ಡಾ. ಸರೋಜಿನಿ ಶಿಂತ್ರಿ

Home/Birthday/ಡಾ. ಸರೋಜಿನಿ ಶಿಂತ್ರಿ
Loading Events

೦೪.೦೭.೧೯೩೦ ಶತಶತಮಾನಗಳಿಂದಲೂ ಕತ್ತಲೆಯ ಬದುಕಿನಲ್ಲೇ ಕಳೆದ ಮಹಿಳೆಯರ ಶೋಷಣೆ, ಏಳುಬೀಳು, ಸೋಲು ಗೆಲವುಗಳಿಂದ ಸ್ಫೂರ್ತಿ ಪಡೆದು, ಸಮಾಜ ಸೇವೆ-ಶಿಕ್ಷಣ-ಮಹಿಳೆಯರ ಜಾಗೃತಿಗಾಗಿ ಜೀವನದುದ್ದಕ್ಕೂ ದುಡಿಯುತ್ತಾ ಬಂದಿರುವ ಸರೋಜಿನಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಕ ತಾಲ್ಲೂಕಿನ ಮಿಶ್ರಿ ಕೋಟಿ ಎಂಬಲ್ಲಿ. ತಂದೆ ಬಸಪ್ಪ ಶಿಂತ್ರಿಯವರು ಶಿಕ್ಷಕರಾಗಿ, ವಿದ್ಯಾಧಿಕಾರಿಗಳಾಗಿ ಸಮಯಪಾಲನೆ, ಅಧ್ಯಯನ ಶೀಲತೆ, ತತ್ತ್ವಾದರ್ಶಗಳಿಗೆ ಹೆಸರಾಗಿದ್ದು ‘ಶಿಂತ್ರಿ ಮಾಸ್ತರ’ ಎಂದೇ ಪ್ರಸಿದ್ಧರಾಗಿದ್ದವರು. ತಾಯಿ ಗಂಗಮ್ಮ. ಶಾಲೆಗಳು ವಿರಳವಾಗಿದ್ದ ಕಾಲದಲ್ಲಿ, ಸ್ತ್ರೀಯರಿಗೆ ಶಿಕ್ಷಣ ಅನಗತ್ಯವೆನ್ನುತ್ತಿದ್ದ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳಾಗಿದ್ದ ಬಸಪ್ಪನವರು ಹೆಣ್ಣು ಮಕ್ಕಳೆಂದು ಅನಾದರ ಮಾಡದೆ ವಿದ್ಯೆ ಕಲಿಯಲು ಉತ್ತೇಜನ ನೀಡಿದರು. ಪ್ರಾರಂಭಿಕ ಶಿಕ್ಷಣ ಬಿಜಾಪುರದ ಮುನಿಸಿಪಾಲಿಟಿ ಕನ್ನಡ ಶಾಲೆಯಲ್ಲಿ. ಧಾರವಾಡದ ಎ.ಕೆ.ಗರ್ಲ್ಸ್ ಹೈಸ್ಕೂಲಿನಲ್ಲಿ ಪ್ರೌಢಶಾಲೆ, ಕರ್ನಾಟಕ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಾಕೆ. ೧೯೪೯ರಲ್ಲಿ ಬಿ.ಎ. ಪದವಿ (ಇಂಗ್ಲಿಷ್) ಹಾಗೂ ೧೯೫೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಮನೆತನಕ್ಕೆ ಬಂದ ಬಳುವಳಿಯಂತೆ ಶಿಕ್ಣಣ ಕ್ಷೇತ್ರವನ್ನೇ ಆಯ್ಕೆಮಾಡಿಕೊಂಡು ಓದಿದ ಕರ್ನಾಟಕ ಕಾಲೇಜಿನಲ್ಲಿಯೇ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಸೇರಿದರು. ಪ್ರೊ. ಆರ್ಮೆಂಡೋ ಮೆನಜಿಸ್ ಹಾಗೂ ವಿ.ಕೃ. ಗೋಕಾಕರ ಮೆಚ್ಚಿನ ಶಿಷ್ಯೆ. ಮೆನೆಜಿಸ್‌ರವರ ಮಾರ್ಗದರ್ಶನದಲ್ಲಿ ‘ವುಮೆನ್ ಕ್ಯಾರಕ್ಟರ್ಸ್‌ ಇನ್ ಶೇಕ್ಸಪಿಯರ್’ ಎಂಬ ವಿಷಯದಲ್ಲಿ ಅಧ್ಯಯನ ಕೈಗೊಂಡು ಪಡೆದ ಡಾಕ್ಟರೇಟ್ ಪದವಿ. ಸೇವಾವಧಿಯಲ್ಲಿ ಹಲವಾರು ಉನ್ನತ ಹುದ್ಧೆಗಳನ್ನು ಅಲಂಕರಿಸಿದ್ದು ೧೯೬೯ರಲ್ಲಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆಯಾಗಿ, ಕಲಾ ವಿಭಾಗದ ಡೀನ್ ಆಗಿ, ನಾಲ್ಕು ದಶಕಗಳ ಕಾಲದ ಸೇವೆಯ ನಂತರ ೧೯೯೧ರಲ್ಲಿ ನಿವೃತ್ತಿ. ಕರ್ನಾಟಕ ವಿಶ್ವವಿದ್ಯಾಲಯದ ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಧ ಸ್ತರಗಳಲ್ಲಿ ದುಡಿದರು. ಚುನಾಯಿತ ಸೆನೆಟ್ ಸದಸ್ಯೆಯಾಗಿ, ಸಿಂಡಿಕೇಟ್ ಸದಸ್ಯೆಯಾಗಿಯೂ ಶ್ರಮಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಹಿಳಾ ಅಧ್ಯಯನ ಕೇಂದ್ರ, ಮಹಿಳಾ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲು ಶ್ರಮಿಸಿದ್ದಲ್ಲದೆ ಸಂಸ್ಥೆಯ ಅಧ್ಯಕ್ಷೆಯಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಅಧ್ಯಕ್ಷೆಯಾಗಿ, ಗೌರವಾಧ್ಯಕ್ಷೆಯಾಗಿಯೂ ದುಡಿದಿದ್ದಾರೆ. ಮಹಿಳೆಯರ ವ್ಯಕ್ತಿತ್ವ ವಿಕಾಸ, ಸ್ತ್ರೀ ಪುರುಷರ ಸಮಾನತೆ, ಸ್ತ್ರೀ ಶೋಷಣೆಯ ನಿರ್ಮೂಲನೆ ಮುಂತಾದ ವಿಷಯಗಳಲ್ಲಿ ಆಳವಾಗಿ ಅಧ್ಯಯನ ನಡೆಸಿ ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಸ್ತ್ರೀ ನಡೆದು ಬಂದ ದಾರಿ (೧೯೭೪), ಮಹಿಳೆ ನಡೆದು ಬಂದ ದಾರಿ (೧೯೭೮), ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ (೧೯೮೬) ಸ್ವತಂತ್ರ ಕೃತಿಗಳಾದರೆ, ಮಹಿಳೆ-ಸಮಸ್ಯೆಗಳು-ಸಾಧನೆಗಳು (೧೯೭೬) ಮತ್ತು ಪ್ರಗತಿ ಪಥದಲ್ಲಿ ಮಹಿಳೆ ಇವೆರಡು ಸಂಪಾದಿತ ಕೃತಿಗಳು. ಮತ್ತೊಂದು ಕೃತಿ ‘ಅರಳುವ ಮೊಗ್ಗು’ – ಇದು ಮಕ್ಕಳ ಬೌಧ್ಧಿಕ – ಮಾನಸಿಕ, ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಕೃತಿಯಾಗಿದ್ದು ಇದನ್ನು ಶ್ರೀಮತಿ ಸುಶೀಲಾ ನಾಯಕರೊಡನೆ ಸಂಪಾದಿಸಿ ದ್ದಾರೆ. ಮಹಿಳೆಯರು ಮತ್ತು ಮಕ್ಕಳನ್ನು ಕುರಿತು ವಿಶೇಷವಾದ ಅಧ್ಯಯನ ಕೈಗೊಂಡು ವೈಚಾರಿಕ ಸಂವೇದನೆಯಿಂದ ಕೂಡಿರುವ ಹಲವಾರು ಪ್ರಬಂಧಗಳನ್ನು ಬರೆದಿದ್ದಾರೆ. ಇವು ಸ್ತ್ರೀ ದೃಷ್ಟಿ-ಸೃಷ್ಟಿ (೧೯೭೪). ಇದರಲ್ಲಿ ಕನ್ನಡ-ಇಂಗ್ಲಿಷ್-ಸಂಸ್ಕೃತದ ಪ್ರಾಚೀನ ಮತ್ತು ಆಧುನಿಕ ಸಾಹಿತ್ಯವನ್ನು ಸಮೃದ್ಧಿಗೊಳಿಸಿದವರ ಜೀವನ=ಸಾಧನೆಯ ಸಮಗ್ರ ಚಿತ್ರಣವಿದ್ದರೆ ‘ತುಂತುರು’ ಪ್ರಬಂಧ ಸಂಕಲನದಲ್ಲಿ ವೈಚಾರಿಕ ಲೇಖನಗಳಿವೆ. ವ್ಯಂಗ್ಯ-ವಿಡಂಬನೆ, ನವಿರಾದ ಹಾಸ್ಯದ ಚೇತೋಹಾರಿ ಪ್ರಬಂಧಗಳ ಸಂಕಲನ. ಇದಲ್ಲದೆ ಹಲವಾರು ವ್ಯಕ್ತಿ ಚಿತ್ರಗಳ ಕೃತಿಗಳನ್ನೂ ರಚಿಸಿದ್ದಾರೆ. ಸ್ವಾತಂತ್ರ‍್ಯ ಪೂರ್ವದ ವೈದಿಕ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಸಮಾಜ ಸೇವೆಯಲ್ಲಿ ನಿರತಳಾದ ಭಾಗೀರಥಿ ಭಾಯಿ ಪುರಾಣಿಕ, ಗಾಂಧೀಜಿಯವರ ರಾಮರಾಜ್ಯದ ಕನಸನ್ನು ಸಾಕಾರಗೊಳಿಸಲು ಸಂಪ್ರದಾಯದ ಬಗ್ಗೆ ಸಿಡಿದೆದ್ದು ಅಂತರ್‌ಜಾತೀಯ ಕಲಾಪ್ರೇಮಿ, ನಾಟಕಕಾರ, ಸಾಹಿತಿಯನ್ನು ವರಿಸಿದ ಕಮಲಾಬಾಯಿ ಚಟ್ಟೋಪಾಧ್ಯಾಯರ ಬದುಕಿನ ‘ನಾನೊಂದು ಕನಸುಕಂಡೆ’ ಕೃತಿಯಲ್ಲದೆ ಆದರ್ಶ ಶಿಕ್ಷಕರಾದ ಮ.ಗು. ಹಂದ್ರಾಳು ಮತ್ತು ಕರ್ನಾಟಕದ ಆರ್ಥಿಕ ಪ್ರಗತಿಗಾಗಿ ಶ್ರಮಿಸಿದ ಎಸ್.ಜಿ. ಬಾಳೆಕುಂದ್ರಿ ಮತ್ತು ತತ್ತ್ವಾದರ್ಶಗಳ ಶಿಕ್ಷಕರಾಗಿದ್ದ ತಂದೆ ಬಸಪ್ಪ ಶಿಂತ್ರಿಯವರ ಬಗ್ಗೆ ಸೊಗಸಾದ ವ್ಯಕ್ತಿ ಚಿತ್ರಗಳನ್ನು ರಚಿಸಿದ್ದಾರೆ. ಇಂಗ್ಲಿಷಿನಲ್ಲಿ ಸ್ವತಂತ್ರವಾಗಿ ರಚಿಸಿರುವ ಕೃತಿಗಳು – ವುಮೆನ್ ಕ್ಯಾರೆಕ್ಟರ್ಸ್‌ ಇನ್ ಶೇಕ್ಸಪಿಯರ್, ಅಕ್ಕಮಹಾದೇವಿ, ಸಂಚಿ ಹೊನ್ನಮ್ಮ, ದಿ ವುಮೆನ್ ಸೈಯಿಂಟ್ಸ್ ಆಫ್ ಕರ್ನಾಟಕ ಇವುಗಳ ಜೊತೆಗೆ ಇತರರೊಡನೆ ವುಮೆನ್: ಹರ್ ಪ್ರಾಬ್ಲಮ್ಸ್ ಅಂಡ್ ಅಚೀವ್‌ಮೆಂಟ್ಸ್, ದಿ ವುಮೆನ್ ಫ್ರೀಡಮ್ ಫೈಟರ್ಸ್‌ ಆಫ್ ಕರ್ನಾಟಕ ಮತ್ತು ಮಫೆಲ್ಡ್ ವಾಯ್ಸಸ್ ಮುಂತಾದವುಗಳನ್ನು ಸಂಪಾದಿಸಿದ್ದಾರೆ. ಶೈಕ್ಷಣಿಕವಾಗಿ ಹಲವಾರು ಮಹತ್ವದ ಸ್ಥಾನಗಳಾದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆಯಾಗಿ, ಧನಸಹಾಯ ಆಯೋಗದ ಸಮಿತಿಯ ಸದಸ್ಯೆಯಾಗಿ, ಸಿಂಡಿಕೇಟ್ ಸದಸ್ಯೆಯಾಗಿದ್ದಲ್ಲದೆ ಸಂಘ ಸಂಸ್ಥೆಗಳಾದ ವಿದ್ಯಾವರ್ಧಕ ಸಂಘ, ಮಹಿಳಾ ಅಧ್ಯಯನ ಸಮಿತಿ, ರಾಜ್ಯ ಸಾಹಿತ್ಯ ಅಕಾಡಮಿ, ಮಹಿಳೆಯರ ಶಿಕ್ಷಣ ಸಮಿತಿ ಮುಂತಾದವುಗಳ ಸದಸ್ಯೆ, ಕಾರ್ಯದರ್ಶಿ, ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಐದು ಮಂದಿ ವಿದ್ಯಾರ್ಥಿಗಳು ಡಾಕ್ಟರೇಟ್ ಪಡೆದಿದ್ದಾರೆ. ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿರುವ ಶಿಂತ್ರಿಯವರಿಗೆ ೧೯೯೫ರಲ್ಲಿ ಮುಧೋಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶೈಕ್ಷಣಿಕ ರಂಗದ ಸೇವೆಗಾಗಿ ಸನ್ಮಾನ, ನ್ಯೂಯಾರ್ಕಿನಲ್ಲಿ ನಡೆದ ನಾಲ್ಕನೆಯ ಅಂತಾರಾಷ್ಟ್ರೀಯ ಇಂಟರ್ ಡಿಸಿಪ್ಲಿನರಿ ಕಾಂಗ್ರೆಸ್‌ನಲ್ಲಿ ಕನ್ನಡ ಮಹಿಳಾ ಸಾಹಿತ್ಯದ ಮೇಲೆ ಪ್ರಬಂಧ ಮಂಡನೆ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top