ಡಾ. ಮಲ್ಲಿಕಾಘಂಟಿ

Home/Birthday/ಡಾ. ಮಲ್ಲಿಕಾಘಂಟಿ
Loading Events
This event has passed.

೧೭-೪-೧೯೫೯ ಸ್ತ್ರೀವಾದಿ, ಮಹಿಳಾ ಹೋರಾಟಗಾರ್ತಿ, ಸ್ತ್ರೀಯರ ಸಾಮಾಜಿಕ ಸುಧಾರಣೆಗೋಸ್ಕರ ದುಡಿಯುತ್ತಿರುವ ಮಲ್ಲಿಕಾ ಘಂಟಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯ ಅಗಸಬಾಳ ಗ್ರಾಮದಲ್ಲಿ. ತಂದೆ ಶಂಕರಪ್ಪ ಮತ್ತು ತಾಯಿ ಪಾರ್ವತಿಬಾಯಿ. ಪ್ರಾಥಮಿಕ ವಿದ್ಯಾಭ್ಯಾಸ ಹಂಗರಗಿ ಗ್ರಾಮ ಮತ್ತು ಬಾದಾಮಿಯಲ್ಲಿ. ವೀರ ಪುಲಿಕೇಶಿ ಹೈಸ್ಕೂಲಿನಲ್ಲಿ ಪಿ.ಯು.ವರೆಗೆ ವಿದ್ಯಾಭ್ಯಾಸ, ಬಾಗಲಕೋಟೆ ಮತ್ತು ಜಮಖಂಡಿ ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಬಿ.ಎ. ಪದವಿ. ಧಾರವಾಡದ ವಿಶ್ವವಿದ್ಯಾಲಯದಿಂದ “ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ” ಕುರಿತು ಬರೆದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಓದಿನ ಜೊತೆಗೆ ಸಾಹಿತ್ಯ ರಚನೆಯ ಹವ್ಯಾಸ. ವಿದ್ಯಾರ್ಥಿನಿಯಾಗಿದ್ದಾಗಲೇ ಬರೆದ ಕವನಗಳು ಪ್ರಕಟಿತ. ಪದವಿ ಪಡೆದ ನಂತರ ಉದ್ಯೋಗಕ್ಕಾಗಿ ಸೇರಿದ್ದು  ಕೆರೂರು ಎಂ.ಎಚ್.ಎಂ. ಕಿರಿಯ ಮಹಾ ವಿದ್ಯಾಲಯದಲ್ಲಿ. ೧೯೮೩ರಿಂದ ೧೯೮೭ರವರೆಗೆ ಉಪನ್ಯಾಸಕಿ ಹುದ್ದೆ. ೧೯೮೭ರಿಂದ ೧೯೯೪ರವರೆಗೆ ಗುಲಬರ್ಗಾದ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ, ೧೯೯೪ರಿಂದ ಸ್ನಾತಕೋತ್ತರ ಕೇಂದ್ರ ಸಂಡೂರಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಮುಂದುವರಿಕೆ. ಹಲವಾರು ಕೃತಿಗಳು ಪ್ರಕಟಿತ. ಕವನ ಸಂಕಲನಗಳು-ತುಳಿಯದಿರಿ ನನ್ನ, ಈ ಹೆಣ್ಣುಗಳೇ ಹೀಗೆ, ರೊಟ್ಟಿ ಮತ್ತು ಹುಡುಗಿ, ಬೆಲ್ಲದಚ್ಚು ಮತ್ತು ಇರುವೆ ದಂಡು. ನಾಟಕ-ಚಾಜ. ವಿಮರ್ಶಾ ಸಂಕಲನಗಳು-ಕನ್ನಡ ಕಥೆಗಾರ್ತಿಯರು, ತನುಕರಗದವರಲ್ಲಿ, ಭೂಮಿಯ ಮೇಲೆ. ಜೀವನ ಚರಿತ್ರೆ-ಅಹಲ್ಯಾಬಾಯಿ ಹೋಳ್ಕರ್. ಜೊತೆಗೆ ಸಂಪಾದಿತ ಕೃತಿಗಳು-ನಾಲ್ಕು, ಇತರರೊಡಗೂಡಿ. ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣದಲ್ಲಿ ಶ್ರೀ ಕುಮಾರಸ್ವಾಮಿ ದೇವಸ್ಥಾನದಲ್ಲಿ ಸ್ತ್ರೀಯರಿಗೆ ಪ್ರವೇಶ ನಿಶಿದ್ಧವನ್ನು ಪ್ರಸ್ತಾಪಿಸಿದ್ದಕ್ಕೆ ಪರಿಣಾಮವಾಗಿ ಮಹಿಳೆಯರಿಗೆ ದೊರೆತ ಪ್ರವೇಶದ ಹಕ್ಕು. ಸಂದ ಪ್ರಶಸ್ತಿಗಳು ಹಲವಾರು-ಮಾಣಿಕಬಾಯಿ ಪ್ರಶಸ್ತಿ, ತನುಕರಗದವರಲ್ಲಿ  ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಿಂಧೂರ ದತ್ತಿ ನಿ ಪ್ರಶಸ್ತಿ, ‘ರೊಟ್ಟಿ ಮತ್ತು ಹುಡುಗಿ’ ಕೃತಿಗೆ ಲಿಂಗರಾಜ ಪ್ರಶಸ್ತಿ, ‘ಈ ಹೆಣ್ಣುಗಳೇ ಹೀಗೆ’ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಅಜ್ಜಂಪುರ ಜಿ. ಸೂರಿ – ೧೯೩೯ ಅಕಬರ ಎ. ಸನದಿ – ೧೯೬೦ ಗುಡಿಬಂಡೆ ಪೂರ್ಣಿಮ – ೧೯೫೧ ಎಚ್.ಎಸ್. ಭೀಮನಗೌಡ – ೧೯೪೮

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top