Loading Events

« All Events

ಡಾ. ರಮಾಕಾಂತ ಜೋಶಿ

December 23

೨೩-೧೨-೧೯೩೬ ಕನ್ನಡಿಗರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸಲು ಜಿ.ಬಿ. ಜೋಶಿಯವರು ಕಟ್ಟಿದ ಮನೋಹರ ಗ್ರಂಥಮಾಲೆಯ ಈಗಿನ ಸಂಪಾದಕರಾದ ರಮಾಕಾಂತ ಜೋಶಿಯವರು ಹುಟ್ಟಿದ್ದು ಧಾರವಾಡ. ತಂದೆ ಜಿ.ಬಿ. ಜೋಶಿ (ಜಡಭರತ) ತಾಯಿ ಪದ್ಮಾವತಿ. ಶಿಕ್ಷಣ ಧಾರವಾಡದಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ. ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಮತ್ತು “THE USE OF MYTH IN INDIAN ENGLISH DRAMA” ಎಂಬ ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಸೇರಿದ್ದು ಕಿಟ್ಟಲ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ. ಅದೇ ಕಾಲೇಜಿನಲ್ಲಿ ರೀಡರ್ ಆಗಿ ಪ್ರಾಧ್ಯಾಪಕರಾಗಿ ನಿವೃತ್ತಿ. ಹಲವಾರು ಸಂಘ ಸಂಸ್ಥೆಗಳೊಡನೆ ಸಂಬಂಧ. ಚಿತ್ರ ಫಿಲಂ ಸೊಸೈಟಿ, ಧಾರವಾಡದ ಕಲಾ ಕೇಂದ್ರದ ಕಾರ್ಯದರ್ಶಿಯಾಗಿ, ಪ್ರಕಾಶನ ಸಂಸ್ಥೆಯ ಉಪಾಧ್ಯಕ್ಷರಾಗಿ, ಕರ್ನಾಟಕ ಸರಕಾರದ ಪುಸ್ತಕ ಪ್ರಾಕಾರದ ಸದಸ್ಯರಾಗಿ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ. ಹಲವಾರು ಸಾಹಿತ್ಯಗೋಷ್ಠಿ, ವಿಚಾರ ಸಂಕಿರಣಗಳಲ್ಲಿ ಭಾಗಿ. ಗುಜರಾತಿನ ವಲ್ಲಭ ವಿದ್ಯಾನಗರದ ವಿಚಾರ ಸಂಕಿರಣ, ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ವಿಚಾರ ಸಂಕಿರಣಗಳು, ಪೂನಾದ ಫಿಲಂ ಅಪ್ರಿಸಿಯೇಷನ್ ಕೋರ್ಸ್‌ಗಳು, ರಾಷ್ಟ್ರೀಯ ಇಂಗ್ಲಿಷ್ ಪ್ರಾಧ್ಯಾಪಕರ ವಿಚಾರ ಸಂಕಿರಣ, ಭಾರತೀಯ ಭಾಷಾ ಪ್ರಕಾಶಕರ ಸಂಸ್ಥೆಯ ವಿಚಾರ ಸಂಕಿರಣ-ನವದೆಹಲಿ, ಮುಂತಾದೆಡೆಗಳಲ್ಲಿ ವಹಿಸಿದ ಪ್ರಮುಖ ಪಾತ್ರ. ಆಕಾಶವಾಣಿಯಲ್ಲಿ ನಡೆಸಿಕೊಟ್ಟ ಹಲವಾರು ಚಿಂತನ ಕಾರ‍್ಯಕ್ರಮಗಳು. ರಚಿಸಿದ ಗ್ರಂಥಗಳು-ಮಿಥ್ಸ್ ಇನ್ ಇಂಡಿಯನ್ ಡ್ರಾಮ, ಇಂಡಿಯಾದಲ್ಲಿ ಪುಸ್ತಕ ಪ್ರಕಾಶನ, ಪುಸ್ತಕ ಪ್ರಕಾಶನದ ಸಮಸ್ಯೆಗಳು ಮುಂತಾದುವು ಕೆಲವೇ ಆದರೂ ಮನೋಹರ ಗ್ರಂಥಮಾಲೆಯ ಮೂಲಕ ಸದಭಿರುಚಿಯ ಪುಸ್ತಕಗಳನ್ನು ಪ್ರಕಟಿಸಿ ಸದಸ್ಯತ್ವದ ಮುಖಾಂತರ ಕನ್ನಡಿಗರಲ್ಲಿ ಓದುವ ಅಭಿರುಚಿಯನ್ನು ಬೆಳೆಸಲು ನಿರಂತರವಾಗಿ ಶ್ರಮಿಸುತ್ತಿರುವ ಸಂಸ್ಥೆಯ ವ್ಯವಸ್ಥಾಪಕ ಸಂಪಾದಕರಾಗಿ ಅಹರ್ನಿಶಿ ದುಡಿಮೆ. ಪ್ರಕಾಶನದ ಜವಾಬ್ದಾರಿಯುತ ಕಾರ್ಯಕ್ಕಾಗಿ “ಪ್ರೆಸ್ಟೀಜಿಯಸ್ ಪಬ್ಲಿಷರ್ ಅವಾರ್ಡ್”ನ್ನು, ನವದೆಹಲಿಯ ರಾಷ್ಟ್ರೀಯ ಪ್ರಕಾಶಕರ ಸಂಸ್ಥೆಯಿಂದ ಪಡೆದುಕೊಂಡಿರುವ ಸಂಸ್ಥೆಗಳಲ್ಲೊಂದು. ಹಲವಾರು ಬರಹಗಾರರಿಗೆ ಉತ್ತೇಜನ ನೀಡಿ, ಕನ್ನಡಿಗರಿಗೆ ಪರಿಚಯಿಸಿದ ಕೀರ್ತಿ.   ಇದೇ ದಿನ ಹುಟ್ಟಿದ ಸಾಹಿತಿ : ದೊಡ್ಡಿ ಸುಧಾಬಾಯಿ – ೧೯೨೩

Details

Date:
December 23
Event Category: