೦೧.೦೨.೧೯೫೭ ಪುರುಷ ಪ್ರಧಾನ ವ್ಯವಸ್ಥೆಯಲ್ಲಿನ ಪೂರ್ವಾಗ್ರಹದ ಬಗ್ಗೆ, ಮಹಿಳೆಯರ ಶೋಷಣೆ ಸವಾಲುಗಳ ಬಗ್ಗೆ ವೇದಿಕೆಗಳಲ್ಲಿ ದಿಟ್ಟತನದಿಂದ ತಮ್ಮ ಅನಿಸಿಕೆಗಳನ್ನು ಮಂಡಿಸುತ್ತಾ ಬಂದಿರುವ ವಿಜಯಶ್ರೀ ಸಬರದ ರವರು ಹುಟ್ಟಿದ್ದು ಬೀದರ್ನಲ್ಲಿ ಫೆಬ್ರವರಿ ೧ ರ ೧೯೫೭ ರಲ್ಲಿ. ತಂದೆ ಗುಣವಂತರಾವ ಪಾಟೀಲರು, ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಪಡೆದದ್ದು ಬೀದರ್ನಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಮತ್ತು “ಅನುಪಮ ನಿಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರೌಡ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಬೋಧಕ ವೃತ್ತಿ, ಬೀದರ್ನ ಅಕ್ಕಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯ ಹುದ್ದೆ. ನಂತರ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ, ಇದೀಗ ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸಲ್ಲಿಸುತ್ತಿರುವ ಸೇವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಇವರು ಗುಲಬರ್ಗಾ ವಿ.ವಿ.ದ ಕಲಾನಿಕಾಯದ ಸದಸ್ಯರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ಕೌನ್ಸಿಲ್ ಸದಸ್ಯರಾಗಿ, ಗುಲಬರ್ಗಾ ಹಾಗೂ ಇತರ ವಿ.ವಿ.ಗಳ ಪರೀಕ್ಷಾ ಮಂಡಲಿಯ ಛೇರ್ಮನ್ ಆಗಿ, ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನ್ ಆಗಿ, ವಿದ್ಯಾವಿಷಯಕ ಪರಿಷತ್ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರತರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ೮ ವಿದ್ಯಾರ್ಥಿಗಳು ಎಂ.ಫಿಲ್. ಹಾಗೂ ಇಬ್ಬರಿಗೆ ಪಿಎಚ್.ಡಿ. ಪದವಿಗಳು ಲಭಿಸಿವೆ. ಶಾಲಾ ಕಾಲೇಜು ದಿನಗಳಿಂದಲೂ ಕಾವ್ಯದ ಬಗ್ಗೆ ಅತೀವ ಆಸಕ್ತಿ, ಕುತೂಹಲ ಬೆಳೆಸಿಕೊಂಡದ್ದು ಇವರ ಕವಿತೆಗಳು ಹಲವಾರು ಪ್ರಸಿದ್ಧ ಪತ್ರಿಕೆಗಳಲ್ಲಿ ಬೆಳಕು ಕಂಡಿರುವುದಲ್ಲದೆ ‘ಜ್ವಲಂತ’, ‘ಲಕ್ಷ್ಮಣರೇಖೆ ದಾಟಿದವರು’, ‘ಮುಗಿಲ ಮಲ್ಲಿಗೆ’ ಮುಂತಾದ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಉರಿಲಿಂಗ’, ‘ಹೂವಿನ ತೇರನೇರಿ ಹೂವಾದವರು’, ‘ಎರಡು ನಾಟಕಗಳು’ ಇವರ ಪ್ರಮುಖ ನಾಟಕ ಕೃತಿಗಳಾದರೆ; ಸಾಹಿತ್ಯ ಮತ್ತು ಮಹಿಳೆ ತ್ರಿವೇಣಿಯವರ ಕಾದಂಬರಿಗಳು, ಅಕ್ಕಮಹಾದೇವಿ, ಶಿವಶರಣರ ದೃಷ್ಟಿಯಲ್ಲಿ ಬಸವಣ್ಣ , ವಚನ ವಾಹಿನಿ, ಮೋಳಿಗೆ ಮಾರಯ್ಯ, ಶಿವಶರಣೆಯರು ಪ್ರಸ್ತುತ ಸಂದರ್ಭ, ಜಾನಪದ ಮತ್ತು ಮಹಿಳೆ ಎಂಬ ವಿಮರ್ಶಾ ಗ್ರಂಥಗಳನ್ನು ರಚಿಸಿದ್ದಾರೆ. ಇವರು ಸಂಪಾದಿಸಿರುವ ಕೃತಿಗಳು: ಗುರುಶಿಷ್ಯರ ತತ್ವಪದಗಳು, ಅಕ್ಕ, ವಿಚಾರ ಸಾಹಿತ್ಯ, ವಿಮರ್ಶಾಲೇಖನಗಳು, ಮಹಿಳೆ ಶೋಷಣೆ ಸವಾಲುಗಳು, ಅಕ್ಕನ ಅನನ್ಯತೆ, ಹುಸನಾಸಾಬನ ತತ್ತ್ವಪದಗಳು, ವೈಚಾರಿಕ ಲೇಖನಗಳ ಸಂಗ್ರಹ, ಆಧುನಿಕ ಕವಿತೆಗಳು ಮುಂತಾದ ಒಂಬತ್ತು ಕೃತಿಗಳನ್ನು ಸಂಪಾದಿಸಿದ್ದಾರೆ. ದಸರಾ ಉತ್ಸವ, ಹಂಪಿ ಉತ್ಸವ, ಮಳಖೇಡ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಆಕಾಶವಾಣಿ-ದೂರದರ್ಶನಗಳ ಕವಿಗೋಷ್ಠಿಗಳಲ್ಲಿ ಭಾಗಿಯಾಗಿದ್ದಲ್ಲದೆ ಹಲವಾರು ಸಮ್ಮೇಳನ, ಸಂಕಿರಣ, ಕಮ್ಮಟಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ‘ಸಾಹಿತ್ಯ ಸಂವಹನ’ ಕೃತಿಗೆ ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ, ‘ಜಾನಪದ ಮತ್ತು ಮಹಿಳೆ’ ಕೃತಿಗೆ ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ, ‘ಎರಡು ನಾಟಕಗಳು’ ಕೃತಿಗೆ ಗುಲಬರ್ಗಾ ವಿ.ವಿ.ದ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಿಂಧೂರ ದತ್ತಿ ಪ್ರಶಸ್ತಿ ಮತ್ತು ಎಂ.ಜಿ. ರಂಗನಾಥನ್ ಸ್ಮರಣಾರ್ಥ ನಾಟಕ ಪ್ರಶಸ್ತಿ, ‘ಮುಗಿಲ ಮಲ್ಲಿಗೆ’ ಕವನ ಸಂಕಲನಕ್ಕೆ ನೂರೊಂದೇಶ್ವರ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ.

