ಡಾ. ವಿಜಯಾ ಸುಬ್ಬರಾಜ್

Home/Birthday/ಡಾ. ವಿಜಯಾ ಸುಬ್ಬರಾಜ್
Loading Events
This event has passed.

೨೦-೪-೧೯೪೭ ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಸೀತಾರಾಂ, ತಾಯಿ ಲಕ್ಷ್ಮಿ. ವಿದ್ಯಾಭ್ಯಾಸವೆಲ್ಲವೂ ಬೆಂಗಳೂರಿನಲ್ಲೇ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಂ.ಎ., ಎಲ್.ಎಲ್.ಬಿ. ಮತ್ತು ಫ್ರೆಂಚ್ ಭಾಷೆಯ ಡಿಪ್ಲೊಮ ಪದವಿ. ಜೊತೆಗೆ ಹಿಂದಿ ಸಾಹಿತ್ಯರತ್ನ ಪದವೀಧರೆ. ಉದ್ಯೋಗಕ್ಕೆ ಸೇರಿದ್ದು ಎಂ.ಇ.ಎಸ್. ಕಾಲೇಜು, ಪ್ರಾಧ್ಯಾಪಕರ ಹುದ್ದೆ. ನಿವೃತ್ತಿಯ ತನಕವೂ ಅಲ್ಲೇ ಸೇವೆ. ‘ಕನ್ನಡದಲ್ಲಿ ಗೀತ ನಾಟಕಗಳು : ಒಂದು ಅಧ್ಯಯನ’ ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಸುಮಾರು ಐವರು ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಮಾರ್ಗದರ್ಶನ, ಯಶಸ್ವಿ ಪದವಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಓದುವ ಬರೆಯುವ ಹವ್ಯಾಸ. ಹಲವಾರು ಲೇಖನಗಳು, ಕಥೆ, ಕವನ, ನಾಟಕಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಿತ. ಆಕಾಶವಾಣಿ, ದೂರದರ್ಶನಕ್ಕಾಗಿ ಶಬ್ದ ಚಿತ್ರಗಳು, ಭಾಷಣಗಳು, ಲೇಖನಗಳು, ವಿಮರ್ಶೆ, ಚಿಂತನೆಗಳು, ನಾಟಕಗಳು, ಸಂದರ್ಶನಗಳ ಕೊಡುಗೆ, ಪ್ರಸಾರ. ಹಲವಾರು ಸಾಹಿತ್ಯ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಕಥೆ, ಕವನ, ಪ್ರಶಸ್ತಿಗಳ ಆಯ್ಕೆ ಸಮಿತಿಯ ಸದಸ್ಯೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಕಾರಿ ಪಟ್ಟ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಮ್ಮಟ, ವಿಚಾರ ಸಂಕಿರಣಗಳಲ್ಲಿ  ಭಾಗಿ. ಹಲವಾರು ಸಂಭಾವನ ಗ್ರಂಥಗಳಿಗೆ ಬರದ ಲೇಖನಗಳು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಹಲವಾರು ಕೃತಿ ಪ್ರಕಟಿತ. ಕವನ ಸಂಕಲನ-ತ್ರಿಶಂಕು, ಏನು ಹೇಳಲಿ ಗೆಳೆಯ, ಹಾಡೇನ ಪಾಡೇನ, ಈ ತೆರದ ನಿರೀಕ್ಷೆಯಲ್ಲಿ, ವಸುಂಧರೆಯ ಪ್ರಾಯ. ನಾಟಕಗಳು-ಪಾಂಚಾಲಿ, ಪಾದ್ರಿಯೊಬ್ಬನ ಕಥೆ, ನಗರ ವಧು ಸಾಲವತಿ, ಪ್ರೇಮ ಸಮಾ, ಮಿಲನ, ಮತ್ತೊಂದು ಮಹಾಭಾರತ, ದಂಗೆ ಎದ್ದವಳು. ಕಾದಂಬರಿಗಳು-ತಪ್ಪಿದ ಹೆಜ್ಜೆಗಳು, ಬುವಿಯಿಂದ ಬಾನಿಗೆ, ಹರಿದತ್ತ ಹರಿವ ಚಿತ್ತ, ನಡು ವಯಸ್ಸಿನಲ್ಲಿ (ಚೀನಿ ಭಾಷಾಂತರ) ಶಾಲ್ಮಲಿ (ಹಿಂದಿ ಭಾಷಾಂತರ). ಕಥಾಸಂಕಲನ-ಮಾನಿಷಾದ, ಕಾಣದ ದಿಕ್ಕಿನತ್ತ, ಅದೇ ಮುಖ, ಒಳದನಿ, ಚೀನಿ ಭಾಷೆಯಿಂದ-ಲುಷುನರ್ ಎರಡು ನೀಳ್ಗತೆ ಮತ್ತು ಹುಚ್ಚನ ದಿನಚರಿ ಭಾಷಾಂತರ. ಪ್ರವಾಸ ಕಥನ-ಸ್ವರ್ಗ ದ್ವೀಪದ ಕನಸಿನ ಬೆನ್ನೇರಿ. ವಿಮರ್ಶೆ- ಸ್ಪಂದನ, ಸಮಾಲೋಚನ ಮುಂತಾದುವು ಪ್ರಕಟಿತ ಕೃತಿಗಳು. ಸಂದ ಪ್ರಶಸ್ತಿಗಳು-ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ನೀಲಗಂಗ ಪ್ರಶಸ್ತಿ, ಕಂದಗಲ್ ಹನುಮಂತರಾವ್ ಪ್ರಶಸ್ತಿ, ದೊಂಬಿವಿಲಿ ಕರ್ನಾಟಕ ಸಂಘ (ಮುಂಬಯಿ) ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಶಾರದಾ ಸಾಹಿತ್ಯ ಸ್ತ್ರೀ ಪ್ರಶಸ್ತಿ, ಪೆರ್ಲಕೃಷ್ಣಭಟ್ ಪ್ರಶಸ್ತಿ, ಸಂಜೆವಾಣಿ ಪ್ರಶಸ್ತಿ, ಆದರ್ಶ ಶಿಕ್ಷಕಿ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಸಾಹಿತಿ : ಎ. ಪಂಕಜ – ೧೯೩೨

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top