Loading Events

« All Events

  • This event has passed.

ಡಿ.ಸಿ. ಪಾವಟೆ

August 2

೦೨.೦೮.೧೮೯೯ ೧೭.೦೧.೧೯೭೯ ದಕ್ಷ ಆಡಳಿತಗಾರ, ಶಿಕ್ಷಣತಜ್ಞ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭದ್ರಬುನಾದಿ ಹಾಕಿದ ದಾನಪ್ಪ ಚಿಂತಪ್ಪ ಪಾವಟೆಯವರು ಹುಟ್ಟಿದ್ದು ೧೮೯೯ ರ ಆಗಸ್ಟ್‌ ೨ ರಂದು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಮದಾಪುರದಲ್ಲಿ. ತಂದೆ ಚಿಂತಪ್ಪ ಪಾವಟೆ. ಪ್ರಾರಂಭಿಕ ಶಿಕ್ಷಣ ಗೋಕಾಕ ಮತ್ತು ಕೊಲ್ಲಾಫುರದಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಿಂದ ಗಣಿತದ ಪ್ರಥಮದರ್ಜೆ ಆನರ್ಸ್ (೧೯೨೩) ಪದವಿ ಪಡೆದ ವಿದ್ಯಾರ್ಥಿ. ಲಿಂಗರಾಜ ಟ್ರಸ್ಟ್‌ನಿಂದ ಹಣ ಸಹಾಯ ದೊರೆತು ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಸಿಡ್ನಿ   ಸಸೆಕ್ಸ್‌ ಕಾಲೇಜು ಸೇರಿ ಗಣಿತಶಾಸ್ತ್ರದ ಟ್ರೈಪ್ರಾಸ್‌ ಭಾಗ ೧ ಮತ್ತು ೨ರಲ್ಲಿ ಪ್ರಥಮಶ್ರೇಣಿಯಲ್ಲಿ ಉತ್ತೀರ್ಣತೆ. ೧೯೨೭ರಲ್ಲಿ ರ‍್ಯಾಂಗ್ಲರ್ ಆಗಿ ಆಯ್ಕೆಗೊಂಡು ಕಾಲೇಜಿನ ಸಂಶೋಧನ ವಿದ್ಯಾರ್ಥಿವೇತನವನ್ನೂ ಪಡೆದು ಸಂಶೋಧನೆಯನ್ನು ಪೂರ್ಣಗೊಳಿಸಿ ೧೯೨೮ ರಲ್ಲಿ ಭಾರತಕ್ಕೆ ಹಿಂದಿರುಗಿದರು. ಬನಾರಸ್‌ ಹಿಂದು ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿ (೧೯೨೮-೩೦) ಸೇವೆ ಸಲ್ಲಿಸಿ ೧೯೩೦ ರಲ್ಲಿ ಮುಂಬಯಿ ವಿದ್ಯಾ ಇಲಾಖೆ ಸೇರಿ ಶಿಕ್ಷಣ ಖಾತೆಯ ಹಲವಾರು ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿ ೧೯೪೭ ರಲ್ಲಿ ಇಲಾಖೆಯ ನಿರ್ದೇಶಕರಾದರು. ಇವರಿದ್ದ ಅವಧಿಯಲ್ಲಿ ಮುಂಬಯಿ ಪ್ರಾಂತ್ಯದ ಶಿಕ್ಷಣ ಸುಧಾರಣೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದರು. ನಿವೃತ್ತಿಯ ನಂತರ ಆಯ್ಕೆಯಾದದ್ದು ಕರ್ನಾಟಕ. ವಿ.ವಿ.ದ ಕುಲಪತಿಗಳಾಗಿ, ಕುಲಪತಿಗಳಾಗಿ ಬಂದನಂತರ ವಿಶ್ವವಿದ್ಯಾಲಯವನ್ನು ಮಾದರಿಯ ವಿಶ್ವವಿದ್ಯಾಲಯವನ್ನಾಗಿಸಬೇಕೆಂಬುದನ್ನು ಬಿಟ್ಟು ಬೇರೇನನ್ನೂ ಯೋಚಿಸದೆ ಸದಾ ವಿ.ವಿ.ದ ಉನ್ನತಿಗಾಗಿ ದುಡಿದರು. ವಿದ್ಯಾರ್ಥಿಗಳಿಗೆ ಉಚ್ಚಮಟ್ಟದ ಶಿಕ್ಷಣ ದೊರೆಯಬೇಕು, ಕನ್ನಡನಾಡಿನ ವಿದ್ಯಾರ್ಥಿಗಳು ಆದರ್ಶ ವಿದ್ಯಾರ್ಥಿಗಳಾಗಬೇಕು, ವಿ.ವಿ.ದ ಹೆಸರು ಹೇಳುವಂತಾಗಬೇಕು, ಕನ್ನಡನಾಡಿಗೆ ಕೀರ್ತಿ ತರಬೇಕು ಎಂಬ ಆಶಯಗಳನ್ನೂ ಹೊಂದಿದಷ್ಟೇ ವಿ.ವಿ.ದಲ್ಲಿ ನೆಲೆಸುವ ಪ್ರಾಧ್ಯಾಪಕರ, ಕೆಲಸಗಾರರ ಮತ್ತು ಕುಟುಂಬಗಳು ನೆಮ್ಮದಿಯ ಜೀವನ ನಡೆಸಬೇಕೆಂದು ಬಯಸಿ ಹಲವಾರು ಅನುಕೂಲಗಳನ್ನು ಕಲ್ಪಿಸಿದರು. ವಿಶ್ವವಿದ್ಯಾಲಯವನ್ನೂ ಪ್ರಾರಂಭಿಸುವಲ್ಲಿ ಹೋರಾಟ ಮಾಡಿದವರ ಚಿತ್ರಗಳು ಅವರ ಕಣ್ಣ ಮುಂದಿತ್ತು. ೧೯೧೭ರಲ್ಲಿ ಕರ್ನಾಟಕ ಕಾಲೇಜು ಸ್ಥಾಪನೆಯಾದಂದಿನಿಂದಲೂ ಕರ್ನಾಟಕ ವಿ.ವಿ. ಸ್ಥಾಪಿಸಬೇಕೆಂಬ ಹೋರಾಟ ನಡೆದೇಯಿತ್ತು. ಇದೇ ವರ್ಷ ನಾರಾಯಣ ಚಂದಾವರ್ಕರ್ ರವರ ಅಧ್ಯಕ್ಷತೆಯಲ್ಲಿ ಮುಂಬಯಿ ಶಿಕ್ಷಣ ಇಲಾಖೆಯ ಸಮ್ಮೇಳನದಲ್ಲಿ ಎಲ್ಲ ಭಾಷಾ ವಿಭಾಗಗಳಿಗೂ ಪ್ರಾದೇಶಿಕ ವಿ.ವಿ. ಸ್ಥಾಪಿಸಬೇಕೆಂಬ ನಿರ್ಣಯ ಸ್ವೀಕೃತವಾಯಿತು. ೧೯೨೦ ರಲ್ಲಿ ಸ್ಯಾಂಡರ್ಸ್ ಆಯೋಗ, ೧೯೨೪ ರಲ್ಲಿ ಸರ್ ಚಿಮಣಲಾಲ್‌ ಸೆಟಲ್‌ವಾಡರ ಆಯೋಗ ಕೂಡ ಅನುಕೂಲಕರವಾದ ವರದಿಯನ್ನೂ ಸಲ್ಲಿಸಿದವು. ಈ ವರದಿಯನ್ನು ಮುಂಬಯಿಯ ವಿ.ವಿ.ದ ಸೆನೆಟ್‌ ೧೯೨೬ ರಲ್ಲಿ ಅಂಗೀಕರಿಸಿತು. ಆದರೂ ಹಲವಾರು ಅಡೆತಡೆಗಳಿಂದಾಗಿ ಸ್ಥಾಪನೆಯ ವಿಚಾರವು ಮುಂದಕ್ಕೆ ಹೋಯಿತು. ೧೯೩೦ ರಲ್ಲಿ ಮುಂಬಯಿ ಪ್ರಾಂತದ ಮಂತ್ರಿಯಾಗಿ ಕರ್ನಾಟಕದಿಂದ ಆಯ್ಕೆಯಾದ ಸರ್ ಸಿದ್ಧಪ್ಪ ಕಂಬಳಿಯವರ ಹೋರಾಟವೂ ಮಹತ್ತರ ಪಾತ್ರವಹಿಸಿತು. ೧೯೩೫ರಲ್ಲಿ ಪುಣೆಯಲ್ಲಿ ಮುಂಬಯಿ ವಿದ್ಯಾಇಲಾಖೆಯ ವಿದ್ಯಾಪರಿಷತ್ತು ಸಮ್ಮೇಳನ ನಡೆಸಿದಾಗ ಪುಣೆ ವಿಶ್ವವಿದ್ಯಾಲಯ ಸ್ಥಾಪನೆಗೆ ಬೇಡಿಕೆ ಬಂದಾಗ ಸರ್ ಸಿದ್ಧಪ್ಪ ಕಂಬಳಿಯವರ ತತ್‌ಕ್ಷಣದ ಬುದ್ಧಿವಂತಿಕೆಯಿಂದ ಕರ್ನಾಟಕ, ಗುಜರಾತ ವಿ.ವಿ.ಗಳ ಸ್ಥಾಪನೆಯ ವಿಷಯವನ್ನೂ ಸೇರಿಸಿ ಗೊತ್ತುವಳಿಯನ್ನೂ ಮಂಡಿಸಿದರು. ಈ ಪ್ರಯತ್ನಗಳ ಫಲವಾಗಿ ೧೯೪೦ ರಲ್ಲಿ ಪ್ರೊ.ಸ.ಸ. ಮಾಳವಾಡರ ನೇತೃತ್ವದಲ್ಲಿ ಸ್ಥಾಪಿತವಾದ ಕರ್ನಾಟಕ ವಿದ್ಯಾಪೀಠಕ್ಕೆ ಜೀವತುಂಬಿ ಆರ್.ಎ. ಜಾಗೀರದಾರ, ಡಾ. ಎಸ್‌.ಸಿ. ನಂದೀಮಠ, ದಾತಾರ, ದ.ಪ. ಕರಮರಕರ, ಪ್ರೊ. ಎಸ್‌.ಎಸ್‌. ಬಸವನಾಳ, ಸ.ಸ. ಮಾಳವಾಡ, ರಾ.ಯ. ಧಾರವಾಡಕರ ಇವರುಗಳು ಮುಂಚೂಣಿಯಲ್ಲಿ ನಿಂತು ಹೋರಾಡತೊಡಗಿದರು. ೧೯೪೬ ರಲ್ಲಿ ಪ್ರೊ.ಸ.ಸ. ಮಾಳವಾಡರು ‘ಕರ್ನಾಟಕ ವಿಶ್ವವಿದ್ಯಾಲಯ’ ಎಂಬ ಪುಸ್ತಕವನ್ನೂ ಬರೆದು ಪ್ರಾದೇಶಿಕ ವಿ.ವಿ.ದ ಬೆಳವಣಿಗೆ, ಮಹಾರಾಷ್ಟ್ರ ವಿ.ವಿ.ದ ವರದಿ, ಮುಂಬಯಿ ವಿ.ವಿ.ದಲ್ಲಿ ಕರ್ನಾಟಕದ ಸ್ಥಾನಮಾನ, ಅಖಂಡ ಕರ್ನಾಟಕ ವಿ.ವಿ. ಯೋಜನೆ ಮುಂತಾದ ಹಲವು ಹತ್ತು ವಿಷಯಗಳ ಚಿಂತನೆ ನಡೆಸಿ ಬರೆದ ಕೃತಿ ಇದಾಗಿತ್ತು. ಇದೇ ವರ್ಷ ಕರ್ನಾಟಕ ವಿ.ವಿ.ದ ಶಿಷ್ಟ ಮಂಡಲಿಯು ಮುಂಬಯಿ ಮುಖ್ಯಮಂತ್ರಿಗಳಾಗಿದ್ದ ಬಿ.ಜಿ. ಖೇರ್ ರವರನ್ನು ಭೇಟಿಯಾಗಿ (ಆರ್.ಎ. ಜಾಗೀರದಾರ, ಎಸ್‌.ಎಸ್‌. ಬಸವನಾಳ, ಆರ್.ಎಸ್‌.ಹುಕ್ಕೇರಿಕರ, ಲಕ್ಷ್ಮೇಶ್ವರದ ಬಿ.ಡಿ. ತಟ್ಟಿ ಮತ್ತು ಸ.ಸ. ಮಾಳವಾಡ ಮುಂತಾದ ಐವರ ತಂಡ) ವಿ.ವಿ. ಸ್ಥಾಪನೆಗೆ ಒತ್ತಾಯಿಸಿದರು. ಕಡೆಗೆ ಮುಂಬಯಿ ಸರಕಾರವು ೧೯೪೯ ನೆಯ ವರ್ಷದ ವಿ.ವಿ.ಕಾಯಿದೆ ಅನ್ವಯ ೧.೩.೧೯೫೦ ರಂದು ಕರ್ನಾಟಕ ವಿ.ವಿ. ಸ್ಥಾಪಿತವಾಯಿತು. ಹೀಗೆ ಹಲವಾರು ಮಂದಿ ಶಿಕ್ಷಣವೇತ್ತರ ಅಹರ್ನಿಶಿ ದುಡಿತದ ಫಲವಾಗಿ ರೂಪಗೊಂಡದ್ದೇ ಕರ್ನಾಟಕ ವಿಶ್ವವಿದ್ಯಾಲಯ. ಆರ್.ಎ. ಜಾಗೀರದಾರ, ಹುಲಕೋಟಿ ಇವರ ನಂತರ ಕುಲಪತಿಗಳಾಗಿ ಆಯ್ಕೆಯಾಗಿ ಬಂದವರೇ (೧೯೫೪) ಡಿ.ಸಿ. ಪಾವಟೆಯವರು. ಐದನೆಯ ಬಾರಿಯೂ ಆಯ್ಕೆಯಾಗಿ ಒಟ್ಟು ೧೪ ವರ್ಷಗಳ ಕಾಲ ಆಡಳಿತ ನಡೆಸಿ ೩೫೦ ಎಕರೆ ವಿಸ್ತೀರ್ಣದ ಛೋಟಮಹಾಬಳೇಶ್ವರ ಗುಡ್ಡದ ಮೇಲೆ ಕರ್ನಾಟಕ ವಿ.ವಿ.ವು ಕಂಗೊಳಿಸುವಂತೆ ಮಾಡಿದರು. ಎಲ್ಲಾ ವಿಭಾಗದ ಕಟ್ಟಡದ ನಿರ್ಮಾಣದ ಜೊತೆಗೆ ಆಯಾಯ ವಿಭಾಗಗಳಿಗೆ ಸಮರ್ಥರಾದ ವಿದ್ವಾಂಸರನ್ನೂ ಆಯ್ಕೆಮಾಡಿಕೊಂಡರು. ಗ್ರಂಥಭಂಡಾರವನ್ನೂ ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಿದರು. ಭಾರತದಲ್ಲೇ ಅತ್ಯಂತ ಪ್ರಗತಿಪರ ವಿ.ವಿ. ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಶೈಕ್ಷಣಿಕವಾಗಿ ಸುಧಾರಣೆ ತರಲು ಯೂರೋಪ್‌, ಅಮೆರಿಕ, ಏಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ದೇಶಗಳನ್ನೂ ಸಂದರ್ಶಿಸಿದರು. ಜಿನೀವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಭಾರತೀಯರ ನಿಯೋಗದ ನಾಯಕರಾಗಿದ್ದರು. ೧೯೫೫-೫೬ ರಲ್ಲಿ ಅಧಿಕೃತ ಭಾಷಾ ಸಮಿತಿಯ ಸದಸ್ಯರಾಗಿ , ಭಾರತ ಸರಕಾರದ ಕೇಂದ್ರ ಸಲಹಾ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದರು. ಇವರ ಸರ್ವತೋಮುಖ ಸೇವೆಗೆ ಭಾರತ ಸರ್ಕಾರ ೧೯೬೬ ರಲ್ಲಿ  ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ೧೯೬೭ ರಲ್ಲಿ ಪಂಜಾಬಿನ ರಾಜ್ಯಪಾಲರನ್ನಾಗಿ ನೇಮಿಸಿದಾಗ, ೫ ವರ್ಷಗಳ ಕಾಲ ಪಂಜಾಬ್‌ ರಾಜ್ಯದ ಅಭ್ಯುದಯಕ್ಕಾಗಿ ದುಡಿದರು. ಇವರು ರಚಿಸಿದ ‘ಎಲಿಮೆಂಟ್ಸ್‌ ಆಫ್‌ ಕ್ಯಾಲುಕುಲಸ್‌’ ಎಂಬ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥ ಮತ್ತು ‘ಮೆಮರಿಸೀಸ್‌ ಆಫ್‌ ಆನ್‌ ಎಜುಕೇಷನಲ್‌ ಅಡ್ಮಿನಿಸ್ಟ್ರೇಟರ್ ಹಾಗೂ ಮೈಡೇಸ್‌ ಆಸ್‌ ಗೌವರ್ನರ್’ ಎಂಬ ಗ್ರಂಥಗಳನ್ನೂ ರಚಿಸಿದ್ದಾರೆ. ಕಡೆಯ ಎರಡು ಗ್ರಂಥಗಳು ಆತ್ಮಚರಿತ್ರೆ ಎನ್ನುವುದಕ್ಕಿತ ಸ್ವಾತಂತ್ರ‍್ಯಾನಂತರದ ಭಾರತದ ರಾಜಕೀಯ ಮತ್ತು ಶೈಕ್ಷಣಿಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ. ದೀರ್ಘಾವಧಿ ಸಾರ್ವಜನಿಕ ಸೇವೆಯ ನಂತರ ಬೆಂಗಳೂರಿನಲ್ಲಿ ನೆಲೆಗೊಂಡು ಸಂತೃಪ್ತ ಜೀವನ ನಡೆಸಿ ೧೯೭೯ ರ ಜನವರಿ ೧೭ ರಂದು ಬದುಕಿಗೆ ವಿದಾಯ ಹೇಳಿದರು. ಶಿಕ್ಷಣ ಕ್ಷೇತ್ರಕ್ಕೆ ಇವರು ನೀಡಿದ ಮಹತ್ತರ ಕೊಡುಗೆಯ ನೆನಪಿಗಾಗಿ ಕುಟುಂಬವರ್ಗದವರು ಇವರ ಹುಟ್ಟು ಊರಾದ ಮಮದಾಪುರದಲ್ಲಿ ಇವರ ತಂದೆ ಚಿಂತಪ್ಪ ಪಾವಟೆಯವರ ಹೆಸರಿನಲ್ಲಿ ಮಾಧ್ಯಮಿಕ ಶಾಲೆಯನ್ನೂ ಪ್ರಾರಂಭಿಸಿದ್ದು ಕುಲಪತಿಯಾಗಿ, ರಾಜ್ಯಪಾಲರಾಗಿ, ರಾಷ್ಟ್ರಮಟ್ಟದ ವ್ಯಕ್ತಿಯಾಗಿ ಕರ್ನಾಟಕ್ಕೆ ಕೀರ್ತಿತಂದವರ ಹೆಸರನ್ನೂ ಚಿರಸ್ಥಾಯಿಯಾಗಿಸಿದ್ದಾರೆ.

Details

Date:
August 2
Event Category: