Loading Events

« All Events

  • This event has passed.

ಡಾ. ಬೆಸಗರಹಳ್ಳಿ ರಾಮಣ್ಣ

August 15

೧೫..೧೯೩೮ ೧೩..೧೯೯೮ ತಮ್ಮಲ್ಲಿದ್ದ ಪ್ರತಿಭೆ,  ಶಕ್ತಿ,  ಚೈತನ್ಯಗಳನ್ನು ಗ್ರಾಮೀಣ ಸಮುದಾಯದ ನೋವು, ನಲಿವು , ಶೋಷಣೆಗೆ, ಅಜ್ಞಾನಕ್ಕೆ ಸ್ಪಂದಿಸುತ್ತಲೇ ಇದ್ದು, ಒಂದೆಡೆ ಸಮುದಾಯದ ದೇಹರೋಗ್ಯ, ಸ್ವಾಸ್ಥ್ಯದ ಕಡೆಗೆ ಗಮನಹರಿಸಿದರೆ ಮತ್ತೊಂದೆಡೆ ಪ್ರವೃತ್ತಿಯಿಂದ ಲೇಖಕರಾಗಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಕಡೆಗೂ ಗಮನ ಹರಿಸಿ, ಗ್ರಾಮೀಣ ಬದುಕಿನ ನೈಜ ಚಿತ್ರಣವನ್ನೂ ತಮ್ಮ ಕಥೆಗಳ ಮೂಲಕ ಹೇಳುತ್ತಲೇ ಬಂದ ವೈದ್ಯರಾದ ಬೆಸಗರಹಳ್ಳಿಯ ರಾಮಣ್ಣನವರು ಹುಟ್ಟಿದ್ದು ೧೯೩೮ ರ ಆಗಸ್ಟ್‌ ತಿಂಗಳ ಸ್ವಾತಂತ್ರ್ಯ ದಿನಾಚರಣೆಯಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಸಗರ ಹಳ್ಳಿಯಲ್ಲಿ, ತಂದೆ ಕೃಷಿಕರಾದ ಎಲ್ಲೇಗೌಡ, ತಾಯಿ ದೊಡ್ಡತಾಯಮ್ಮ. ಪ್ರಾರಂಭಿಕ ಶಿಕ್ಷಣ ಬೆಸಗರಹಳ್ಳಿ ಮತ್ತು ಮದ್ದೂರಿನಲ್ಲಿ. ಇಂಟರ್ಮೀಡಿಯೇಟ್‌ ನಂತರ ಎಂ.ಬಿ.ಬಿ.ಎಸ್‌. ಪದವಿ ಪಡೆದದ್ದು ಮೈಸೂರಿನಲ್ಲಿ. ನಂತರ ಅರಿವಳಿಕೆ ಶಾಸ್ತ್ರದಲ್ಲಿ ಪಡೆದ ಡಿಪ್ಲೊಮ. ಅಮೆರಿಕ ಮುಂತಾದ ವಿದೇಶಗಳಿಂದ ಉದ್ಯೋಗಕ್ಕೆ ಆಹ್ವಾನ ಬಂದರೂ ಆಯ್ದುಕೊಂಡದ್ದು ಹಳ್ಳಿಯ ವೈದ್ಯಕೀಯ ಸೇವೆಯ ಬದುಕು. ಗ್ರಾಮೀಣ ಪ್ರದೇಶದಲ್ಲಿ ಸುಮಾರು ೨೦ ವರ್ಷಗಳ ಕಾಲ ವೈದ್ಯರಾಗಿ ಕಾರ್ಯನಿರತರಾಗಿದ್ದರು. ಸರಕಾರಿ ವೈದ್ಯರಾಗಿ ನೇಮಕಗೊಂಡು ಕೊಡಿಯಾಲ, ಬೆಳ್ಳೂರು, ಮೇಲುಕೋಟೆ, ಶ್ರೀರಂಗಪಟ್ಟಣ, ಹಳೇಬೀಡು ಮುಂತಾದ ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆಸಲ್ಲಿಸಿ ೧೯೯೬ ರಲ್ಲಿ ನಿವೃತ್ತಿ. ವಿಶ್ವದ ವಿವಿಧ ಭಾಗಗಳಿಂದ ಬಂದಿದ್ದ ವೈದ್ಯರೊಂದಿಗೆ ತಮ್ಮ ಕಾಯಕವನ್ನೂ ಹಂಚಿಕೊಂಡು ಬಿಹಾರದ ಬಾಗಲ್ಪುರದಲ್ಲಿ  (೧೯೭೪) ನಡೆದ ಸಿಡುಬು ನಿರ್ಮೂಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.. ಹಳ್ಳಿಯ ಬದುಕಿನೊಂದಿಗೆ ಮಿಳಿತವಾಗಿರುವ ಜಾನಪದ ಸಂಸ್ಕೃತಿಯ ಅಂಗವಾದ ಕಥೆ, ಲಾವಣಿ, ಪದಗಳು ರಾಮಣ್ಣನವರನ್ನೂ ಆಕರ್ಷಿಸಿತು. ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡಿದ್ದ ತಂದೆಯ ವಯಸ್ಸಾದ ಸೋದರತ್ತೆ ಬೆಳದಿಂಗಳ ರಾತ್ರಿಗಳಲ್ಲಿ ಚಂದ್ರಲೋಕದ, ಪಾತಾಳಲೋಕದ ಸುರಸುಂದರಿಯರ, ಘನಘೋರ ಮಂತ್ರವಾದಿಗಳ ಹಕೀಕತ್ತುಗಳು, ಅವನೆಲ್ಲಾ ಎದುರಿಸಿ ಗೆದ್ದು ಬರುತ್ತಿದ್ದ ಧೀರ ರಾಜಕುಮಾರರ ಕಥೆಗಳು, ಅಣ್ಣನಾಗಿದ್ದ ದಿವಂಗತ ಪುಟ್ಟಸ್ವಾಮಿ ಗೌಡರು ತಂದುಹಾಕುತ್ತಿದ್ದ ಸಾಹಿತ್ಯ ಕೃತಿಗಳು, ಕುಮಾರವ್ಯಾಸ ಭಾರತದ ಪದ್ಯಗಳನ್ನೂ, ಕುವೆಂಪುರವರ ಸಣ್ಣಕತೆಗಳಿಗೆ ನಾಟಕ ರೂಪಕೊಟ್ಟು ಒಬ್ಬನೇ ಅಭಿನಯಿಸಿ ತೋರಿಸಿ ಸಂತೋಷದ ಸಂದರ್ಭದಲ್ಲಿ ನಗೆತರಿಸಿ, ದುಃಖದ ಸಂದರ್ಭದಲ್ಲಿ ಅಳುತರಿಸುತ್ತಿದ್ದು, ಇಂತಹ ಪ್ರಸಂಗಗಳಿಂದ ಪ್ರಭಾವಿತರಾದರು. ಹೈಸ್ಕೂಲಿನಲ್ಲಿದ್ದಾಗಲೇ ಬಸವರಾಜ ಕಟ್ಟೀಮನಿಯವರ ಕಥೆ, ಕಾದಂಬರಿಗಳು, ಮೆಡಿಕಲ್‌ ಓದುತ್ತಿದ್ದಾಗ ಕುವೆಂಪುರವರ ಸಂನ್ಯಾಸಿ ಮತ್ತು ಇತರ ಕಥೆಗಳು ಗಾಢ ಪ್ರಭಾವ ಬೀರಿದವು. ಯುವರಾಜ ಕಾಲೇಜಿನಲ್ಲಿದ್ದಾಗ ಜಿ.ಎಸ್‌. ಶಿವರುದ್ರಪ್ಪನವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ವಸಂತ’ ಪತ್ರಿಕೆಗೆ ಬರೆದ ಮೊದಲ ಕತೆ ‘ಹಸಿವಿನ ಕಹಳೆ’ ದುರದೃಷ್ಟವಶಾತ್‌ ಪತ್ರಿಕೆ ಪ್ರಕಟವಾಗದಿದ್ದರೂ ಜಿ.ಎಸ್‌.ಎಸ್‌. ರವರು ಪ್ರೋತ್ಸಾಹದ ನುಡಿ ಬರೆದು ಹಸ್ತಪ್ರತಿಯನ್ನು ಹಿಂದಿರುಗಿಸಿದರು. ನಿರಾಶರಾಗದ ರಾಮಣ್ಣನವರು ಪ್ರಜಾವಾಣಿ ದೀಪಾವಳಿ ಸಂಚಿಕೆಗೆ (೧೯೬೨) ಬರೆದ ಕತೆ ‘ಹಾವಿಲ್ಲದ ಹುತ್ತ’. ತೀರ್ಪುಗಾರರ ಮೆಚ್ಚುಗೆ ಗಳಿಸಿದರೆ ೧೯೬೫ರ ಇದೇ ಪತ್ರಿಕೆಯ ದೀಪಾವಳಿ ಸಂಚಿಕೆಯಲ್ಲಿ ‘ಸುಗ್ಗಿ’ ಕತೆ ಮೊದಲ ಬಹುಮಾನಗಳಿಸಿ ಕತೆಗಾರರೆನ್ನಿಸಿಕೊಂಡರು. ಬಸವಣ್ಣ, ಗಾಂಧಿ, ಪೆರಿಯಾರ್, ಕುವೆಂಪು ಮುಂತಾದವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸುತ್ತಲಿನ ಅಸಮಾನತೆಯ ವಿರುದ್ಧ, ಅನ್ಯಾಯದ ವಿರುದ್ಧ ಹೋರಾಡುತ್ತ, ಸಮಾಜವಾದಿ ಯುವಜನ ಸಭಾ, ಬಂಡಾಯ ಸಾಹಿತ್ಯ ಸಂಘಟನೆ, ದಲಿತ ಸಂಘರ್ಷ ಸಮಿತಿ ಮುಂತಾದ ಅನೇಕ ಪ್ರಗತಿಪರ ಸಂಘಟನೆಗಳೊಡನೆ ಗುರುತಿಸಿಕೊಂಡಿದ್ದರು. ಹಳ್ಳಿಗಾಡಿನ ವೈದ್ಯರಾಗಿ ತಾವು ಕಂಡದ್ದನ್ನೂ ಕಂಡಂತೆ ವಾಸ್ತವ ನೆಲೆಗಟ್ಟಿನ ಮೇಲೆ ಮಾನವೀಯ ಸಂಬಂಧಗಳ ಶೋಧಕರಾಗಿ,  ಗ್ರಾಮಾಂತರ ಬದುಕಿನ ನೋವು ನಲಿವುಗಳನ್ನು, ಊಳಿಗಮಾನ್ಯ ಪದ್ಧತಿಯನ್ನು ವಿರೋಧಿಸುವಂತಹ ವಿಭಿನ್ನ ನೆಲೆಗಳಲ್ಲಿ ರಚಿಸಿದ ಕತೆಗಳಲ್ಲಿ ‘ಸೋಲು’, ‘ಕಣಿವೆಯ ಅಂಚು’, ‘ಗರ್ಜನೆ’, ‘ಜೀತ’, ‘ಅವ್ವ’, ‘ಕಳೆ’, ‘ಚೆಲುವನ ಪರಂಗಿಗಿಡಗಳು’ ಪ್ರಮುಖ ಕತೆಗಳೆನಿಸಿದರೆ, ‘ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು’ ಪಂಚತಂತ್ರದ ಮಾದರಿಯ ಭಗ್ನವಾದ ಗಾಂಧಿ ತತ್ತ್ವಗಳನ್ನು ಸೆರೆಹಿಡಿದಿಡುತ್ತದೆ. ರಾತ್ರಿ ಬಹುಹೊತ್ತಿನ ವರೆವಿಗು ಕಥಾ ರಚನೆಯಲ್ಲಿಯೇ ತೊಡಗಿರುತ್ತಿದ್ದು ಇಂತಹ ಕತೆಗಳು ಹುಟ್ಟಿದ್ದು ಕಲ್ಲುಕರಗುವ ಸಮಯದಲ್ಲೆ. ಹೀಗೆ ಪ್ರಕಟಗೊಂಡ ಇವರ ಕಥೆಗಳು ‘ನೆಲದ ಒಡಲು’, ‘ಗರ್ಜನೆ’, ‘ಹರಕೆಯ ಹಣ’, ‘ಒಂದು ಹುಡುಗನಿಗೆ ಬಿದ್ದ ಕನಸು’, ‘ನೆಲದ ಸಿರಿ’ ಎಂಬ ಕಥಾಸಂಕಲನಗಳು. ‘ಕನ್ನಂಬಾಡಿ’ (೧೯೬೨-೮೫ರವರೆಗೆ) ಎಂಬ ಸಮಗ್ರ ಕಥಾಸಂಕಲನವಲ್ಲದೆ ನಂತರ ಬರೆದ ೧೮ ಕಥೆಗಳ ಸಂಕಲನ ‘ಕೊಳಲು ಮತ್ತು ಖಡ್ಗ’ ಕಥಾಸಂಕಲನಗಳವೂ ಪ್ರಕಟವಾಗಿವೆ. ‘ರಕ್ತಕಣ್ಣೀರು’ ಮತ್ತು ‘ತೋಳಗಳ ನಡುವೆ’ ಇವರು ಬರೆದ ಎರಡು ಕಾದಂಬರಿಗಳಾದರೆ ‘ಶೋಕಚಕ್ರ’ ಕವನ ಸಂಕಲನ. ಕಲ್ಲೇಶಿವೋತ್ತಮರಾವ್‌ರವರು ಜನ ಪ್ರಗತಿಯ ಸಂಪಾದಕರಾಗಿದ್ದ ಸಂದರ್ಭದಲ್ಲಿ ‘ರಕ್ತಕಣ್ಣೀರು’ ಕಾದಂಬರಿಯನ್ನೂ ಧಾರಾವಾಹಿಯಾಗಿ ಪ್ರಕಟಿಸಿದರು. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿದಷ್ಟೇ ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡಮಿಯ ಕನ್ನಡ ವಿಭಾಗದ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಇವರು ಬರೆದ ‘ಜಾಡಮಾಲಿ’ ಮತ್ತು ‘ನೂರುರೂಪಾಯಿ ನೋಟು’ ಕಥೆಗಳು ಜ್ಞಾನಪೀಠ ಪ್ರಶಸ್ತಿ ಸಮಿತಿಯ ಆಯ್ಕೆಮಾಡಿ ಪ್ರಕಟಿಸುವ ‘ಭಾರತೀಯ ಕಹಾನಿಯಾ’ ಸಂಕಲನದಲ್ಲಿ ಸ್ಥಾನ ಪಡೆದಿವೆ. ರಾಮಣ್ಣನವರ ಆಯ್ದ ಕಥಾಸಂಕಲನವನ್ನೂ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿಯೂ ಆಯ್ಕೆಮಾಡಲಾಗಿತ್ತು. ೧೯೬೮ ಮತ್ತು ೭೨ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಕಥಾ ಸಾಹಿತ್ಯ ವಿಭಾಗದ ಬಹುಮಾನಗಳು, ‘ಒಂದು ಹುಡುಗನಿಗೆ ಬಿದ್ದ ಕನಸು’ ಕಥಾ ಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿಯಲ್ಲದೆ ೧೯೯೦ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿಯು ದೊರೆತಿದೆ. ಮಂಡ್ಯದಲ್ಲಿ ನಡೆದ ವಿಚಾರ ಸಂಕೀರ್ಣದ ಸಂದರ್ಭದಲ್ಲಿ ರಾಮಣ್ಣನವರ ಸಾಹಿತ್ಯದ ಬಗ್ಗೆ ವಿಸ್ತೃತ ಚರ್ಚೆ ನಡೆದು ಅಂದು ಮಂಡಿಸಿದ ಪ್ರಬಂಧಗಳ ಸಂಕಲನ ‘ಆಲೆಮನೆ’ ಹಾಗೂ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ‘ಕಾಡುಗಿಣಿ’ (೨೦೦೯) ‘ಅಭಿನಂದನ ಗ್ರಂಥವು ಪ್ರಕಟವಾಗಿವೆ. ಪ್ರತಿವರ್ಷವೂ ಡಾ.ಬೆಸಗರಹಳ್ಳಿ ರಾಮಣ್ಣ ನನವರ ನೆನಪಿಗಾಗಿ ‘ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು’ ಕೊಡಮಾಡುತ್ತಿರುವ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿಗಳನ್ನು ಸಂತೆಕೆಪಲಗೆರೆ ಪ್ರಕಾಶ್‌ (೨೦೦೩), ಶ್ರೀಧರ ಬಳಿಗಾರ (೨೦೦೪), ಸುನಂದಾ ಪ್ರಕಾಶ್‌ ಕಡಮೆ (೨೦೦೫), ವಸುಧೇಂದ್ರ (೨೦೦೬), ತುಕಾರಾಂ ಎಸ್‌ (೨೦೦೭), ಮಹಾಂತೇಶ್‌ ನವಲ್‌ಕರ್ (೨೦೦೮), ಸುಮಂಗಲ (೨೦೦೯), ಮಲ್ಲಪ್ಪ ಕೆ.ಕೆ. (೨೦೧೦), ಮಂಜುನಾಥ್‌ ಲತಾ (೨೦೧೧) ಮುಂತಾದವರುಗಳು ಪಡೆದಿದ್ದಾರೆ.

Details

Date:
August 15
Event Category: