Loading Events

« All Events

  • This event has passed.

ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ

August 6, 2023

..೧೯೫೦ ವೃತ್ತಿಯಲ್ಲಿ ವೈದ್ಯೆಯಾಗಿ, ವಿಶೇಷವಾಗಿ ಮಕ್ಕಳ ಹೃದಯತಜ್ಞೆಯಾಗಿ, ಬಡವರ ಬಗ್ಗೆ ಮಾನವೀಯತೆ, ಅನುಕಂಪದ ಗುಣಗಳನ್ನು ಹೊಂದಿರುವ, ಮನದಾಳದಲ್ಲಿ ಮೂಡುವ ಆರ್ದ್ರ ಭಾವಗಳಿಗೆ ಅಕ್ಷರ ರೂಪ ನೀಡುವ ಸಾಹಿತಿಯಾಗಿ ಓದುಗರ ಮನಸ್ಸನ್ನು ಸೆಳೆದಿರುವ ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ಹುಟ್ಟಿದ್ದು ೧೯೫೦ರ ಆಗಸ್ಟ್‌ ೬ರಂದು ಬೆಳಗಾವಿಯಲ್ಲಿ. ತಂದೆ ಈಶ್ವರಪ್ಪ ಗುರುಸಿದ್ಧಪ್ಪ ಬಾಳೇಕುಂದ್ರಿ, ತಾಯಿ ಸಿದ್ದವ್ವ. ತಂದೆ ಮುಂಬಯಿ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯದಲ್ಲಿ ಚಿನ್ನದ ಪದಕದೊಡನೆ ಪದವಿ ಪಡೆದಿದ್ದಲ್ಲದೆ ವೈಸ್‌ರಾಯ್‌ರವರಿಂದ ಪ್ರಶಸ್ತಿ ಪಡೆದ ಪ್ರತಿಭಾನ್ವಿತರು. ತಾಯಿಯ ತಂದೆ ರಾವಬಹದ್ದೂರ್ ವೈಜನಾಥ ಅನಗೋಳ್‌ರವರು ಬೆಳಗಾವಿಯ ಕೆ.ಎಲ್‌.ಇ. ಸೊಸೈಟಿಯ ಸಂಸ್ಥಾಪಕರಲ್ಲೊಬ್ಬರು, ಸುಶಿಕ್ಷಿತ, ಸುಸಂಸ್ಕೃತ ಮನೆತನ. ಪ್ರಾರಂಭಿಕ ಶಿಕ್ಷಣ ಬೆಳಗಾವಿ ಹಾಗೂ ಬೆಂಗಳೂರು, ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಚಿತ್ರಕಲೆ, ನೃತ್ಯ  ಮುಂತಾದವುಗಳಲ್ಲಿ ಆಸಕ್ತಿರಾಗಿದ್ದರೂ ಕಲಿಯಲು ಅವಕಾಶ ದೊರೆಯದೆ ಹುಬ್ಬಳ್ಳಿಯ ಕೆ.ಎಂ.ಸಿ. ಕಾಲೇಜಿನಿಂದ ಪಡೆದ ಎಂ.ಬಿ.ಬಿ.ಎಸ್‌. ಪದವಿ ಮದುವೆಯನಂತರವೇ ಸೇರಿದ್ದು ಎಂ.ಡಿ. ಪದವಿಗಾಗಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಮೊದಲ ರ‍್ಯಾಂಕ್‌ ಪಡೆದು ಡಾ. ಷಡಕ್ಷರಪ್ಪ ಚಿನ್ನದ ಪದಕ ಪಡೆದರೂ ಘಟಿಕೋತ್ಸವಕ್ಕೆ ಹಾಜರಾಗಲು ಐದು ದಿವಸದ ಮಗು ಇವರನ್ನೂ ಬಿಡಲಿಲ್ಲ. ಡಿ.ಎಂ. ಕಾರ್ಡಿಯಾಲಜಿಯಲ್ಲಿ ಸೂಪರ್ ಸ್ಪೆಷಲೈಸೇಷನ್‌ ಪಡೆಯುವಲ್ಲಿಯೂ ಪ್ರವೇಶ ಪಡೆಯಲು ಹೋರಾಟ ನಡೆಸಿ, ಪ್ರವೇಶ ದೊರಕಿಸಿಕೊಂಡು ಡಿ.ಎಂ. ಕಾರ್ಡಿಯಾಲಜಿಯಲ್ಲಿ ಕರ್ನಾಟಕದ ಪ್ರಪ್ರಥಮ ಮಹಿಳಾ ಹೃದಯ ತಜ್ಞೆ ಎನಿಸಿಕೊಂಡರು. ನಂತರ ೧೯೯೮ ರಲ್ಲಿ ದೆಹಲಿಯ ಎಸ್ಕಾರ್ಟ್‌ಸ್‌ ಹಾರ್ಟ್ ಇನ್‌ಸ್ಟಿಟ್ಯೂಟ್‌ ಮತ್ತು ಆಲ್‌ ಇಂಡಿಯಾ ಮೆಡಿಕಲ್‌ ಸೈನ್ಸ್‌ಸ್‌ನಿಂದ ವಿಶೇಷ ತರಬೇತಿ ಪಡೆದಿದ್ದಲ್ಲದೆ ಅಮೆರಿಕದ ಮಿನಿಯ ಪೊಲಿಸ್‌, ರಾಚೆಸ್ಟರ್, ಬಾಸ್ಟನ್‌, ಚಿಕಾಗೋಗಳಲ್ಲೂ ವಿಶೇಷ ತರಬೇತಿ ಪಡೆದು ಬಂದರು. ವೈದ್ಯಕೀಯ ಸೇವೆಗಾಗಿ ಸೇರಿದ್ದು ಹುಬ್ಬಳ್ಳಿಯ ಕೆ.ಎಂ.ಸಿ. ಮೆಡಿಕಲ್‌ ಕಾಲೇಜಿನಲ್ಲಿ. ನಂತರ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆ ಬೆಂಗಳೂರು ಮೆಡಿಕಲ್‌ ಕಾಲೇಜ್‌, ರಾಜಾಜಿನಗರದ ಇ.ಎಸ್‌.ಐ. ಆಸ್ಪತ್ರೆ. ಇದೀಗ ಜಯದೇವ ಹೃದ್ರೋಗ ವಿದ್ಯಾಲಯದಲ್ಲಿ ವೈದ್ಯರಾಗಿ, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಣೆ. ಮೊದಲು ವಯಸ್ಕರಿಗಷ್ಟೇ ಹೃದಯ ಚಿಕಿತ್ಸೆಯಲ್ಲಿ ನಿರತರಾಗಿದ್ದವರನ್ನು ಮಕ್ಕಳ ಹೃದಯ ಚಿಕಿತ್ಸೆಯ ಕಡೆ ಗಮನ ಹರಿಸುವಂತೆ ಮಾಡಿದವರು ಸ್ನೇಹಿತೆ ಎಲಿಜಬೆತ್‌ ಬ್ರಾನ್‌ಲಿನ್‌ ಎಂಬಾಕೆ. ಮಕ್ಕಳಲ್ಲೂ ಹೃದಯದ ತೊಂದರೆಗಳಿರುತ್ತದೆಂಬ ಕಲ್ಪನೆಯೇ ಇರದಿದ್ದ ಬಾಳೇಕುಂದ್ರಿಯವರನ್ನೂ ಹೊಸ ಆಲೋಚನೆಯತ್ತ ತಳ್ಳಿತು. ಇದರಿಂದ ಪ್ರೇರಿತರಾದ ಬಾಳೇಕುಂದ್ರಿಯವರು ಮಕ್ಕಳ ಹೃದಯದ ಸಮಸ್ಯೆಗಳತ್ತ ಮೊದಲ ಆದ್ಯತೆ ನೀಡಿ ಕರ್ನಾಟಕದಲ್ಲಿ ಮಕ್ಕಳ ಹೃದಯ ಚಿಕಿತ್ಸಾ ಕೇಂದ್ರವನ್ನು ಜಯದೇವ ಆಸ್ಪತ್ರೆಯಲ್ಲಿ ಪ್ರಾರಂಭಿಸುವಲ್ಲಿ ಯಶಸ್ವಿಯಾದರು. ಇದರಿಂದ ಸಾವಿರಾರು ಮಕ್ಕಳ ಹೃದಯದ ತೊಂದರೆಗಳನ್ನೂ ಶಸ್ತ್ರಕ್ರಿಯೆ ಇಲ್ಲದೆಯೇ ಅತ್ಯಾಧುನಿಕ ತಂತ್ರಜ್ಞಾನವನ್ನಳವಡಿಸುವ ಮೂಲಕ ಸಾಧಿಸಿದರು. ಇನ್ನೂ ಮುಂದುವರೆದು ಮಕ್ಕಳಲ್ಲಿ ಹುಟ್ಟಿನಿಂದಲೇ ಬರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸಲು ರಾಷ್ಟ್ರೀಯ ನಿಯಮವೊಂದನ್ನು ರೂಪಿಸಿ ಮಕ್ಕಳ ತಜ್ಞವೈದ್ಯರಿಗೆ ಅಗತ್ಯ ತರಬೇತಿ ನೀಡಿ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಎಂ.ಡಿ. ಮತ್ತು ಡಿ.ಸಿ.ಎಚ್‌ ಅಧ್ಯಯನದಲ್ಲಿ ನಿರತರಾಗಿರುವವರಿಗೆ ಸೂಕ್ತ ತರಬೇತಿ ನೀಡತೊಡಗಿದರು. ಶಸ್ತ್ರಕ್ರಿಯೆ ಇಲ್ಲದೆ ಮಕ್ಕಳಲ್ಲಿನ ಹೃದಯ ಸಂಬಂಧಿ ತೊಂದರೆಗಳನ್ನು ನಿವಾರಿಸುವಲ್ಲಿ ವಿಶ್ವದಲ್ಲೇ ಪ್ರಥಮ ವೈದ್ಯೆ  ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಕರ್ನಾಟಕದ್ಲೂ ಪ್ರಪ್ರಥಮವಾಗಿ ಹೃದಯದ ರಂಧ್ರವನ್ನೂ ಶಸ್ತ್ರ ಕ್ರಿಯೆ ನಡೆಸದೆ ಅಂಪ್ಲೇಟ್ಚರ್ ಡಿವೈಸ್‌ನಿಂದ ಮುಚ್ಚಿದ ಖ್ಯಾತಿಯೂ ಇವರದ್ದೇ ಆಗಿದೆ. ಕೆನಡದ ಟೊರೆಂಟೊದಲ್ಲಿ ನಡೆದ ವರ್ಲ್ಡ್‌ಕಾಂಗ್ರೆಸ್‌ನಲ್ಲಿ ಪ್ರಬಂಧ ಮಂಡಿಸಿದಾಗ ನೆರೆದಿದ್ದ ೫೬ ದೇಶಗಳ ಮಕ್ಕಳ ಹೃದ್ರೋಗ ತಜ್ಞರಿಂದ ಪ್ರಶಂಸಿಸಲ್ಪಟ್ಟಾಗ ಇವರಿಗೆ ಹೇಳತೀರದ ಸಂತಸ ಉಂಟಾಯಿತು. ಆದರೆ ತಂದೆಯಿಂದ ಬಂದ ಪ್ರಶಂಸೆ ಎಂದರೆ – “ಅಲ್ಲಿ ಪ್ರಬಂಧ ಮಂಡಿಸಿದ ಪ್ರಯೋಜನವಾದರೂ ಏನು? ನೀನು ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಕನ್ನಡದಲ್ಲಿ ಬರೆ. ನೀನು ಕಲಿತ ವಿದ್ಯೆ, ಬುದ್ಧಿಯ ಪ್ರಯೋಜನ ನಮ್ಮ ಜನರಿಗೂ ದೊರೆಯುತ್ತದೆ” ಎಂದಾಗ, ಆ ದಿಕ್ಕಿನಲ್ಲಿ ಯೋಜಿಸಿದ ಬಾಳೇಕುಂದ್ರಿಯವರು ಕನ್ನಡದಲ್ಲಿ ಬರೆದು ಆರೋಗ್ಯದ ಬಗ್ಗೆ ಎಚ್ಚರಿಸಿ ಬೆಳಕು ನೀಡಬೇಕು ಎಂದು ನಿರ್ಧರಿಸಿದರು. ಹದಿನೆಂಟರ ವಯಸ್ಸಿನಲ್ಲಿ ಬಾದಾಮಿ ಬನಶಂಕರಿದೇವಿಯ ದರ್ಶನಕ್ಕೆ ಹೋಗಿದ್ದಾಗ ರೊಟ್ಟಿ ಮಾರುವ ಅಜ್ಜಿಯೊಬ್ಬಳ ಬಲವಂತಕ್ಕೆ ಮಣಿದು ರೊಟ್ಟಿ ಕೊಂಡು ತಿಂದು ತೃಪ್ತಿಯಾದಾಗ, ಅವಳ ಪ್ರಾಮಾಣಿಕತೆಗೆ ಮೆಚ್ಚಿ ನೂರರ ನೋಟೊಂದನ್ನೂ ಆಕೆಗೆ ಕೊಟ್ಟಾಗ, ‘ನೂರುರೂಪಾಯಿಗೂ ರೊಟ್ಟಿ ತಗೊಂಡು ನಿಮ್ಮ ಹೆಸರಾಗೆ ಹಸಿದವರಿಗೆ ಹಂಚಿರಿ’ ಎಂದದ್ದೇ ಇವರ ಕಣ್ಣು ತೆರೆಸಿ ಹಂಚಿ ತಿನ್ನುವ ಬುದ್ಧಿಯನ್ನು ಆ ಅಜ್ಜಿ ಕಲಿಸಿತ್ತು. ಇದನ್ನೇ ಪ್ರಜಾವಾಣಿ ವಾಚಕರ ವಿಭಾಗಕ್ಕೆ ‘ಬಡವರ ಪ್ರಾಮಾಣಿಕತೆಗೆ ಬರ ಇಲ್ಲ’ ಎಂದು  ತಲೆಬರಹ ನೀಡಿ ಬರದದ್ದು ಪ್ರಕಟಗೊಂಡ ನಂತರ, ಪ್ರಜಾವಾಣಿ ಸಂಪಾದಕವರ್ಗದವರಿಂದ ಅಂಕಣ ಬರೆಯಲು ಆಹ್ವಾನಿಸಿ ಬರೆದ ಲೇಖನಗಳು ಹಲವಾರು. ಶಿಕ್ಷಣ, ಮದ್ಯಪಾನದ ಆಪತ್ತು, ಮಹಿಳೆಯರ ಹೊಣೆ ಹೀಗೆ ಹಲವು ಹತ್ತು ವಿಷಯಗಳ ಬಗ್ಗೆ ‘ಜೀವನಧಾರೆ’ ಎಂಬ ಅಂಕಣದಲ್ಲಿ ಪ್ರಕಟಗೊಂಢಾಗ ಪ್ರಜ್ಞಾವಂತ ಓದುಗರಿಂದ ದೊರೆತ ಪ್ರಶಂಸೆ. ಇವು ಸಂಗ್ರಹ ರೂಪದಲ್ಲಿ ‘ಜೀವನಧಾರೆ’, ‘ಜೀವನ ಜ್ಯೋತಿ’ಯಾಗಿ ಪುಸ್ತಕ ರೂಪದಲ್ಲಿ ಸಪ್ನಬುಕ್‌ ಹೌಸ್‌ ಹೊರತಂದಿದೆ. ವೈದ್ಯೆಯಾದರೂ ಹೀಗೆ ತಮ್ಮ ಸೃಜನಶೀಲ ಪ್ರತಿಭೆಯಿಂದ ಹಲವಾರು ಕೃತಿ ರಚಿಸಿ ಕನ್ನಡ ಸಾಹಿತ್ಯಲೋಕವನ್ನೂ ಶ್ರೀಮಂತಗೊಳಿಸುವವರಲ್ಲಿ ಒಬ್ಬರಾಗಿದ್ದಾರೆ. ನಂತರ ಇದೇ ಸಪ್ನ ಬುಕ್‌ ಹೌಸ್‌ಗಾಗಿ ಬರೆದ ಕೃತಿ ‘ಜೀವನ ಸಂಜೀವಿನಿ’. ಇಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಮಾರ್ಗಸೂಚಿಯಲ್ಲಿ ಕೋಪಶಮನ, ನಗು, ಧ್ಯಾನ, ವ್ಯಾಯಾಮ, ಅಭ್ಯಾಸಗಳು, ಜೀವನಶೈಲಿ ಹೀಗೆ ೧೦ ಅಧ್ಯಾಯಗಳಲ್ಲಿ ಸಾಮಾನ್ಯಜ್ಞಾನ, ವಿಜ್ಞಾನ, ಅಧ್ಯಾತ್ಮಿಕ ವಿಷಯಗಳ ಸಂಮಿಶ್ರಣ ಮಾಡಿ ಪಾಮರರಿಗೂ ಅರ್ಥವಾಗುವಂತೆ ತಿಳಿಸುವ ಪ್ರಮುಖ ಕೃತಿಯಾಗಿದೆ. ಹೀಗೆ ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡಲು ಬರವಣಿಗೆಯ ಮಾಧ್ಯಮವನ್ನೂ ಆಯ್ದುಕೊಂಡು ‘ಸಮಾಜ ವಿಕಾಸಕ್ಕೆ ಶರಣ ಸಂಸ್ಕೃತಿ’, ‘ಕಾಯಕ ಯೋಗಿ ಬಾಳೇಕುಂದ್ರಿ’, ‘ಮಕ್ಕಳಲ್ಲಿ ಜನನದಿಂದ ಬರುವ ಹೃದಯದ ಕಾಯಿಲೆ ಮತ್ತು ವಿಜಯ’ ‘ಸಮೃದ್ಧ ಕರ್ನಾಟಕಕ್ಕೆ ಸದೃಢ ಹೃದಯ’, ‘ನಮ್ಮ ಹೃದಯ’, ‘ನಮ್ಮ ಹೃದಯ ಅಮೂಲ್ಯ ಆಸ್ತಿ’ ಹಾಗೂ ಮಕ್ಕಳಿಗಾಗಿ ಪುಟಾಣಿ ಪದಗಳು, ಕನ್ನಡ ಕಂದಮ್ಮನ ಕವನಗಳಲ್ಲದೆ ಆಧ್ಯಾತ್ಮಿಕ ಚಿಂತನೆಗಳಲ್ಲೂ ತೊಡಗಿಸಿಕೊಂಡಿದ್ದು ಹನಿಗವನ, ಭಕ್ತಿಗೀತೆ, ಭಾವಗೀತೆಗಳ ಕನ್ನಡದ ಸಿಡಿ ಅಲ್ಲದೆ ರುಮ್ಯಾಟಿಕ್‌ ಫೀವರ್ ಅಂಡ್‌ ರುಮ್ಯಾಟಿಕ್‌ ಹಾರ್ಟ್ ಡಿಸೀಸಸ್‌ (ಬ್ಯಾಂಕಾಕ್‌ನಲ್ಲಿ ಬಿಡುಗಡೆಗೊಂಡ ಕೃತಿ) ಮತ್ತು ಹೃದ್ರೋಗ ತಜ್ಞರಿಗಾಗಿ ಬರೆದ ಕೃತಿ ‘ಸ್ಬೆಪ್‌ ಬೈ ಸ್ಟೆಪ್‌ಟು. ಎಕೊ ಕಾರ್ಡಿಯೊಗ್ರಾಂ’ ಕೃತಿಗಳನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಇವಲ್ಲದೆ ೫೦ ಕ್ಕೂ ಹೆಚ್ಚು ವೈದ್ಯಕೀಯ ಬರಹಗಳು, ೧೦೫ ಕ್ಕೂ ಹೆಚ್ಚು ವೈದ್ಯಕೀಯ ಸಂಶೋಧನ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಂಡಿಸಿದ್ದಾರೆ. ದಿನಪತ್ರಿಕೆ, ವಾರಪತ್ರಿಕೆ, ರೇಡಿಯೋ, ಟಿವಿ ವಾಹಿನಿಗಳಲ್ಲಿ ಸುಮಾರು ೪೫೦ ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ. ಬಹುಮುಖ ಪ್ರತಿಭೆಯ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿಯವರಿಗೆ ಅಮೆರಿಕದಲ್ಲಿ ಸಾರ್ವಜನಿಕ ಸನ್ಮಾನ, ಡಾ.ಬಿ.ಸಿ. ರಾಯ್‌ ಪ್ರಶಸ್ತಿ , ಜೀವನ ಸಾಧನೆಗಾಗಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ, ರಾಷ್ಟ್ರಪತಿ ಪ್ರತಿಭಾ ಪಾಟೀಲ, ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ರವರಿಂದ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ರೋಟರಿಕ್ಲಬ್‌ನ ಪ್ರೊಫೆಷನಲ್‌ ಎಕ್ಸಲೆನ್ಸಿ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ವಿಶ್ವಮಾನವ ಪ್ರಶಸ್ತಿ, ವಚನ ಪಿತಾಮಹ ಫ.ಗು.ಹಳಕಟ್ಟಿ ಪ್ರಶಸ್ತಿ, ಡಾ. ವಿಜಯಾ ಶ್ರೀನಿವಾಸ್‌ ಸ್ಮಾರಕ ಪ್ರಶಸ್ತಿ, ಬಸವೇಶ್ವರ ಸಮಿತಿಯ ‘ಕಾಯಕಶ್ರೀ’ ಪ್ರಶಸ್ತಿ, ರಾಜ್ಯ ಭೂಷಣ ಪ್ರಶಸ್ತಿ, ಕರ್ನಾಟಕದ ಪದ್ಮಶ್ರೀ ಪ್ರಶಸ್ತಿ, ಶ್ರೀ ರೇಣುಕಾಚಾರ್ಯಪುರಸ್ಕಾರ, ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌, ಅಮೇರಿಕದ ಚಿಕಾಗೊ ಹಾಗೂ ಬಾಸ್ಟನ್‌ ನಗರಗಳಲ್ಲಿನ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಅತ್ಯುತ್ತಮ ಪ್ರಬಂಧಗಳೆಂಬ ಹೆಗ್ಗಳಿಕೆ, ಹಲವಾರು ಪ್ರಥಮಗಳನ್ನು ಸಾಧಿಸಿದ್ದು, ಇಪ್ಪತ್ತೆರಡು ಚಿನ್ನದ ಪದಕಗಳನ್ನು ಗಳಿಸಿ ‘ಚಿನ್ನದ ರಾಣಿ’ ಎನಿಸಿದ್ದಾರೆ. ಹೀಗೆ ವಿವಿಧ ವೃತ್ತಿಯಲ್ಲಿದ್ದುಕೊಂಡು ಪ್ರವೃತ್ತಿಯಿಂದ ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಸಾಹಿತಿಗಳಂತೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿರುವವರಲ್ಲಿ ವೈದ್ಯೆಯಾದ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ಪ್ರಮುಖರು.

Details

Date:
August 6, 2023
Event Category: