೨೭-೪-೧೮೯೭ ೨೦-೧೦-೧೯೭೩ ಅಪ್ರತಿಮ ಭಾಷಣಕಾರರು, ಸಾಹಿತ್ಯ, ಪತ್ರಿಕಾ ರಂಗಗಳಲ್ಲಿ ವಿಶಿಷ್ಟ ರೀತಿ ಕಾರ್ಯಗೈದ ತಿರುಮಲೆ ತಾತಾಚಾರ್ಯ ಶರ್ಮರು ಹುಟ್ಟಿದ್ದು ಚಿಕ್ಕಬಳ್ಳಾಪುರದ ರಾಜಗುರು ಮನೆತನದಲ್ಲಿ. ತಂದೆ ಶ್ರೀನಿವಾಸ ತಾತಾಚಾರ್ಯ, ತಾಯಿ ಜಾನಕಿಯಮ್ಮ. ತಿರುಮಲೆ ಇವರ ಮನೆತನದ ಹೆಸರು. ಗುರುಕುಲ ಪದ್ಧತಿಯಂತೆ ಮನೆಯಲ್ಲಿಯೇ ಶಿಕ್ಷಣ ಪ್ರಾರಂಭ. ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ. ಮಾಧ್ಯಮಿಕ ಹಾಗೂ ಪ್ರೌಢಶಾಲೆ ಪೂರೈಸಿದ್ದು ಬೆಂಗಳೂರು ಮತ್ತು ಹಾಸನ. ಕಾಲೇಜಿಗೆ ಸೇರಿದ್ದು ಮೈಸೂರಿನಲ್ಲಿ. ಆದರೆ ದೇಶದ ತುಂಬ ಹೊತ್ತಿ ಉರಿಯುತ್ತಿದ್ದ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ವ್ಯಾಸಂಗ ಅಪೂರ್ಣ. ಉದ್ಯೋಗಕ್ಕಾಗಿ ೧೯೧೯ರಲ್ಲಿ ಸೇರಿದ್ದು ಶಾಸನ ಇಲಾಖೆಯಲ್ಲಿ. ತೆಲುಗು, ಕನ್ನಡ ಸಹಾಯಕರಾಗಿ. ಸರ್ಕಾರಿ ನೌಕರಿಯಲ್ಲಿದ್ದು ಚಳವಳಿಗೆ ಸೇರಬಾರದೆನಿಸಿ ಉದ್ಯೋಗ ತ್ಯಜಿಸಿ ಸ್ವಾತಂತ್ರ್ಯ ಚಳವಳಿಗೆ ಸೇರಿದರು. ಗಾಂಜಿಯವರನ್ನು ಭೇಟಿಯಾಗಿ ಅವರ ಆಶಯದಂತೆ ೧೯೨೫ರಲ್ಲಿ ಪತ್ರಿಕೋದ್ಯಮವನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡು ಪತ್ರಿಕಾ ರಂಗದ ಮೂಲಕ ಚಳವಳಿಗೆ ಕೊಟ್ಟ ತೀವ್ರತೆ. ‘ಶಾಸನಗಳಲ್ಲಿ ಕಂಡು ಬರುವ ಕನ್ನಡ ಕವಿಗಳು’ ಇವರ ಪ್ರಥಮ ಕೃತಿ. ಜೀವನ ಚರಿತ್ರೆಗಳು-ಜ್ಯೂಲಿಯಸ್ ಸೀಸರ್, ಅಶೋಕ ಚಕ್ರವರ್ತಿ, ಸುಭಾಷ್ ಚಂದ್ರ ಬೋಸ್, ಮೋಕ್ಷ ಗುಂಡಂ ವಿಶ್ವೇಶ್ವರಯ್ಯ, ನಾಟಕ ಶಿರೋಮಣಿ ವರದಾಚಾರ್ಯರು ಮೊದಲಾದುವು. ಕಥಾಸಂಗ್ರಹ-ಕರ್ಮಫಲ, ದೇಶಭಕ್ತಿ ಸೂಕ್ತಿಗಳಿಂದ ಕೂಡಿದ ಪುಸ್ತಕ ‘ರಾಷ್ಟ್ರೀಯ ಕರ್ಮ’. ಕರ್ನಾಟಕದ ಶಾಸನ ಸಂಪತ್ತನ್ನು ಜನ ಸಾಮಾನ್ಯರಿಗೆ ಪರಿಚಯಿಸುವ ಗ್ರಂಥ ‘ವಿಚಾರ ಕರ್ನಾಟಕ.’ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳನ್ನಾಧರಿಸಿ ಬರೆದ ಕೃತಿ ‘ವಿಕ್ರಾಂತ ಭಾರತ.’ ನೆಹರೂರವರ ‘GLIMPSES OF WORLD HISTORY’ಯನ್ನು ಸಿದ್ಧವನಹಳ್ಳಿ ಕೃಷ್ಣಶರ್ಮರೊಡನೆ ಮಾಡಿದ ಅನುವಾದ-ಜಗತ್ ಕಥಾವಲ್ಲರಿ. ರಾಮರಾಯನ ಬಖೈರು, ಹೈದರ್ನಾಮ, ವೀರರಾಜೇಂದ್ರ ಪತ್ರ ಮುಂತಾದ ಹಸ್ತಪ್ರತಿಗಳ ಸಂಪಾದನೆ. ‘ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ’ ಮತ್ತೊಂದು ಅಮೂಲ್ಯಕೃತಿ. ನಾಟಕದಲ್ಲೂ ಅಪಾರ ಆಸಕ್ತಿ. ದೊರೆತ ಹಲವಾರು ಪದವಿ ಗೌರವಗಳು-ನಗರಸಭೆಯ ಸದಸ್ಯರಾಗಿ, ರಾಜ್ಯ ಸರಕಾರದ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ರಚನೆಯ ಅಧ್ಯಕ್ಷರಾಗಿ, ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಹಲವಾರು ಶ್ಲಾಘನೀಯ ಕಾರ್ಯಗಳು. ಇದೇ ದಿನ ಹುಟ್ಟಿದ ಸಾಹಿತಿ : ಜಿ.ಕೆ. ಗೋವಿಂದರಾವ್ – ೧೯೩೭

