಯ ದಿಗ್ಗಜರಾದ ಬಿ.ಎಂ.ಶ್ರೀ, ಕ.ವೆಂ.ರಾ, ಎಂ.ಆರ್.ಶ್ರೀ, ಎಲ್.ಗುಂಡಪ್ಪ ಮುಂತಾದವರ ಪರಿಚಯ. ಪರಿಷತ್ತಿನ ಆಶ್ರಯದಲ್ಲಿ ನಡೆದ ಆಶುಕವಿತಾ ಸ್ಪರ್ಧೆಯಲ್ಲಿ ಶರ್ಮರು ಬರೆದ ರೋಜಾ-ಸರೋಜ ಕವನಕ್ಕೆ ಪ್ರಥಮ ಬಹುಮಾನ. ‘ಭವಿಷ್ಯದ ಉಜ್ವಲ’ ಕವಿಗೆ ಎಂದು ಬೇಂದ್ರೆಯವರು ಬರೆದ ಹಾರೈಕೆ. ಇದು ಕಾವ್ಯ ಲೋಕಕ್ಕೆ ಶರ್ಮರು ಹಾಡಿದ ನಾಂದಿ. ಉದ್ಯೋಗವನ್ನರಸಿ ಪತ್ನಿಯೊಡನೆ ೧೯೫೮ರಲ್ಲಿ ವಿದೇಶ ಪ್ರಯಾಣ. ಇಥಿಯೋಪಿಯಾ, ಇಂಗ್ಲೆಂಡ್, ಜಾಂಬಿಯಾ, ಮಲಾವಿ ಮುಂತಾದ ದೇಶಗಳಲ್ಲಿ ಸಂಚರಿಸಿ ವಹಿಸಿದ ವಿವಿಧ ಹುದ್ದೆಗಳು. ತಾಯ್ನಾಡಿನ ಸೆಳೆತಕ್ಕೊಳಗಾಗಿ ೧೯೮೨ರಲ್ಲಿ ಬೆಂಗಳೂರಿನತ್ತ. ಹಲವಾರು ಕವನ ಸಂಕಲನಗಳು ಪ್ರಕಟಿತ. ಹೃದಯಗೀತ, ಏಳು ಸುತ್ತಿನ ಕೋಟೆ, ಬುವಿ ನೀಡಿದ ಸೂರ್ತಿ, ಹೇಸರಗತ್ತೆ, ಬ್ರಾಹ್ಮಣ ಹುಡುಗ, ಮಾತು-ಮಾಟ, ದೆಹಲಿಗೆ ಬಂದ ಹೊಸವರ್ಷ, ಸಪ್ತನದಿ, ಸಮಗ್ರ ಕಾವ್ಯ ಪ್ರಕಟಿತ. ಕಥಾಸಂಕಲನ-ಮಂದಾರ ಕುಸುಮ, ಏಳನೆಯ ಜೀವ, ಬೆಳಗಾಯಿತು,. ಕತೆಗಾರನ ಕತೆ, ನಲವತ್ತು ಕಥೆಗಳು. ನಾಟಕಗಳು-ಸೆರಗಿನ ಕೆಂಡ, ನೆರಳು, ಬಾಳ ಸಂಜೆ, ನೀಲಿ ಕಾಗದ, ವೈತರಣಿ. ಇತರ-ಮಕ್ಕಳ ಬುದ್ಧಿಶಕ್ತಿ ಮತ್ತು ಪರಿಸರ, ಕಾರಂಜಿ, ಪ್ರತಿಭಾ ಸಂದರ್ಶನ. ಅನುವಾದ-ಈ ಶತಮಾನದನೂರು ಇಂಗ್ಲಿಷ್ ಕವನಗಳು. ಇಂಗ್ಲಿಷ್‌ನಲ್ಲಿ- GESTURES, THE MAN AND HIS WORKS, FROM KAVERI TO GODAVARI, MASTI, THE HOUSE OF KANOORU. ಸಂದ ಪ್ರಶಸ್ತಿಗಳು. ಸೆರಗಿನ ಕೆಂಡ ನಾಟಕಕ್ಕೆ ಭಾರತ ಸರಕಾರದ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಗೌರು ಭಟ್ – ೧೯೩೪ ಎಂ.ಎಂ. ಕಲಬುರ್ಗಿ – ೧೯೩೮ ಚಿ. ಶ್ರೀನಿವಾಸರಾಜು – ೧೯೪೨ ಎಸ್. ದಿವಾಕರ್ – ೧೯೪೬ ನಂದಿನಿ ಕಾಪಡಿ  – ೧೯೫೪ ಕ.ರ. ಮೋಹನ್ – ೧೯೪೪ ಹಾ. ವಿ. ಮಂಜುಳಾ ಶಿವಾನಂದ್ – ೧೯೫೭

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top