ಡೆಪ್ಯುಟಿ ಚನ್ನಬಸಪ್ಪ

Home/Birthday/ಡೆಪ್ಯುಟಿ ಚನ್ನಬಸಪ್ಪ
Loading Events

೧-೧೧-೧೮೩೪ ೪-೧-೧೮೮೧ ಉತ್ತರ ಕರ್ನಾಟಕದಲ್ಲಿ ಮರಾಠಿ ಪ್ರಾಬಲ್ಯವನ್ನು ಹಿಮ್ಮೆಟ್ಟಿಸಿ ಕನ್ನಡದ ಜ್ಯೋತಿಯನ್ನು ಬೆಳಗಿಸುವಲ್ಲಿ ಪ್ರಥಮರೆಂದೆನಿಸಿದ್ದ ಚನ್ನಬಸಪ್ಪನವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾವಿ. ತಂದೆ ಬಸಲಿಂಗಪ್ಪ, ತಾಯಿ ತಿಮ್ಮಮ್ಮ. ಪ್ರಾರಂಭಿಕ ಶಿಕ್ಷಣ ಧಾರವಾಡ. ಕಲಿತದ್ದು ಕನ್ನಡ, ಮರಾಠಿ, ಗಣಿತ. ಇಂಗ್ಲಿಷ್ ಕಲಿಯುವ ಹಂಬಲದಿಂದ ಯಾರಿಗೂ ಹೇಳದೆ ನಡದೇ ತಲುಪಿದ್ದು ಪುಣೆ. ಪುಣೆಯಲ್ಲಿ ಚನ್ನಬಸಪ್ಪನವರಿಗೆ ಆಶ್ರಯ ನೀಡಿದವರು ಗೋವಿಂದರಾವ್ ಮೆಹಂಡಳೇಕರ. ಪುಣೆಯಲ್ಲಿ ಓದುತ್ತಿದ್ದಾಗಲೇ ಓದಿನಲ್ಲಿ ಪಾರಂಗತರು. ಪ್ರತಿ ತಿಂಗಳೂ ಪಡೆದ ಶಿಷ್ಯವೇತನ ಹತ್ತು ರೂಪಾಯಿ. ತಾಯಿಯನ್ನು ಕರೆಸಿಕೊಂಡಾಗ ಆಕೆಗೆ ಹೇಳ ತೀರದ ಆನಂದ. ಓದಿದ್ದು ಎಂಜನಿಯರಿಂಗ್. ಇಂಗ್ಲೆಂಡಿನಲ್ಲಿ ಅದೇ ತಾನೇ ತೆರೆದ ಕೂಪರ್ಸ್‌ಹಿಲ್ ಎಂಜನಿಯರಿಂಗ್ ಕಾಲೇಜಿಗೆ ಸೇರಲು ಆಯ್ಕೆಯಾದ ಐವರು ಪ್ರತಿಭಾವಂತ ವಿದ್ಯಾರ್ಥಿಗಳಲ್ಲೊಬ್ಬರು. ದಾದಾಬಾಯಿ ನವರೋಜಿಯವರ ಈ ಯೋಜನೆ ಅಯಶಸ್ವಿಯಾಗಿ ಇಂಗ್ಲೆಂಡ್ ಪ್ರಯಾಣ ರದ್ದು. ೧೮೫೫ರಲ್ಲಿ ಧಾರವಾಡಕ್ಕೆ ವಾಪಸ್ಸು. ಕೆಲಕಾಲ ಅಂಚೆ ಕಚೇರಿಯಲ್ಲಿ ಕೆಲಸ. ಅಷ್ಟರಲ್ಲಿ ಧಾರವಾಡದಲ್ಲಿ ನೂತನವಾಗಿ ಆರಂಭಗೊಂಡ ನಾರ್ಮಲ್ ಶಾಲೆಯ ಮುಖ್ಯೋಪಾಧ್ಯಾಯರಾಗಿ ಆಯ್ಕೆ. ಶಿಕ್ಷಣ ಇಲಾಖೆಯನ್ನು ಪ್ರವೇಶಿಸಿ ೧೮೬೧ರಲ್ಲಿ ಬೆಳಗಾಂ ಜಿಲ್ಲೆಯ ಡೆಪ್ಯುಟಿ ಇನ್‌ಸ್ಪೆಕ್ಟರೆನಿಸಿ ಡೆಪ್ಯುಟಿ ಇವರ ಹೆಸರಿಗೆ ಅಂಟಿಕೊಂಡಿತು. ಅಕಾರಕ್ಕೆ ಬರುವ ಮುನ್ನ ಧಾರವಾಡ, ಬೆಳಗಾವಿ, ಬಿಜಾಪುರ ಜಿಲ್ಲೆಯ ಕನ್ನಡ ಶಾಲೆಯ ಸಂಖ್ಯೆ ೩೪. ಹತ್ತು ವರುಷದ ಆಡಳಿತದಲ್ಲಿ ಶಾಲೆಗಳ ಸಂಖ್ಯೆ ೬೬೮. ರಾಮಚಂದ್ರ ಚುರಮುರಿ, ಗಂಗಾಧರ ಮಡಿವಾಳೇಶ್ವರ ತುರಮರಿ ಮೊದಲಾದ ಕನ್ನಡ ಭಕ್ತರಿಗೆ ಕನ್ನಡದಲ್ಲಿ ಗ್ರಂಥ ರಚಿಸಲು ಕೊಟ್ಟ ದೀಕ್ಷೆ. ಕನ್ನಡ ಕೈಂಕರ್ಯಕ್ಕೆ ಚಾಲನೆ. ಸ್ವತಃ ರಚಿಸಿದ್ದು ಪಠ್ಯ ಪುಸ್ತಕಗಳು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಿತ್ರದುರ್ಗದ ನಿರಂಜನ ಜಗದ್ಗುರು ಬೃಹನ್ಮಠದ ಮಹಾಲಿಂಗ ಸ್ವಾಮಿಗಳ ಮನವೊಲಿಸಿ ಬೆಳಗಾವಿಯಲ್ಲಿ ತೆರೆದ ವೀರಶೈವ ಉಚಿತ ವಿದ್ಯಾರ್ಥಿನಿಲಯ. ಸ್ವಾಮಿಗಳ ನಿಧನಾನಂತರ ಇವರೇ ಹೊತ್ತ ಆರ್ಥಿಕ ಹೊಣೆ. ಹೆಂಡತಿ ಮೈಮೇಲಿನ ನಗ, ಮನೆ-ಮಠ ಮಾರಿ ವಿದ್ಯಾರ್ಥಿ ನಿಲಯದ ನಿರ್ವಹಣೆ. ರಚಿಸಿದ್ದು ಕಾಮೆಡಿ ಆಫ್ ಎರರ್ಸ್‌ (ನಗದವರನ್ನು ನಗಿಸುವ ಕಥೆ) ಮ್ಯಾಕ್‌ಬೆತ್ ಎರಡೇ. ಆದರೂ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಕ್ಕೆ ಗೌರವ ಸ್ಥಾನ ತಂದುಕೊಟ್ಟ ಮಹನೀಯರು.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ. ಗೋಪಾಲಕೃಷ್ಣರಾವ್ – ೧೯೦೮ ಅಶ್ವಿನಿ – ೧೯೩೩ ಹಿರೇಮಲ್ಲೂರು ಈಶ್ವರನ್ – ೧೯೨೨ ಎಚ್. ಗೋಪಾಲಕೃಷ್ಣ (ಪ್ರಭಾ) – ೧೯೪೯

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top