ಡಾ. ಲಕ್ಷ್ಮೀನಾರಾಯಣ ಹೆಗಡೆ (ಡಾ. ಎಲ್. ಆರ್. ಹೆಗಡೆ)

Home/Birthday/ಡಾ. ಲಕ್ಷ್ಮೀನಾರಾಯಣ ಹೆಗಡೆ (ಡಾ. ಎಲ್. ಆರ್. ಹೆಗಡೆ)
Loading Events
This event has passed.

೦೨.೦೧.೧೯೨೩ ೨೦೦೫ ನಾಡವರು, ಸಿಧ್ಧಿಯರು, ಹಸಲರು, ಹಾಲಕ್ಕಿ ಒಕ್ಕಲಿಗರು ಮುಂತಾದ ಜನಾಂಗಗಳಲ್ಲಿನ ಜಾನಪದ ಸಿರಿಯನ್ನು ಸಂಗ್ರಹಿಸಿ ಹೊಸ ಪ್ರಪಂಚಕ್ಕೆ ತೆರೆದಿಟ್ಟವರಲ್ಲಿ ಪ್ರಮುಖರಾದವರೆಂದರೆ ಲಕ್ಷ್ಮೀನಾರಾಯಣ ಹೆಗಡೆಯವರು. ಉತ್ತರ ಕನ್ನಡ ಜಿಲ್ಲೆಯು ಜಾನಪದ ಹಾಗೂ ಯಕ್ಷಗಾನ ಪ್ರಕಾರಗಳಿಗೆ ತೌರುಮನೆಯಿದ್ದಂತೆ. ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆ ಎಂಬಲ್ಲಿ. ತಂದೆ ರಾಮಕೃಷ್ಣ ಹೆಗಡೆಯವರು. ಕುಮಟಾದ ಗಿಬ್ಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ತಾಯಿ ಮಹಾಲಕ್ಷ್ಮಿ. ಪ್ರಾರಂಭಿಕ ಶಿಕ್ಷಣ ಹೊಲನಗದ್ದೆ ಹಾಗೂ ಗುಡೆ ಅಂಗಡಿಗಳಲ್ಲಿ. ಪ್ರೌಢಶಾಲೆಗೆ ಸೇರಿದ್ದು ತಂದೆಯೇ ಅಧ್ಯಾಪಕರಾಗಿದ್ದ ಗಿಬ್ಸ್ ಹೈಸ್ಕೂಲಿಗೆ. ಬಿ.ಎ. ಪದವಿ ಪಡೆದದ್ದು ಬೆಳಗಾವಿಯ ಲಿಂಗರಾಜು ಕಾಲೇಜು ಹಾಗೂ ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಿಂದ ಬಿ.ಟಿ. ಪದವಿ. ಪೂನಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪ್ರಥಮ ವರ್ಗದಲ್ಲಿ ತೇರ್ಗಡೆಯಾಗಿ ಪಡೆದರು. ‘ಕುಮಾರವ್ಯಾಸನ ಪಾತ್ರ ಸೃಷ್ಟಿ’ ಎಂಬ ಪ್ರೌಢ ಪ್ರಬಂಧವನ್ನು ಡಾ.ಆರ್.ಸಿ. ಹಿರೇಮಠರವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವದ್ಯಾಲಯಕ್ಕೆ ಸಲ್ಲಿಸಿ ಪಡೆದ ಡಾಕ್ಟರೇಟ್ ಪದವಿ. ಬೋಧಕರಾಗಿ ಕಾರವಾರದ ಸರಕಾರಿ ಹೈಸ್ಕೂಲಿನಲ್ಲಿ ಉದ್ಯೋಗ ಪ್ರಾರಂಭಿಸಿ ಹೊನ್ನಾವರದ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿಯೂ ಕೆಲಕಾಲ ಸೇವೆ ಸಲ್ಲಿಸಿದ ನಂತರ ಕುಮಟಾದ ಕೆನರಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿ ರೀಡರ್ ಆಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ೧೯೭೮ರಲ್ಲಿ ನಿವೃತ್ತಿ ಹೊಂದಿದರು, ಸಾಹಿತ್ಯಕ್ಕಾಗಿ ಎಲ್.ಆರ್.ಹೆಗಡೆಯವರು ನೀಡಿದ ಕೊಡುಗೆ ಬಹಳ ವೈವಿಧ್ಯಮಯ. ವಿವಿಧ ಜನಾಂಗಗಳ ಉಪಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ಪ್ರಕಟಿಸಿರುವ ಪ್ರಮುಖ ಕೃತಿಗಳೆಂದರೆ ಮುಕ್ತಿ ಹೊಲೆಯರ ಪದಗಳು. ಕುವರಿ ಮರಾಠಿ ಕಥೆಗಳು, ಗುಮಟೆಯ ಪದಗಳು, ಕರಾವಳಿಯ ಜನಪದ ಕಥೆಗಳು ಮುಂತಾದವುಗಳು. ಇವಲ್ಲದೆ ಇವರ ಇತರ ಜಾನಪದ ಕೃತಿಗಳೆಂದರೆ ತಿಮ್ಮಕ್ಕನ ಪದಗಳು ಪರಮೇಶ್ವರಿಯ ಪದಗಳು, ಉತ್ತರ ಕನ್ನಡ ಜಿಲ್ಲೆಯ ಜಾನಪದ ಕಥೆಗಳು, ಮೂಢನಂಬಿಕೆಗಳು, ಹಾಲಿನ ತೆನೆ, ಹಾಡಲುಂಟೇ ನಿನ್ನ ಮಡಿಲಲ್ಲಿ, ಜಾನಪದ ಸಾಹಿತ್ಯದಲ್ಲಿ ಮದುವೆ ಮುಂತಾದವುಗಳು. ಜಾನಪದ ಗೀತೆ, ಕಥನ ಗೀತೆ ಮತ್ತು ವಿಮರ್ಶೆಯ ಕ್ಷೇತ್ರಗಳಲ್ಲಿಯೂ ಅಪಾರ ಸಾಧನೆ ಗೈದಿದ್ದಾರೆ. ಸೃಜನಶೀಲ ಸಾಹಿತ್ಯಕ್ಕೂ ಇವರು ನೀಡಿರುವ ಕೊಡುಗೆಯು ಬಹಳ ದೊಡ್ಡದೆ. ಕಾವ್ಯ, ನಾಟಕ, ಕಥೆ,ಲಘು-ಬರಹ, ವ್ಯಕ್ತಿ ಚಿತ್ರ, ಹೀಗೆ ನಾನಾ ಪ್ರಕಾರಗಳಲ್ಲಿ ಕೃತಿ ರಚಿಸಿದ್ದು ಒಟ್ಟು ಇವರ ಕೃತಿಗಳ ಸಂಖ್ಯೆಯು ಮೂವತ್ತಕ್ಕೂ ಹೆಚ್ಚು. ಇವರ ಮತ್ತೊಂದು ಆಸಕ್ತಿ ಕ್ಷೇತ್ರವೆಂದರೆ ಆಯುರ್ವೇದ, ಹೋಮಿಯೋಪತಿ ಹಾಗೂ ಜಾನಪದ ವೈದ್ಯ ಕ್ಷೇತ್ರ. ಅನುಭವ ಚಿಕಿತ್ಸೆ, ಆರೋಗ್ಯವೇ ಭಾಗ್ಯ, ಗಾಂವರಿ ಚಿಕೆತ್ಸೆ, ಜನಪದ ವೈದ್ಯ, ನಾಡಮದ್ದು, ಹೋಮಿಯೋಪತಿ ಚಿಕಿತ್ಸೆ ಮುಂತಾದ ಹಲವಾರು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕರ್ನಾಟಕದ ವಿವಿಧ ಪತ್ರಿಕೆಗಳಿಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬರೆದ ಲೇಖನಗಳೇ ನೂರಾರು. ಜಾನಪದ ಕ್ಷೇತ್ರಕ್ಕಾಗಿ ಇವರು ನೀಡಿದ ಕೊಡುಗೆಗಾಗಿ ಸಂದ ಪ್ರಶಸ್ತಿ ಗೌರವಗಳು ಹಲವಾರು. ೧೯೮೧ರಲ್ಲಿ ಕರ್ನಾಟಕದ ವಿಶ್ವವಿದ್ಯಾಲಯದ ವತಿಯಿಂದ ಅಂಕೋಲದಲ್ಲಿ ಜರುಗಿದ ಎಂಟನೆಯ ಜನಪದ ಸಾಹಿತ್ಯ ಸಮ್ಮೇಳನ ಮತ್ತು ರಾಯಚೂರಿನಲ್ಲಿ ನಡೆದ ಕರ್ನಾಟಕ ಜನಪದ ವಿದ್ವಾಂಸರ ಮಹಾಧಿವೇಶನದಲ್ಲಿ ಗೋಷ್ಠಿಯೊಂದರ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಸದಸ್ಯರಾಗಿ ಸೇವೆ ಸಲ್ಲಸಿದ್ದಲ್ಲದೆ ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ನಡೆಸಿದ ಜಾನಪದ ಗೋಷ್ಠಿ, ಚರ್ಮವಾದ್ಯ ಗೋಷ್ಠಿ, ಜಾನಪದ ಮೌಲ್ಯ ಮಾಪನ ಗೋಷ್ಠಿ ಮತ್ತು ಮಲೆನಾಡು ಜಾನಪದ ಗೋಷ್ಠಿ ಮುಂತಾದವುಗಳ ಅಧ್ಯಕ್ಷತೆಯ ಗೌರವವನ್ನು ಪಡೆದಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯು ೧೯೮೬ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ಹೀಗೆ ಜಾನಪದ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ ಎಲ್.ಆರ್. ಹೆಗಡೆಯವರು ಜಾನಪದ ಲೋಕದಿಂದ ನಿರ್ಗಮಿಸಿದ್ದು ೨೦೦೫ರಲ್ಲಿ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top