ಡಾ. ವೈ.ಸಿ. ಭಾನುಮತಿ

Home/Birthday/ಡಾ. ವೈ.ಸಿ. ಭಾನುಮತಿ
Loading Events
This event has passed.

೧೪.೦೧.೧೯೫೩ ಪ್ರಾಚೀನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯದ ಗ್ರಂಥ ಸಂಪಾದನೆ ಹಾಗೂ ಸಂಶೋಧನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಮಹತ್ದ ಸಾಧನೆ ಮಾಡಿರುವ ವೈ.ಸಿ. ಭಾನುಮತಿಯವರು ಹುಟ್ಟಿದ್ದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಯಮಸಂಧಿ ಎಂಬ ಊರಿನಲ್ಲಿ. ತಂದೆ ವೈ.ಬಿ. ಚೆನ್ನೇಗೌಡರು, ತಾಯಿ ಎಚ್.ಎಸ್. ಜಯಮ್ಮ. ಪ್ರಾರಂಭಿಕದಿಂದ ಪ್ರೌಢಶಾಲೆಯವರೆಗೆ ಬೇಲೂರಿನ ಸರಕಾರಿ ಪಾಠಶಾಲೆಯಲ್ಲಿ. ಮೈಸೂರು ಮಹಾರಾಣಿ ಕಾಲೇಜಿನಿಂದ ಬಿ.ಎಸ್‌ಸಿ. ಹಾಗೂ ಮಂಗಳೂರಿನ ಮಂಗಳ ಗಂಗೋತ್ರಿಯಿಂದ ಪಡೆದ ಎಂ.ಎ. ಪದವಿ, ‘ಕನ್ನಡದಲ್ಲಿ ವರ್ಧಮಾನ ಸಾಹಿತ್ಯ’ ಪ್ರೌಢಪ್ರಬಂಧ ರಚಿಸಿ ಆ.ನೇ.ಉಪಾಧ್ಯೆ ಚಿನ್ನದ ಪದಕದೊಡನೆ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್. ಡಿ. ಪದವಿ ಉದ್ಯೋಗಕ್ಕೆ ಸೇರಿದ್ದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಗ್ರಂಥ ಸಂಪಾಧನ ವಿಭಾಗದಲ್ಲಿ. ಮೊದಲ ದರ್ಜೆಯ ಸಂಶೋಧನ ಸಹಾಯಕಿಯಾಗಿ ಕಾರ‍್ಯ ನಿರ್ವಹಣೆ. ಓದಿದ್ದು ವಿಜ್ಞಾನದಲ್ಲಿ ಬಿ.ಎಸ್‌ಸಿ ಪದವಿಯಾದರೂ ಸ್ನೇಹಿತೆಯೊಬ್ಬಳ ಪತ್ರದಿಂದ ಪ್ರೇರಿತರಾಗಿ ಕನ್ನಡ ಸಾಹಿತ್ಯದತ್ತ ಆಸಕ್ತಿ ವಹಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ನಂತರ ಸಂಶೋಧನೆ ಹಾಗೂ ಗ್ರಂಥ ಸಂಪಾದನ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಸಂಪಾದಿಸಿದ್ದು ಹಲವಾರು ಹಳಗನ್ನಡದ ಕೃತಿಗಳು. ಜೈನ ಸಾಹಿತ್ಯದ ಕವಿ ಶ್ರುತಕೀರ್ತಿಯು ಸ್ತ್ರೀಯೋರ್ವಳ ಕಥೆಯನ್ನು ಆಧರಿಸಿ ರಚಿಸಿದ ಮೊದಲ ಜೈನ ಕೃತಿಯಾದ ‘ವಿಜಯ ಕುಮಾರಿ ಚರಿತೆ’ ಹದಿನಾಲ್ಕನೆಯ ತೀರ್ಥಂಕರನಾದ ಅನಂತನಾಥನನ್ನು ಕುರಿತ ಚಿಕ್ಕ ಪದ್ದಣ್ಣ ಶೆಟ್ಟಿ ಬರೆದ ‘ಅನಂತನಾಥ ಚರಿತೆ’. ಜೈನಕವಿ ಆದಿದೇವನು ಸಾಂಗತ್ಯದಲ್ಲಿ ಜೈನ ವೈಶ್ಯನಾದ ಸುಕುಮಾರನನ್ನು ಕುರಿತು ಬರೆದ ‘ಸುಕುಮಾರ ಚರಿತೆ’. ವೀರಶೈವ ಕವಿಗಳಲ್ಲಿ ಒಬ್ಬನಾದ ಕುಮಾರ ಚೆನ್ನಬಸವನು ನೂತನ ಹಾಗೂ ಪುರಾತನರನ್ನು ಕುರಿತು ಕೃತಿ ರಚಿಸಿದ್ದು ವಾರ್ಧಕ ಷಟ್ಪದಿಯ ‘ಪುರಾತನರ ಚರಿತೆ’ ಮತ್ತು ಬಸವಣ್ಣನವರ ಪ್ರಭಾವದಿಂದ ಚೋರ ವೃತ್ತಿಯನ್ನು ತ್ಯಜಿಸಿ ಪರಿಶುದ್ಧ ಬದುಕನ್ನು ಬಾಳಿದ ನಿಜಚಿಕ್ಕಲಿಂಗಯ್ಯನನ್ನ ಕುರಿತು ಬರೆದ ನಿಜಚಿಕ್ಕಲಿಂಗಯ್ಯ ಸಾಂಗತ್ಯ’, ಹರದನ ಹಳ್ಳಿಯ ನಂಜಣಾರ್ಯ ಕವಿಯು .ವಾರ್ಧಕ ಷಟ್ಪದಿಯಲ್ಲಿ ರಚಿಸಿರುವ ‘ಏಕೋ ರಾಮೇಶ್ವರ ಪುರಾಣ’, ಮುಖಬೋಳು ಸಿದ್ಧರಾಮ ವಿರಚಿತ ‘ಷಟ್ಟ್ಸ್ಥಲ ತಿಲಕ’, ವಿಕ್ರಮ ಸಿಂಹಾಸನದ ಮೆಟ್ಟಲುಗಳಲ್ಲಿದ್ದ ಮೂವತ್ತೆರಡು ಗೊಂಬೆಗಳು ಹೇಳುವ ‘ಬತ್ತೀಸ ಪುತ್ಥಳಿ ಕಥೆ’ , ತರೀಕೆರೆ ಪಾಳೇಗಾರರ ವಿಚಾರವಾಗಿ ತಿಳಿಸುವ ಐತಿಹಾಸಿಕ ವಸ್ತುವನ್ನೊಳಗೊಂಡ, ಕೃಷ್ಣಶರ್ಮರಿಂದ ರಚಿತವಾಗಿರುವ ‘ಸರಜಾಹನುಮೇಂದ್ರ ಯಶೋವಿಲಾಸಂ’ ಮುಂತಾದ ಗ್ರಂಥಗಳಲ್ಲದೆ ಕನ್ನಡ ಶ್ರಾವಕಾಚಾರ ಗ್ರಂಥಗಳು, ಸೌಂದರ್ಯ ಕಾವ್ಯ, ಮಡಿವಾಳೇಶ್ವರ ಕಾವ್ಯ, ಬಸವ ಮಹತ್ವದ ಸಾಂಗತ್ಯ, ಅರಸರ ಚರಿತ್ರೆಗಳು, ಮಡಿವಾಳೇಶ್ವರರ ಲಘುಕೃತಿಗಳು ಮುಂತಾದವುಗಳೂ ಸೇರಿ ಒಟ್ಟು ೩೦ ಕೃತಿಗಳನ್ನು ಸಂಪಾದಿಸಿದ್ದಾರೆ. ಜಾನಪದ ಕ್ಷೇತ್ರದಲ್ಲಿಯೂ ಆಸಕ್ತರಾಗಿದ್ದು ಸಂಶೋಧಿಸಿ ಪ್ರಕಟಿಸಿರುವ ಕೃತಿಗಳು ಇಬ್ಬೀಡಿನ ಜನಪದ ಕಥೆಗಳು, ಮಲೆನಾಡ ಶೈವ ಒಕ್ಕಲಿಗರು, ಜಾನಪದೀಯ ಅಧ್ಯಯನ, ಜಾನಪದ ಭಿತ್ತಿ, ಜನಪದ ಅಡುಗೆ, ಮಕ್ಕಳ ಹಾಡುಗಳು, ಚಂದ್ರಹಾಸನ ಕಥೆ (ನಾಟಕ), ಮುಂತಾದ ೧೧ ಕೃತಿಗಳನ್ನು ಸಂಪಾದಿಸಿದ್ದಾರೆ. ಆಲಿ ನುಂಗಿದ ನೋಟ, ಗ್ರಂಥ ಸಂಪಾದನೆಯ ಕೆಲವು ಅಧ್ಯಯನಗಳು, ಗ್ರಂಥಸಂಪಾದನೆ ವಿವಕ್ಷೆ, ಗ್ರಂಥ ಸಂಪಾದನೆಯ ಎಳೆಗಳು, ಸಮಾಗತ ಮುಂತಾದ ಸಂಪಾದನ ಕ್ಷೇತ್ರಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿರುವುದರ ಜೊತೆಗೆ ವಿಕ್ರಮಾದಿತ್ಯನ ಸಿಂಹಾಸನ ಎಂಬ ಶಿಶು ಸಾಹಿತ್ಯ ಕೃತಿಯನ್ನೂ ರಚಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಜಾನಪದ ವಿಶ್ವಕೋಶದ ಸಂಪಾದಕ ಮಂಡಳಿಯ ಸಂಪಾದಕಿಯಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ ಮತ್ತು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಹಸ್ತ ಪ್ರತಿ ವರ್ಣನಾತ್ಮಕ ಸೂಚಿಯ ಐದು ಸಂಪುಟಗಳ ಸೂಚಿಕರಣ ಮುಂತಾದವುಗಳಲ್ಲೂ ದುಡಿದಿದ್ದಾರೆ. ಸಹ್ಯಾದ್ರಿ ಖಂಡ, ಬತ್ತೀಸ ಪುತ್ಥಳಿ ಕಥೆಗೆ ೧೯೮೪, ೮೯ ರಲ್ಲಿ ವರ್ಷದ ಶ್ರೇಷ್ಠ ಗ್ರಂಥ ಸಂಪಾದನೆಗಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಮಲೆನಾಡು ಶೈವ ಒಕ್ಕಲಿಗರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮತ್ತು ತೀ.ನಂ. ಶ್ರೀ ಸಂಶೋಧನಾ ಪ್ರಶಸ್ತಿ, ಗ್ರಂಥ ಸಂಪಾದನೆಯ ಕೆಲವು ಅಧ್ಯಯನ ಮತ್ತು ಬತ್ತೀಸ ಪುತ್ಥಳಿ ಕೃತಿಗಳಿಗೆ ಬಿ.ಎಂ.ಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ಸಂಶೋಧನಾ ಪ್ರಶಸ್ತಿ,  ‘ಇಬ್ಬೀಡಿನ ಜನಪದ ಕಥೆಗಳು ಕೃತಿಗೆ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಮತ್ತು ಗುಂಡ್ಮಿ ಚಂದ್ರಶೇಖರ ಐತಾಳ ಪ್ರಶಸ್ತಿ, ಬತ್ತೀಸ ಪುತ್ಥಳಿ ಕೃತಿಗೆ ತೀ.ನಂ.ಶ್ರೀ ಸಂಶೋಧನಾ ಪ್ರಶಸ್ತಿ, ‘ಪುಟ್ಟ ಮಲ್ಲಿಗೆ ಹಿಡಿ ತುಂಬ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ ಮುಂತಾದವುಗಳಲ್ಲದೆ ಫ.ಗು,ಹಳಕಟ್ಟಿ ಸಂಶೋಧನ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಶಸ್ತಿ, ಹ.ಕ.ರಾಜೇಗೌಡ ಗ್ರಂಥ ಸಂಪಾದನ ಪ್ರಶಸ್ತಿ, ಜೀ.ಶಂ.ಪ.. ಜಾನಪದ ತಜ್ಞ ಪ್ರಶಸ್ತಿಗಳಲ್ಲದೆ ಹಲ್ಮಿಡಿಯಲ್ಲಿ ನಡೆದ ಬೇಲೂರು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಮುಂತಾದ ಹಲವಾರು ಗೌರವಗಳು ಲಭಿಸಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top