ಡಾ. ಶ್ರೀಕಂಠ ಕೂಡಿಗೆ

Home/Birthday/ಡಾ. ಶ್ರೀಕಂಠ ಕೂಡಿಗೆ
Loading Events

೧೫.೦೯.೧೯೪೭ ಜಾನಪದ, ಸಂಶೋಧನೆ, ವಿಮರ್ಶಾ ಕ್ಷೇತ್ರದಲ್ಲಿ ಪ್ರಮುಖರಾಗಿರುವ ಶ್ರೀಕಂಠ ಕೂಡಿಗೆಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೂಡಿಗೆ ಎಂಬ ಹಳ್ಳಿಯಲ್ಲಿ. ತಂದೆ ಕೃಷ್ಣಯ್ಯ ಗೌಡ, ತಾಯಿ ಚಿನ್ನಮ್ಮ. ಪ್ರಾಥಮಿಕ ಶಾಲೆ ಹುಟ್ಟಿದೂರಿನಲ್ಲಿ. ಮಾಧ್ಯಮಿಕ ಶಾಲೆ ಓದಿದ್ದು ತೂದೂರು ಕಟ್ಟೆ. ಪ್ರೌಢಶಾಲೆಗೆ ಸೇರಿದ್ದು ತೀರ್ಥಹಳ್ಳಿಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ತರಗತಿಯಲ್ಲಿ ಚಿನ್ನದ ಪದಕದೊಡನೆ ಪ್ರಥಮ ರ‍್ಯಾಂಕ್ ವಿಜೇತರು. ‘ಕನ್ನಡದಲ್ಲಿ ಲಾವಣಿಗಳು’ ಪ್ರೌಢ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಮೈಸೂರು ಯುವರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ, ಮೈಸೂರು ವಿಶ್ವವಿದ್ಯಾಲಯವು ಶಿವಮೊಗ್ಗ ಜಿಲ್ಲೆಯ ಭದ್ರಾ ಅಣೆಕಟ್ಟಿನ ಬಳಿಯ ಬಿ.ಆರ್. ಪ್ರಾಜೆಕ್ಟ್‌ನಲ್ಲಿ ಪ್ರಾರಂಭಿಸಿದ ಸ್ನಾತಕೋತ್ತರ ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ರೀಡರ್, ಪ್ರಾಧ್ಯಾಪಕರಾಗಿ ಕಾರ‍್ಯನಿರ್ವಹಿಸಿ ನಿವೃತ್ತಿ. ಇವರ ಮಾರ್ಗದರ್ಶನದಲ್ಲಿ ೧೦ ಮಂದಿ ಎಂ.ಫಿಲ್. ಪದವಿ ಹಾಗೂ ೧೮ ಮಂದಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ , ಸೆನೆಟ್, ಸಿಂಡಿಕೇಟ್ ಸದಸ್ಯರಾಗಿ, ಕಲಾ ವಿಭಾಗದ ರೀಡರ್ ಆಗಿ, ಪರೀಕ್ಷಾಂಗದ ಕುಲಸಚಿವ (ರಿಜಿಸ್ಟ್ರಾರ್) ರಾಗಿಯೂ ಕಾರ‍್ಯ ನಿರ್ವಹಿಸಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆದು ರೂಢಿಸಿಕೊಂಡಿದ್ದು ಕಥಾ ಪ್ರಕಾರ. ಊರಿನಲ್ಲಿದ್ದ ಹಲವಾರು ಕುಟುಂಬಗಳ ಜೀವನದಲ್ಲಿ ಅನಗತ್ಯವಾಗಿ ತಲೆತೂರಿಸಿ ಕಿರುಕೊಳ ಕೊಡುತ್ತಿದ್ದ ದುಷ್ಟನೊಬ್ಬನ ಬಗ್ಗೆ ಕಥೆ ಬರೆದು ಪ್ರಕಟಗೊಂಡಾಗ ಆತನಿಂದ ಬೆದರಿಕೆಗೂ ಒಳಗಾಗಿದ್ದರು. ಹೀಗೆ ಸಮಾಜದ ಒಳಿತಿಗಾಗಿ ದುಷ್ಟ ಶಕ್ತಿಗಳನ್ನು ಎದುರಿಸುವುದನ್ನು ರೂಢಿಸಿಕೊಂಡಿದ್ದರು. ನಂತರ ಬರೆದ ಕಥೆ ‘ಬಂಧನ’ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ (೧೯೭೧) ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಗಳಿಸಿದರೆ, ಉದಯವಾಣಿ ಕಥಾ ಸ್ಪರ್ಧೆಗೆ ಬರೆದ ಕಥೆ ‘ನಮ್ಮಿಬ್ಬರ ನಡುವೆ’ (೧೯೮೭) ಮತ್ತು ತುಷಾರ ಮಾಸ ಪತ್ರಿಕಯ ಸ್ಪರ್ಧೆಗೆ ಬರೆದಕ ಕಥೆ ‘ಗೌರಿ ಹಬ್ಬ’ (೧೯೮೮) ವೂ ಬಹುಮಾನ ಗಳಿಸಿತು. ಹೀಗೆ ಹಲವಾರು ಸಂದರ್ಭದಲ್ಲಿ ಬರೆದ ಕಥೆಗಳು ‘ನಮ್ಮಿಬ್ಬರ ನಡುವೆ’ ಮತ್ತು ‘ಹುತ್ತಗಟ್ಟಿದೆ ಚಿತ್ತ’ ಎಂಬ ಎರಡು ಕಥಾಸಂಕಲನಗಳಲ್ಲಿ ಸೇರಿವೆ. ಮನುಷ್ಯನ ಸಂಬಂಧದ ವಿವಿಧ ಮುಖಗಳನ್ನು ಪರಿಚಯಿಸುವ, ಪ್ರಾದೇಶಿಕ ಬೇರುಗಳನ್ನು ಹೊಂದಿದ್ದು, ಕಾಮವೇ ಪ್ರಧಾನವಾಗಿದ್ದರೂ ಭಿನ್ನ ಜಾಡಿನಿಂದ ಕೂಡಿರುವ ಕಥೆಗಳಾಗಿವೆ. ಹಲವಾರು ಕಥೆಗಳು ಇಂಗ್ಲಿಷ್, ಮಲಯಾಳಂ ಭಾಷೆಗೂ ಅನುವಾದಗೊಂಡಿವೆ. ಮೈಸೂರು ವಿಶ್ವವಿದ್ಯಾಲಯವು ಬಿ.ಆರ್. ಪ್ರಾಜಿಕ್ಟ್‌ನಲ್ಲಿ ಸ್ನಾತಕೋತ್ತರ ಕೇಂದ್ರವನ್ನು ತೆರೆದು ಕಾರ‍್ಯಾರಂಭ ಮಾಡಿದನಂತರ ಕುವೆಂಪು ವಿಶ್ವವಿದ್ಯಾಲಯವಾಗಿ ವಿಸ್ತರಣೆಗೊಂಡಾಗ ಡಾ.ಎಚ್. ತಿಪ್ಪೇರುದ್ರಸ್ವಾಮಿ, ಪ್ರೊ. ಸುಧಾಕರ, ಡಾ.ಎಚ್. ಲಕ್ಕಪ್ಪಗೌಡ ಇವರುಗಳೊಡನೆ ಡಾ.ತೀ.ನಂ. ಶಂಕರನಾರಾಯಣರು ಕೇಂದ್ರದ ಮುಖ್ಯಾಧಿಕಾರಿಯಾಗಿ ಕನ್ನಡ ಅಧ್ಯಾಪಕರಾಗಿ ಅವರ ಜೊತೆ ಡಾ.ಶ್ರೀಕಂಠ ಕೂಡಿಗೆಯವರು ಸಂಸ್ಥಾಪಕ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡು ಜಾನಪದ ವಸ್ತು ಸಂಗ್ರಹಾಲಯ, ಕಂಪ್ಯೂಟರ್ ಕೇಂದ್ರ, ಕನ್ನಡ ಭಾರತಿ, ವಿಚಾರ ಸಂಕಿರಣ, ಪುಸ್ತಕ ಪ್ರಕಟಣೆಗಳು, ಹೀಗೆ ಹಲವಾರು ಕಾರ‍್ಯಕ್ರಮಗಳನ್ನು ರೂಪಿಸಿ ಕಾರ‍್ಯಗತಗೊಳಿಸಿ ಕನ್ನಡ ಅಧ್ಯಯನ ಕೇಂದ್ರವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಜಾನಪದ ಸಂಗ್ರಹ, ವಿಶ್ಲೇಷಣೆಗಳಿಗೆ ವಿಶೇಷ ಒತ್ತು ನೀಡಿ ಜಾನಪದವನ್ನು ಕಟ್ಟಿ ಬೆಳೆಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ. ಹಲವಾರು ಜಾನಪದ ಸಂಶೋಧನ ಕೃತಿಗಳನ್ನು ಹೊರತಂದಿದ್ದಾರೆ. ಅಂಟಿಗೆ – ಪಂಟಿಗೆ ಪದಗಳು, ಭೂಮಿ ಹುಣ್ಣಿಮೆ, ಜನಪದ ಶಿಸು ಪ್ರಾಸಗಳು, ಜನಪದ ಗಣಿತ, ಕೊಂಡಮಾಮ, ಜಾನಪದ ವಿವಿಧ ಮುಖಗಳು, ಜಾನಪದ ಕೋಶ, ಪ್ರಶಸ್ತಿ ಪಡೆದ ಮಹನೀಯರು (ಇತರರೊಡನೆ) ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವಲ್ಲದೆ ಇವರ ಪ್ರಮುಖ ವಿಮರ್ಶಾ ಕೃತಿಗಳೆಂದರೆ ‘ಒದಗೆ’, ‘ಧ್ಯಾನ’ ‘ಕುವೆಂಪು ಕುರಿತು’ ರಚಿಸಿದ ಕೃತಿಗಳು. ಇವರ ಸಂಪಾದಿತ ಕೃತಿಗಳೆಂದರೆ ಪಾಶ್ಚಾತ್ಯ ಮಹಾ ಕಾವ್ಯಗಳು, ೧೯೮೫ರ ಕಥೆಗಳು, ರನ್ನ, ಬಂಡಾಯ ಸಾಹಿತ್ಯ ಚಳುವಳಿ: ಹತ್ತು ವರ್ಷ, ಕುವೆಂಪು ಸಾಹಿತ್ಯ: ವೈಚಾರಿಕ ನೆಲೆಗಳು, ವಸುದೇವ ಭೂಪಾಲಂ; ಸಮಗ್ರ ಸಾಹಿತ್ಯ (೨ ಸಂಪುಟಗಳಲ್ಲಿ) ಮುಂತಾದ ಹನ್ನೊಂದು ಕೃತಿಗಳನ್ನು ಸಂಪಾದಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಪದವಿ ಪಠ್ಯ ಪುಸ್ತಕಗಳಾದ ತ್ರಿಪದಿ – ಸಾಂಗತ್ಯ ಕಾವ್ಯ, ರಗಳೆ – ಷಟ್ಪದಿ ಕಾವ್ಯ, ಸಮಕಾಲೀನ ಕವಿತೆ, ಪ್ರಾಚೀನ ಕನ್ನಡ ಕಾವ್ಯ (ಭಾಗ ೩), ಹೊಸ ಕನ್ನಡ ಕಥಾ ಸಾಹಿತ್ಯ ಭಾಗ-೨, ಆಧುನಿಕ ಕನ್ನಡ ಕಾವ್ಯ ಭಾಗ-೩, ವಾಣಿಜ್ಯ ಕನ್ನಡ ಭಾಗ-೨, ಸಂವಹನ ಕನ್ನಡ ಭಾಗ-೧ ಮುಂತಾದ ಕೃತಿಗಳು ಇವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಗೊಂಡಿವೆ. ಅನೇಕ ಸಂಘ – ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ , ರಾಜ್ಯ ಸಾಹಿತ್ಯ ಅಕಾಡಮಿ, ಕೇಂದ್ರ ಸಾಹಿತ್ಯ ಅಕಾಡಮಿ, ಡಿ.ಎಸ್.ಇ.ಆರ್.ಟಿ. ಪಠ್ಯ ರಚನಾ ಸಮಿತಿ, ಪ್ರಶಸ್ತಿ ಆಯ್ಕೆ ಸಮಿತಿ, ದೆಹಲಿಯ UPSc ಯ I.A.S ಮತ್ತು I.P.S. ಪರೀಕ್ಷೆಗಳ ಪಠ್ಯ ಪುಸ್ತಕ ರಚನಾ ಸಮಿತಿ, ನ್ಯಾಷನಲ್ ಬುಕ್ ಟ್ರಸ್ಟ್, ಕನ್ನಡ ಸಲಹಾ ಸಮಿತಿ, ಮುಂತಾದವುಗಳ ಸದಸ್ಯರಾಗಿಯೂ ದುಡಿದಿದ್ದಾರೆ. ಖಚಿತ ನಿಲುವಿನ, ನೇರ ಮಾತಿನ, ತಾವು ಪಾಲಿಸಿಕೊಂಡು ಬಂದ ತತ್ವ ಸಿದ್ಧಾಂತಗಳಿಗೆ ಧಕ್ಕೆಯಾದರೆ ಪ್ರತಿಭಟಿಸುವ, ಎಂದೂ ರಾಜಿಯಾಗದ ಗುಣಗಳನ್ನು ರೂಢಿಸಿಕೊಂಡಿರುವ ಕೂಡಿಗೆಯವರಿಗೆ ಕುವೆಂಪು ವಿಶ್ವವಿದ್ಯಾಲಯದ ‘ಸಾಧನಾ ಪ್ರಶಸ್ತಿ’, ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಜಾನಪದ ತಜ್ಞ ಪ್ರಶಸ್ತಿ. ಶಿವಮೊಗ್ಗ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಮಂಡ್ಯ ಕರ್ನಾಟಕ ಸಂಘದ ಡಾ.ರಾ.ಗೌ. ಪ್ರಶಸ್ತಿ, ಕರ್ನಾಟಕ ರಾಜ್ಯ ಜಾನಪದ ಯಕ್ಷಗಾನ ಅಕಾಡಮಿಯ ಬೆಳ್ಳಿ ಹಬ್ಬದ ಪುರಸ್ಕಾರ, ರಾಜ್ಯ ಸಾಹಿತ್ಯ ಅಕಾಡಮಿಯ ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದು ೨೦೦೮ ರಲ್ಲಿ ಅಭಿಮಾನಿಗಳು, ವಿದ್ಯಾರ್ಥಿಗಳು ‘ಕೂಡಿಗೆ’ ಮತ್ತು ‘ಆರುಮುನಿದು’ ಎಂಬ ಗೌರವ ಗ್ರಂಥಗಳನ್ನು ಅರ್ಪಿಸಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top