ಡಾ. ವಸಂತ ಅನಂತ ದಿವಾಣಜಿ (ಕುಸುಮಾಕರ ದೇವರ ಗೆಣ್ಣೂರ)

Home/Birthday/ಡಾ. ವಸಂತ ಅನಂತ ದಿವಾಣಜಿ (ಕುಸುಮಾಕರ ದೇವರ ಗೆಣ್ಣೂರ)
Loading Events
This event has passed.

೧೫..೧೯೩೦ ವ್ಯಕ್ತಿಯ ಅಂತರಂಗದ ಮನೋ ವಿಶ್ಲೇಷಣಾತ್ಮಕ ವಿಚಾರಗಳಿಗೆ ಒತ್ತು ನೀಡುವ, ಬದುಕಿನ ವಿರಾಟ್‌ ಸ್ವರೂಪದ ವಾಸ್ತವ ದರ್ಶನ ಮಾಡಿಸುವ, ವ್ಯಕ್ತಿಯ ಅಂತರಂಗದ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಮುಖಾಮುಖಿಯಾಗಿಸುವ ವಿಚಾರಗಳಿಂದ ಕೂಡಿದ ನವ್ಯಮಾದರಿಯ ಕಾದಂಬರಿಗಳನ್ನು ಬರೆದ ವಸಂತ ದಿವಾಣಜಿ (ಕಾವ್ಯನಾಮ-ಕುಸುಮಾಕರ ದೇವರ ಗೆಣ್ಣೂರ)ಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ, ವಿಜಾಪುರ ತಾಲ್ಲೂಕಿನ ದೇವರ ಗೆಣ್ಣೂರ ಎಂಬ ಹಳ್ಳಿಯಲ್ಲಿ ೧೯೩೦ರ ಫೆ. ೧೫ ರಂದು. ತಂದೆ ಅನಂತ ದಿವಾಣಜಿ, ತಾಯಿ ನರ್ಮದಾ. ಪ್ರಾರಂಭಿಕ ಶಿಕ್ಷಣ ದೇವರ ಗೆಣ್ಣೂರು, ಹೊಸೂರು, ಬಾಬಾನಗರ, ಬಿಜ್ಜರಗಿ, ಗಲಗಲಿ ಮುಂತಾದ ಹಳ್ಳಿಗಳಲ್ಲಿ. ೧೪ ರ ಹರೆಯದ ಹಳ್ಳಿಯಲ್ಲಿ ಓದುತ್ತಿದ್ದಾಗ ಒಲಮ್ಮೆ ಬೇಂದ್ರೆಯವರ ಮನೆಗೆ ಹೋಗಿ ಯಾವುದೋ ಒಂದು ಪದ್ಯದ ಅರ್ಥ ತಿಳಿಯದೆಂದು ಕೇಳಿದಾಗ, “ಕವಿತಾಯಾವ ಭಾಷಾದಾಗದ? ಕನ್ನಡದಾಗೆ. ನಿನಗೆ ಕನ್ನಡ ಬರ್ತದೇನೂ? ಬರತದ. ಆದರೂ ಕವಿತಾ ತಿಳಿದಿಲ್ಲ, ಹೌದು. ಹಾಂಗಾದರ ಇದರ ಅರ್ಥ ಇಷ್ಟ, ನಿನಗ ಕನ್ನಡ ಬರತಿರಲಿಕ್ಕಿಲ್ಲ, ಅಥವಾ ಕವಿತಾ ಕನ್ನಡದಾಗಿಲ್ಲ” ಎಂದು ಹೇಳಿ ಪದ್ಯದ ಅರ್ಥ ಹೇಳಿದ ಬೇಂದ್ರೆಯವರ ಒಡನಾಟವನ್ನು ಹಲವಾರು ವರ್ಷ ಅನುಭವಿಸಿದವರು. ಓದಿದ ಹೈಸ್ಕೂಲಿನಲ್ಲಿಯೇ ಶಿಕ್ಷಕರಾಗಿ ನೇಮಕಗೊಂಡರು. ಆದರೆ ಬೇಂದ್ರೆಯವರ ಮಾರ್ಗದರ್ಶನದಲ್ಲಿ ಸೊಲ್ಲಾಪುರದ ದಯಾನಂದ ಕಾಲೇಜಿನಲ್ಲಿ ಎಂ.ಎ. ಪದವಿ ಪಡೆದ ನಂತರ ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಅಲ್ಲೇ ನಿವೃತ್ತರಾದರು. ಅವರು ಬೋಧನೆಯಷ್ಟೇ ಅಧ್ಯಯನದ ವಿಷಯಗಳನ್ನೂ ಬಹು ವಿಸ್ತಾರಗೊಳಿಸಿಕೊಂಡು ಕಲಿತದ್ದು ತತ್ತ್ವಜ್ಞಾನ, ಸಾಹಿತ್ಯ, ವಿಜ್ಞಾನ, ಹೋಮಿಯೋಪಥಿ, ಮನಃಶಾಸ್ತ್ರ ಮುಂತಾದ ಅನೇಕ ವಿಷಯಗಳು. ೧೯೬೬ರಲ್ಲಿ ರಂ.ಶ್ರೀ. ಮುಗುಳಿಯವರ ಮಾರ್ಗದರ್ಶನದಲ್ಲಿ ಪುಣೆಯ ವಿಶ್ವವಿದ್ಯಾಲಯಕ್ಕೆ “ಪುರಂದರ ದಾಸರ ಜೀವನ ಹಾಗೂ ಕೃತಿಗಳು: ಒಂದು ಅಧ್ಯಯನ” ಎಂಬ ಪ್ರೌಢ ಪ್ರಬಂಧ ಮಂಡಿಸಿ ಪಿಎಚ್‌.ಡಿ. ಪದವಿ ಪಡೆದರು. ಈ ಪ್ರೌಢ ಪ್ರಬಂಧವೇ ‘ಪ್ರಸಾದ ಯೋಗ’ ಎಂಬ ಹೆಸರಿನಿಂದ ೧೯೭೨ರಲ್ಲಿ ಪ್ರಕಟವಾಗಿದ್ದು, ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಮಠದಿಂದ ೨೦೦೬ರಲ್ಲಿ ಮರುಮುದ್ರಣಗೊಂಡಿದೆ. ಈ ಕೃತಿಗೆ ಜಿ. ವರದರಾಜರಾಯರು ವಿಸ್ತೃತ ಮುನ್ನುಡಿ ಬರೆದಿದ್ದಾರೆ. ಕುಸುಮಾಕರರು ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ್ದು ಕವಿಯಾಗಿ. ಇವರ ಮೊದಲ ಕವನ ಸಂಕಲನ ‘ಸ್ವಪ್ನನೌಕೆ’ ೧೯೫೪ರಲ್ಲಿ ಪ್ರಕಟವಾಯಿತು. ಇದರಲ್ಲಿರುವ ಕವಿತೆಗಳು ಮೈಸೂರು ಮಲ್ಲಿಗೆಯಲ್ಲಿರುವಂತಹ ದಾಂಪತ್ಯ ಗೀತೆಗಳೇ! ಜಿ. ಕೃಷ್ಣಮೂರ್ತಿ, ಅರವಿಂದರು, ರವೀಂದ್ರರು, ಕಾಫ್ಕ, ಕಾಮು, ಥೋರೋ, ಐನ್‌ಸ್ಟೀನ್‌, ಓಪನ್‌ ಹೀಮರ್, ಹೆಝೆನ್‌ ಬರ್ಗ್, ಡೇವಿಡೆಬೊಮ ಇವರುಗಳಿಂದ ಪ್ರಭಾವಿತರಾದ ನಂತರ ತಮ್ಮ ಜೀವನಾನುಭವವನ್ನೂ ಸಶಕ್ತವಾಗಿ ಅಭಿವ್ಯಕ್ತಿಪಡಿಸಲು ಕಾದಂಬರಿಯೇ ಸರಿಯಾದ ಮಾರ್ಗವೆನಿಸಿದ್ದರಿಂದ ಆ ಪ್ರಕಾರದೆಡೆಗೆ ಹೊರಳಿದರು. ಇವರು ಬರೆದ ಮೊದಲ ಕಾದಂಬರಿ ‘ಮುಗಿಯದ ಕಥೆ’ ೧೯೬೫ರಲ್ಲಿ ಪ್ರಕಟಗೊಂಡಿತು. ‘ನಾಲ್ಕನೆಯ ಆಯಾಮ’ ೧೯೬೬ರಲ್ಲಿ ಪ್ರಕಟಗೊಂಡಿದ್ದಲ್ಲದೆ ದ್ವಿತೀಯ ಮುದ್ರಣವನ್ನು ಕರ್ನಾಟಕ ಸಾಹಿತ್ಯ ಅಕಾಡಮಿ ಹೊರತಂದಿದೆ. ೧೯೯೩ರಲ್ಲಿ ‘ನಿರಿಂದ್ರಿಯ’, ೧೯೯೬ರಲ್ಲಿ ‘ಪರಿಘ’, ೧೯೯೮ರಲ್ಲಿ ಗಂಗಾಧರ ಗಾಡಗೀಳದ ಮರಾಠಿ ಕಾದಂಬರಿ ಅನುವಾದ ‘ದುರ್ದಮ್ಯ’ ವನ್ನೂ ಕನ್ನಡಕ್ಕೆ ತಂದು ಮರಾಠಿ ಭಾಷೆಯ ಮೇಲಿನ ಪ್ರೌಢತೆಯನ್ನು ವ್ಯಕ್ತ ಪಡಿಸಿದರು. ನಂತರ ಪ್ರಕಟವಾದ ಕಾದಂಬರಿ ಬಯಲು-ಬಸಿರು ೨೦೦೫ರಲ್ಲಿ ಪ್ರಕಟಗೊಂಡು ಮರಾಠಿಗೂ ಅನುವಾಗಿದ್ದಲ್ಲದೆ ಅಮೆರಿಕಾದ ಬ್ಲೂಮಿಂಗ್‌ಟನ್‌ ನಲ್ಲಿರುವ ಮೈ.ಶ್ರೀ. ನಟರಾಜರು  ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ೨೧.೧.೨೦೦೧ ರಂದು ಬೇಂದ್ರೆಯವರ ಜನ್ಮ ದಿನಾಚರಣೆಯ ನಿಮಿತ್ತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಉಪನ್ಯಾಸದಲ್ಲಿ ಬೇಂದ್ರೆಯವರ ಒಡನಾಟವನ್ನು ಜ್ಞಾಪಿಸಿಕೊಂಡ ಕುಸುಮಾಕರರು ವ್ಯಕ್ತಪಡಿಸಿದ ಆತ್ಮೀಯ ಭಾವನೆಗಳನ್ನು ಕರ್ನಾಟಕ ವಿಶ್ವವಿದ್ಯಾಲಯವು ‘ಗಾಳಿ ಹೆಜ್ಜೆ ಹಿಡಿದ ಸುಗಂಧ’ ಎಂಬ ಕೃತಿ ರೂಪದಲ್ಲಿ ಹೊರತಂದಿದೆ. ಕುಸುಮಾಕರರ ಸಾಹಿತ್ಯ ಸಾಧನೆಗಾಗಿ ‘ಸ್ವಪ್ನ ನೌಕೆ’ ಕಾವ್ಯಕೃತಿಗೆ ರಾಜ್ಯ ಸರಕಾರದ ಪ್ರಶಸ್ತಿ (೧೯೫೪) , ನಾಲ್ಕನೆಯ ಆಯಾಮ ಮತ್ತು ನಿರಿಂದ್ರಿಯ ಕಾದಂಬರಿಗಳಿಗೆ ಮತ್ತು ಒಟ್ಟಾರೆ ಸಾಹಿತ್ಯ ಸಾಧನೆಗೆ – ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಗಳಸಿದ್ದರೆ ದುರ್ದಮ್ಯ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ. ‘ಅವಗಾಹ’ ಕುಸುಮಾಕರ ದೇವರ ಗೆಣ್ಣೂರರಿಗೆ (೨೦೦೮) ಅರ್ಪಿಸಿದ ಗೌರವ ಗ್ರಂಥ ಮತ್ತು ‘ಬೊಗಸಿ ತುಂಬಾ ಭಕ್ತಿ ಹಿಡಿದು’ ಇವರ ಸಾಹಿತ್ಯ ಸಮೀಕ್ಷೆಯ ಕೃತಿಯೂ ಅರ್ಪಣೆಯಾಗಿದೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top