ಡಾ. ಸೋಮಶೇಖರ ಇಮ್ರಾಪೂರ

Home/Birthday/ಡಾ. ಸೋಮಶೇಖರ ಇಮ್ರಾಪೂರ
Loading Events
This event has passed.

೧೪..೧೯೪೦ ಕವಿ, ವಿದ್ವಾಂಸ, ಜಾನಪದ ತಜ್ಞ, ಸಂಶೋಧಕ, ಪ್ರಾಧ್ಯಾಪಕರಾದ ಸೋಮಶೇಖರ ಇಮ್ರಾಪೂರರವರು ಹುಟ್ಟಿದ್ದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ೧೯೪೦ ರ ಫೆಬ್ರವರಿ ೧೪ ರಂದು. ತಂದೆ ಗುರಪ್ಪ, ತಾಯಿ ಸಂಗಮ್ಮ, ಪ್ರಾರಂಭಿಕ ಶಿಕ್ಷಣ ಅಬ್ಬಿಗೇರಿಯಲ್ಲಿ. ಹೈಸ್ಕೂಲು ಓದಿದ್ದು ಹೊಳೆ ಆಲೂರು ಹಾಗೂ ಧಾರವಾಡದ ಕರ್ನಾಟಕ ಹೈಸ್ಕೂಲು. ಜೆ.ಎಸ್‌.ಎಸ್‌. ಕಾಲೇಜಿನಿಂದ ಪಡೆದ ಬಿ.ಎ. ಪದವಿ ಹಾಗೂ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಕನ್ನಡ ಮತ್ತು ಭಾಷಾ ವಿಜ್ಞಾನದಲ್ಲಿ ಸುವರ್ಣಪದಕದೊಡನೆ ಎಂ.ಎ. ಪದವಿ (೧೯೭೬) ಮತ್ತು ‘ಜನಪದ ಒಗಟುಗಳು’ ಪ್ರಬಂಧಮಂಡಿಸಿ ಸುವರ್ಣಪದಕದೊಡನೆ ಪಿಎಚ್‌.ಡಿ ಪದವಿ (೧೯೭೮). ಧಾರವಾಡದ ಜೆ.ಎಸ್‌.ಎಸ್‌. ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಕಾಲ. ನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಹಾಯಕ ಸಂಶೋಧಕರಾಗಿ, ಅಧ್ಯಾಪಕರಾಗಿ, ಜನಪದ ಸಾಹಿತ್ಯದ ರೀಡರ್ ಆಗಿ , ಕನ್ನಡ ಅಧ್ಯಯನ ಪೀಠದ ಜಾನಪದ ಪ್ರಾಧ್ಯಾಪಕರಾಗಿ-ಹೀಗೆ ವಿವಿಧ ಸ್ತರಗಳಲ್ಲಿ ಬೋಧಕರಾಗಿ ನಿರ್ವಹಿಸಿದ ಕಾರ್ಯಗಳು. ತಮ್ಮ ತಾತ್ವಿಕ ಹೋರಾಟದಿಂದ ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ವಿಭಾಗಕ್ಕೆ ಜೀವತುಂಬಿ, ಜಾನಪದ ವಿಭಾಗವನ್ನು ಕಟ್ಟಿ ಬೆಳೆಸಿದರು. ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾಪರಿಷತ್ತಿನ, ಸೆನೆಟ್‌, ಸಿಂಡಿಕೇಟ್‌ ಸದಸ್ಯರಾಗಿ, ಕಲಾನಿಕಾಯದ ಡೀನ್‌ ಆಗಿಯೂ ಸಲ್ಲಿಸಿರುವ ಸೇವೆ. ಇವರ ಮಾರ್ಗದರ್ಶನದಲ್ಲಿ ೧೫ ಮಂದಿ ಪಿಎಚ್‌.ಡಿ. ಪಡೆದಿದ್ದರೆ ೭ ಮಂದಿ ಎಂ.ಫಿಲ್‌ ಪದವಿ ಗಳಿಸಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣ, ಸಮ್ಮೇಳನ, ಕಮ್ಮಟ, ಕಲಾಮೇಳಗಳಲ್ಲಿ ಉಪನ್ಯಾಸಕರಾಗಿ, ಸಂಚಾಲಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಗೋಷ್ಠಿಯ ಅಧ್ಯಕ್ಷರಾಗಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿ, ಸ್ನಾತಕೋತ್ತರ ಶಿಕ್ಷಕರ ಸಂಘ, ಸರಕಾರದ ಪದವಿ ಪೂರ್ವ ಕನ್ನಡ ಪಠ್ಯ ಕ್ರಮ ಮಂಡಲಿ, ಜನಪದ ಸಾಹಿತ್ಯ ಸ್ನಾತಕ ಹಾಗೂ ಸ್ನಾತಕೋತ್ತರ ಕನ್ನಡ ಅಭ್ಯಾಸಮಂಡಲಿ ಅಧ್ಯಕ್ಷರಾಗಿ, ಜಾನಪದ ವೇದಿಕೆ, ಕರ್ನಾಟಕ ವಿ.ವಿ.ದ ವಿಶ್ವಚೇತನ ಸಾಂಸ್ಕೃತಿಕ ವೇದಿಕೆ ಮುಂತಾದವುಗಳ ಸಂಚಾಲಕರಾಗಿ, ವಿಶ್ವವಿದ್ಯಾಲಯದ ಕರ್ನಾಟಕ ಭಾರತಿ, ವಿದ್ಯಾರ್ಥಿ ಭಾರತಿ, ದಲಿತ ಪತ್ರಿಕೆ ಮುಂತಾದವುಗಳ ಸಂಪಾದಕರಾಗಿ, ಜಾನಪದ ಕಲಾವಿದರ ಆಯ್ಕೆ ಸಮಿತಿ, ಜಾನಪದ ಸಂಗೀತ ಸಲಹಾ ಸಮಿತಿ, ಸಮಗ್ರ ಜಾನಪದ ಸಾಹಿತ್ಯ ಸಂಪುಟ ಪ್ರಕಟಣಾ ಯೋಜನಾ ಸಲಹಾ ಸಮಿತಿ ಮುಂತಾದ ಸಮಿತಿಗಳ ಸದಸ್ಯರಾಗಿ-ಹೀಗೆ ಹಲವಾರು ಶೈಕ್ಷಣಿಕ, ಸಾಂಸ್ಕೃತಿಕ, ಸಂಘ, ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಂಡಿದ್ದಾರೆ. ಹಲವಾರು ಸೃಜನಶೀಲ ಕೃತಿಗಳನ್ನು ರಚಿಸಿದ್ದು, ಬಿಸಿಲು ಹೂವು, ಬೆಳದಿಂಗಳು, ಬೆಂಕಿ, ಬಿರುಗಾಳಿ, ಜಲತರಂಗ, ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ, ಹುತ್ತಗಳು, ಬೇವು ಬೆಲ್ಲ ಮುಂತಾದ ಕಾವ್ಯ ಕೃತಿಗಳು; ಇತ್ತೀಚಿನ ಕನ್ನಡ ಕಾವ್ಯ ಮತ್ತು ಪರಿಸರ, ಕುವೆಂಪು-ಬೇಂದ್ರೆ, ಜಿಜ್ಞಾಸೆ ಮುಂತಾದ ವಿಮರ್ಶಾ ಕೃತಿಗಳು; ‘ಲಾಲೀಸಿ ಕೇಳಾ ನನಮತಾ’ ಅಂಕಣ ಬರಹಗಳ ಸಂಗ್ರಹ; ಕನ್ನಡದ ಸಾವಿರದ ಒಗಟುಗಳು, ಜನಪದ ಮಹಾ ಭಾರತ, ಜಾನಪದ ವಿಜ್ಞಾನ, ನಮ್ಮ ಜಾನಪದ ಸಮೀಕ್ಷೆ, ಜಾನಪದ ಹಾಡುಗಳಲ್ಲಿ ನರಗುಂದದ ಬಾಬಾಸಾಹೇಬ ಮೊದಲಾದ ಸಂಪಾದಿತ ಹಾಗೂ ವಿಮರ್ಶಾ ಕೃತಿಗಳು ಮುಂತಾದ ೪೦ ಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ‘ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಬಿರುಗಾಳಿ’ ಕೃತಿಗೆ ಅಮ್ಮನ ಭಾವಿ ಪ್ರಶಸ್ತಿ, ಜಾಣಪದ ಮತ್ತು ಯಕ್ಷಗಾನ ಅಕಾಡಮಿಯಿಂದ ಜಾನಪದ ತಜ್ಞ ಪ್ರಶಸ್ತಿ, ಜನದನಿ ಸಾಂಸ್ಕೃತಿಕ ಟ್ರಸ್ಟ್‌ (ಮಂಡ್ಯ) ನಿಂದ ಜೀಶಂಪ ಜಾನಪದ ತಜ್ಞ ಪ್ರಶಸ್ತಿ, ದೀಪಾರಾಧನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ದೊರೆತಿವೆ. `SOMASHEKHARA IMPRAPUR: AN ANNOTATED BIBLIOGRAPHY’- ನಂದಕುಮಾರ್ ವಿ. ಹೆಸರೂರ್, ‘ಡಾ. ಸೋಮಶೇಖರ ಇಮ್ರಾಪೂರ ಅವರ ಕಾವ್ಯಗಳ ಅಧ್ಯಯನ’-ಕು. ಸುಮಂಗಲಾ.ಕೆ., ಜ್ಞಾನತುಂಗಾ, ‘ಜನಪದ ಸಾಹಿತ್ಯಕ್ಕೆ ಡಾ. ಸೋಮಶೇಖರ ಇಮ್ರಾಪೂರ ಅವರ ಕೊಡುಗೆ’ – ಕು. ಶೋಭಾ, ‘ಕನ್ನಡ ಸಾಹಿತ್ಯಕ್ಕೆ ಡಾ. ಇಮ್ರಾಪೂರ ಅವರ ಕೊಡುಗೆ’ – ಕು. ಸುಮಂಗಲಾ.ಕೆ ಮುಂತಾದವರುಗಳು ಇಮ್ರಾಪೂರರವರ ಸಾಹಿತ್ಯ ಸಂಶೋಧನೆ ಕುರಿತು ಎಂ.ಫಿಲ್‌. ಹಾಗೂ ಪಿಎಚ್‌.ಡಿ ಪದವಿಗಳನ್ನು ಗಳಿಸಿದ್ದಾರೆ. ಇವರ ನೆಚ್ಚಿನ ವಿದ್ಯಾರ್ಥಿಗಳು, ಹಿತೈಷಿಗಳು ೨೦೦೧ರಲ್ಲಿ ಅರ್ಪಿಸಿದ ಅಭಿನಂದನ ಗ್ರಂಥ ‘ಬೇವು-ಬೆಲ್ಲ’. ಅಮೆರಿಕ, ಇಂಗ್ಲೆಂಡ್‌, ಸ್ಕಾಟಲೆಂಡ್‌ ಮುಂತಾದ ದೇಶಗಳಿಗೆ ಭೇಟಿನೀಡಿ ಅಲ್ಲಿನ ಸಂಸ್ಕೃತಿ, ಜೀವನಶೈಲಿ, ಕವಿ-ಕಲಾವಿದರ ಸಾಧನೆಗಳು, ವಿಶ್ವವಿದ್ಯಾಲಯಗಳ ವಸ್ತು ಸಂಗ್ರಹಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ಪ್ರಸಿದ್ಧ ಐತಿಹಾಸಿಕ ಸ್ಥಳಗಳು, ಅಂತರಿಕ್ಷ ಅಧ್ಯಯನ ಕೇಂದ್ರ (ನಾಸಾ) ಮುಂತಾದವುಗಳನ್ನು ಸಂದರ್ಶಿಸಿ ಜ್ಞಾನದ ಪರಿಧಿಯನ್ನು ವಿಸ್ತಾರಗೊಳಿಸಿ ಕೊಂಡಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top