Loading Events

« All Events

  • This event has passed.

ಡಾ. ವ್ಯಾಸರಾವ್ ನಿಂಜೂರ್

October 6

೬-೧೦-೧೯೪೦ ಸಾಹಿತಿ, ವಿಜ್ಞಾನಿ ವ್ಯಾಸರಾವ್ ನಿಂಜೂರ್‌ರವರು ಹುಟ್ಟಿದ್ದು ಉಡುಪಿ ಜಿಲ್ಲೆಯ ತೆಂಕ ನಿಡಿಯೂರಿನಲ್ಲಿ. ತಂದೆ ಶ್ರೀನಿವಾಸ ನಿಂಜೂರ್, ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಗರಡಿ ಮಜಲು, ಕೊಡವೂರು, ಮಿಲಾಗ್ರಿಸ್ ಹೈಸ್ಕೂಲು ಮುಂತಾದೆಡೆ. ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಬಿ.ಎಸ್ಸಿ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ, ಮುಂಬಯಿ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಗಳು. ಉದ್ಯೋಗಕ್ಕಾಗಿ ಸೇರಿದ್ದು ಬೋಧನಾ ವೃತ್ತಿಗೆ. ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕರಾಗಿ ಪ್ರಾರಂಭ. ನಂತರ ಸೇರಿದ್ದು ಮುಂಬಯಿಯ ಭಾಭಾ ಪರಮಾಣು ಸಂಶೋಧನ ಕೇಂದ್ರದ ಬಯೋ ಕೆಮಿಸ್ಟ್ರಿ ಮತ್ತು ಫುಡ್ ಟೆಕ್ನಾಲಜಿಯ ವಿಭಾಗದಲ್ಲಿ ಆಹಾರ ವಿಜ್ಞಾನ ಶಾಖೆಯ ಪ್ರಮುಖ ಹುದ್ದೆಯಲ್ಲಿದ್ದು ಪಡೆದ ಸ್ವಯಂ ನಿವೃತ್ತಿ. ನಿವೃತ್ತಿಯ ನಂತರ ಮುಂಬೈ ವಿಶ್ವವಿದ್ಯಾಲಯದಲ್ಲಿ ಜೀವರಸಾಯನ ಶಾಸ್ತ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಬೋಧನೆ. ಹಲವಾರು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ಭಾಭಾ ಪರಮಾಣು ಕೇಂದ್ರದಲ್ಲಿದ್ದಾಗ ೮೭ ಸಂಶೋಧನ ಪ್ರಬಂಧಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿತ. ಅಂತರಕೋಶೀಯ ಲೈಸೋಸೋಮ್ ಮತ್ತು ಲೈಸೋಸೋಮ್ ಕಿಣ್ವಗಳ ಬಗ್ಗೆ ನಡೆಸಿದ ಸಂಶೋಧನೆ. ಆಹಾರ ವಿಜ್ಞಾನ, ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆ. ಆಹಾರ ಸಂರಕ್ಷಣೆಯಲ್ಲಿ ಗಾಮಾ ವಿಕಿರಣಗಳ ಬಳಕೆ, ಪ್ರೊಟೀನ್ ನ್ಯೂನತೆಯ ಪ್ರಭಾವ, ಮಾನವ ಫಲೀಕರಣದಲ್ಲಿ ಕಿಣ್ವಗಳ ಪಾತ್ರ ಮುಂತಾದ ವಿಷಯಗಳಲ್ಲಿ ನಡೆಸಿದ ವಿಶ್ವಮಾನ್ಯ ಸಂಶೋಧನೆಗಳು. ವಿಜ್ಞಾನಿಯಾಗಷ್ಟೇ ಅಲ್ಲದೆ ಸಾಹಿತಿಯಾಗಿಯೂ ಬರೆದದ್ದು ಹಲವಾರು ಕೃತಿ. ಕಾದಂಬರಿಗಳು-ಉಸಿರು, ಚಾಮುಂಡೇಶ್ವರಿ ಭವನ. ಕಥಾಸಂಕಲನ-ಕುಂಕುಮ, ಮಂಚ. ನಾಟಕ- ನಲ್ವತ್ತರ ನಲುಗು. ಇವರು ಬರೆದು ರಂಗಮಂಚವೇರಿದ್ದು ಹಲವಾರು ನಾಟಕಗಳು.  ಮಕ್ಕಳಿಗಾಗಿ-ಹೋಯಿಭಾಭಾ. ಹಲವಾರು ಕವಿತೆ, ಕಥೆ ಪತ್ರಿಕೆಗಳಲ್ಲಿ ಪ್ರಕಟಿತ. ಹಲವಾರು ಪತ್ರಿಕೆಗಳ ಸಂಪಾದಕತ್ವ. ಬುಲೆಟಿನ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ, ಇರ್ರೇಡಿಯೇಷನ್ ನ್ಯೂಸ್, ಬೆಳಗು, ಗೋಕುಲವಾಣಿ ಮುಂತಾದ ಪತ್ರಿಕೆಗಳ ಹೊಣೆಗಾರಿಕೆ. ಸಂದ ಪ್ರಶಸ್ತಿಗಳು. ಉಸಿರು ಕಾದಂಬರಿಗೆ ತ್ರಿವೇಣಿ ಸ್ಮಾರಕ ಪ್ರಶಸ್ತಿ, ಚಾಮುಂಡೇಶ್ವರಿ ಭವನ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್, ಮೂಡಬಿದಿರೆ ೭೧ನೇ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಶ್ರೀ’ ಪ್ರಶಸ್ತಿ. ಮಹಾರಾಷ್ಟ್ರದ ೬ನೆಯ ಸಾಂಸ್ಕೃತಿಕ ಸಮಾವೇಶದಲ್ಲಿ ‘ಮಹಾರಾಷ್ಟ್ರದ ಶ್ರೇಷ್ಠ ಕನ್ನಡಿಗ’ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಲಲಿತಾ. ವಿ. ಕೋರ್ಪಡೆ – ೧೯೪೬  ಬಿ.ಜೆ. ಸುವರ್ಣ – ೧೯೫೪

Details

Date:
October 6
Event Category: