Loading Events

« All Events

  • This event has passed.

ಡಾ. ವಾಮನ ನಂದಾವರ

November 15

೧೫.೧೧.೧೯೪೪ ತುಳುಭಾಷೆಯ ಜಾನಪದ ಸಂಶೋಧಕರಲ್ಲಿ ಅತಿ ಪ್ರಮುಖರಲ್ಲೊಬ್ಬರೆನಿಸಿರುವ ನಂದಾವರ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನಂದಾವರದಲ್ಲಿ. ತಂದೆ ಬಾಬು ಬಾಳೆ ಪುಣಿ, ತಾಯಿ ಪೂವಮ್ಮ. ಬಂಟ್ವಾಳ ತಾಲ್ಲೂಕಿನ ಮುದುಂಗಾರು ಕಟ್ಟೆ, ಬಾಳೆ ಪುಣಿ ಮುಂತಾದೆಡೆಗಳಲ್ಲಿ ಎಲಿಮೆಂಟರಿ ಶಾಲೆ, ಪಾಣೆ ಮಂಗಳೂರಿನಲ್ಲಿ ಪ್ರಾಥಮಿಕ ಕುರ್ನಾಡುವಿನಲ್ಲಿ ಪ್ರೌಢಶಾಲೆ ಶಿಕ್ಷಣದ ನಂತರ ಕಾಲೇಜಿಗೆ ಸೇರಿದ್ದು ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜು, ಬಿ.ಎಸ್‌.ಸಿ ಪದವಿಯ ನಂತರ ಮಂಗಳೂರಿನ ಸರಕಾರಿ ಮಹಾವಿದ್ಯಾಲಯದಿಂದ ಬಿ.ಇಡಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ), ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂ.ಎಡ್ ಮತ್ತು ‘ಕೋಟಿ ಚನ್ನಯ ಜಾನಪದೀಯ ಅಧ್ಯಯನ’ ಪ್ರೌಢ ಪ್ರಬಂಧ ರಚಿಸಿ, ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ ಪದವಿ. ಬೆಂಗಳೂರಿನ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಹಾಯಕ ಅಧ್ಯಾಪಕರಾಗಿ ಶಿಕ್ಷಣ ವೃತ್ತಿಗೆ ಸೇರಿ ಸೇಂಟ್ ಆನ್ಸ್ ಪ್ರೌಢಶಾಲೆ, ಶಿಕ್ಷಕರ ತರಬೇತಿ ಕಾಲೇಜು, ಮಂಗಳೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರಾಗಿದ್ದಲ್ಲದೆ ಸಹ್ಯಾದ್ರಿ ಶಿಕ್ಣಣ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲಕರಾಗಿ, ಇಂದಿರಾ ಗಾಂಧಿ ರಾಷ್ತ್ರೀಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಮಾರ್ಗದರ್ಶಕರಾಗಿ ಪಿಲಿಕುಳಿ ನಿಸರ್ಗಧಾಮದ ಯೋಜನಾಧಿಕಾರಿಯಾಗಿ – ಹೀಗೆ ಹಲವಾರು ಹುದ್ದೆಗಳಲ್ಲಿ ಕಾರ‍್ಯನಿರ್ವಹಣೆ. ಜಾನಪದ ಕ್ಷೇತ್ರದಲ್ಲಿ ಆಸಕ್ತರಾಗಿದ್ದಂತೆ ಸೃಜನಶೀಲ ಸಾಹಿತ್ಯ ರಚನೆಯಲ್ಲಿಯೂ ಆಸಕ್ತರಾಗಿದ್ದು ಬರೆದ ಹಲವಾರು ಕವನಗಳು ಪತ್ರಿಕೆಗಳಲ್ಲಿ ಬೆಳಕು ಕಂಡಿದ್ದು, ಪ್ರಕಟಿಸಿದ ಮೊದಲ ಕವನ ಸಂಕಲನ ತಾಳ ಮೇಳ (೧೯೭೫). ನಂತರ ಪ್ರಕಟಿಸಿದ ತುಳು ಕವನ ಸಂಕಲನ ‘ಬೀರ’. ತುಳು ಭಾಷೆಯಲ್ಲಿಯೂ ಹಲವಾರು ಕೃತಿಗಳನ್ನು ರಚಿಸಿದ್ದು ತುಳು ಒಗಟುಗಳ ಸಂಕಲನ ‘ಓಲೆ ಪಟಾಕಿ’, ತುಳು ಜಾನಪದ ಪ್ರಬಂಧಗಳಾದ ‘ತುಳುವೆರೆ ಕುಸಾಲ್ ಕುಸೆಲ್’, ತುಳು ಜಾನಪದ ಅಧ್ಯಯನ ಪ್ರಬಂಧ ‘ಸಿಂಗದನ’, ತುಳು ದಂತಕಥೆಗಳಾದ ‘ತುಳುಟು ಪನಿಕತೆ’ ಮತ್ತು ‘ಒಂಜಿ ಕೋಪೆ ಕತೆಕುಲು’, ತುಳು ಜಾನಪದ ಕಥೆಗಳಾದ ‘ಕಿಡಿಗೇಡಿಯ ಕೀಟಲೆ’, ಮಕ್ಕಳ ಕಥೆ ‘ಕೋಟಿ ಚೆನ್ನಯ್ಯ’  ಮುಂತಾದವುಗಳಲ್ಲದೆ ತುಳು ಜನಾಂಗೀಯ ಅಧ್ಯಯನ, ತುಳುಭಾಷಾಧ್ಯಯನ ಮುಂತಾದ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವಲ್ಲದೆ ಸ್ಮರಣೀಯ ಮಹನೀಯರು, ತುಳು ಭಾಷಾ ಸಾಹಿತ್ಯದ ರನ್ನ ಡಿ.ಕೆ. ಚೌಟ ಮುಂತಾದ ವ್ಯಕ್ತಿ ಚಿತ್ರಗಳು; ಮನಶಾಸ್ತ್ರ ವಿಜ್ಞಾನಿಯ ಜೀವನ – ಸಾಧನೆ ಕುರಿತ ‘ಸರ್ ಜೀಮ್ಸ್ ಜಾರ್ಜ್ ಫ್ರೆಜರ್‌’, ಚಿಂತನೆಯ ಕೃತಿಗಳು ಮುಂತಾದವುಗಳನ್ನು ರಚಿಸಿದ್ದಾರೆ. ಹಲವಾರು ಕೃತಿಗಳನ್ನು ಸಂಪಾದಿಸಿದ್ದು ಡಿವಿ.ಜಿ ಯವರ ಸಾಹಿತ್ಯ ವಿಮರ್ಶೆ ‘ನಂಬಿಕೆ’, ಅಭಿನಂದನ ಗ್ರಂಥ ‘ಕಾಕಾನ ಅಭಿನಂದನೆ’ ಸ್ಮರಣ ಸಂಚಿಕೆ ‘ಪೆಂಗದೂಮ’, ಬರಹಗಾರರ ಕೈಪಿಡಿ ‘ತುಳು ಸಾಹಿತಿ ಕಲಾವಿದರ ಮಾಹಿತಿ’, ಕನ್ನಡ ಸಾಹಿತ್ಯ ಸಮ್ಮೇಳನದ ‘ಪೊನ್ನ ಕಂಠಿ’, ‘ಅಜ್ಜಿ ತಾಂಕಿನ ಪುಳ್ಳಿ’, ‘ನೆತ್ತರಾ ನೀರಾ’, ಮುಂತಾದ ತುಳು ನಾಟಕಗಳು, ತುಳು ಸಾಹಿತ್ಯ ಚರಿತ್ರೆ, ತುಳು ಜಾನಪದದ ಆಚರಣೆ, ಇವುಗಳಲ್ಲದೆ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯ ಮತ್ತು ತುಳು ವಿಶ್ವಸಮ್ಮೇಳನಕ್ಕಾಗಿ ಪ್ರಧಾನ ಸಂಪಾದಕರಾಗಿ ಹಲವಾರು ಪುಸ್ತಕಗಳು = ಹೀಗೆ ೭೫ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ವ್ಯಕ್ತಿ ನಿಷ್ಠ, ಕೃತಿ ನಿಷ್ಠ ಅಂಕಣ ಬರಹಗಳಿಂದ ಜಾನಪದದ ವಿಷಯವನ್ನು ಅಂಕಣ ಬರಹಕ್ಕೆ ಹೊಂದಿಸಿ ಬರೆದ ಅಂಕಣ ಬರಹಗಳ ಸಂಗ್ರಹ ‘ಜಾನಪದ ಸುತ್ತಮುತ್ತ’. ಅವಳಿ ವೀರರ ಕುರಿತಾದ ಜಾನಪದ ಮಹಾಕಾವ್ಯ ‘ಕೋಟಿ ಚೆನ್ನಯ್ಯ’, ವಾಮನ ನಂದಾವರರ ಪಿಎಚ್.ಡಿ ಮಹಾಪ್ರಬಂಧದ ಪರಿಷ್ಕೃತ ರೂಪದಲ್ಲಿ ಪ್ರಕಟವಾದ ಕೃತಿ. ಹಲವಾರು ರಾಷ್ಟ್ರೀಯ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಜಾನಪದ ಸಿದ್ಧಾಂತದ ಅಧ್ಯಯನ, ಕಮ್ಮಟಗಳಲ್ಲಿ ಪಾಲ್ಗೊಂಡು ತಮ್ಮ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ತುಳು ಪಠ್ಯ ಪುಸ್ತಕ ಸಮಿತಿ, ತುಳು ನಿಘಂಟು ಯೋಜನೆ, ತುಳು ಜಾನಪದ ಪತ್ರಿಕೆ ಮುಂತಾದವುಗಳ ಮಂಡಲಿಗಳಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದಾರೆ. ಮನೆಯನ್ನೇ ಒಂದು ಸ್ನೇಹ ಕೂಟದ ಚಾವಡಿಯಾಗಿ ರೂಪಿಸಿ ಕವಿ ಸಮ್ಮೇಳನ, ಸ್ನೇಹ ಸಮ್ಮೇಳನ, ಬೀದಿ ನಾಟಕ, ಚಿತ್ರಕಲಾಶಿಬಿರ, ಸಿನಿಮಾ, ಸಂಗೀತ ಗೋಷ್ಠಿಗಳು ನಡೆಯುವಂತೆ ಮಾಡಿದ್ದಾರೆ. ಅಧ್ಯಯನಕ್ಕೆ ಸಂಬಂಧಿಸಿದಂತೆ ಸುಮಾರು ೨೫೦ ಧ್ವನಿ ಸುರಳಿಗಳು, ೩೫೦೦ರಷ್ಟು ಗ್ರಂಥಗಳು, ಹಳೆಯ ಪತ್ರಿಕೆ, ಪಾಕ್ಷಿಕ, ಮಾಸಿಕ ಪತ್ರಿಕೆಗಳು, ವಿವಿಧ ಸಂಸ್ಥೆಗಳ ಸ್ಮರಣ ಸಂಚಿಕೆಗಳು, ಅಭಿನಂದನ ಗ್ರಂಥಗಳು ಮುಂತಾದವುಗಳ ದೊಡ್ಡ ಭಂಡಾರವೆ ಇದೆ. ‘ಹೇಮಾಂಶು’ ಪ್ರಕಾಶನವನ್ನು ಪ್ರಾರಂಭಿಸಿ ಸುಮಾರು ೧೦೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರು ರಚಿಸಿದ ಕೃತಿಗಳಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ತುಳುವೆರೆ ಕುಸಾಲ್ ಕುಸೆಲ್ ಕೃತಿಗೆ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಪ್ರಶಸ್ತಿ, ಸಿಂಗದನ ಮತ್ತು ಜಾನಪದ ಸುತ್ತ ಮುತ್ತ ಕೃತಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುರಸ್ಕಾರ, ‘ಕೋಟಿ ಚೆನ್ನಯ ಜಾನಪದೀಯ ಅಧ್ಯಯನ ಗ್ರಂಥಕ್ಕೆ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ, ವರ್ಷದ ಅತ್ಯತ್ತಮ ಬಹುಮಾನ, ಕೋಲ್ಕತ್ತಾದ ಎಂ.ಎಂ. ಅಕಾಡಮಿ ಪ್ರಶಸ್ತಿ, ಕೇರಳ ರಾಜ್ಯ ಪ್ರಶಸ್ತಿ, ಬೇಕಲ್ ಸಂತಾ ನಾಯರ ಪ್ರಶಸ್ತಿ, ತುಳು ಸಾಹಿತ್ಯ ನಾಟಕ ಅಕಾಡಮಿ ಗೌರವ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಪುರಸ್ಕಾರಗಳಲ್ಲದೆ ಬಂಟ್ವಾಳ ತಾಲ್ಲೂಕು ೧೨ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಮುಂತಾದ ಗೌರವಗಳು ದೊರೆತಿವೆ.

Details

Date:
November 15
Event Category: