೦೪.೦೧.೧೯೨೫ ಸ್ವಾತಂತ್ಯ್ರಹೋರಾಟಗಾರ, ಗಾಂಧಿವಾದಿ, ಪ್ರಕೃತಿ ಚಿಕಿತ್ಸಾ ಪರಿಣತ, ದಕ್ಷ ತಂತ್ರಜ್ಞ, ಸಮಾಜಸೇವಕ, ಪತ್ರಕರ್ತ, ಸಾಹಿತಿ ಶ್ರೀನಿವಾಸಯ್ಯನವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಹೊನ್ನಪ್ಪ, ತಾಯಿ ತಿಮ್ಮಮ್ಮ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಚೌದರಿಕೊಪ್ಪಲಿನಿಂದ ಇವರ ತಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದವರು. ಪ್ರಾರಂಭಿಕ ಶಿಕ್ಷಣ ಡಿಸ್ಬ್ರಿಕ್ಟ್ ನಾರ್ಮಲ್ ಶಾಲೆ, ಮಲ್ಲೇಶ್ವರಂ ಬಾಯ್ಸ್ ಮಿಡ್ಲ್ ಸ್ಕೂಲ್ ಮತ್ತು ಪ್ರೌಢಶಾಲೆ. ಪ್ರೌಢ ವಿದ್ಯಾಭ್ಯಾಸ ಗೌರ್ನಮೆಂಟ್ ಇಂಟರ್ ಮೀಡಿಯೇಟ್ ಕಾಲೇಜು ಮತ್ತು ಗೌರ್ನಮೆಂಟ್ ಎಂಜಿನಿಯರಿಂಗ್ ಕಾಲೇಜಿನಿಂದ ಪಡೆದ ಬಿ.ಇ. ಪದವಿ. ಹೈಸ್ಕೂಲಿನಲ್ಲಿದ್ದಾಗಲೇ ಶಾಲೆಯಿಂದ ಹೊರಡಿಸುತ್ತಿದ್ದ ‘ವನಸುಮ’ ಎಂಬ ಪತ್ರಿಕೆಗೆ ಭಗವದ್ಗೀತೆಯ ತಾತ್ಪರ್ಯ, ಗೀತೆಯ ಸಂದೇಶದ ವಿಚಾರವಾಗಿ ಲೇಖನ ಮತ್ತು ಗೀತೋಪದೇಶದ ಚಿತ್ರಗಳನ್ನು ಬರೆಯತೊಡಗಿದ್ದರು. ಅಬ್ರಹಾಂ ಲಿಂಕನ್ ಜೀವನ ಚರಿತ್ರೆಯ ಪಾಠವನ್ನೋದಿದನಂತರ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದವರ ಬಗ್ಗೆ ಬರೆದ ಲೇಖನಗಳು. ತಾವೇ ‘ದಿವಾಕರ’ ಎಂಬ ಕೈಬರಹದ ಪತ್ರಿಕೆಯನ್ನು ಹೊರಡಿಸಿ ತನ್ನಂತಹ ಆಸಕ್ತ ವಿದ್ಯಾರ್ಥಿಗಳಿಂದ ಲೇಖನ, ಕಥೆ, ಪದ್ಯಗಳನ್ನು ಬರೆಸಿ ಪತ್ರಿಕೆಯನ್ನು ನಡೆಸತೊಡಗಿದರು. ದೇಶದಲ್ಲೆಲ್ಲಾ ನಡೆಯುತ್ತಿದ್ದ ಸ್ವಾತಂತ್ಯ್ರದ ಚಳುವಳಿಯಿಂದ ಪ್ರೇರಿತರಾಗಿ ಪ್ರಭಾತ್ಫೇರಿ, ಮೆರವಣಿಗೆ, ಸಭೆಕೂಡಿಸುವುದು, ಗಾಂಧಿ ಸಾಹಿತ್ಯಮಾರಾಟ, ಗಾಂಧಿ ಜಯಂತ್ಯುತ್ಸವ, ಭೂಗತರಾಗಿ ಪತ್ರಿಕೆ ಹಂಚುವುದು ಮುಂತಾದ ಕಾರ್ಯಗಳಲ್ಲೂ ಭಾಗಿ. ಉದ್ಯೋಗಕ್ಕಾಗಿ ಸೇರಿದ್ದು ಹಿಂದೂಸ್ಥಾನ ವಿಮಾನ ಕಾರ್ಖಾನೆಯಲ್ಲಿ ಡಿಸೈನರ್ ಆಗಿ. ನಂತರ ಭಾರತ್ ಅರ್ಥಮೂವರ್ಸ್ನಲ್ಲಿ ಮ್ಯಾನೇಜರಾಗಿ, ರೈಲುಕೋಚು, ಬಸ್ಬಾಡಿ, ಅತಿಭಾರದ ಟ್ರೈಲರ್ ಗಳ ಯೋಜನೆ, ತಯಾರಿಕೆ, ಸಂಶೋಧನೆ, ಅಭಿವೃದ್ಧಿ ವಿಭಾಗದಲ್ಲಿ ಮೇಲ್ವಿಚಾರಣೆಯ ಜವಾಬ್ದಾರಿ. ರೈಲುಕೋಚು ನಿರ್ಮಾಣದ ತಯಾರಿಕೆಗಾಗಿ ಪಶ್ಚಿಮ ಜರ್ಮನಿಗೆ ಎರಡು ಬಾರಿ, ರಫ್ತಿನ ಸಲುವಾಗಿ ಬಾಂಗ್ಲಾದೇಶಕ್ಕೆ ಮತ್ತು ಶ್ರೀಲಂಕಾ ದೇಶಗಳಿಗೆ ಭೇಟಿ. ಹಲವಾರು ತಾಂತ್ರಿಕ ಸಂಸ್ಥೆಗಳೊಡನೆ ಒಡನಾಟ. ಇನ್ಸ್ಟಿಟ್ಯೂಟ್ ಆಫ್ ಎಂಜನಿಯರ್ಸ್ (ಭಾರತ), ವೈರೆಸ್ ಹ್ಯಾಚರ್ ಎಂಜಿನಿಯರ್ (ಪಶ್ಚಿಮ ಜರ್ಮನಿ), ಚಾರ್ಟರ್ಡ್ ಎಂಜಿನಿಯರ್ (ಭಾರತ) ಮುಂತಾದ ಸಂಸ್ಥೆಗಳ ಫೆಲೊ ಆಗಿ ಆಯ್ಕೆ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ನಡೆಯುವ ವಿಜ್ಞಾನ, ಕಲೆ, ತಂತ್ರಜ್ಞಾನ, ವೈದ್ಯಕೀಯ ಮುಂತಾದ ಶಿಕ್ಷಣ ಕ್ಷೇತ್ರಗಳಲ್ಲಿ ನಡೆಯುವ ಕಾರ್ಯನಿರ್ವಾಹಕ ಮಂಡಲಿಗಳಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಗೌ. ಖಜಾಂಚಿಯಾಗಿ ದುಡಿದಿದ್ದಾರೆ. ಇದಲ್ಲದೆ ಬೆಂಗಳೂರು ಎಜುಕೇಷನ್ ಸೊಸೈಟಿ, ಆದಿ ಚುಂಚನಗಿರಿ ಟ್ರಸ್ಟ್, ಸರ್.ಎಂ.ವಿ. ಇಂಡಸ್ಟ್ರಿಯಲ್ ಅಂಡ್ ಎಜುಕೇಷನಲ್ ಸೊಸೈಟಿ ಮುಂತಾದ ವಿದ್ಯಾಸಂಸ್ಥೆಗಳಲ್ಲಿ ದುಡಿದಿದ್ದಾರೆ. ಪ್ರಕೃತಿ ಚಿಕಿತ್ಸಾ ವಿಧಾನದಲ್ಲಿ ಇವರು ಪಡೆದಿರುವ ಪರಿಣತಿಯಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ‘ಪ್ರಕೃತಿ ಜೀವನ ಟ್ರಸ್ಟ್’ ಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿ, ಪ್ರಕೃತಿ ಜೀವನದ ಮಹತ್ವವನ್ನು ತಿಳಿಸಲು ಹಲವಾರು ಕಡೆ ಭಾಷಣಗಳ ಮೂಲಕ, ತರಗತಿಗಳನ್ನು ನಡೆಸುವುದರ ಮೂಲಕ, ಪುಸ್ತಕಗಳನ್ನು ಬರೆದು ಪ್ರಕಟಿಸುವುದರ ಮೂಲಕ ಸಾರ್ವಜನಿಕರಿಗೆ ಅರಿವು ಉಂಟುಮಾಡಿದ್ದಾರೆ. ಪ್ರಕೃತಿಯ ಚಿಕಿತ್ಸೆಯ ಬಗ್ಗೆ ಇವರು ಬರೆದ ಪುಸ್ತಕಗಳು ಹಲವಾರು. ಅವುಗಳಲ್ಲಿ ಆರೋಗ್ಯವೇ ಭಾಗ್ಯ, ಆರೋಗ್ಯಶಾಸ್ತ್ರ ಪರಿಚಯ, ಪ್ರಕೃತಿದತ್ತ ಆರೋಗ್ಯ, ಯೋಗ ನಿದ್ರೆ ಮತ್ತು ಪ್ರಕೃತಿ ಚಿಕಿತ್ಸೆಯಿಂದ ಆರೋಗ್ಯ ಮುಖ್ಯವಾದವುಗಳು. ಸಾಹಿತಿಯಾಗಿಯೂ ಹಲವಾರು ಕೃತಿ ರಚಿಸಿದ್ದಾರೆ. ಅವುಗಳಲ್ಲಿ ಜೀವನ ಚರಿತ್ರೆ ಮತ್ತು ಪ್ರವಾಸ ಸಾಹಿತ್ಯವೆ ಬಹುಪಾಲು. ಮಕ್ಕಳಿಗಾಗಿ ‘ಕನ್ನಡದ ಕಣ್ವ ಬಿ.ಎಂ.ಶ್ರೀ’, ‘ಪ್ರಕೃತಿ ಚಿಕಿತ್ಸಾ ತಜ್ಞ ಲಕ್ಷ್ಮಣ ಶರ್ಮ’, ‘ಡಾ. ಎನ್.ಎಸ್. ಹರ್ಡಿಕರ್’ ಮುಂತಾದವರ ಜೀವನ ಚರಿತ್ರೆಗಳು; ಹಲವಾರು ಬಾರಿ ವಿದೇಶ ಪ್ರವಾಸಮಾಡಿ ಭೇಟಿ ನೀಡಿದ ದೇಶಗಳಾದ ಜರ್ಮನಿ, ಸಿಂಹಳ ಮತ್ತು ಬಾಂಗ್ಲಾದೇಶಗಳ ಬಗ್ಗೆ ‘ಶ್ರೀಲಂಕಾ’, ‘ಸಿಂಹಳದಲ್ಲಿ ಶಶಿ’, ‘ಶಶಿಕಂಡಜರ್ಮನಿ’, ‘ನಾ ಕಂಡ ಜರ್ಮನಿ’, ‘ಜಯಶ್ರೀ ಕಂಡ ಜಗತ್ತು’ ಮುಂತಾದ ಪ್ರವಾಸ ಕೃತಿಗಳ ರಚನೆ, ನಾ ಕಂಡ ಜರ್ಮನಿ ಕೃತಿಯು ಮೈಸೂರು ವಿ.ವಿ.ದ ಪದವಿ ಪೂರ್ವ ತರಗತಿಗಳಿಗೆ ಪಠ್ಯವಾಗಿ ಆಯ್ಕೆ. ಇವರು ಬಹುಮುಖ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನ, ಕರ್ನಾಟಕ ಸರಕಾರದ ಪತಂಜಲಿ ಸುವರ್ಣ ಪದಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ಯೋಗ ಕೇಂದ್ರದಿಂದ ಯೋಗಶ್ರೀ ಪ್ರಶಸ್ತಿ, ದೆಹಲಿಯ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಗೌರವ ಡಾಕ್ಟರೇಟ್ ಮುಂತಾದ ಗೌರವ ಪ್ರಶಸ್ತಿಗಳು.

