ಡಾ. ಸಿದ್ಧಲಿಂಗಯ್ಯ

Home/Birthday/ಡಾ. ಸಿದ್ಧಲಿಂಗಯ್ಯ
Loading Events
This event has passed.

..೧೯೫೪ ತನ್ನ ಸಮುದಾಯದಲ್ಲಿ ಕಿಚ್ಚು, ಸ್ವಾಭಿಮಾನದ ಜಾಗೃತಿ ಮೂಡಿಸಲು, ಸತ್ವಪೂರ್ಣ ಕಾವ್ಯಾಭಿವ್ಯಕ್ತಿಯಿಂದ ತನ್ನ ಒಡಲಾಳದ ಸಿಟ್ಟು-ಸೆಡವುಗಳನ್ನು ಹೊರಹಾಕಿ, ದಲಿತರ ನೋವನ್ನು ಸಮರ್ಥವಾಗಿ ಅಕ್ಷರ ರೂಪಕ್ಕಿಳಿಸಿದ ಕವಿ ಸಿದ್ಧಲಿಂಗಯ್ಯನವರು ಬಡ ದಲಿತ ಕುಟುಂಬದ ದೇವಯ್ಯ ಮತ್ತು ವೆಂಕಟಮ್ಮನವರ ಮಗನಾಗಿ ಹುಟ್ಟಿದ್ದು ೧೯೫೪ ರ ಫೆಬ್ರವರಿ ೩ ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ. ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ೧೯೫೯ರಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ್ದು ೧೯೭೪ರಲ್ಲಿ ಬೆಂಗಳೂರಿನ ಸರಕಾರಿ ಕಲಾಕಾಲೇಜಿನಿಂದ ಬಿ.ಎ. ಆನರ್ಸ್ (ಐಚ್ಛಿಕ ಕನ್ನಡ) ಪದವಿಯನ್ನು ಪಡೆದರು. ೧೯೭೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರೊ. ಡಿ.ಎಲ್‌. ನರಸಿಂಹಾಚಾರ್ಯರ ಸ್ವರ್ಣಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪದವಿಯನ್ನೂ,  ಪ್ರೊ. ಜಿ.ಎಸ್‌. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ‘ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧವನ್ನೂ ಮಂಡಿಸಿ ೧೯೮೯ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇರಿ ಪ್ರಾಧ್ಯಾಪಕರಾಗಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ೧೧ ಮಂದಿ ಎಂ.ಫಿಲ್‌. ಪದವಿ ಮತ್ತು ೮ ಮಂದಿ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಮಾಜದಲ್ಲಿನ ಅಸಮಾನತೆಯ ಬಗ್ಗೆ ತನ್ನೊಳಗೆ ಮೊಳೆಯುತ್ತಿದ್ದ ಸಿಟ್ಟು, ಆಕ್ರೋಶಗಳನ್ನೂ ವ್ಯಕ್ತಿಪಡಿಸಲು ಆಯ್ದುಕೊಂಡ ಮಾಧ್ಯಮವೆಂದರೆ ಕವಿತೆಗಳ ಮೂಲಕ. ಹೀಗೆ ಬರೆದ ಹಲವಾರು ಕವನಗಳ ಸಂಕಲನ ‘ಹೊಲೆಮಾದಿಗರ ಹಾಡು’ ಪ್ರಕಟಗೊಂಡದ್ದು ೧೯೭೫ರಲ್ಲಿ. ನಂತರ ‘ಸಾವಿರಾರು ನದಿಗಳು’,. ಕಪ್ಪುಕಾಡಿನ ಹಾಡು, ಆಯ್ದ ಕವಿತೆಗಳು, ಮೆರವಣಿಗೆ (ಆಯ್ದ ಕವನಗಳು) ‘ನನ್ನ ಜನಗಳು ಮತ್ತು ಇತರ ಕವಿತೆಗಳು’ (ಆಯ್ದಕವಿತೆಗಳು) ಪ್ರಕಟವಾದವು. ‘ಪಂಚಮ ಮತ್ತು ನೆಲಸಮ’, ಏಕಲವ್ಯ ಪ್ರಮುಖ ನಾಟಕಗಳಾದರೆ ‘ಅವತಾರಗಳು’ ಪ್ರಬಂಧ ಕೃತಿ. ಇವಲ್ಲದೆ ಹಕ್ಕಿನೋಟ, ಜನಸಂಸ್ಕೃತಿ, ಉರಿಕಂಡಾಯ ಮುಂತಾದ ಲೇಖನ ಸಂಗ್ರಹಗಳು, ಸದನದಲ್ಲಿ ಸಿದ್ಧಲಿಂಗಯ್ಯ ಭಾಗ ೧-೨ ಮತ್ತು ಇವರ ಆತ್ಮಕಥನ ಊರು-ಕೇರಿ ಭಾಗ ೧-೨ ಪ್ರಕಟಗೊಂಡಿವೆ. ಬೆಂಗಳೂರು ವಿ.ವಿ.ದ ಪ್ರಸಾರಾಂಗಕ್ಕಾಗಿ ‘ಸಮಕಾಲೀನ ಕನ್ನಡ ಕವಿತೆಗಳು’ ಭಾಗ-೩ ಮತ್ತು ಭಾಗ-೪ ನ್ನು ಸಂಪಾದಿಸಿಕೊಟ್ಟಿದ್ದಾರೆ. ‘ಊರು ಕೇರಿ’ ಆತ್ಮಕಥೆ ಇಂಗ್ಲಿಷ್‌ ಹಾಗೂ ತಮಿಳಿಗೂ ಅನುವಾದಗೊಂಡಿದ್ದು ಇಂಗ್ಲಿಷ್‌ ಅನುವಾದವನ್ನೂ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಕಟಿಸಿದೆ. ಹಲವಾರು ಕವಿತೆಗಳು ಇಂಗ್ಲಿಷ್‌, ಹಿಂದಿ, ತಮಿಳು, ಬಂಗಾಳಿ, ಮಲಯಾಳಂ ಮತ್ತು ತೆಲುಗು ಭಾಷೆಗೂ ಅನುವಾದಗೊಂಡಿವೆ. ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ ‘ಧರಣಿಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಬರೆದ ಹಾಡಿಗೆ ೧೯೮೩-೮೪ರಲ್ಲಿ ರಾಜ್ಯಪ್ರಶಸ್ತಿ ದೊರೆತಿದೆ. ಪಣಜಿಯಲ್ಲಿ ನಡೆದ ಭಾರತೀಯ ಕನ್ನಡ ಸಮ್ಮೇಳನದ ಅಧ್ಯಕ್ಷತೆ, ಗೋರೆಗಾಂವ್‌ನ ವಿಚಾರ ಭಾರತಿ ಸಮ್ಮೇಳನದ ಅಧ್ಯಕ್ಷತೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬೀದರ್ ನಲ್ಲಿ ನಡೆದ ಶರಣ ಸಮ್ಮೇಳನದ ಅಧ್ಯಕ್ಷತೆ, ಮತ್ತು ಹಂಪಿ ಉತ್ಸವದಲ್ಲಿ, ಮೈಸೂರು ದಸರಾ ಮಹೋತ್ಸವದಲ್ಲಿ, ದೆಹಲಿಯಲ್ಲಿ ನಡೆದ ದಕ್ಷಿಣ ಪ್ರಾಂತೀಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ-ಹೀಗೆ ಹಲವಾರು ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷತೆ, ಗೋಷ್ಠಿಯ ಅಧ್ಯಕ್ಷತೆ, ಸಮಾರೋಪ ಭಾಷಣ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಗೌರವ ಪಡೆದಿದ್ದಾರೆ. ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲೂ ಪಾಲ್ಗೊಂಡಿದ್ದು ಜಾನಪದ ಸಾಹಿತ್ಯ ಸಂಪಾದಕ ಮಂಡಲಿ, ಅಂಬೇಡ್ಕರ್ ಕೃತಿಗಳ ಕನ್ನಡ ಭಾಷಾಂತರ ಮತ್ತು ಸಂಪಾದನಾ ಸಮಿತಿ, ರಾಮಮನೋಹರ ಲೋಹಿಯಾ ಅವರ ಕೃತಿಗಳ ಭಾಷಾಂತರ ಮತ್ತು ಸಂಪಾದನಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಲಿ ಮುಂತಾದವುಗಳಲ್ಲಿ ಸದಸ್ಯರಾಗಿದ್ದರ ಜೊತೆಗೆ ದಲಿತ ಸಂಘರ್ಷ ಸಮಿತಿ, ಬಂಡಾಯ ಸಾಹಿತ್ಯ ಸಂಘಟನೆಗಳ ಸ್ಥಾಪಕ ಸದಸ್ಯರು. ಇವರ ಸೃಜನಶೀಲ ಸಾಹಿತ್ಯ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ ರಾಮ್‌ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ೧೯೮೮-೯೪, ೧೯೯೫-೨೦೦೧ ರವರೆಗೆ ಎರಡುಬಾರಿ ನಾಮಕರಣಗೊಂಡಿದ್ದರ ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ (೨೦೦೬-೦೮) ಅಧ್ಯಕ್ಷರಾಗಿ, ಇದೀಗ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top