Loading Events

« All Events

ಡಾ. ವರದಾ ಶ್ರೀನಿವಾಸ್

July 28

೨೮..೧೯೫೦ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡು ಹಲವಾರು ಕೃತಿ ರಚಿಸಿರುವ ವರದಾ ಶ್ರೀನಿವಾಸ್‌ರವರು ಹುಟ್ಟಿದ್ದು ಕಾಸರಗೋಡಿನಲ್ಲಿ, ತಂದೆ ಪಿ.ಕೆ. ನಾರಾಯಣರವರು ಕನ್ನಡಕ್ಕಾಗಿ ದುಡಿದವರು, ಪಂಡಿತರು, ನಾಟಕಕಾರರು, ಪತ್ರಿಕೋದ್ಯಮಿಗಳು. ತಾಯಿ ಪಿ.ಕೆ. ಸುಂದರಿ. ತಂದೆಯವರ ಸಾಹಿತಿ ಮಿತ್ರರ ಬಳಗವೂ ಬಲುದೊಡ್ಡದೆ. ಅವರು ಒಡನಾಟ ಹೊಂದಿದ್ದ ಕಯ್ಯಾರ ಕಿಞ್ಞಣ್ಣ ರೈ, ಪಡುಕೋಣೆ ರಮಾನಂದರಾಯರು, ಕು.ಶಿ. ಹರಿದಾಸಭಟ್ಟರು, ಸೇಡಿಯಾವು ಕೃಷ್ಣಭಟ್ಟರು, ಕಡೆಂಗೋಡ್ಲುಶಂಕಟಭಟ್ಟರು ಮುಂತಾದವರೆಲ್ಲರ ಸನಿಹದ ಸಂಪರ್ಕದಿಂದ ವರದಾ ಶ್ರೀನಿವಾಸರವರಲ್ಲಿ ಚಿಗುರಿದ ಸಾಹಿತ್ಯದ ಒಲವು. ವಿದ್ಯಾಭ್ಯಾಸವೆಲ್ಲವೂ ಮಂಗಳೂರಿನಲ್ಲಿಯೇ. ಎಂ.ಎ. ಪದವಿಯ ನಂತರ ಮಂಗಳೂರು ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಕಾಲ. ಮದುವೆಯ ನಂತರ ಬೆಂಗಳೂರಿನಲ್ಲಿ ನೆಲೆಗೊಂಡು ಸೇರಿದ್ದು ಸರಕಾರದ ಭಾಷಾಂತರ ಇಲಾಖೆಗೆ (೧೯೭೪). ಹಿರಿಯ ಭಾಷಾಂತರಕಾರರಾಗಿ, ಉಪಮುಖ್ಯ ಭಾಷಾಂತರಕಾರರಾಗಿ, ಸಹಾಯಕ ನಿರ್ದೇಶಕರಾಗಿ ಭಡ್ತಿ ಹೊಂದಿ ೧೯೯೪ ರಲ್ಲಿ ಪಡೆದ ಸ್ವಯಂ ನಿವೃತ್ತಿ. ಬಾಲಕಿಯಾಗಿದ್ದಾಗಿನಿಂದಲೂ ಪಂಜೆಯವರ ಬಗ್ಗೆ ಇದ್ದ ಕುತೂಹಲ, ಒಲವು, ಪ್ರೇರಣೆಗಳೇ ಅವರ ಕೃತಿಗಳ ಬಗ್ಗೆ ಆಳವಾದ ಅಧ್ಯಯನ ನಡೆಸಲು ಪ್ರಚೋದಿಸಿ ನಿವೃತ್ತಿಯನಂತರ ಸಂಶೋಧನೆ ನಡೆಸಿ ‘ಪಂಜೆಯವರ ಕೃತಿಗಳು: ಒಂದು ಅಧ್ಯಯನ’ ಎಂಬ ಪ್ರೌಢ ಪ್ರಬಂಧವನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಂಡಿಸಿ (೧೯೯೭) ಪಡೆದ ಡಾಕ್ಟರೇಟ್‌ ಪದವಿ. ಮನೆಯಲ್ಲಿನ ಸಾಹಿತ್ಯಿಕ ವಾತಾವರಣದಿಂದ ಪ್ರಾಥಮಿಕ ಶಾಲೆಯಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆದು ಹಲವಾರು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಪಡೆದ ಬಹುಮಾನಗಳು. ಕಾಲೇಜಿನ ಮಟ್ಟ ತಲುಪಿದಾಗ ಸಭೆ , ಸಮ್ಮೇಳನ ಮತ್ತು ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಹಲವಾರು ಪ್ರಬಂಧಗಳು. ಕವಿತೆ, ಮಕ್ಕಳ ಸಾಹಿತ್ಯ, ಲಲಿತ ಪ್ರಬಂಧ, ಕಾದಂಬರಿ, ವ್ಯಕ್ತಿ ಚಿತ್ರ, ಸಂಶೋಧನೆ ಹೀಗೆ ಹಲವಾರು ಪ್ರಕಾರಗಳಲ್ಲಿ ರಚಿಸಿದ ಕೃತಿಗಳು. ಪಂಜೆಮಂಗೇಶರಾಯರ ಕೃತಿಗಳ ಅಧ್ಯಯನ ನಡೆಸಿದಂತೆ ಇವರು ಆಳವಾದ ಅಧ್ಯಯನ ನಡೆಸಿದ ಮತ್ತೊಂದು ವಿಷಯವೆಂದರೆ ಪ್ರೊ.ವಿ. ಕೃಷ್ಣಶೆಟ್ಟಿಯವರ ಸಾಹಿತ್ಯದ ಬಗ್ಗೆ. ಸಮ್ಮೇಲ, ಮಹಿಳೆ-ವೈಚಾರಿಕತೆ ಮತ್ತು ವಿಮರ್ಶೆ, ಮಕ್ಕಳ ಸಾಹಿತ್ಯಕ್ಕೆ ಶಿವರಾಮ ಕಾರಂತರ ಕೊಡುಗೆ ಮತ್ತು ಅರ್ಥೈಸಿದ ರೀತಿ ಮುಂತಾದ ವಿಮರ್ಶಾ ಕೃತಿಗಳು, ಸ್ಫಟಿಕಮಂಜೂಷ, ರಜತಸಿರಿ, ಹನ್ನೆರಡು ಕಥಾ ರತ್ನಗಳು (ಇತರರೊಡನೆ) ಮುಂತಾದ ಸಂಪಾದಿತ ಕೃತಿಗಳು, ಪುಟ್ಟನ ಗಾಳಿಪಟ, ಪುಷ್ಪಕವಿಮಾನ, ಶೋಧ, ಯಾರು ಶ್ರೇಷ್ಠರು, ಪೌರಾಣಿಕ ಪಾತ್ರಗಳು ಮುಂತಾದ ಮಕ್ಕಳ ಸಾಹಿತ್ಯ ಕೃತಿಗಳು, ಮಡಿವಾಳ ಮಾಚಯ್ಯ, ಪಂಜೆಮಂಗೇಶರಾಯರು ಮೊದಲಾದವರ ಜೀವನ ಚರಿತ್ರೆ, ಮಹಿಳೆ ಸ್ಥಿತಿಗತಿ, ಅಂದು-ಇಂದು, ಮಹಿಳೆ ಮತ್ತು ವಿಶೇಷ ಸವಲತ್ತುಗಳು ಮೊದಲಾದ ಮಹಿಳಾ ಅಧ್ಯಯನ ಕೃತಿಗಳು ಮುಂತಾದವುಗಳಲ್ಲದೆ- ಕನಸು ಮತ್ತು ವಾಸ್ತವಗಳ ನಡುವೆ (ಕಥಾಸಂಕಲನ), ಭರತೇಶನ ದಿನಚರಿ (ಸಂಗ್ರಹ), ವಾಗರ್ಥ (ಅಲಂಕಾರಶಾಸ್ತ್ರ), ಮಹಾಶರಣ (ಐತಿಹಾಸಿಕ ಕಾದಂಬರಿ), ಪುರುಷ ಪ್ರಧಾನ  (ಸಾಮಾಜಿಕ ಕಾದಂಬರಿ), ಅಂಬೆ (ಪೌರಾಣಿಕ ಕಾದಂಬರಿ) , ಸುಮಾನಸ ಪ್ರತಿಭಾ ಸಂಪನ್ನರು (ವ್ಯಕ್ತಿ ಚಿತ್ರಗಳು), ಏಕಲವ್ಯ ಮತ್ತು ಇತರ ನಾಟಕಗಳು  (ಬಾನುಲಿ ಮಕ್ಕಳ ನಾಟಕಗಳು) ಮುಂತಾದವುಗಳು ಪ್ರಕಟವಾಗಿವೆ. ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ತೊಡಗಿಸಿಕೊಂಡ ವರದಾ ಶ್ರೀನಿವಾಸರು ಕನ್ನಡ ಸಾಹಿತ್ಯ ಪರಿಷತ್ತಿನ ಮಾಸಪತ್ರಿಕೆ ‘ಕನ್ನಡ ನುಡಿ’ಯ ಸಂಪಾದಕರಾಗಿ, ಕರ್ನಾಟಕ ಲೇಖಕಿಯರ ಸಂಘದ ಖಜಾಂಚಿಯಾಗಿ, ಕಾರ್ಯದರ್ಶಿಯಾಗಿ, ಅತ್ತಿಮಬ್ಬೆ ಲೇಖಕಿಯರ ಪರಿಷತ್ತಿನ ಅಧ್ಯಕ್ಷೆಯಾಗಿ,ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಘಟಕದ ಸಮಿತಿಯ ಸದಸ್ಯೆಯಾಗಿ, ಬಸವನಗುಡಿ ವಿಧಾನಸಭಾ ಕ.ಸಾ.ಪ ದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಸಾಹಿತ್ಯದ ಕೊಡುಗೆಗಾಗಿ ಶೇಷಮ್ಮ ಭಾಸ್ಕರರಾವ್‌ ದತ್ತಿ ನಿಧಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಜಿ.ಪಿ. ರಾಜರತ್ನಂ ಪ್ರಶಸ್ತಿ, ಧಾರವಾಡದ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಸುಭದ್ರ ಕುಮಾರಿ ಚೌಹಾನ್‌ ಜನ್ಮಶತಾಬದ್ದಿಪ್ರಶಸ್ತಿ, ಅಮೆರಿಕನ್ ಬಯೋಗ್ರಾಫಿಕಲ್‌ ಇನ್‌ಸ್ಟಿಟ್ಯೂಟ್‌ನ ಪ್ರೊಫೆಷನಲ್‌ ವಿಮೆನ್ಸ್‌ ಅಡ್ವೈಸರಿ ಬೋರ್ಡ್‌ನ ಗೌರವ ಸದಸ್ಯತ್ವ ಮುಂತಾದ ಗೌರವಗಳು ಲಭಿಸಿವೆ.

Details

Date:
July 28
Event Category: