Loading Events

« All Events

ಡಾ. ಸಿ. ಅನ್ನಪೂರ್ಣಮ್ಮ

July 7

೭-೭-೧೯೨೮ ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ, ವೈದ್ಯಸಾಹಿತಿ ಅನ್ನಪೂರ್ಣಮ್ಮನವರು ಹುಟ್ಟಿದ್ದು ಸಂಸ್ಕೃತ ಗ್ರಾಮವಾದ ಮತ್ತೂರಿನಲ್ಲಿ. ತಂದೆ ವೇದಪಾರಂಗತರಾದ ಚನ್ನಕೇಶವ ಶಾಸ್ತ್ರಿಗಳು, ತಾಯಿ ಮೀನಾಕ್ಷಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲೇ. ಹೈಸ್ಕೂಲಿಗೆ ಸೇರಿದ್ದು ಬೆಂಗಳೂರಿನ ವಾಣಿವಿಲಾಸ ಹೈಸ್ಕೂಲು, ಮಹಾರಾಣಿ ಕಾಲೇಜಿನಿಂದ ಇಂಟರ್ ಮೀಡಿಯೆಟ್. ಶೇ. ೯೮ರಷ್ಟು ಅಂಕಗಳಿಸಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಸಿಕ್ಕಿದ ಸೀಟು. ಉನ್ನತ ದರ್ಜೆಯಲ್ಲಿ ಎಂ.ಬಿ.ಬಿ.ಎಸ್. ಪದವಿ, ವೆಲ್ಲೂರಿನಿಂದ ಡಿ.ಜಿ.ಓ., ನಾಗಪುರ ವಿಶ್ವವಿದ್ಯಾಲಯದಿಂದ ಪಡೆದ ಸ್ನಾತಕೋತ್ತರ (ಎಂ.ಎಸ್.) ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಪ್ರತಿಷ್ಠಿತ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ೩೦ ವರ್ಷಕಾಲ ತಮಿಳುನಾಡಿನಲ್ಲಿ ಸೇವೆ. ಸಂಗೀತಾಸಕ್ತೆ, ಸಮಾಜ ಸೇವೆಯಲ್ಲಿ ಮುಂಚೂಣಿ ಕಾರ‍್ಯಕರ್ತೆ. ಕ್ಯಾನ್ಸರ್, ಏಡ್ಸ್, ಆಹಾರ, ನೈರ್ಮಲ್ಯ, ತಂಬಾಕು, ಸಿಗರೇಟು, ಮಾದಕ ದ್ರವ್ಯಗಳ ದುಷ್ಪರಿಣಾಮದ ಬಗ್ಗೆ ಆರೋಗ್ಯ ಸಂವಾದ, ಭಾಷಣ ಕಾರ‍್ಯಕ್ರಮಗಳು. ಅಮೆರಿಕಾ ಸಂಸ್ಥಾನದ ಉದ್ದಗಲಕ್ಕೂ ಸಂಚರಿಸಿದ್ದಲ್ಲದೆ ಜಪಾನ್, ಹಾಂಕಾಂಗ್, ಬ್ಯಾಂಕಾಕ್, ಸಿಂಗಾಪುರ್, ಫಿಲಿಫೈನ್ಸ್ ಮತ್ತು ಶ್ರೀಲಂಕಾಗಳಲ್ಲಿ ವ್ಯಾಪಕ ಪ್ರವಾಸ, ಪಡೆದ ಅನುಭವ. ನಿವೃತ್ತಿಯ ನಂತರ ೬೦ನೇ ವಯಸ್ಸಿನಲ್ಲಿ ಪ್ರಾರಂಭಿಸಿದ ವೈದ್ಯ ಸಾಹಿತ್ಯ ಕೃಷಿ. ಆರೋಗ್ಯದ ಬಗ್ಗೆ ಕೃತಿರಚನೆ. ಹದಿಹರೆಯದ ಹೆಣ್ಣು, ಹೊಸಜೀವದ ಹುಟ್ಟು, ಋತುಚಕ್ರ, ವೈದ್ಯರೊಂದಿಗೆ ಮiತುಕತೆ, ಪ್ರೌಢಮಹಿಳೆ ಮುಂತಾದುವು. ಮಕ್ಕಳ ಲಾಲನೆ ಪಾಲನೆ ಬಗ್ಗೆ-ನಿಮ್ಮ ಮಗು ಆರೋಗ್ಯವಾಗಿರಬೇಕು, ಪುಟ್ಟ ಮಗು ಹೀಗಿರಲಿ, ಆರೋಗ್ಯ ಮಾರ್ಗದರ್ಶಿ, ನೀವು ಮತ್ತು ನಿಮ್ಮ ಮಗು ಹೀಗೆ ಸುಮಾರು ೩೦ಕ್ಕೂ ಹೆಚ್ಚು ವೈದ್ಯ ಸಾಹಿತ್ಯ ಕೃತಿ ಪ್ರಕಟಿತ. ವಿಕಲಚೇತನರ (ಅಂಗವಿಕಲರ) ಶ್ರೇಯೋಭಿವೃದ್ಧಿಗಾಗಿ ಸ್ಥಾಪಿಸಿದ್ದು ‘ಅನ್ನಪೂರ್ಣಮ್ಮ ಪ್ರತಿಷ್ಠಾನ.’ ಪ್ರತಿವರ್ಷ ವಿಕಲಚೇತನರಿಗೆ ಕನ್ನಡಕ, ತಳ್ಳು ಕುರ್ಚಿ, ಕೃತಕ ಕಾಲುಗಳು ಮುಂತಾದ ಹಲವಾರು ಅಗತ್ಯ ಉಪಕರಣಗಳು, ವೈದ್ಯಕೀಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ, ಸಮಾಜದಲ್ಲಿ ಗಣನೀಯ ಸೇವೆಗೈದ ವೈದ್ಯರಿಗೆ (ಪ್ರಸೂತಿ ವಿಭಾಗ), ತಾವೇ ಇಟ್ಟಿರುವ ಲಕ್ಷ ರೂಗಳ ಪುದುವಟ್ಟಿನಿಂದ ಬಂದ ಬಡ್ಡಿಯಲ್ಲಿ ಸನ್ಮಾನ ಮುಂತಾದ ಪ್ರೋತ್ಸಾಹಕ ಕಾರ‍್ಯಕ್ರಮಗಳು. ಇವರಿಗೆ ಸಂದ ಗೌರವ ಪುರಸ್ಕಾರಗಳು-ಬಿ.ಸಿ. ರಾಯ್ ಪ್ರಶಸ್ತಿ, ವಿಶ್ಚವ ಮಹಿಳಾ-೯೫ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಸದೋದಿತ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಅನುಪಮ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ವೈದ್ಯ ಸಾಹಿತ್ಯ ಶ್ರೀ ಪ್ರಶಸ್ತಿ, ಪಿ.ಎಸ್. ಶಂಕರ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮುಂತಾದುವು. ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥಗಳು ‘ಸಂಜೀವಿನಿ’, ‘ಅನ್ನಪೂರ್ಣ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಪಾರ್ಶ್ವನಾಥ. ಎಚ್.ಎ. – ೧೯೪೭ ಪ. ರಾಮಕೃಷ್ಣಶಾಸ್ತ್ರಿ – ೧೯೫೩ ಎನ್.ಎಸ್. ವೀರಪ್ಪ – ೧೯೧೦

Details

Date:
July 7
Event Category: