ಡಿ.ವಿ.ಗುಂಡಪ್ಪ

Home/Birthday/ಡಿ.ವಿ.ಗುಂಡಪ್ಪ
Loading Events
This event has passed.

೧೭..೧೮೮೭ ೦೭.೧೦.೧೯೭೫ ‘ಮಂಕುತಿಮ್ಮನ ಕಗ್ಗ’ ದಂತಹ ಕೃತಿಯ ಮೂಲಕ ಸಂಸ್ಕೃತಿ, ಮೌಲ್ಯ, ಅಧ್ಯಾತ್ಮ, ತಾತ್ವಿಕ ಚಿಂತನೆ, ಜೀವನದರ್ಶನಗಳನ್ನು ಮಾಡಿಸಿದ ಗುಂಡಪ್ಪನವರು ಹುಟ್ಟಿದ್ದು ಮುಳಬಾಗಿಲಿನಲ್ಲಿ. ತಂದೆ ದೇವನಹಳ್ಳಿ ವೆಂಕಟರಮಣಯ್ಯ, ತಾಯಿ ಅಲಮೇಲು. ಹುಟ್ಟಿದೂರಿನಲ್ಲಿಯೇ ಪ್ರಾರಂಭಿಕ ಶಿಕ್ಷಣ. ಕೆ.ವಿ.ರಾಮಸ್ವಾಮಿ  ಅಯ್ಯರ್‌ಎಂಬುವರಿಂದ ಇಂಗ್ಲಿಷ್ ಪಾಠ. ಸಂಜೆ ಮನೆಯಲ್ಲಿ ROBINSON CRUSOE, SWISS FAMILY ROBINSON, STANFORD AND METRON ಮುಂತಾದ ಬಾಲ ಸಾಹಿತ್ಯದ ಹೆಚ್ಚುವರಿ ಓದು ಮತ್ತು ಸಂಸ್ಕೃತಾಭ್ಯಾಸ. ಇವರ ಚಿಕ್ಕ ತಾತಂದಿರು ಶ್ರೀ ಕೃಷ್ಣರಾಜ ವಾಣಿವಿಲಾಸ, ಕನ್ನಡ ವಚನ ಭಾರತ, ಶ್ರೀ ಜಯಚಾಮರಾಜೇಂದ್ರ ವಿಲಾಸ, ಕನ್ನಡ ರಾಮಾಯಣ ಗ್ರಂಥಗಳನ್ನು ಓದಿಸುತ್ತಿದ್ದರು. ಇದರಿಂದ ಬಾಲ್ಯದಲ್ಲಿಯೇ ಹಳಗನ್ನಡ ಸಾಹಿತ್ಯದ ಪರಿಚಯವಾಗತೊಡಗಿತು. ಮನೆಯ ಅಕ್ಕಪಕ್ಕ ನಡೆಯುತ್ತಿದ್ದ ಸಂಗೀತ, ನರ್ತನ ಕಾರ್ಯಕ್ರಮಗಳಿಂದ ಬೆಳೆದ ಕಲಾಭಿರುಚಿ. ಎಲ್.ಎಸ್.ಪಾಸಾದ ನಂತರ ಹೈಸ್ಕೂಲಿಗೆ ಸೇರಿದ್ದು ಮೈಸೂರಿನ ಮಹಾರಾಜ ಕಾಲೇಜಿಗೆ ಒಳಪಟ್ಟಿದ್ದ ಹೈಸ್ಕೂಲಲ್ಲಾದರೂ ಅಜ್ಜಿ ತಾತನ ಸಾವಿನಿಂದ ಊರಿಗೆ ಬಂದವರು ಪುನಃ ಮೈಸೂರಿಗೆ ಹೋಗಲಿಲ್ಲ. ನಂತರ ಸೇರಿದ್ದು ಕೋಲಾರದ ಹೈಸ್ಕೂಲಿಗೆ. ಚರಿತ್ರೆಪಾಠ ಮಾಡುವ ಕೃಷ್ಣಸ್ವಾಮಿ ಅಯ್ಯರ್‌ರವರು ಲಾರ್ಡ್‌‌ಮಾರ್ಲೆ ಎಂಬಾತ ಬರೆದಿರುವ ಗ್ಲಾಡ್‌ಸ್ಟನ್‌ನ ಜೀವನ ಚರಿತ್ರೆ ಓದಲು ತಿಳಿಸಿದಾಗ ಇವರಲ್ಲಿದ್ದ ಜ್ಞಾನದ ಕಿಡಿ ಹೊತ್ತಿಸಿದಂತಾಯಿತು. ನಂತರ ಕ್ರೈಸ್ತ ಸಂಸ್ಥೆಯೊಂದಕ್ಕೆ ಕೆಲ ತರ್ಜುಮೆ ಕೆಲಸ ಮಾಡಿ, ಸಂಪಾದಿಸಿದ ಹಣದಿಂದ ಕೊಂಡು ಓದಿದ್ದು ಟೆನಿಸನ್, ಲಾಂಗ್‌ಫೆಲೊ, ಮ್ಯಾಕ್ಸ್‌ಮುಲ್ಲರ್, ಡಾಯ್‌ಸನ್ ಮುಂತಾದವರ ಕೃತಿಗಳು. ಆದರೆ ಪಠ್ಯದಲ್ಲಿ ಹಿಂದೆಬಿದ್ದು ಮೆಟ್ರಿಕ್ಯುಲೇಷನ್‌ನಪಾಸು. ಅಷ್ಟರಲ್ಲಿ ಸಂಸಾರದ ಹೊರೆ ತಲೆಯ ಮೇಲೆ ಬಿದ್ದಿದ್ದರಿಂದ ಉದ್ಯೋಗವನ್ನು ಹುಡುಕುವುದು ಅನಿವಾರ್ಯವಾಯಿತು. ಚಾಂಪಿಯನ್ ರೀಫ್‌ನ ಇಸ್ಮಾಯಿಲ್ ಸೇಟರ್ ಅಂಗಡಿಯಲ್ಲಿ. ಮುಳಬಾಗಿಲು ಶಾಲೆಯ ಬದಲಿ ಉಪಾಧ್ಯಾಯರಾಗಿ ನಂತರ ಬಂದುದು ಬೆಂಗಳೂರಿಗೆ- ನೌಕರಿಗಾಗಿ. ತಾವು ಎಂದೂ ಆಶಿಸದ ಪತ್ರಿಕೋದ್ಯಮವನ್ನು ಅನಿವಾರ್ಯವಾಗಿ ೧೯೦೭ ರಲ್ಲಿ ಪ್ರವೇಶಿಸಿದರು. ಸೂರ‍್ಯೋದಯ ಪ್ರಕಾಶಿಕ, ಮೈಸೂರು ಸ್ಟ್ಯಾಂಡರ್ಡ್‌, ಈವಿನಿಂಗ್ ಮೆಯಿಲ್, ಮೈಸೂರು ಟೈಂಸ್ ಮುಂತಾದ ಪತ್ರಿಕೆಗಳಲ್ಲಿ ಕೆಲಕಾಲ ಉದ್ಯೋಗ. ೧೯೦೮ ರಲ್ಲಿ ಪತ್ರಿಕಾ ದಿಗ್ಭಂಧನ ವಿಧಿಸಿದ್ದರಿಂದ ಮದರಾಸಿಗೆ ಹೋಗಿ ಇಂಡಿಯನ್ ಪೇಟ್ರಿಯಟ್‌ ಮುಂತಾದ ಪತ್ರಿಕೆಗಳಿಗೆ ಬರೆದ ಲೇಖನಗಳು. ಬೆಂಗಳೂರಿಗೆ ಹಿಂದಿರುಗಿ ಕನ್ನಡ ಪತ್ರಿಕೆ ‘ಭಾರತಿ’ಯ ಸಹಸಂಪಾದಕತ್ವ. ೧೯೧೨ ರಲ್ಲಿ ಬೆಂಗಳೂರು ನಗರ ಸಭೆಯ ಸದಸ್ಯರಾಗಿ ನಾಮಕಾರಣ. ೧೯೧೩ ರಲ್ಲಿ ಅರ್ಧ ವಾರಪತ್ರಿಕೆ ‘ಕರ್ನಾಟಕ’ ಆರಂಭ. ನಂತರ ಹೊರ ತಂದ ಪತ್ರಿಕೆ ಇಂಡಿಯನ್ ರಿವ್ಯೂ ಆಫ್ ರಿವ್ಯೂಸ್‌. ೧೯೨೩ ರಲ್ಲಿ ಹೊರತಂದ ಪತ್ರಿಕೆ ‘ಕರ್ನಾಟಕ ಜನಜೀವನ ಮತ್ತು ಅರ್ಥ ಸಾಧಕ’. ಹೀಗೆ ಅಂದಿನ ರಾಜಕೀಯ ವಿದ್ಯಮಾನಗಳ ಕುರಿತು ಸತತವಾಗಿ ಪತ್ರಿಕೆಗಳಿಗೆ ಬರೆಯತೊಡಗಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ, ರಾಜಕೀಯ ವಿಷಯಗಳು, ಜೀವನ ಚರಿತ್ರೆಗಳಾದ ದಿವಾನ್ ರಂಗಾ ಚಾರ್ಲು (೧೯೧೧), ಗೋಪಾಲಕೃಷ್ಣ ಗೋಖಲೆ (೧೯೧೫), ಸರ್‌.ಕೆ. ಶೇಷಾದ್ರಿ ಅಯ್ಯರ್ (೧೯೧೬), ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳು (೧೯೧೭), ಟಾಲ್‌ಸ್ಟಾಯ್ (೧೯೧೭) ಮುಂತಾದ ಕೃತಿಗಳನ್ನು ರಚಿಸಿದರು. ಇವರ ರಾಜಕೀಯ ವಿಶ್ಲೇಷಣೆ, ವರದಿಗಳಿಂದ ಮೈಸೂರು ನ್ಯಾಯವಿಧಾಯಕ ಸಭೆಯ ಸದಸ್ಯರಾಗಿಯೂ (೧೯೨೬-೪೦) ಸೇವೆ ಸಲ್ಲಿಸಿದರು. ಬಿಡುವಿಲ್ಲದ ರಾಜಕೀಯ, ಸಾಮಾಜಿಕ ಕಾರ್ಯಕ್ರಮಗಳ ನಡುವೆಯೂ ಡಿ.ವಿ.ಜಿ.ಯವರು ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದರು. ೧೯೨೨ ರಲ್ಲಿ ವಸಂತ ಕುಸುಮಾಂಜಲಿ ಕವನ ಸಂಕಲನ, ೧೯೨೪ ರಲ್ಲಿ ‘ನಿವೇದನ’ ಪ್ರಕಟಗೊಂಡವು. ಇಷ್ಟರಲ್ಲಾಗಲೇ ಬೆಕ್ಕೋಜಿ (ಮಕ್ಕಳ ಸಾಹಿತ್ಯ); ಕನಕಾಲಕಾ, ತಿಲೋತ್ತಮ (ನಾಟಕಗಳು); ವಿದ್ಯಾರಣ್ಯಸ್ತುತಿ, ಉಮರನ ಒಸಗೆ ಮುಂತಾದ ಕೃತಿಗಳು ಪ್ರಕಟಗೊಂಡಿದ್ದವು. ೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾದರು. ೧೯೪೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಪ್ರಾರಂಭಿಸಿ ಕಡೆಯವರೆವಿಗೂ ಸಂಸ್ಥೆಯ ಅಂಗ ಪತ್ರಿಕೆ ‘ಪಬ್ಲಿಕ್ ಅಫೇರ‍್ಸ್’ ಗೆ ಸಮಕಾಲೀನ ರಾಜಕೀಯ ವಿದ್ಯಮಾನ ಕುರಿತು ವ್ಯಾಖ್ಯೆ ನೀಡತೊಡಗಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (೧೯೩೪-೩೭) ಆಯ್ಕೆಗೊಂಡನಂತರ ಸಂಸ್ಥೆಯ ಕಾರ್ಯಾಚರಣೆಯನ್ನು ವಿಸ್ತಾರಗೊಳಿಸಿ ವಸಂತ ಸಾಹಿತ್ಯೋತ್ಸವ, ಕನ್ನಡ ಶಿಕ್ಷಕರಿಗೆ ತರಬೇತಿ ಶಿಬಿರ, ಗಮಕ ತರಗತಿಗಳು ಮುಂತಾದ ಹಲವಾರು ಚಟುವಟಿಕೆಗಳನ್ನು ಕಾರ್ಯಗತಗೊಳಿಸಿದರು. ಕರ್ನಾಟಕ ವೃತ್ತ ಪತ್ರಿಕಾ ಕರ್ತರ ಸಂಘ, ಶೀಘ್ರಲಿಪಿಕಾರರ, ಬರಹಗಾರರ ಸಂಘ, ಪಂಡಿತ ಮಂಡಲ, ರಾಮಾಯಣ ಮಹಾಭಾರತಾದಿ ಪ್ರಕಾಶನ ಸಮಿತಿ ಮುಂತಾದವುಗಳು ಇವರ ನೇತೃತ್ವದಲ್ಲಿ ನಡೆಯತೊಡಗಿದವು. ವಿದ್ಯಾರಣ್ಯ ವೃತ್ತಾಂತ, ವಿದ್ಯಾರಣ್ಯ ಸಮಕಾಲೀನರು, ದಾಧಾಬಾಯಿ ನವರೋಜಿ ಮೊದಲಾದವರ ಜೀವನ ಚರಿತ್ರೆಗಳು; ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಾಹಿತ್ಯ ಶಕ್ತಿ, ಸಂಸ್ಕೃತಿ, ಕಾವ್ಯ ಸ್ವಾರಸ್ಯ ಮುಂತಾದ ನಿಬಂಧಗಳು; ಕನ್ನಡ ಮ್ಯಾಕ್‌ಬೆತ್‌, ವಿದ್ಯಾರಣ್ಯ ವಿಜಯ, ಜಾಕ್‌ಕೇಡ್, ಪ್ರಹಸನತ್ರಯೀ, ಪರಶುರಾಮ ಮೊದಲಾದ ನಾಟಕಗಳು, ಬಾಳಿಗೊಂದು ನಂಬಿಕೆ, ಪುರುಷ ಸೂಕ್ತ, ಈಶೋಪನಿಷತ್ತು, ಶ್ರೀಮದ್ಭಗವದ್ಗೀತಾ ತಾತ್ಪರ್ಯ, ದೇವರು, ಋತ-ಸತ್ಯ-ಧರ್ಮ ಮೊದಲಾದ ಧಾರ್ಮಿಕ ಕೃತಿಗಳು; ವಿದ್ಯಾರಣ್ಯಸ್ತುತಿ, ಉಮರನ ಒಸಗೆ, ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ, ಶ್ರೀರಾಮಪರೀಕ್ಷಣಂ, ಶ್ರೀ ಕೃಷ್ಣಪರೀಕ್ಷಣಂ ಮುಂತಾದ ೧೫ ಕವಿತಾ ಸಂಗ್ರಹಗಳು; ಮೈಸೂರಿನ ಕೈಗನ್ನಡಿ, ವೃತ್ತ ಪತ್ರಿಕೆ, ಸ್ವರಾಜ್ಯ, ರಾಜ್ಯಶಾಸ್ತ್ರ, ರಾಜಕೀಯ ಪ್ರಸಂಗಗಳು ಮುಂತಾದ ೧೦ ರಾಜಕೀಯ ಕೃತಿಗಳೂ ಸೇರಿ ಸುಮಾರು ೭೦ ಕೃತಿಗಳು ಪ್ರಕಟಗೊಂಡಿದ್ದರೆ ಇವರನ್ನು ಕುರಿತು ಇತರರು ಬರೆದಿರುವ ಕೃತಿಗಳೇ ಸುಮಾರು ೧೭. ಸಾರ್ವಜನಿಕರ, ಪ್ರಸಿದ್ಧ ಪುರುಷರ ಮತ್ತು ಜನ ಸಾಮಾನ್ಯರ (ಜನಸಾಮಾನ್ಯರಿಂದ ದಿವಾನರವರೆಗೆ) ವ್ಯಕ್ತಿ-ವಿಶೇಷತೆಗಳನ್ನು ಚಿತ್ರಿಸಿರುವ ವಿಶಿಷ್ಟ ಕೃತಿಗಳು ‘ಜ್ಞಾಪಕ ಚಿತ್ರಶಾಲೆ’ಯ ಎಂಟು ಸಂಪುಟಗಳಾದರೆ ಜೀವನದಲ್ಲಿ ಬಂದೊದಗುವ ಆಘಾತಗಳಿಗೆ ಮನಃಸ್ಥೈರ್ಯವನ್ನು ತುಂಬುವ, ಹಿತೋಪದೇಶದ ಕೃತಿ ‘ಮಂಕುತಿಮ್ಮನ ಕಗ್ಗ’. ಸನ್ಮಾನಗಳನ್ನು ದೂರವಿರಿಸಿದ ಡಿ.ವಿ.ಜಿ.ಯವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳೂ ಹಲವಾರು. ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (೧೯೬೧), ‘ಶ್ರೀಮದ್ಭಗವದ್ಗೀತಾ ತಾತ್ಪರ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೬೭), ನಾಗರಿಕದಿಂದ ಸನ್ಮಾನ ಹಾಗೂ ನಿಧಿಸಮರ್ಪಣೆ (೧೯೭೦). ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ಸಾಧಕರಾಗಿ, ನಾಡುನುಡಿಯ ಸೇವಕರಾಗಿದ್ದ ಡಿ.ವಿ.ಜಿ.ಯವರು ಈ ಎಲ್ಲ ರಂಗಗಳಿಂದಲೂ ನಿರ್ಗಮಿಸಿದ್ದು ೧೯೭೫ರ ಅಕ್ಟೋಬರ್ ೭ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top