೧೮.೫.೧೯೪೭ ಸಾಹಿತ್ಯ-ಸಾಂಸ್ಕೃತಿಕ ಸಂಘಟಕ, ಕವಿ, ಗ್ರಂಥ ಸಂಪಾದಕರಾದ ಶ್ಯಾಮಸುಂದರ ಬಿದರಕುಂದಿಯವರು ಹುಟ್ಟಿದ್ದು ಹುಬ್ಬಳ್ಳಿಯಲ್ಲಿ ೧೯೪೭ರ ಮೇ ೧೮ರಂದು. ತಂದೆ ಗುರುರಾವ ಬಿದರ ಕುಂದಿ, ತಾಯಿ ತುಂಗಾಬಾಯಿ. ಮೂಲತಃ ವಿಜಾಪುರ ಜಿಲ್ಲೆಯ ಮುದ್ದೇ ಬಿಹಾಳ ತಾಲ್ಲೂಕಿನ ಬಿದರಕುಂದಿ ಇವರ ಪೂರ್ವಿಕರ ಸ್ಥಳ. ಪ್ರಾರಂಭಿಕ ಶಿಕ್ಷಣ ಆಲಮಟ್ಟಿ, ಕೊಣ್ಣೂರ, ಬ್ಯಾಡಗಿ ಮುಂತಾದೆಡೆಗಳಲ್ಲಿ. ಪ್ರೌಢಶಾಲಾಭ್ಯಾಸ – ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಹೈಸ್ಕೂಲಿನಿಂದ. ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಿಂದ ಬಿ.ಎ. ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ‘ನವ್ಯ ಮಾರ್ಗದ ಕಾದಂಬರಿಗಳ ಅಧ್ಯಯನ’ ಕುರಿತು ಸಂಶೋಧನ ಪ್ರಬಂಧ ಮಂಡಿಸಿ ಪಡೆದ ಪಿಹೆಚ್.ಡಿ. ಪದವಿ (೧೯೯೨). ಹುಬ್ಬಳ್ಳಿಯ ನೆಹರೂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭ. ನಂತರ ಗದುಗಿನ ಆದರ್ಶ ಶಿಕ್ಷಣ ಸಮಿತಿ ಕಾಮರ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಯಾಗಿ ಸಲ್ಲಿಸಿದ ಸೇವೆ. ೧೯೯೮ರಿಂದಲೂ ಎಂಟು ಮಂದಿ ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದು, ಸಫಲರಾಗಿ ಪಿಹೆಚ್.ಡಿ. ಪದವಿ ಪಡೆದಿದ್ದು ಈಗಲೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು. ಹಿರಿಯ ಸಾಹಿತಿಗಳೊಂದಿಗೆ ಸಂದರ್ಶನ, ಸಾಹಿತ್ಯ ಸಂವಾದ, ವಾಚನ ಮುಂತಾದ ಕಾರ್ಯಕ್ರಮಗಳಿಗಾಗಿ ಅನ್ವೇಷಣ ಕೂಟದ ನಿರ್ವಹಣೆ. ಗದಗಿನಲ್ಲಿ ಸಾಹಿತ್ಯ ಚಟುವಟಿಕೆಗಾಗಿ ಚಿಂತನ ವೇದಿಕೆ, ಸಾಹಿತ್ಯ ಸಂಜೆ, ವಿಚಾರ ಸಂಕಿರಣ, ಬಂಡಾಯ ಸಾಹಿತ್ಯ ಸಂಘಟನೆ; ಬಳಕೆದಾರರ ಹಕ್ಕು ಬಾಧ್ಯತೆಗಳಿಸಲು ಜನಜಾಗೃತಿ ಕಾರ್ಯಕ್ರಮ; ನಾಟಕಾಭಿನಯ-ಪ್ರದರ್ಶನಗಳಿಗಾಗಿ ‘ಅಭಿನಯರಂಗ’; ಕಲಾತ್ಮಕ ಸಿನಿಮಾ ಪ್ರದರ್ಶನಕ್ಕಾಗಿ ‘ಅನುಪಮ ಫಿಲ್ಮ್ ಸೊಸೈಟಿ– ಹೀಗೆ ಹಲವಾರು ಸಂಘಟನೆಗಳ ರೂವಾರಿ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಕವಿಯಾಗಿ, ಚಿಂತಕರಾಗಿ, ಭಾಷಣಕಾರರಾಗಿ, ಸಂದರ್ಶನಕಾರರಾಗಿ, ಹಾಗೂ ದೆಹಲಿಯ ಗಣರಾಜ್ಯೋತ್ಸವ ಸಂದರ್ಭದ ಬಹುಭಾಷಾ ಕವಿ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗಿ. ಪತ್ರಿಕೆಗಳಿಗೆ ಆಗಾಗ್ಗೆ ಬರೆದ ಕವನಗಳ ಸಂಕಲನ ಅಜ್ಜಗಾವಲು (೧೯೭೧), ಅಲ್ಲಮಪ್ರಭುವಾದ (೧೯೭೬), ಬಹುದೇನುಂಟೊಮ್ಮೆ (೧೯೮೬), ತಲೆ ಎತ್ತಿ ಶರಣು (೨೦೧೧) ಪ್ರಕಟಿತ. ಕೃತಿ ನೋಟ, ಅಚ್ಚುಕಟ್ಟು, ಪ್ರಸಂಗೋಚಿತ, ನೆಲೆಗಟ್ಟು ಮುಂತಾದ ವಿಮರ್ಶಾ ಕೃತಿಗಳು; ಗರೂಡ ಶ್ರೀಪಾದರಾವ, ಜಯತೀರ್ಥ ಜೋಶಿ, ಶಂಕರ ಮೊಕಾಶಿ ಪುಣೇಕರ ಮೊದಲಾದ ವ್ಯಕ್ತಿಚಿತ್ರ ಕೃತಿಗಳು ಪ್ರಕಟಗೊಂಡಿವೆ. ಸಂಪಾದಿತ ಕೃತಿಗಳು: ರಾಯ ಧಾರವಾಡಕರರ ಅಭಿನಂದನ ಗ್ರಂಥ ‘ಪ್ರಬಂಧ ಪ್ರಪಂಚ’, ಶಂಕರ ಮೊಕಾಶಿ ಪುಣೇಕರರ ಅಭಿನಂದನ ಗ್ರಂಥ ‘ಗಂಧಗೊರಡು’, ಶಿವೇಶ್ವರ ದೊಡ್ಡಮನಿಯವರ ಸಾಹಿತ್ಯವಾಚಿಕೆ, ಡಿ.ಎಸ್. ಕರ್ಕಿಯವರ ಸಮಗ್ರ ಸಾಹಿತ್ಯ, ಛಂದೋವಿಕಾಸ, ಶರೀಫ ಶಿವಯೋಗಿಯ ನೂರೊಂದು ಪದರತ್ನ, ವಿ.ಜಿ. ಭಟ್ಟರ ಉತ್ಥಾನ ಕಾವ್ಯ, ವಾಗರ್ಥ ದಾಂಪತ್ಯ, ದಾಸರ ಸಾಮಾಜಿಕ ಚಿಂತನ-ಕೀರ್ತನೆಗಳ ಸಂಗ್ರಹಗಳು-ಈಸಬೇಕು ಇದ್ದು ಜೈಸಬೇಕು ಹಾಗೂ ಮಾನವ ಜನ್ಮ ದೊಡ್ಡದು ಮುಂತಾದ ಸಂಪಾದಿತ ಕೃತಿಗಳು. ಕನ್ನಡ ಪ್ರಭ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಗಳ ಪುಸ್ತಕ ಅವಲೋಕಕರಾಗಿ ಪುಸ್ತಕಗಳ ಪರಿಚಯ. ಗದಗ ಜಿಲ್ಲಾ ರೋಟರಿಯಿಂದ ‘ಸಾಹಿತ್ಯ ಸುಧಾಕರ’ ಪುರಸ್ಕಾರ, ಅಣ್ಣಿಗೇರಿ ಪಂಪ ಪ್ರತಿಷ್ಠಾನದಿಂದ ‘ಪಂಪಶ್ರೀ’, ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಯಿಂದ ‘ಆದರ್ಶ ಶಿಕ್ಷಕ’ ಮುಂತಾದ ಪ್ರಶಸ್ತಿ ಪುರಸ್ಕಾರಗಳು.

