
- This event has passed.
ತೀ.ನಂ.ಶ್ರೀಕಂಠಯ್ಯ
November 26
೨೬-೧೧-೧೯೦೬ ೭-೯-೧೯೬೬ ಭಾಷಾಶಾಸ್ತ್ರ ಪಂಡಿತ, ನಿಘಂಟು ರಚನಕಾರರಾದ ಶ್ರೀಕಂಠಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ತೀರ್ಥಪುರ ಎಂಬಲ್ಲಿ. ತಂದೆ ನಂಜುಂಡಯ್ಯ, ತಾಯಿ ಭಾಗೀರಥಮ್ಮ. ಬಾಲ್ಯದಲ್ಲಿಯೇ ಮಾತೃ ವಾತ್ಸಲ್ಯದಿಂದ ವಂಚಿತರು. ಹುಟ್ಟಿದೂರಿನಲ್ಲಿಯೇ ಪ್ರಾರಂಭಿಕ ಶಿಕ್ಷಣ. ಮೈಸೂರು ಮಹಾರಾಜ ಕಾಲೇಜು ಸೇರಿ ಆರು ಸುವರ್ಣ ಪದಕದೊಂದಿಗೆ ಪಡೆದ ಬಿ.ಎ. ಪದವಿ. ೧೯೨೯ರಲ್ಲಿ ಎಂ.ಎ. (ಇಂಗ್ಲಿಷ್) ಮತ್ತು ೧೯೩೧ರಲ್ಲಿ ಎಂ.ಎ. (ಕನ್ನಡ) ಪದವಿ. ರೆವಿನ್ಯು ಇಲಾಖೆಯಲ್ಲಿ ಅಮಲ್ದಾರರಾಗಿ ವೃತ್ತಿ ಜೀವನ ಆರಂಭ. ಕೆಲವೇ ದಿನಗಳಲ್ಲಿ ಅದು ಸರಿ ಎನಿಸದೆ ಆಯ್ದುಕೊಂಡದ್ದು ಬೋಧಕ ವೃತ್ತಿ. ಮೈಸೂರು, ಬೆಂಗಳೂರು, ಧಾರವಾಡ ಮುಂತಾದೆಡೆ ಅಧ್ಯಾಪಕರಾಗಿ ಸಲ್ಲಿಸಿದ ಸೇವೆ. ಧಾರವಾಡದ ಕರ್ನಾಟಕ ಕಾಲೇಜಿನ ಪ್ರಥಮ ಕನ್ನಡ ಪ್ರಾಧ್ಯಾಪಕರೆಂಬ ಹೆಗ್ಗಳಿಕೆ. ಕನ್ನಡ ವಿಭಾಗಕ್ಕೆ ಹಾಕಿದ ಭದ್ರಬುನಾದಿ. ರಾಕ್ ಫೆಲರ್ ಪ್ರತಿಷ್ಠಾನದ ಗೌರವ ವೇತನದೊಡನೆ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ. ಅಂತಾರಾಷ್ಟ್ರೀಯ ಭಾಷಾ ವಿಜ್ಞಾನಿಗಳ ಜೊತೆ ಅಧ್ಯಯನ, ಚರ್ಚೆ, ಸೌಹಾರ್ದ ಸಂಬಂಧ. ನಿವೃತ್ತಿಯ ನಂತರವೂ ಅಧ್ಯಯನ, ಅಧ್ಯಾಪನ, ನಿಘಂಟು ಕಾರ‍್ಯದಲ್ಲಿ ಭಾಗಿ. ರಚಿಸಿದ ಕೃತಿಗಳು ಹದಿನಾಲ್ಕು. ಕವಿತೆ-ಒಲುಮೆ. ಮುಕ್ತಕಗಳು ಅನುವಾದ-ಬಿಡಿಮುತ್ತು. ನಾಟಕ-ರಾಕ್ಷಸನ ಮುದ್ರಿಕೆ. ವಿಮರ್ಶೆ/ಕಾವ್ಯ-ಭಾರತೀಯ ಕಾವ್ಯ ಮೀಮಾಂಸೆ, ಪಂಪ, ಕಾವ್ಯ ಸಮೀಕ್ಷೆ, ಸಮಾಲೋಕನ, ಕಾವ್ಯಾನುಭವ. ಶಾಸ್ತ್ರಗ್ರಂಥಗಳು-ಕನ್ನಡ ಮಧ್ಯಮ ವ್ಯಾಕರಣ. ಸಂಪಾದಿತ-ಹೆಣ್ಣು ಮಕ್ಕಳ ಪದಗಳು, ಹರಿಹರ ಕವಿಯ ನಂಬಿಯಣ್ಣನ ರಗಳೆ, ರನ್ನ ಕವಿಯ ಗದಾಯುದ್ಧ ಸಂಗ್ರಹ. ಇಂಗ್ಲಿಷ್ ಕೃತಿಗಳು-ಇಮ್ಯಾಜಿನೇಷನ್ ಇನ್ ಇಂಡಿಯನ್ ಪೊಯಟಿಕ್ ಅಂಡ್ ಅದರ್ ಲಿಟರರಿ ಪೇಪರ್ಸ್, ಅಪ್ರಿಕೇಟ್ಸ್ ಇನ್ ಕನ್ನಡ ಸ್ಪೀಚ್ ಅಂಡ್ ಅದರ್ ಲಿಂಗ್ವಿಸ್ಟಿಕ್ ಪೇಪರ್. ಅನುವಾದ-ಇಂಡಿಯನ್ ಪೊಯಟಿಕ್ಸ್. ೧೯೪೦ರಲ್ಲಿ ಭಾರತ ಸಂವಿಧಾನ ರಚನೆಯ ಭಾಷಾವಿಜ್ಞಾನಿಗಳ ಸಭೆಯಲ್ಲಿ ಇವರು ಸೂಚಿಸಿದ ‘ರಾಷ್ಟ್ರಪತಿ’ ಎಂಬ ಹೆಸರು ಅಂಗೀಕಾರ. ೧೯೬೬ರಲ್ಲಿ ದೈವಾನರಾದ ನಂತರ ಮರಣೋತ್ತರವಾಗಿ ೧೯೮೯ರಲ್ಲಿ ಭಾರತೀಯ ಕಾವ್ಯ ಮೀಮಾಂಸೆಗೆ ಸಂದ ಪಂಪ ಪ್ರಶಸ್ತಿ. ೧೯೭೬ರಲ್ಲಿ ಅರ್ಪಿಸಿದ ಸಂಸ್ಮರಣ ಗ್ರಂಥ ‘ಶ್ರೀಕಂಠ ತೀರ್ಥ.’ ಇದೇ ದಿನ ಹುಟ್ಟಿದ ಸಾಹಿತಿಗಳು : ಬಿ.ಕೆ. ಸುಬ್ಬುಲಕ್ಷ್ಮಿ – ೧೯೨೯ ಜನಾರ್ಧನ ಗುರ್ಕಾರ್ – ೧೯೩೨ ನಲ್ಲೂರು ಪ್ರಸಾದ್ – ೧೯೪೭ ಅನಸೂಯರಾವ್ – ೧೯೩೮