Loading Events

« All Events

  • This event has passed.

ಡಾ. ಸಿ.ಆರ್. ಚಂದ್ರಶೇಖರ್

December 12, 2023

೧೨.೧೨.೧೯೪೮ ಜನಪ್ರಿಯ ವೈದ್ಯರಾಗಿ, ಲೇಖಕರಾಗಿ, ಮಾನಸಿಕ ಆರೋಗ್ಯ, ಸಾಮಾನ್ಯ ಆರೋಗ್ಯ, ಲೈಂಗಿಕ ವಿಜ್ಞಾನ, ವೈಚಾರಿಕ ಸಾಹಿತ್ಯ, ಕಾದಂಬರಿ, ಸಣ್ಣಕಥೆ ಮುಂತಾದ ಹಲವಾರು ಪ್ರಕಾರಗಳಲ್ಲಿ ದಾಖಲೆ ನಿರ್ಮಿಸುವಷ್ಟು ಕೃತಿ ರಚಿಸಿರುವ ಚಂದ್ರಶೇಖರ್‌ರವರು ಹುಟ್ಟಿದ್ದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ. ತಂದೆ ಬಿ.ಎಂ. ರಾಜಣ್ಣಾಚಾರ್, ತಾಯಿ ಎಸ್.ಪಿ. ಸರೋಜಮ್ಮ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ. ಹೈಸ್ಕೂಲು ವಿದ್ಯಾಭ್ಯಾಸ ಇಂಗ್ಲಿಷ್ ಮಾಧ್ಯಮದಲ್ಲಿ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪಡೆದ ಪ್ರಥಮ ಸ್ಥಾನ. ಪಿ.ಯು. ಓದಿದ್ದು ಸರಕಾರಿ ಕಲೆ ಮತ್ತು ವಿಜ್ಞಾನ ಕಾಲೇಜು, ಬೆಂಗಳೂರು. ಬೆಂಗಳೂರಿನ ವೈದ್ಯಮಹಾಲಯದಿಂದ ಎಂ.ಬಿ.ಬಿ.ಎಸ್., ನಿಮ್ಹಾನ್ಸ್‌ನಲ್ಲಿ ಡಿ.ಪಿ.ಎಂ. (ಮನೋ ವೈದ್ಯಕೀಯದಲ್ಲಿ ಡಿಪ್ಲೊಮ) ಮತ್ತು ಎಂ.ಡಿ. ಪದವಿಗಳು, ಇದೀಗ ನಿಮ್ಹಾನ್ಸ್‌ನ ಮನೋ ವೈದ್ಯ ವಿಭಾಗ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಣೆ. ಕಾಲೇಜಿನಲ್ಲಿದ್ದಾಗಲೇ ಸಾಹಿತ್ಯ ಬಗ್ಗೆ ಬೆಳೆದ ಅಭಿರುಚಿಯಿಂದ ಕವನ, ಲೇಖನಗಳ ಬರವಣಿಗೆ, ಕಾಲೇಜು ಮ್ಯಾಗಜಿನ್‌ನಲ್ಲಿ ಹಲವಾರು ಲೇಖನಗಳು ಪ್ರಕಟಿತ. ನಂತರ ಹಲವಾರು ಕೃತಿಗಳ ರಚನೆ. ಇವರು ಬರೆದ ಕೃತಿಗಳನ್ನು ಬೆಂಗಳೂರು ವಿ.ವಿ.ದ ಪ್ರಸಾರಾಂಗ, ಕನ್ನಡ ಸಾಹಿತ್ಯ ಪರಿಷತ್ತು. ಐ.ಬಿ.ಎಚ್. ಪ್ರಕಾಶನ, ನವಕರ್ನಾಟಕ ಪ್ರಕಾಶನ, ವಿದ್ಯಾವರ್ಧಕ ಸಂಘ, ಲೋಕ ಶಿಕ್ಷಣ ಟ್ರಸ್ಟ್, ಅಕಾಡಮಿ ಮುಂತಾದ ಸಂಸ್ಥೆಗಳು ಪ್ರಕಟಿಸಿವೆ.  ಇವುಗಳಲ್ಲಿ ಮಾನಸಿಕ ಆರೋಗ್ಯ ಕುರಿತ ಮಗು ಮನಸ್ಸು ಮತ್ತು ಆರೋಗ್ಯ, ಹದಿವಯಸ್ಸು-ಅಸ್ವಸ್ಥ ಮನಸ್ಸು, ಚಿತ್ರ ವೈಚಿತ್ರ್ಯ, ಮಾನಸಿಕ ಕಾಯಿಲೆ ಎಂದರೇನು? ಮುಂತಾದ ಮಾನಸಿಕ ಆರೋಗ್ಯದ ೫೦ ಕೃತಿಗಳು; ಮಿದುಳು, ಸೃಷ್ಟಿಯ ಅದ್ಭುತಮಿದುಳು, ನಮ್ಮ ಶರೀರ ಮತ್ತು ಅದರ ರಕ್ಷಣೆ, ಪ್ರಥಮ ಚಿಕಿತ್ಸೆ, ಮುಂತಾದ ೧೧ಕ್ಕೂ ಹೆಚ್ಚು ಸಾಮಾನ್ಯ ಆರೋಗ್ಯ ಕೃತಿಗಳು; ಲೈಂಗಿಕ ದುರ್ಬಲತೆ; ಕಾರಣ ಪರಿಹಾರ, ಮೈಮನಸ್ಸು, ಸುಖದಾಂಪತ್ಯ, ದಾಂಪತ್ಯ ಸಮಸ್ಯೆಗಳು ಮುಂತಾದ ಲೈಂಗಿಕ ವಿಜ್ಞಾನದ ಹತ್ತು ಕೃತಿಗಳು; ಭಾನಾಮತಿ, ಮೈಮೇಲೆ ದೆವ್ವ ಬರುವುದೇ? ಅತೀಂದ್ರಿಯ ಶಕ್ತಿ ಇರುವುದು ನಿಜವೇ? ಮೊದಲಾದ ವೈಚಾರಿಕ ವಿಷಯಗಳ ೧೦ ಕೃತಿಗಳು; ಮನೋವಿಜ್ಞಾನ, ಆರೋಗ್ಯ ಸಂಬಂಧಿ ಕೃತಿಗಳಲ್ಲದೆ- ಮನೆ ಮನಸ್ಸು, ಎರಡನೆಯ ಹೆಂಡತಿ, ಪಚ್ಚೆಯುಂಗುರು, ತಲೆ ತಪ್ಪಿಸಿಕೊಂಡವನು, ಕದಡಿದ ಮನಸ್ಸು ಮೊದಲಾದ ಐದು ಕಾದಂಬರಿಗಳು. ಪರನಾರಿ ಸಂಗ ಬೇಡೆಲೋ ನನರಾಯ, ನಾರದರ ಪರದಾಟ, ಕೃಷ್ಣಾಯಣ, ವೈದ್ಯೋ ನಾರಾಯಣೋ ಹರಿಃ ಮೊದಲಾದ ನಾಟಕಗಳಲ್ಲಿದೆ ಇವರ ಹಲವಾರು ಕೃತಿಗಳು ತೆಲುಗು, ಇಂಗ್ಲಿಷ್ ಭಾಷೆಗಳಲ್ಲೂ ಪ್ರಕಟಗೊಂಡಿವೆ. ಇವರ ಸಾಹಿತ್ಯ ಕೃತಿಗಳ ಸಂಖ್ಯೆಯೋ ಸುಮಾರು ೧೫೦. ಇಂಗ್ಲಿಷ್‌ನಲ್ಲಿ ೨೦, ಶೇ ೭೦. ರಷ್ಟು ಕೃತಿಗಳು ಮರು ಮುದ್ರಣದ ಅವಕಾಶ ಪಡೆದಿದ್ದರೆ ಹನ್ನೆರಡು ಕೃತಿಗಳು ಹತ್ತಕ್ಕೂ ಹೆಚ್ಚು ಮುದ್ರಣದ ಅದೃಷ್ಟ ಪಡೆದಿವೆ ಎಂದರೆ ಇದೊಂದು ದಾಖಲೆಯೇ. ಇದಲ್ಲದೆ ನಿಯಮಿತವಾಗಿ ಪ್ರಜಾವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ಸುಧಾ, ತರಂಗ, ಕರ್ಮವೀರ ಮುಂತಾದ ನಾಡಿನ ಪ್ರಖ್ಯಾತ ಪತ್ರಿಕೆಗಳ ಜೊತೆಗೆ ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್‌ಪ್ರೆಸ್, ವಿಮೆನ್ಸ್ ಎರಾ ಮುಂತಾದ ಇಂಗ್ಲಿಷ್ ಪತ್ರಿಕೆಗಳು ಸೇರಿ ೧೦೦೦ ಲೇಖನಗಳು ಪ್ರಕಟಗೊಂಡಿವೆ. ಇಂಚರ, ಸುದ್ದಿ ಸಂಗಾತಿ, ಪ್ರಜಾವಾಣಿ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ವೈದ್ಯಕೀಯ ಅಂಕಣಗಳ ಬರಹ ಮತ್ತು ಹಲವಾರು ಪತ್ರಿಕೆಗಳಲ್ಲಿ ಪ್ರಶ್ನೋತ್ತರ ವಿಭಾಗದ ನಿರ್ವಹಣೆ. ಸಮುದಾಯದ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ನಿರ್ವಹಣೆಗಾಗಿ ಹಮ್ಮಿಕೊಂಡ ಹಲವಾರು ಕಾರ್ಯಕ್ರಮಗಳು- ಭಯ, ಮೌಢ್ಯ, ದುರ್ಬಲ ಮನಸ್ಸಿನಿಂದ ಉನ್ಮಾದ ಗೊಳ್ಳುವ ಕ್ರಿಯೆಯಾದ ಭಾನಾಮತಿಯನ್ನು ಗುಲಬರ್ಗಾ ಮತ್ತು ಬೀದರ್ ಜಿಲ್ಲೆಗಳಲ್ಲಿ ಅಧ್ಯಯನ ಮಾಡಿ ಹಳ್ಳಿಗರಿಗೆ ಪರಿಹಾರ ಸೂಚಿಸಲು ಅಂದಿನ ಬೆಂಗಳೂರು ವಿ.ವಿ.ದ ಉಪಕುಲಪತಿಗಳಾಗಿದ್ದ ಎಚ್. ನರಸಿಂಹಯ್ಯನವರ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿಯಲ್ಲಿ ಮನೋವೈದ್ಯರಾಗಿ ಪಾಲ್ಗೊಂಡು ನೀಡಿದ ಹಲವಾರು ಉಪಯುಕ್ತ ಸಲಹೆಗಳು. ಭಾರತದ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ರೂಪರೇಷೆ ತಯಾರಿಕೆ, ಮನೋವೈದ್ಯರಿಗೆ, ವೈದ್ಯರಿಗೆ, ವೈದ್ಯೇತರ ಸಿಬ್ಬಂದಿಗೆ ರೋಗಿಗಳ ಆರೈಕೆ ಬಗ್ಗೆ ತರಬೇತಿ, ಕಾಲೇಜು ಶಿಕ್ಷಕರಿಗೆ, ಆಪ್ತ ಸಲಹಾಕೌಶಲ ತರಬೇತಿ, ಮಾನಸಿಕ ಒತ್ತಡ ನಿರ್ವಹಣೆ, ಮಾನಸಿಕ ಆರೋಗ್ಯ ವರ್ಧನೆಯ ಬಗ್ಗೆ ಕಾರ‍್ಯಾಗಾರಗಳ ಮೂಲಕ ನೀಡುವ ತರಬೇತಿ, ಮೂಢ ನಂಬಿಕೆಗಳ ಪ್ರಕರಣಗಳಾದ ಭಾನಾಮತಿ, ದೇವರು ದೆವ್ವ ಬರುವ ಪ್ರಕರಣಗಳ ಬಗ್ಗೆ ಹಳ್ಳಿಗರಲ್ಲಿ ಉಂಟು ಮಾಡಿದ ತಿಳುವಳಿಕೆ. ಬೆಂಗಳೂರಿನ ಬಸವನಗುಡಿಯಲ್ಲಿ ಪ್ರಾರಂಭಿಸಿರುವ ‘ಪ್ರಸನ್ನ ಆಪ್ತ ಸಲಹಾ ಕೇಂದ್ರ’ದ ಮೂಲಕ ವಾರಕ್ಕೊಮ್ಮೆ ಅಸ್ವಸ್ಥ ಮನಸ್ಸಿನವರಿಗೆ ನೀಡುವ ಸಲಹೆ-ಚಿಕಿತ್ಸೆ-ಹೀಗೆ ಹಲವಾರು ವಿಧದಲ್ಲಿ ಆರೋಗ್ಯ ನಿರ್ವಹಣಾ ಕಾರ್ಯಕ್ರಮಗಳು. ಭಾರತೀಯ ಮನೋವೈದ್ಯರ ಸಂಗದ ಫೆಲೊ ಆಗಿ; ಭಾರತೀಯ ಮನೋವೈದ್ಯ ಸಂಘದ ಕರ್ನಾಟಕ ಶಾಖೆಯ ಗೌರವಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ; ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರಲ್ಲದೆ ಹಲವಾರು ವೈದ್ಯಕೀಯ ಪತ್ರಿಕೆಗಳು, ವ್ಯಕ್ತಿ ವಿಕಸನ ಪತ್ರಿಕೆಗಳು, ಜನಪ್ರಿಯ ವಿಜ್ಞಾನ ಪತ್ರಿಕೆಗಳು ಮುಂತಾದವುಗಳ ಗೌರವ ಸಂಪಾದಕರಾಗಿಯೂ ದುಡಿಯುತ್ತಿದ್ದಾರೆ. ಇವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಕರ್ನಾಟ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೨ ಬಾರಿ (೧೯೮೦, ೨೦೦೨), ಕರ್ನಾಟಕ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ, ಡಾ. ಬಿ.ಸಿ. ರಾಯ್ ವೈದ್ಯ ದಿನಾಚರಣಾ ಪ್ರಶಸ್ತಿ, ಕರ್ನಾಟಕ ಚೇತನಾ ಪ್ರಶಸ್ತಿ, ಡಾ. ವಿ.ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ, ಭಾರತ ಸರಕಾರದ ರಾಷ್ಟ್ರೀಯ ಪುರಸ್ಕಾರ, ಶಿವರಾಮಕಾರಂತ ಪ್ರಶಸ್ತಿ, ಕುವೆಂಪು ವೈದ್ಯ ಸಾಹಿತ್ಯ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ೫೦೦ನೆಯ ಜಯಂತೋತ್ಸವ ಪ್ರಶಸ್ತಿ. ಮಾನವರತ್ನ ಪ್ರಶಸ್ತಿ ಹೀಗೆ ೩೦ ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ.

Details

Date:
December 12, 2023
Event Category: