ಡಾ. ಸರೋಜಿನಿ ಮಹಿಷಿ

Home/Birthday/ಡಾ. ಸರೋಜಿನಿ ಮಹಿಷಿ
Loading Events
This event has passed.

..೧೯೨೭ ಕಾನೂನು ತಜ್ಞೆ, ರಾಜಕಾರಿಣಿ, ಸಾಹಿತಿ, ಚಿತ್ರಕಲಾವಿದೆ, ಬಹುಭಾಷಾಕೋವಿದೆ ಸರೋಜಿನಿ ಮಹಿಷಿಯವರು ಹುಟ್ಟಿದ್ದು ಧಾರವಾಡದಲ್ಲಿ ೧೯೨೭ರ ಮಾರ್ಚ್ ೩ರಂದು, ಎಂಟು ಮಕ್ಕಳಲ್ಲಿ (ಎಲ್ಲರೂ ಉನ್ನತ ಸಾಧನೆಮಾಡಿರುವವರೆ ) ಎರಡನೆಯವರಾಗಿ, ತಂದೆ ವಕೀಲರು ಹಾಗೂ ಸಂಸ್ಕೃತ ಪಂಡಿತರಾಗಿದ್ದ ಬಿಂದೂರಾವ್ ಅಚ್ಯುತಾಚಾರ್ಯ ಮಹಿಷಿಯವರು. ತಾಯಿ ಕಮಲಾಬಾಯಿ, ಐದನೆಯ ತರಗತಿಯವರೆಗೆ ಓದಿದ್ದು ಧಾರವಾಡದ ಸರಕಾರಿ ಶಾಲೆಯಲ್ಲಿ, ಕರ್ನಾಟಕ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್‌.ಸಿವರೆಗೆ ತಂದೆಯವರು ವಕೀಲಿ ವೃತ್ತಿಯನ್ನು ಸಾಂಗ್ಲೀಯಲ್ಲಿ ಪ್ರಾರಂಭಿಸಿದ್ದರಿಂದ ಸಂಸಾರವು ಸಾಂಗ್ಲಿಗೆ ಸ್ಥಳಾಂತರಗೊಂಡದ್ದರಿಂದ ಮಹಿಷಿಯವರು ಸೇರಿದ್ದು ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜಿಗೆ. ಬಿ.ಎ. ಪದವಿಯನಂತರ ಸ್ನಾತಕೋತ್ತರ ಪವಿಗಾಗಿಸೇರಿದಾಗ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದವರು  ರಂ.ಶ್ರೀ. ಮುಗಲಿಯವರು. ಮುಗಳಿಯವರ ಪರಿಚಯದಿಂದ ಅಧ್ಯಯನಾಸಕ್ತಿ ಬೆಳೆಯುತ್ತಾ ಹೋಯಿತು. ಮುಂಬಯಿ ವಿಶ್ವವಿದ್ಯಾಲಯದಿಂದ ೧೯೪೯ರಲ್ಲಿ ಎಂ.ಎ. ಪದವಿ ಪಡೆದರು. ಬಾಲ್ಯದಿಂದಲೇ ಓದುವ ಹವ್ಯಾಸಬೆಳೆಸಿ ಕೊಂಡಿದ್ದ ಮಹಿಷಿಯವರಿಗೆ ತೀಕ್ಷ್ಮಗ್ರಹಣಾಶಕ್ತಿಯಿದ್ದು ಒಂದು ಸಾರೆ ಓದಿದರೆ ಸಾಕು ಅವರ ನೆನಪಿನಲ್ಲಿ ದಾಖಲಾಗಿಬಿಡುತ್ತಿತ್ತು. ಶಾಲಾ ಕಾಲೇಜುಗಳ ಪರೀಕ್ಷೆಗಳಲ್ಲೆಲ್ಲಾ ಪ್ರಥಮಸ್ಥಾನ ಪಡೆದೇ ಉತ್ತೀರ್ಣರಾಗಿದ್ದರು. ಸರೋಜಿನಿಯವರ ಸೂಕ್ಷ್ಮಜ್ಞಾನ, ಬುದ್ಧಿವಂತಿಕೆಯನ್ನು ಕಂಡು ಇವರು ಓದಿದ ಕಾಲೇಜಿನಲ್ಲಿಯೇ ಫೆಲೊಷಿಪ್ ನೀಡಿದಾಗ ಎರಡು ವರ್ಷಗಳ ಕಾಲ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ನಂತರ ಒಂದು ವರ್ಷ ಧಾರವಾಡದ ಗರ್ಲ್ಸ್ ಹೈಸ್ಕೂಲಿನಲ್ಲಿಯೂ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು. ಸಮಯವನ್ನು ಹಾಳುಮಾಡದೆ ಸದಾ ಒಂದಲ್ಲೊಂದು ಕಾರ್ಯದಲ್ಲಿ ತೊಡಗಿರುತಿದ್ದ ಮಹಿಷಿಯವರು DIPLOMA IN TAILORING AND EMBROIDERY ಒಂದು ವರ್ಷದ ತರಬೇತಿ ಪಡೆದು ಈಝೀಕಟಿಂಗ್, ಕಮರ್ಷಿಯಲ್ ಸಿಸ್ಟಮ್ ಆಫ್ ಕಟಿಂಗ್, ಮತ್ತು ಕಸೂತಿ ಕಲೆ ಎಂಬ ವಿಷಯಗಳ ಮೇಲೆ ಪುಸ್ತಕಗಳನ್ನು ರಚಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿಯಲ್ಲಿ ಡಿಪ್ಲೊಮ ಇನ್ ಹೋಮಿಯೋಪತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಿಸರ್ಗ ಚಿಕಿತ್ಸೆಯನ್ನು ಕಲಿತರು. ಯಾವುದಾದರೊಂದು ಪ್ರಕಾರದಲ್ಲಿ ತೊಡಗಿಸಿಕೊಂಡು ತಮ್ಮ ಜ್ಞಾನದಾಹವನ್ನು ಇಂಗಿಸಿಕೊಳ್ಳುವುರಲ್ಲೇ ನಿರತರಾಗಿದ್ದ ಮಹಿಷಿಯವರಿಗೆ ಕಾನೂನು ಕಲಿಯಬೇಕೆನಿಸಿ ಬೆಳಗಾವಿಯ ಆರ್‌.ಎಲ್.ಎಸ್. ಕಾಲೇಜಿನಲ್ಲಿ ಎಲ್‌.ಎಲ್‌.ಟಿ ಅಧ್ಯಯನ ಮಾಡಿ ೧೯೫೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರ‍್ಯಾಂಕ್ ಪಡೆದು ತೇರ್ಗಡೆಯಾದ ನಂತರ ಧಾರವಾಡದ ಜನತಾ ಲಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಕಾಲ ಕಾರ್ಯನಿರ್ವಹಿಸಿದರು. ಧಾರವಾಡದಲ್ಲಿ ಕನವಿಕರ್‌ ಎಂಬ ವಕೀಲರಬಳಿ ವಕೀಲ ವೃತ್ತಿ ಪ್ರಾರಂಭಿಸಿ ಬಾರ್‌ ಕೌನ್ಸಿಲ್ ಪರೀಕ್ಷೆಗೆ ಕುಳಿತು ಪ್ರಥಮಸ್ಥಾನ ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸಾಹಿತ್ಯಾಭ್ಯಾಸಿಯಾಗಿ ಬರವಣಿಗೆಯಲ್ಲಿ ನಿರತರಾಗಿದ್ದು ಹಲವಾರು ಕವನಗಳನ್ನು, ಮಕ್ಕಳ ಕವಿತೆಗಳನ್ನು ರಚಿಸಿ ಅವು ಪತ್ರಿಕೆಗಳಲ್ಲೂ ಪ್ರಕಟಗೊಂಡವು. ರಾಷ್ಟ್ರರಲ್ಲಿ ಅವರು ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲೀಷ್, ಮರಾಠಿ, ತೆಲುಗು, ತಮಿಳು, ಕೊಂಕಣಿ ಭಾಷೆಗಳಲ್ಲೂ ಪ್ರಭುತ್ವ ಪಡೆದು ಬಹುಭಾಷಾ ಕೋವಿದೆ ಎನಿಸಿದ್ದರು. ಕಲಿಕೆಯದಾಹದಿಂದ ಯಾವುದಾದರೊಂದು ಪದವಿಗಳಿಸುವುದರಲ್ಲೇ ತಲ್ಲೀನರಾಗಿರುತ್ತಿದ್ದ ಮಹಿಷಿಯವರು ಸ.ಸ. ಮಾಳದಾಡರ ಮಾರ್ಗದರ್ಶನದಲ್ಲಿ ‘ಕನ್ನಡ ಕವಯಿತ್ರಿಯರು’ (ವೇದಕಾಲದಿಂದ ಆಧುನಿಕ ಕಾಲದವರೆಗೆ) ಎಂಬ ಪ್ರೌಢ ಪ್ರಬಂಧವನ್ನು ರಚಿಸಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ೧೯೬೧ರಲ್ಲಿ ಸಲ್ಲಿಸಿದರು. ಈ ಮಹಾಪ್ರಬಂಧವು ಕರ್ನಾಟಕದ ಕವಯಿತ್ರಿಯರನ್ನು ಪರಿಚಯಿಸುವ ಮೊದಲ ಪ್ರಯತ್ನವಾಗಿರುವುದನ್ನು ಗುರುತಿಸಿದ ಉಜ್ಜಯಿನಿಯ ವಿಕ್ರಂ ವಿಶ್ವವಿದ್ಯಾಲಯವು ಡಿ.ಲಿಟ್.ಪದವಿ ನೀಡಿ ಗೌರವಿಸಿತು. ತಮ್ಮ ತೀಕ್ಷ್ಣ ಬುದ್ಧಿಮತೆಯಿಂದ ಶಿಕ್ಷಣ ದಲ್ಲಿ ಯಾವುದಾದರೊಂದು ಸಾಧನೆಯಲ್ಲಿಯೇ ತೊಡಗಿಸಿಕೊಂಡಿರುತ್ತಿದ್ದ ಮಹಿಷಿಯವರು ಶೈಕ್ಷಣಿಕ ಕ್ಷೇತ್ರದೊಡನೆ ನಿಕಟ ಸಂಪರ್ಕಹೊಂದಿದ್ದು ಪ್ರಾಥಮಿಕ ಶಿಕ್ಷಣದಿಂದ ಟ್ರೈನಿಂಗ್ ಕಾಲೇಜುಗಳ ವರೆಗೆ ಸಂಚಾಲಕರಾಗಿ, ರಾಜ್ಯಮಹಿಳಾ ಶಿಕ್ಷಣ ಮಂಡಲಿ, ಕೇಂದ್ರ ಶಿಕ್ಷಣ ಸಲಹಾಮಂಡಲಿಗಳ ಸದಸ್ಯರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್‌ಸದಸ್ಯರಾಗಿ, ಸಂಸದೀಯ ಹಿಂದಿ ಪರಿಷತ್ತಿನ ಅಧ್ಯಕ್ಷೆಯಾಗಿ, ಧಾರವಾಡದ ವನಿತಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆಯಾಗಿ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಉಪಾಧ್ಯಕ್ಷೆಯಾಗಿ-ಹೀಗೆ ಹಲವಾರು ಹುದ್ದೆಗಳಲ್ಲಿ ಶೈಕ್ಷಣಿಕ ಉನ್ನತಿಗಾಗಿ ದುಡಿದಿದ್ದಾರೆ. ಶಿಕ್ಷಣ ಕ್ಷೇತ್ರದಷ್ಟೇ ಇವರು ದುಡಿದ ಮತ್ತೊಂದು ಕ್ಷೇತ್ರವೆಂದರೆ ಸಮಾಜಸೇವೆ. ಮಹಿಳೆಯರ ಏಳ್ಗೆಗಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಂಡು ಮಹಿಳೆಯರ ವಿದ್ಯಾಭ್ಯಾಸದ ಜೊತೆಗೆ ಉದ್ಯೋಗ ದೊರಕಿಸಿಕೊಡುವಲ್ಲಿಯೂ ಶ್ರಮಿಸಿದ್ದಾರೆ. ಗಾಂಧೀಜಿಯವರು ದೇಶದ ಜನತೆಯನ್ನು ಜಾಗೃತಗೊಳಿಸಿ ೧೯೪೨ರಲ್ಲಿ ದೇಶಬಿಟ್ಟು ತೊಲಗಿ, ಅಸಹಕಾರ ಚಳವಳಿಯನ್ನು ಪ್ರಾರಂಭಿಸಿದ್ದನ್ನು ಕಂಡಿದ್ದ ಮಹಿಷಿಯವರಿಗೂ ದೇಶಸೇವೆಯತ್ತ ಮನಸ್ಸು ಹೊಯ್ದೊಡತೊಡಗಿತ್ತು. ಆದರೆ ಕಾಲ ಪಕ್ಷವಾದದ್ದು ೧೯೬೨ರ ಮಹಾಚುನಾವಣೆಯ ಸಂದರ್ಭದಲ್ಲಿ. ಹಳ್ಳಿಕೇರಿ ಗುದ್ಲಪ್ಪನವರ ಪ್ರೋತ್ಸಾಹದಿಂದ ಧಾರವಾಡದ ಉತ್ತರಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಹೀಗೆ ಲೋಕಸಭೆಗೆ ನಾಲ್ಕುಬಾರಿ ಆಯ್ಕೆಗೊಂಡು ೨೫ ವರ್ಷಗಳ ಕಾಲ ಸಂಸತ್ತಿನಲ್ಲಿದ್ದ ಮಹಿಷಿಯರು ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಮೂವರು ಪ್ರಧಾನ ಮಂತ್ರಿಗಳನ್ನು ಕಂಡವರು. ಇಂದಿರಾಗಾಂಧಿಯವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರ ಆಪ್ತಸಚಿವೆಯಾಗಿ, ಅಣುಶಕ್ತಿ ಹಾಗೂ ಸಂಖ್ಯಾಶಾಸ್ತ್ರ ಸಂಸ್ಥೆಗಳ, ಸಾರ್ವಜನಿಕ ಸಂಬಂಧಗಳ ಖಾತೆಯ ಉಪಮಂತ್ರಿಯಾಗಿ, ಪ್ರವಾಸೋದ್ಯಮ, ವಿಮಾನಖಾತೆ, ಕಾನೂನು ಮತ್ತು ಕಂಪನಿ ವ್ಯವಹಾರಗಳ ಖಾತೆ, ಲೋಕಸಭೆ ಮತ್ತು ರಾಜ್ಯ ಸಭೆಗಳ ಜಂಟಿ ಆಯ್ಕೆ ಸಮಿತಿ ಅಧ್ಯಕ್ಷೆಯಾಗಿ ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗದ ಉಪಾಧ್ಯಕ್ಷೆಯಾಗಿ, ಗ್ರಾಮೀಣ ಸಚಿವಾಲಯದ ಉಪಾಧ್ಯಕ್ಷೆಯಾಗಿ, ಸಂಸ್ಕೃತ ಸಂಸ್ಥಾನ ಹಿಂದಿ ಸಂಸತ್ ಸಂಘದ ಉಪಾಧ್ಯಕ್ಷೆಯಾಗಿ-ಹೀಗೆ ಮಂತ್ರಿಮಂಡಲದಲ್ಲಿ ಮತ್ತು ಸಂಸತ್‌ ರಚಿಸಿದ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ನಾಡುನುಡಿಗೆ ಪ್ರಾಶಸ್ತ್ಯ ದೊರಕಿಸಿ ಕೊಡುವಲ್ಲಿಯೂ ಹೋರಾಟ ಮಾಡಿದ್ದಾರೆ. ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗೆದ್ದಾಗ ಸರಕಾರದ ಕೋರಿಕೆಯಂತೆ ವರದಿಯೊಂದನ್ನು ಸಿದ್ಧಪಡಿಸಿ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಸರಕಾರಿ ಮತ್ತು ಖಾಸಗಿ ವಲಯಗಳ ಉದ್ಯಮಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ, ಎಂಪ್ಲಾಯ್‌ಮೆಂಟ್ ಸರ್ವೀಸಸ್‌ ಮೂಲಕ ಅಭ್ಯರ್ಥಿಗಳ ಆಯ್ಕೆ, ತಾಂತ್ರಿಕ ಕ್ಷೇತ್ರಗಳಲ್ಲಿ ಕನ್ನಡಿಗರು ದೊರೆಯದಿದ್ದಾಗ ಮಾತ್ರ ಹೊರರಾಜ್ಯದ ಅಭ್ಯರ್ಥಿಗಳ ಆಯ್ಕೆ, ಉನ್ನತ ಹುದ್ದೆಯಲ್ಲಿರುವ ಇತರ ರಾಜ್ಯದವರಿಗೆ ಕನ್ನಡ ಪರೀಕ್ಷೆ-ಇವೇ ಮುಂತಾದ ಅಂಶಗಳನ್ನು ವರದಿಯಲ್ಲಿ ತಿಳಿಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಸಾಹಿತ್ಯದ ಬರವಣಿಗೆಯನ್ನು ರೂಢಿಸಿಕೊಂಡಿದ್ದ ಮಹಿಷಿಯವರು ರಚಿಸಿದ್ದು ಕೆಲವೇ ಕೃತಿಗಳಾದರೂ ಮಹತ್ವಪೂರ್ಣದ್ದಾಗಿದೆ. ರೂಪ-ಕಥಾಸಂಕಲನ; ಸ್ವಾತಂತ್ಯ್ರಕಹಳೆ ಮತ್ತು ಹಿಮಾಚಲದಿಂದ ರಾಮೇಶ್ವರ-ಕವನ ಸಂಕಲನಗಳು; ಮುಳ್ಳುಗುಲಾಬಿ ಮತ್ತು ನವಿಲ ಇಂಚರ-ಮೊದಲಾದ ಮಕ್ಕಳ ಕವನ ಸಂಕಲನಗಳು; ಅತಿಥಿ ಸತ್ಕಾರ-ಹರಟೆಗಳ ಸಂಕಲನ; ಸಾಹಿತ್ಯಮಂಥನ-ವಿಮರ್ಶಾಸಂಕಲನ; ಕಸೂತಿ ಕಲೆ ಮತ್ತು ಸುಲಭ ಗೃಹ ವಿಜ್ಞಾನ ಎಂಬ ಇತರ ಕೃತಿಗಳನ್ನು ರಚಿಸಿದ್ದಾರೆ. ಇವಲ್ಲದೆ ಇವರ ಸಾಹಿತ್ಯದ ಮಹತ್ಕೃತಿಗಳೆಂದರೆ ಕುವೆಂಪುರವರ ‘ರಾಮಾಯಣದರ್ಶನಂ’ ಡಿ.ವಿ.ಜಿಯವರ ‘ಮಂಕುತಿಮ್ಮನ ಕಗ್ಗ’ ಮತ್ತು ಶಿವರಾಮಕಾರಂತರ ಪ್ರವಾಸ ಕಥನ ‘ಅಪೂರ್ವ ಪಶ್ಚಿಮ’ ಕೃತಿಗಳನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಹಿಂದಿ ಭಾಷೆಯಲ್ಲಿ ‘ಯೇ ಹಮಾರೇ’ ‘ಯೇ ಬಿ ಹಮಾರೇ’, ‘ಅತಿಥಿ ಸತ್ಕಾರ್‌’ ಮುಂತಾದ ಕೃತಿಗಳನ್ನು ರಚಿಸಿದ್ದಲ್ಲದೆ ಹಿಂದಿಯಿಂದ ನಾ.ಶಿ. ಫಡಕೆಯವರ ಶಕುಂತಲಾ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಡುನುಡಿಗಾಗಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ರಂಗ ಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಮಹಿಷಿಯವರ ಸಾಹಿತ್ಯ ಸೇವೆಯನ್ನು ಗೌರವಿಸಿ ಅತಿಥಿ ಸತ್ಕಾರ ಮತ್ತು ಯೇ ಹಮಾರೆ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮುಳ್ಳು ಗುಲಾಬಿ ಮಕ್ಕಳ ಕವನ ಸಂಕಲನಕ್ಕೆ ರಾಜ್ಯಸರಕಾರದ ಬಹುಮಾನ, ಪುಣೆಯ ಸಮೀರ ಸಂವರ್ಧಿನಿ ಸಂಸ್ಕೃತಸಭಾದಿಂದ ‘ವಿದ್ವತ್‌ರತ್ನ’, ಉಡುಪಿ ಪೇಜಾವರ ಶ್ರೀಗಳಿಂದ ‘ಕರ್ನಾಟಕ ಸರಸ್ವರ’, ಅಖಿಲಭಾರತ ಹಿಂದಿ ಸಾಹಿತ್ಯಸಭಾ ಕುರುಕ್ಷೇತ್ರದಿಂದ ‘ಸಾಹಿತ್ಯವಾಚಸ್ಪತಿ’, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ ಪ್ರಶಸ್ತಿ’ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top